ಕಲಬುರಗಿ: ಕಿಡ್ನಾಪ್ ಆಗಿ 24 ಗಂಟೆಗಳಲ್ಲಿ ಮತ್ತೆ ತಾಯಿಯ ಮಡಿಲು ಸೇರಿದ ಹಸುಗೂಸು; ಪೊಲೀಸರ ಕಾರ್ಯವೈಖರಿಗೆ ಶ್ಲಾಘನೆ
Nov 27, 2024 03:21 PM IST
ಕಲಬುರಗಿ: ಕಿಡ್ನಾಪ್ ಆಗಿದ್ದು ಮಗುವನ್ನು ಮತ್ತೆ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
Kalaburgi: ಜಿಮ್ಸ್ ಆಸ್ಪತ್ರೆಯಿಂದ ಕಳ್ಳತನವಾಗಿದ್ದ ಮಗುವನ್ನು ಪೊಲೀಸರು ಪತ್ತೆ ಹಚ್ಚಿ ತಾಯಿಯ ಮಡಿಲು ಸೇರಿಸಿದ್ದಾರೆ. ಸೋಮವಾರ ದಾದಿಯರ ವೇಷದಲ್ಲಿದ್ದ ಇಬ್ಬರು ಮಹಿಳೆಯರು ಗಂಡು ಮಗುವನ್ನು ಕಿಡ್ನಾಪ್ ಮಾಡಿದ್ದರು. ದೂರಿನ ಆಧಾರದ ಮೇರೆಗೆ ಪೊಲೀಸರು ಕಳ್ಳಿಯರನ್ನು ಹುಡುಕಿ ಮಗುವನ್ನು ರಕ್ಷಿಸಿ ತಾಯಿಗೆ ವಾಪಸ್ ಒಪ್ಪಿಸಿದ್ದಾರೆ.
ಕಲಬುರಗಿ: ಒಂದೆಡೆ ರಾಜ್ಯದಲ್ಲಿ ಮಕ್ಕಳ ಅಪಹರಣ ಕೇಸ್ ಸದ್ದು ಮಾಡುತ್ತಿದ್ದರೆ ಮತ್ತೊಂದೆಡೆ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ಕಿಡ್ನಾಪ್ ಪ್ರಕರಣ ಕೂಡಾ ಎಗ್ಗಿಲ್ಲದೆ ನಡೆಯುತ್ತಿದೆ. ಈ ಮುನ್ನವೂ ಇಂಥಹ ಎಷ್ಟೋ ಪ್ರಕರಣಗಳು ವರದಿ ಆಗಿದ್ದರೂ ಇದಕ್ಕೆ ಇನ್ನೂ ಪರಿಹಾರ ದೊರೆತಿಲ್ಲ. ಸೋಮವಾರ ಕೂಡಾ ಇಂಥದ್ದೇ ಪ್ರಕರಣ ಜಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.
ಚಿಂಚೋಳಿಯ ರಾಮು ರಾವೂರ್-ಕಸ್ತೂರಿ ಬಾಯಿ ದಂಪತಿಯ ಮಗು
ಚಿಂಚೋಳಿಯ ರಾಮು ರಾವೂರ್ ಎಂಬುವರನ್ನು ಮದುವೆಯಾಗಿ ನೆಲೆಸಿರುವ ಕಸ್ತೂರಿಬಾಯಿ ಹೆರಿಗೆಗೆಂದು ತವರಿಗೆ ಬಂದು ಭಾನುವಾರ ರಾತ್ರಿ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸೋಮವಾರ ಬೆಳಗಿನ ಜಾವ ಗಂಡು ಮಗು ಜನಿಸಿದೆ. ಮಗು ಜನಿಸಿ 8 ಗಂಟೆ ಆಗಿರುವ ಹಸುಗೂಸನ್ನು ಇಬ್ಬರು ಕಳ್ಳಿಯರು ಅಪಹರಿಸಿದ್ದಾರೆ. ನರ್ಸ್‌ಗಳ ವೇಷದಲ್ಲಿ ಬಂದಿದ್ದ ಇವರು ಮಗುವಿಗೆ ರಕ್ತ ಪರೀಕ್ಷೆ ಮಾಡಿಸಬೇಕು. ರೂಮ್ ನಂಬರ್ 130ಕ್ಕೆ ಕರೆತನ್ನಿ ಎಂದು ತಾಯಿಯ ಕಡೆಯವರಿಗೆ ಹೇಳಿದ್ದಾರೆ. ಅದನ್ನು ನಂಬಿದ ಕಸ್ತೂರಿಬಾಯಿ ಕಡೆಯವರು ಮಗುವನ್ನು ರಕ್ತ ಪರೀಕ್ಷೆಗೆಂದು ಬಿಟ್ಟಿದ್ದಾರೆ. ನಂತರ ಮಗುವಿನ ಫೈಲ್ ತೆಗೆದುಕೊಂಡು ಬನ್ನಿ ಎಂದು ಮಗುವಿನ ಕಡೆಯವರನ್ನು ವಾಪಸ್ ಅಲ್ಲಿಂದ ಕಳಿಸಿದ್ದಾರೆ. ಅವರು ಅತ್ತ ಹೋಗುತ್ತಿದ್ದಂತೆ ಕಳ್ಳಿಯರು ಮಗು ಎತ್ತಿಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ.
