logo
ಕನ್ನಡ ಸುದ್ದಿ  /  ಕರ್ನಾಟಕ  /  ಮಲ ಹೊರುವವರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಲು ಮಾನದಂಡ ಏನು: ವಿವಾದ ಹುಟ್ಟು ಹಾಕಿದ ಹಿರಿಯ ಪತ್ರಕರ್ತ ನಾಗೇಶ್‌ ಹೆಗಡೆ ಸಲಹೆ

ಮಲ ಹೊರುವವರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಲು ಮಾನದಂಡ ಏನು: ವಿವಾದ ಹುಟ್ಟು ಹಾಕಿದ ಹಿರಿಯ ಪತ್ರಕರ್ತ ನಾಗೇಶ್‌ ಹೆಗಡೆ ಸಲಹೆ

Umesha Bhatta P H HT Kannada

Oct 31, 2024 10:25 PM IST

google News

ಪೌರ ಕಾರ್ಮಿಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡುವ ಸಂಬಂಧ ಹಿರಿಯ ಪತ್ರಕರ್ತ ನಾಗೇಶ್‌ ಹೆಗಡೆ ನೀಡಿದ ಪ್ರತಿಕ್ರಿಯೆಗೆ ಭಾರೀ ವಿರೋಧ ವ್ಯಕ್ತವಾಗಿದೆ.

    • ಈ ಬಾರಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಪೌರಕಾರ್ಮಿಕರನ್ನು ಆಯ್ಕೆ ಮಾಡುವ ಕುರಿತು ಪತ್ರಕರ್ತ ನಾಗೇಶ್‌ ಹೆಗಡೆ ಅವರು ನೀಡಿದ ಅಭಿಪ್ರಾಯ ವಿವಾದ ಸೃಷ್ಟಿಸಿದೆ. ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ. ಅದರ ವಿವರ ಇಲ್ಲಿದೆ.
ಪೌರ ಕಾರ್ಮಿಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡುವ ಸಂಬಂಧ ಹಿರಿಯ ಪತ್ರಕರ್ತ ನಾಗೇಶ್‌ ಹೆಗಡೆ ನೀಡಿದ ಪ್ರತಿಕ್ರಿಯೆಗೆ ಭಾರೀ ವಿರೋಧ ವ್ಯಕ್ತವಾಗಿದೆ.
ಪೌರ ಕಾರ್ಮಿಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡುವ ಸಂಬಂಧ ಹಿರಿಯ ಪತ್ರಕರ್ತ ನಾಗೇಶ್‌ ಹೆಗಡೆ ನೀಡಿದ ಪ್ರತಿಕ್ರಿಯೆಗೆ ಭಾರೀ ವಿರೋಧ ವ್ಯಕ್ತವಾಗಿದೆ.

ಬೆಂಗಳೂರು: ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸರಳವಲ್ಲ. ಈ ಬಾರಿಯೂ ಹಿಂದಿನ ವರ್ಷಗಳಂತೆ ಲಾಬಿಗಳೂ ನಡೆದಿವೆ. ಈ ಬಾರಿ ಹಿರಿಯ ಪತ್ರಕರ್ತ ನಾಗೇಶ್‌ ಹೆಗಡೆ ಅವರು ಆಯ್ಕೆ ಸಮಿತಿಯಲ್ಲಿದ್ದರು. ಅವರು ಅನುಭವಿಸಿದ್ದನ್ನು ಸಾಮಾಜಿಕ ಮಾಧ್ಯಮ ಫೇಸ್‌ಬುಕ್‌ನಲ್ಲಿ ದಾಖಲಿಸಿದ್ದಾರೆ. ಇದರಲ್ಲಿ ಅವರು ಮಲ ಹೊರುವವರು ಹಾಗೂ ಪೌರ ಕಾರ್ಮಿಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡುವ ಕುರಿತಾಗಿ ವ್ಯಕ್ತಪಡಿಸಿರುವ ಅಭಿಪ್ರಾಯ ವಿವಾದ ಸೃಷ್ಟಿಸಿದೆ. ಹೆಗಡೆ ಅವರ ಅಭಿಪ್ರಾಯವನ್ನು ಹಲವು ಹೋರಾಟಗಾರರು ಬಲವಾಗಿಯೇ ವಿರೋಧಿಸಿದ್ದಾರೆ. ನಿರ್ದೇಶಕ ಟಿ.ಕೆ.ದಯಾನಂದ ಅವರಂತೂ ಹೆಗಡೆಯನ್ನು ತೀಕ್ಷ್ಣವಾಗಿಯೇ ಪ್ರಶ್ನಿಸಿದ್ದಾರೆ. ಇದು ವಿವಾದ ಸ್ವರೂಪ ಪಡೆಯುತ್ತಿದ್ದಂತೆ ಹೆಗಡೆ ಅವರೂ ಸ್ಪಷ್ಟನೆ ನೀಡಿದ್ದಾರೆ.

