ರಂಗಕಲೆಯನ್ನೇ ಬದುಕಾಗಿಸಿಕೊಂಡ ಉತ್ತರ ಕನ್ನಡ ಜಿಲ್ಲೆಯ ಕನಕಲಕ್ಷ್ಮೀ ಕಲ್ಲೂರ; 17ನೇ ವಯಸ್ಸಿಗೆ ರಂಗಭೂಮಿಗೆ ಬಂದ ಕಲಾಸರಸ್ವತಿ
Dec 23, 2024 07:00 AM IST
ರಂಗಭೂಮಿಯಲ್ಲಿ ಹೆಸರು ಮಾಡಿರುವ ಉತ್ತರ ಕನ್ನಡದ ಕನಕಲಕ್ಷ್ಮೀ ಕಲ್ಲೂರ
Uttara Kannada: ಯಲ್ಲಾಪೂರ ತಾಲೂಕಿನ ಮಂಚಿಕೇರಿಯ ಕನಕಲಕ್ಷ್ಮೀ ಕಲ್ಲೂರ ಇಂದು ರಂಗಭೂಮಿಯಲ್ಲಿ ಬಹಳ ಹೆಸರು ಮಾಡಿದ್ದಾರೆ. ತಂದೆ ಕೂಡಾ ರಂಗಭೂಮಿ ಕಲಾವಿದರಾಗಿದ್ದರಿಂದ ಕನಲಕ್ಷ್ಮೀಗೆ ಕೂಡಾ ಕಲೆ ರಕ್ತಗತವಾಗಿ ಬಂದಿದೆ. ಇವರ ಪತಿ ಪಾಪು ಕಲ್ಲೂರ ಕಮತಗಿಯ ಶ್ರೀಗುರು ಹೊಳೆಹುಚ್ಚೇಶ್ವರ ನಾಟಕ ಕಂಪನಿ ಮಾಲೀಕರು, ಇವರೂ ರಂಗ ಕಲಾವಿದರಾಗಿ ಹೆಸರಾಗಿದ್ದಾರೆ.
ಉತ್ತರ ಕನ್ನಡ: ರಂಗಭೂಮಿಯ ಧ್ರುವತಾರೆ ಎಂದೇ ಹೆಸರು ಪಡೆದ ಕನಕಲಕ್ಷ್ಮೀ, ನಟನೆಯನ್ನೇ ಉಸಿರಾಗಿಸಿಕೊಂಡು ಹುಟ್ಟಿದವರು. ಬಾಲ್ಯದಿಂದ ರಂಗಕಲೆಯನ್ನೇ ಬದುಕಾಗಿಸಿಕೊಂಡು ಬೆಳೆದ ಕಲಾವಿದೆ ಕನಕಲಕ್ಷ್ಮೀ ಈಗ ರಂಗಭೂಮಿಯ ಐಕಾನ್ ನಟಿ. ಕಮತಗಿಯ ಶ್ರೀಗುರು ಹೊಳೆಹುಚ್ಚೇಶ್ವರ ನಾಟಕ ಕಂಪನಿ ಮಾಲೀಕ ಹಾಗೂ ಹೆಸರಾಂತ ರಂಗ ಕಲಾವಿದ ಪಾಪು ಕಲ್ಲೂರವರ ಬಾಳ ಸಂಗಾತಿಯಾದ ಕನಕಲಕ್ಷ್ಮೀ ಈಗ ಈ ಕಂಪನಿಯ ಆಕರ್ಷಕ ನಟಿ.