ದಂಪತಿಗೆ ಸಾಂತ್ವನ ಹೇಳಿದ್ದ ಸಚಿವ ಡಾ. ಶರಣಪ್ರಕಾಶ ಪಾಟೀಲ್
ನಂತರವಷ್ಟೇ , ಅವರು ನಿಜವಾದ ದಾದಿಯರಲ್ಲ, ಮಕ್ಕಳ ಕಳ್ಳಿಯರು ಎಂದು ತಿಳಿದುಬಂದಿದೆ. ಮಗು ಕಾಣೆ ಆಗುತ್ತಿದ್ದಂತೆ ಕಸ್ತೂರಿಬಾಯಿ ಪತಿ ರಾಮು ರಾವೂರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಆಸ್ಪತ್ರೆಗೆ ಭೇಟಿ ನೀಡಿದ್ದ ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಭೇಟಿ ನೀಡಿ ಮಗು ಕಳೆದುಕೊಂಡವರಿಗೆ ಸಾಂತ್ವನ ಹೇಳಿದ್ದರು. ಘಟನೆಯ ಮಾಹಿತಿ ಪಡೆದು ಮಗುವನ್ನು ಪತ್ತೆ ಹಚ್ಚುವುದಾಗಿ ತಾಯಿ ತಂದೆ ಹಾಗೂ ಬಂಧುಗಳಿಗೆ ಸಮಾಧಾನ ಮಾಡಿದ್ದರು. ಪೊಲೀಸರು ಈಗ ಮಗುವನ್ನು ಅಪಹರಿಸಿದವರನ್ನು ಪತ್ತೆ ಹಚ್ಚಿ ಹೆತ್ತವರಿಗೆ ವಾಸಪ್ ನೀಡಿದ್ದಾರೆ. ಮಗುವನ್ನು ಕಳೆದುಕೊಂಡು ರೋಧಿಸುತ್ತಿದ್ದ ಕಸ್ತೂರಿಬಾಯಿ-ರಾಮು ರಾವೂರ್ ಈಗ ಮತ್ತೆ ಮಗು ವಾಪಸ್ ದೊರೆತಿರುವುದಕ್ಕೆ ಖುಷಿಯಾಗಿದ್ದಾರೆ.
24 ಗಂಟೆಗಳಲ್ಲಿ ಕಳ್ಳಿಯರನ್ನು ಪತ್ತೆ ಹಚ್ಚಿದ ಪೊಲೀಸರು
ದೂರು ದಾಖಲಿಸಿಕೊಂಡ ಪೊಲೀಸರು ಮಗುವಿನ ಹೆತ್ತವರು, ಬಂಧುಗಳಿಂದ ಮಾಹಿತಿ ಪಡೆದಿದ್ದಾರೆ. ಆಸ್ಪತ್ರೆ ಸಿಸಿ ಟಿವಿಯನ್ನು ಪರಿಶೀಲಿಸಿದ್ದಾರೆ. ದಾದಿಯರ ವೇಷದಲ್ಲಿದ್ದ ಕಳ್ಳಿಯರ ಜಾಡು ಹಿಡಿದ ಪೊಲೀಸರು ಅವರನ್ನು ಮತ್ತೆ ಹಚ್ಚಿ ಮಗುವನ್ನು ಕಾಪಾಡಿದ್ದಾರೆ. 24 ಗಂಟೆಗಳಲ್ಲಿ ಮಗುವನ್ನು ಮತ್ತೆ ಹೆತ್ತಮ್ಮನ ಮಡಿಲಿಗೆ ಸೇರಿಸಿದ್ದಾರೆ. ಮಗುವನ್ನು ಕಾಪಾಡಿದ ಪೊಲೀಸರಿಗೆ ತಂದೆ ತಾಯಿ ಹಾಗೂ ಬಂಧುಗಳು ಕೈ ಮುಗಿದು ಧನ್ಯವಾದ ಅರ್ಪಿಸಿದ್ದಾರೆ.