ಮಲಹೊರುವ ವೃತ್ತಿ, ಪ್ರಶಸ್ತಿಯ ಮಾನದಂಡ: ಹೆಗಡೆ ಅವರು ಹೇಳಿದ್ದೇನು?

ʻಮಲ ಹೊರುವ ಶ್ರಮಿಕರಿಗೆ ವಯಸ್ಸಿನ ನಿರ್ಬಂಧ ಇರಲೇಬಾರದು, ಅವರಲ್ಲಿ 50 ವರ್ಷದಾಚೆ ಬದುಕುವುದೇ ಅಪರೂಪ; ಅಂಥವರಲ್ಲಿ ಯೋಗ್ಯರಾದ ಒಬ್ಬರಿಗೆ ಪ್ರಶಸ್ತಿ ಕೊಡಬೇಕು" ಎಂಬ ಒತ್ತಾಯವೂ ಈ ವರ್ಷ ಬಂತು.

ಅವರ ಕುರಿತು ನಮಗೆಲ್ಲ ಅನುಕಂಪ ಇರಬೇಕು. ಚರಂಡಿಯಲ್ಲಿ ಇಳಿಯುವ ಮುನ್ನ ಅಲ್ಲಿನ ವಿಷಾನಿಲವನ್ನು ಪತ್ತೆ ಮಾಡಬಲ್ಲ ಸರಳ ಸಾಧನಗಳನ್ನು ಅವರಿಗೆ ಕೊಡಬೇಕೆಂದು ನಾನು ಅನೇಕ ವಿಜ್ಞಾನ ವೇದಿಕೆಗಳಲ್ಲಿ ಹಿಂದೆಲ್ಲ ಹೇಳಿದ್ದೇನೆ. ನಗರಪಾಲಿಕೆಗಳ, ಗುತ್ತಿಗೆದಾರರ ನಿಷ್ಕಾಳಜಿಯನ್ನು ಎತ್ತಿ ತೋರಿಸಿದ್ದೇನೆ.

ನಗರದ ನರನಾಡಿಗಳನ್ನು ಶುದ್ಧ ಇಡಲೆಂದು ತಮ್ಮನ್ನೇ ಅಪಾಯಕ್ಕೆ ಒಡ್ಡಿಕೊಳ್ಳುವ ಅಂಥ ಶ್ರಮಜೀವಿಗಳಿಗೆ ಪ್ರಶಸ್ತಿಯನ್ನೂ ಕೊಡಬೇಕು ಸರಿ. ಆದರೆ ಅವರಲ್ಲಿ ಯೋಗ್ಯತೆಯ ಮಾನದಂಡ ಏನು?

ಮಲಹೊರುವವರ ಕುಟುಂಬದಿಂದ ಬಂದು ಮಲಹೊರುತ್ತಲೇ ಆ ಕುರಿತು ಕೂಲಿಕಾರರನ್ನು ಸಂಘಟಿಸಿ ಎತ್ತರಕ್ಕೇರಿದ ಕೆಜಿಎಫ್‌ನ ಬೆಝ್‌ವಾಡಾ ವಿಲ್ಸನ್‌ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಪಡೆದಿದ್ದು ನಮಗೆ ಗೊತ್ತಿದೆ.