ಹುಟ್ಟಿನಿಂದಲೇ ರಕ್ತಗತವಾಗಿ ಬಂದಿದ್ದ ಕಲೆ
ಯಲ್ಲಾಪೂರ ತಾಲೂಕಿನ ಮಂಚಿಕೇರಿಯಲ್ಲಿ ಕುಮಾರ ಶಿರ್ಶಿ ಎಂದು ಖ್ಯಾತರಾಗಿದ್ದ ಭುಜಂಗ ಮತ್ತು ನಾಗವೇಣಿಯವರ ಪುತ್ರಿ. ಮನೆಯೇ ಕಲಾದೇವತೆಯ ಆವಾಸ ಸ್ಥಾನ. ತಾಯಿ ಗೃಹಿಣಿಯಾದರೂ ಮಕ್ಕಳನ್ನು ಉತ್ತಮ ಸಂಸ್ಕಾರ ನೀಡಿ ಬೆಳೆಸಿದರು. ಇವರ ತಂಗಿ ಶುಭಲಕ್ಷ್ಮೀ ರಂಗಭೂಮಿ, ಟಿವಿ ಸೀರಿಯಲ್‌ದಲ್ಲಿ ಹೆಸರು ಮಾಡಿದವರು. ತಮ್ಮ ಇಂಜಿನಿಯರಿಂಗ್ ಓದಿದವರು. ತಂದೆ ಹಲವಾರು ಕಂಪನಿಗಳಲ್ಲಿ ನಟರಾಗಿ ಜನಮನ ಸೆಳೆದವರು. ಜೊತೆಗೆ ಕೆಲವು ನಟರೊಂದಿಗೆ ನಾಟಕ ಕಂಪನಿಯನ್ನು ಕಟ್ಟಿದವರು. ತಂದೆಯ ನಟನಾ ಗೀಳು ಕನಕಲಕ್ಷ್ಮೀಯಲ್ಲಿ ಹರಿದು ಬಂತು. ಶಾಲಾ ಪರಿಸರದಲ್ಲಿ ಪಾತ್ರ ಮಾಡಿ ಎಲ್ಲರಿಂದ ಶಭಾಶ್‌ಗಿರಿ ಪಡೆದುಕೊಂಡವರು. ಆಗಲೇ ಭರತ ನಾಟ್ಯವನ್ನು ಕಲಿತು ನಾಟ್ಯ ಮಯೂರಿಯಾಗಿದ್ದರು. ಹುಟ್ಟುತ್ತಲೇ ಕಲೆಯನ್ನು ತಲೆಯಲ್ಲಿ ತುಂಬಿಕೊಂಡು ಅದೇ ಗುಂಗಿನಲ್ಲಿ ಶಾಲಾ ದಿನಗಳ ರಜೆಯಲ್ಲಿ ತಂದೆಯವರ, ಮತ್ತು ಇತರ ಕಲಾವಿದರ ನಟನೆಗೆ ಮಾರು ಹೋಗಿ ಅವರಂತೆ ನಟಿಸುವದನ್ನು ಕರಗತ ಮಾಡಿಕೊಂಡರು. ’ನಾನು ಎಲ್ಲರಲ್ಲಿಯೂ ಒಂದೊಂದು ನಟನೆಯ ಛಾಪನ್ನು ನೋಡಿ ಕಲಿತದ್ದೆ ಬಹಳ’ ಎನ್ನುತ್ತಾರೆ ಈ ಕಲಾವಿದೆ.
17ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ರಂಗಭೂಮಿ ಪ್ರವೇಶ
ತಾಯಿಯ ಒತ್ತಾಸೆ ಇವರನ್ನು ಓದಿಸುವುದಾಗಿತ್ತು. ಆದರೆ ಕಲಾದೇವತೆಯ ಸೆಳೆತಕ್ಕೆ ಕನಕಲಕ್ಷ್ಮೀ ಒಳಗಾದರು. ಅದರ ಮಧ್ಯೆಯೇ ಬಾಹ್ಯ ವಿದ್ಯಾರ್ಥಿನಿಯಾಗಿ ಪದವಿ ಮತ್ತು ಡಿ.ಎಡ್ ಮಾಡಿಕೊಂಡರು. ತಮ್ಮ 17 ನೇ ವಯಸ್ಸಿನಲ್ಲಿ ಕನಕಲಕ್ಷ್ಮೀ ಮೊದಲ ಬಾರಿ ಕಮತಗಿ ಕಂಪನಿಯಲ್ಲಿ, ಸತಿ ಸಂಸಾರದ ಜ್ಯೋತಿ ನಾಟಕದ ರಾಣಿ ಪಾತ್ರದಲ್ಲಿ ರಂಗಭೂಮಿಗಿಳಿದರು. ಕಲಾವಿದ ತಂದೆಯವರ ಮಾರ್ಗದರ್ಶನದಲ್ಲಿ ಕಮತಗಿ ಕಂಪನಿಯಲ್ಲದೇ ಕಡಪಟ್ಟಿ ಕಂಪನಿ, ಪ್ರೇಮಾ ಗುಳೇದಗುಡ್ಡ, ತಾಳಿಕೋಟಿ ಕಂಪನಿಯಲ್ಲಿ ನಟಿಸುವಾಗ ಅಲ್ಲಿದ್ದ ವಸುಂಧರಾ, ಅರುಣಾ, ಪ್ರಕಾಶರವರ ನಟನಾ ಚಾತುರ್ಯ ಅಳವಡಿಸಿಕೊಂಡರು. ಹೀಗಾಗಿ ನನ್ನ ಗುರು ಎಂದರೆ ನಟಿ ವಿಜಯಲಕ್ಷ್ಮೀ ಪಂಡಿತರೆಂದರೆ ತಪ್ಪಾಗಲಾರದು ಎನ್ನುತ್ತಾರೆ. ಒಮ್ಮೆ ದಿ.ಸವಿತಾ ಸಿಂಧನೂರ ಎಂಬ ಕಲಾವಿದೆ ರಜೆ ಇರುವ ಸಮಯದಲ್ಲಿ ಅವರ ಪಾತ್ರವನ್ನು ನಿರ್ವಹಿಸುವುದರೊಂದಿಗೆ ತಾನೂ ಉತ್ತಮ ನಟಿ ಎಂಬ ಆತ್ಮವಿಶ್ವಾಸ ಕನಕಲಕ್ಷ್ಮೀಗೆ ಮೂಡಿತು. ಅಲ್ಲಿಂದ ಮುನ್ನಡೆದರೆ ವಿನಃ ಹಿಂದೆ ನೋಡಲಿಲ್ಲ.