ಅವರಷ್ಟೆತ್ತರ ಏರದಿದ್ದರೂ ವಿಪರೀತ ಕುಡಿತದ ಚಟಕ್ಕೆ ಬೀಳದೆ, ತಮ್ಮ ಆರೋಗ್ಯವನ್ನೂ ಕೌಟುಂಬಿಕ ಜವಾಬ್ದಾರಿಯನ್ನೂ ಅರಿತು, ಮುಖವಾಡದಂಥ ಸುರಕ್ಷಾ ಸಾಧನಗಳನ್ನು ಧರಿಸಿಯೇ ಕೆಲಸಕ್ಕೆ ಇಳಿಯಬೇಕೆಂದು ಸಹೋದ್ಯೋಗಿಗಳ ಮನವೊಲಿಸಿ ಕೆಲಮಟ್ಟಿನ ಲೀಡರ್‌ಶಿಪ್‌ ತೋರಿದವರನ್ನು ಹುಡುಕಬೇಕು.

ಅಂಥ ಜಾಗ್ರತಿ ಇರುವ, 60-70 ವರ್ಷ ಬದುಕಿರುವವರನ್ನು ಗುರುತಿಸಲು ದು. ಸರಸ್ವತಿಯಂಥ ಸಾಮಾಜಿಕ ಕಾರ್ಯಕರ್ತೆಯರ ನೆರವು ಪಡೆದರೆ ಯೋಗ್ಯವ್ಯಕ್ತಿ ಸಿಕ್ಕೇ ಸಿಗುತ್ತಾರೆ. ಅವರಿಗೆಂದೇ ವಯೋಮಿತಿ ಸಡಿಲಿಸುವ ಅಗತ್ಯವಿರುವುದಿಲ್ಲ.

ಲೇಖಕ ದ್ವಾರಕನಾಥ್‌ ಆಕ್ಷೇಪ

ಮೇಲಿನ ನಿಮ್ಮ ಪೋಸ್ಟ್ ನಲ್ಲಿ "ಮಲ ಹೊರುವ ಶ್ರಮಿಕರಿಗೆ ವಯಸ್ಸಿನ ನಿರ್ಬಂಧ ಇರಲೇಬಾರದು, ಅವರಲ್ಲಿ 50 ವರ್ಷದಾಚೆ ಬದುಕುವುದೇ ಅಪರೂಪ; ಅಂಥವರಲ್ಲಿ ಯೋಗ್ಯರಾದ ಒಬ್ಬರಿಗೆ ಪ್ರಶಸ್ತಿ ಕೊಡಬೇಕು ಎಂಬ ಒತ್ತಾಯವೂ ಈ ವರ್ಷ ಬಂತು. ಕೊಡಬೇಕು ಸರಿ; ಆದರೆ ಅವರಲ್ಲಿ ಯೋಗ್ಯತೆಯ ಮಾನದಂಡ ಏನು? ನನ್ನ ಪ್ರಕಾರ, ಯಾರು 60 ಮೀರಿಯೂ ಬದುಕಿರುತ್ತಾರೊ (ಕುಡಿತ, ಅನಾರೋಗ್ಯವನ್ನೂ ಮೆಟ್ಟಿ ನಿಂತ) ಅಂಥವರನ್ನೇ ಹುಡುಕಿ ಪ್ರಶಸ್ತಿ ಕೊಡಬೇಕು ತಾನೆ?" ಎಂದು ಬರೆದಿದ್ದೀರಿ,

ಈ ವಿಷಯ ಪ್ರಸ್ತಾಪಿಸಿದ್ದು ಆಯ್ಕೆ ಸಮಿತಿಯಲ್ಲಿದ್ದ ನಾನೇ..

ಬೀದಿ ಗುಡಿಸುವ ಶಂಕ್ರಮ್ಮ ಮತ್ತು ಕಕ್ಕಸು ಗುಂಡಿಗೆ ಇಳಿಯುವ ರಂಗಸ್ವಾಮಿ ಇಬ್ಬರಿಗೂ ಅರವತ್ತು ವರ್ಷ ತುಂಬಿದ್ದು ಈ ಇಬ್ಬರಿಗೂ ಕುಡಿಯುವ ಚಟ ಇದೆಯೋ ಇಲ್ಲವೋ ಅನ್ನುವುದು ನನಗೆ ಮುಖ್ಯವಲ್ಲ, "ಕಕ್ಕಸ್ಸು ಗುಂಡಿಗೆ ಇಳಿದು ಮಲ ಬಾಚುವವರು ಕುಡಿಯದೇ ವೃತ್ತಿ ಮಾಡಲು ಹೇಗೆ ಸಾದ್ಯ." ಎನ್ನುವುದು ಇವರ ಬದುಕಿನ ಬಗ್ಗೆ ಕನಿಷ್ಟ ಅರಿವಿಲ್ಲದವರಿಗೆ ಅರ್ಥವಾಗಲ್ಲ. ಕಡೆಗೂ ಈ ನತದೃಷ್ಟರಿಬ್ಬರಿಗೂ ಪ್ರಶಸ್ತಿ ಸಿಗಲಿಲ್ಲ ಬಿಡಿ..

"ಅವರ ಯೋಗ್ಯತೆಯ ಮಾನದಂಡವೇನು?" ಅಂತ ಕೇಳಿದ್ದೀರಿ. ಈ ನೆಲದ ಮೇಲಿನ ಹೊಲಸನ್ನು ತೆಗೆದು ಇಡೀ ಪರಿಸರವನ್ನು ಶುದ್ದವಾಗಿಡುವ ಕಾಯಕ ನಿಮಗೆ ಮಾನದಂಡವಾಗಿ ಕಾಣಲ್ಲವೆ..? ನೀವು ಬರೆದಿರುವ ನಾನು ಕೋಟ್ ಮಾಡಿರುವ ಪ್ಯಾರಾಗ್ರಾಫ್ ಅನ್ನು ಮತ್ತೊಮ್ಮೆ ಓದಿಕೊಳ್ಳಿ.. ನಿಮ್ಮಲ್ಲಿ ಇಂತಹ ಕಾಯಕ ಮಾಡುವ ಸಮುದಾಯಗಳ ಮೇಲಿರುವ ಅಸಹನೆಯ ದರ್ಶನವಾಗುತ್ತೆ. ಇಲ್ಲಿ ಪ್ರಶಸ್ತಿ ವಿಚೇತರಲ್ಲಿ ಕುಡಿಯುವ ಚಟವಿಲ್ಲದವರು ಇಲ್ಲವೇ ಇಲ್ಲವೆ? ನೀವು ಹೇಳಿದಂತೆ ಕುಡಿತವನ್ನೇ ಮಾನದಂಡವಾಗಿ ಇಟ್ಟುಕೊಂಡರೆ ಈ ಪಟ್ಟಿಯಲ್ಲಿ ಕನಿಷ್ಟ ಅರ್ದ ಜನ ಅನರ್ಹರಾಗುತ್ತಾರೆ.. ಕುಡಿತ ಕೇವಲ ಜಾಡಮಾಲಿಗಳನ್ನು ಪರಿಗಣಿಸುವಾಗ ಮಾತ್ರ ಮಾನದಂಡವಾಗುತ್ತದೆಯೇ..? ನಿಮ್ಮ ಬರಹ ಓದಿ ನನಗೆ ಬಹಳ ಬೇಸರವಾಯಿತು.