ಪಾಪು ಕಲ್ಲೂರ ಅವರನ್ನು ಪ್ರೀತಿಸಿ ಮದುವೆಯಾದ ಕನಕಲಕ್ಷ್ಮೀ
ಅವರ ಒಳಗಿನ ಕಲಾವಿದೆ ಅನಾವರಣಗೊಳ್ಳಹತ್ತಿದಳು. ಎಲ್ಲಾ ಬಗೆಯ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸುವಲ್ಲಿ ನಿಷ್ಣಾತೆ, ತಾವು ನಿರ್ವಹಿಸುವ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡುತ್ತಾರೆ. ಆ ಸಂದರ್ಭದಲ್ಲಿ ಎಂತಾ ಮೋಜಿನ ಕುದುರೆ ನಾಟಕದ ವಾಸಂತಿ ಪಾತ್ರ ಆಗ ಹೆಸರು ತಂದಿತು. ಆದರೆ ಇವರಿಗೆ ಮಹೇಶ ಕಲ್ಲೋಳ ವಿರಚಿತ ಹೊತ್ತುನೋಡಿ ಹೊಡ್ತಾ ಹಾಕು ನಾಟಕದ ಶರಾವತಿ ಪಾತ್ರವೆಂದರೆ ಬಹಳ ಇಷ್ಟ. ಕೈಲಾಗದ ಗಂಡ ಕೈಲಾಸ ಕಂಡ(ಜಯಶ್ರೀ), ಬಂದರ ನೋಡಾ ಬಂಗಾರಿ(ವಿಲನ್) ಹೀಗೆ ಹವ್ಯಾಸಿ ಮತ್ತು ವೃತ್ತಿಯ ನೂರಾರು ನಾಟಕಗಳಲ್ಲಿ ಬಗೆ ಬಗೆಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲವು ಸೀರಿಯಲ್, ಸರಿಗಮಗಳಲ್ಲಿ ಕಾಣಿಸಿಕೊಂಡಿದ್ದಾರಾದರೂ ತಮ್ಮ ನೆಚ್ಚಿನ ರಂಗಭೂಮಿಯಲ್ಲಿ ಉಳಿದು, ನಟನಾ ಬದುಕನ್ನು ರೂಪಿಸಿಕೊಂಡರು.
ಋಣಾನುಬಂಧವೆನ್ನುವಂತೆ ರಂಗಭೂಮಿಯಲ್ಲಿ ಹೆಸರಾದ ಪಾಪು ಕಲ್ಲೂರವರ ಭೇಟಿ, ಪರಿಚಯವಾಗಿ, 2023ರಲ್ಲಿ ಕೊಲ್ಲೂರ ಮೂಕಾಂಬಿಕಾದೇವಿಯ ಸನ್ನಿಧಿಯಲ್ಲಿ ಬಾಳ ಸಂಗಾತಿಯಾದರು. ರಂಗಭೂಮಿ ಒಳ್ಳೆಯ ಬದುಕನ್ನು ಕೊಟ್ಟಿದೆ. ಜೊತೆಗೆ ಒಳ್ಳೆಯ ನಟನನ್ನು ನನಗೆ ದೇವರು ದೊರಕಿಸಿಕೊಟ್ಟಿದ್ದಾನೆ. ಅವರಿಗೆ ನಾನು ಸದಾ ಸಾಥ್ ಕೊಡುತ್ತೇನೆ. ಇದು ನನ್ನ ಬದುಕನ್ನು ಹಸಿರಾಗಿಸಿದೆ. ನನಗಿಷ್ಟವಾದ ರೀತಿ ನಾನು ಕೆಲಸಮಾಡುತ್ತೇನೆ. ಇಲ್ಲಿ ಕಲಿಯುವುದು ಬಹಳವಿದೆ. ಅದನ್ನು ಗೌರವಿಸೋಣ ಎಂದು ಕನಕಲಕ್ಷ್ಮೀ ತಮ್ಮ ರಂಗಪ್ರೀತಿಯ ಬಗ್ಗೆ ಮಾತನಾಡಿದ್ದಾರೆ.