ನಿರ್ದೇಶಕ ದಯಾನಂದ್‌ ಅಭಿಪ್ರಾಯ ಏನು

ಈ ಸಲದ ರಾಜ್ಯೋತ್ಸವ ಪ್ರಶಸ್ತಿ ಜ್ಯೂರಿ ಕಮಿಟಿಯಲ್ಲಿದ್ದ ನಾಗೇಶ್‌ ಹೆಗಡ ಅವರಿಗೆ ಜ್ಯೂರಿ ಮೆಂಬರ್‌ ಸಿ.ಎಸ್.ದ್ವಾರಕಾನಾಥ್‌ ಅವರು ಮಲ ಹೊರುವ, ಕಸ ಬಳಿಯುವ ಒಬ್ಬ ದಲಿತರಿಗೆ ರಾಜ್ಯೋತ್ಸವ ಪ್ರಶಸ್ತಿ ಯಾಕೆ ಕೊಡಬಾರದು ಎಂಬ ಮಾತು ಮುಂದಿಡುತ್ತಾರೆ, ಹೆಗಡೆಯವರು ಮಲ ಹೊರುವ, ಕಸ ಬಳಿಯವ ಜಾಡಮಾಲಿಗಳ ಯೋಗ್ಯತೆ ಮಾನದಂಡದ ಬಗ್ಗೆ ,ಅವರ ಆಯಸ್ಸುನ ಬಗ್ಗೆ ಕುಡಿತದ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಾರೆ. ಸಮಾಜದ ಎಲ್ಲ ಹೊಲಸನ್ನು ಬರಿಗೈಲಿ ಸ್ವಚ್ಚ ಮಾಡಿ, ನಿಮ್ಮಂತ ಸೋಫೆಸ್ಟಿಕೇಟೆಡ್‌ ಸುಸಂಸ್ಕೃತರಿಗೆ ಕಾಯಿಕೆ ಕಸಾಲೆ ಬಾರದಂತೆ ನೆಗೆದು ಬಿದ್ದು ಹೋಗದಂತೆ ನೋಡಿಕೊಳ್ಳುತ್ತಾರಲ್ಲ, ಇದಕ್ಕಿಂತ ಯೋಗ್ಯತೆಯ ಮಾನದಂಡ ಬೇಕೆ. ನೀವು ಆಯ್ಕೆ ಆಡಿರುವವರಲ್ಲಿ ಕೆಲ ಅನರ್ಹ ಐಟಂಗಳಿಗೆ ಹೋಲಿಸಿದರೆ ಮಲ ಹೊರುವ ರಂಗಸ್ವಾಮಿ, ಕಸ ಗುಡಿಸೋ ಶಂಕ್ರಮ್ಮನಂತ ಜೀವಿಗಳು ಸಾವಿರ ಪಾಲು ಮೇಲು. ಒಂಥರದಲ್ಲಿ ಇದು ಒಳ್ಳೇದು ಆಯ್ತು, ಇಂತಹ ಅನರ್ಹ ಆಯ್ಕೆಗಳ ಮಧ್ಯೆ ಪೂರ್ವಾಗ್ರಹ ಪೀಡಿತ ಜೂರಿಗಳ ಪ್ರಶಸ್ತಿ ಪಡೆಯೋ ಅವಮಾನ ದಲಿತರಿಗೂ ಬೇಡವಾಗಿತ್ತು.

ಲೇಖಕಿ ಎಚ್‌ಎನ್‌ ಗಾಯತ್ರಿ ಪ್ರತಿಕ್ರಿಯೆ

ಮಲ ಹೊರುವವರ ಬಗ್ಗೆ ನಿಮ್ಮ ಪೋಸ್ಟ್ ನಲ್ಲಿರುವ ಅಷ್ಟೂ ಮಾತುಗಳು ತಪ್ಪಾಗಿ ತೋರುತ್ತಿವೆ. ದ್ವಾರಕಾನಾಥ್ ಅವರಿಗೆ ಕೊಟ್ಟ ವಿವರಣೆಯಲ್ಲಿ ಇನ್ನೂ ಹೆಚ್ಚಿನ ತಪ್ಪಾಗಿದೆ. ಉಳಿದ ವಿಷಯಗಳಿಗೆ ಬರೀ ಸಾವಿರಗಟ್ಟಲೆ ಅಲ್ಲ, ಲಕ್ಷಗಟ್ಟಲೆ ಅರ್ಹರ ನಡುವೆ ಆಯ್ಕೆ ಮಾಡುವ ದರ್ದು ಇರುತ್ತದೆ, ಮಲ ಹೊರುವವರು ಸಂಖ್ಯೆ ಕೆಲವು ಸಾವಿರಗಳು. ಅವರಲ್ಲಿ ಒಂದಷ್ಟು ಮಾನದಂಡ ಹಾಕಿಕೊಂಡು ಪ್ರಶಸ್ತಿಗೆ ಆಯ್ಕೆ ಮಾಡುವುದು ಮನಸ್ಸು ಮಾಡಿದ್ದರೆ ಕಷ್ಟ ಆಗುತ್ತಿರಲಿಲ್ಲ.

ಬೆಳಗ್ಗೆ ಎದ್ದ ಕೂಡಲೇ ಈ ಬಗ್ಗೆ ಒಂದು ಪೋಸ್ಟ್ ನೋಡಿ ನೀವು ಹಾಗೆ ಪ್ರತಿಕ್ರಿಯೆ ಕೊಟ್ಟಿರಲಿಕ್ಕಿಲ್ಲ ಅನ್ನುವ ಅನುಮಾನದಿಂದಲೇ ನಿಮ್ಮ ಬರಹ ಓದಲು ಬಂದೆ. ಬಹಳ ನಿರಾಸೆ ಆಯಿತು.

ನೀವು ವೇದಿಕೆಗಳಲ್ಲಿ ಎಷ್ಟೇ ಪ್ರತಿಪಾದನೆ ಮಾಡಿದರೂ ನಿಮ್ಮಲ್ಲಿ ಒಂದು ಸಮುದಾಯದ ಶ್ರಮದ ಬಗ್ಗೆ ಗೌರವ, ಪ್ರೀತಿ ಇಲ್ಲದೆ ಹೋದರೆ ಇಂಥ ಅಭಿಪ್ರಾಯ ಸಹಜ. ನಿಮಗೆ ಇಂಥ ಪ್ರೀತಿ ಇಲ್ಲವಾಯಿತು ಅನ್ನುವುದು ನಮ್ಮಂಥವರ ಬೇಸರ.

ಹೆಗಡೆ ಅವರ ಸ್ಪಷ್ಟನೆ ಹೀಗಿದೆ

ರಾಜ್ಯೋತ್ಸವ ಪ್ರಶಸ್ತಿಗಳ ಕುರಿತು ಬರೆಯುವಾಗ ಅಂಥ ಮಲಹೊರುವ ಶ್ರಮಿಕರಿಗೆ ನೀಡಬೇಕಾದ ಪ್ರಶಸ್ತಿಯ ಮಾನದಂಡ ಕುರಿತು ತೀರ ಸಂಕ್ಷಿಪ್ತವಾಗಿ ಬರೆದಿದ್ದರಿಂದಲೋ ಏನೋ, ಕೆಲವರು ನನ್ನ ವಾದವನ್ನು ಸರಿಯಾಗಿ ಗ್ರಹಿಸಿದಂತಿಲ್ಲ. ನನಗೆ ಆ ಶ್ರಮಿಕರ ಬಗ್ಗೆ ಸಂವೇದನೆಯೇ ಇಲ್ಲ ಎಂದು ಕೆಲವರು ಆಕ್ಷೇಪಿಸಿದ್ದಾರೆ

ʻಮಂಗಳಯಾನʼ ನೌಕೆಯನ್ನು ಯಶಸ್ವಿಯಾಗಿ ಮಂಗಳ ಗ್ರಹದ ಸುತ್ತ ಪ್ರದಕ್ಷಿಣೆ ಹಾಕಿಸಿದ ಇಸ್ರೊ ವಿಜ್ಞಾನಿಗಳ ಅಪೂರ್ವ ಸಾಧನೆಯನ್ನು ನಾನು ಅನೇಕ ಬಾರಿ ಕೊಂಡಾಡಿದ್ದೇನೆ. ಆ ನೌಕೆಯಲ್ಲಿ ಒಂದು ಪುಟ್ಟ ಸಾಧನವಿದ್ದು ಅದು ಮಂಗಳನ ನೆಲದಲ್ಲಿ ಮೀಥೇನ್‌ ಇದೆಯೇ ಇಲ್ಲವೆ ಎಂಬುದನ್ನು ನಮಗೆ ವರದಿ ಮಾಡುತ್ತಿತ್ತು.

ಕೋಟಿ ಕಿಲೊಮೀಟರ್‌ ಆಚಿನ ವಿಷಗಾಳಿಯನ್ನು ಪತ್ತೆ ಮಾಡುವಷ್ಟು ಸಾಮರ್ಥ್ಯ ನಮ್ಮ ವಿಜ್ಞಾನಿಗಳಿಗೆ ಇದೆ. ಆದರೂ ನಮ್ಮ ನಗರಗಳ ಕೊಚ್ಚೆಗುಂಡಿಯನ್ನು ಇಳಿಯುವವರು ಅಲ್ಲಿ ವಿಷಾನಿಲ (ಮೀಥೇನ್‌, ಕಾರ್ಬನ್‌ ಮೊನಾಕ್ಸೈಡ್‌, ಕಾರ್ಬನ್‌ ಡೈ ಆಕ್ಸೈಡ್‌) ಇದೆ ಎಂಬುದು ಗೊತ್ತಿಲ್ಲದೇ ಸಾವಪ್ಪುತ್ತಾರೆ. ವಿಷಾನಿಲವನ್ನು ಪತ್ತೆ ಹಚ್ಚಲು ಒಂದು ಪುಟ್ಟ ಮೊಬೈಲ್‌ನಂಥ ಸಾಧನ ಇದ್ದರೆ ಸಾಕು. ಅನೇಕ ಶ್ರಮಜೀವಿಗಳ ಸಾವನ್ನು ತಪ್ಪಿಸಬಹುದು. ಏಕೆ ನಗರಪಾಲಿಕೆಯ ಗುತ್ತಿಗೆದಾರರ ಬಳಿ ಆ ಸಾಧನ ಇರುವುದಿಲ್ಲ?

ಈ ವ್ಯಂಗ್ಯದ ಕುರಿತು ನಾನು ಅನೇಕ ವಿಜ್ಞಾನ ಕಮ್ಮಟಗಳಲ್ಲಿ ಹೇಳಿದ್ದೇನೆ. ಚರಂಡಿ ಶುದ್ಧ ಮಾಡುವವರ ಆರೋಗ್ಯ ಕುರಿತು ಯಾಕಿಷ್ಟು ನಿಷ್ಕಾಳಜಿ ಎಂದು ನಗರಪಾಲಿಕೆಯ ಆರೋಗ್ಯ ತಪಾಸಕರನ್ನೂ ಎಂಜಿನಿಯರ್‌ಗಳನ್ನೂ ಕೇಳಿದ್ದೇನೆ. ಆ ರೇಜಿಗೆ ಕೆಲಸದಲ್ಲಿ ಅದೆಷ್ಟು ಶ್ರಮಿಕರು ಸಾವಿಗೀಡಾಗುತ್ತಾರೆ ಎಂಬೆಲ್ಲ ವಿವರಗಳನ್ನೂ ಚಿತ್ರಗಳನ್ನೂ ವರ್ಷದಿಂದ ವರ್ಷಕ್ಕೆ ಸಂಗ್ರಹಿಸುತ್ತ ಬಂದಿದ್ದೇನೆ. ಜರ್ನಲಿಸಂ ವಿದ್ಯಾರ್ಥಿಗಳಿಗೆ ಆ ಕುರಿತು ಪಾಠ ಮಾಡಿದ್ದೇನೆ. ಅಂಥ ವಿಷಯಗಳ ತನಿಖಾ ವರದಿ ತಯಾರಿಸಲು ಮಾರ್ಗದರ್ಶನ ಮಾಡಿದ್ದೇನೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