logo
ಕನ್ನಡ ಸುದ್ದಿ  /  ಜೀವನಶೈಲಿ  /  ಮಾತೃಭಾಷೆಯೇ ಶಿಕ್ಷಣದ ಮಾಧ್ಯಮವಾಗಬೇಕು; ಸಮಸ್ಯೆ ಇರುವುದು ಕನ್ನಡಕ್ಕೋ, ಕನ್ನಡ ಶಾಲೆಗಳಿಗೋ -ಪ್ರೊ ನ೦ದಿನಿ ಲಕ್ಷ್ಮೀಕಾ೦ತ್

ಮಾತೃಭಾಷೆಯೇ ಶಿಕ್ಷಣದ ಮಾಧ್ಯಮವಾಗಬೇಕು; ಸಮಸ್ಯೆ ಇರುವುದು ಕನ್ನಡಕ್ಕೋ, ಕನ್ನಡ ಶಾಲೆಗಳಿಗೋ -ಪ್ರೊ ನ೦ದಿನಿ ಲಕ್ಷ್ಮೀಕಾ೦ತ್

Raghavendra M Y HT Kannada

Oct 31, 2024 05:04 PM IST

google News

ಕನ್ನಡ ಶಾಲೆಗಳ ಅಳಿವು-ಉಳಿವು, ಸವಾಲುಗಳ ಜೊತೆಗೆ ಸಮಸ್ಯೆಗಳ ಬಗ್ಗೆ ಶಿಕ್ಷಣ ತಜ್ಞರಾದ ಪ್ರೊ. ನಂದಿನಿ ಲಕ್ಷ್ಮೀಕಾಂತ್ ಅವರು ಬರೆದಿದ್ದಾರೆ.

    • ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿಗೆ ಹೋಲಿಸಿದರೆ ಶಿಕ್ಷಕರ ಸಂಖ್ಯೆ ಚೆನ್ನಾಗಿದೆಯಾದರೂ, ಬಹುತೇಕ ಶಾಲೆಗಳಲ್ಲಿ ಮೂಲ ಸೌಕರ್ಯಗಳೇ ಇರುವುದಿಲ್ಲ. ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಿ ಎಂಬ ಮಾತುಗಳ ನಡುವೆ ಸಮಸ್ಯೆ ಇರುವುದು ಕನ್ನಡಕ್ಕೋ ಅಥವಾ ಕನ್ನಡ ಶಾಲೆಗಳಿಗೋ ಎಂಬುದರ ಬಗ್ಗೆ ಶಿಕ್ಷಣ ತಜ್ಞರಾದ ಪ್ರೊ ನಂದಿನಿ ಲಕ್ಷ್ಮೀಕಾಂತ್ ಅವರು ವಿವರಿಸಿದ್ದಾರೆ.
ಕನ್ನಡ ಶಾಲೆಗಳ ಅಳಿವು-ಉಳಿವು, ಸವಾಲುಗಳ ಜೊತೆಗೆ ಸಮಸ್ಯೆಗಳ ಬಗ್ಗೆ ಶಿಕ್ಷಣ ತಜ್ಞರಾದ ಪ್ರೊ. ನಂದಿನಿ ಲಕ್ಷ್ಮೀಕಾಂತ್ ಅವರು ಬರೆದಿದ್ದಾರೆ.
ಕನ್ನಡ ಶಾಲೆಗಳ ಅಳಿವು-ಉಳಿವು, ಸವಾಲುಗಳ ಜೊತೆಗೆ ಸಮಸ್ಯೆಗಳ ಬಗ್ಗೆ ಶಿಕ್ಷಣ ತಜ್ಞರಾದ ಪ್ರೊ. ನಂದಿನಿ ಲಕ್ಷ್ಮೀಕಾಂತ್ ಅವರು ಬರೆದಿದ್ದಾರೆ.

ಆತನೊಬ್ಬ ವೃತ್ತಿಯಿ೦ದ ವಾಹನ ಚಾಲಕ. ಮಗಳ ಶಾಲೆಗೆ ಶುಲ್ಕ ಪಾವತಿಸಲು ಹಣಕ್ಕಾಗಿ ಹನಿಗಣ್ಣಾಗಿ ನಿಂತಿದ್ದ. "ನಾನು ಓದಲಿಲ್ಲ, ನನ್ನ ಮಗಳಾದರೂ ಓದಲಿ" ಎಂಬ ಬಯಕೆಯೊಂದಿಗೆ ನಿಂತವನಿಗೆ, "ಇಷ್ಟೊಂದು ಹಣ ಖರ್ಚು ಮಾಡಿ ಆಂಗ್ಲ ಮಾಧ್ಯಮ ಶಾಲೆಯಲ್ಲೇ ಓದಿಸಬೇಕೇ? ಸರ್ಕಾರ ಚೆಂದದ ಯೋಜನೆಗಳನ್ನು ಹಾಕಿದೆಯಲ್ಲ, ಅಲ್ಲಿಗೆ ಸೇರಿಸಿದರೆ, ಉಚಿತ ಶಿಕ್ಷಣದ ಜೊತೆಗೆ ಬೇರೆ ಸೌಲಭ್ಯಗಳೂ ಇವೆ" ಎಂದು ಪ್ರೋತ್ಸಾಹಿಸಲೆತ್ನಿಸುತ್ತಾ ನುಡಿದೆ. "ಅಮ್ಮಾ ನೀವು ಸರ್ಕಾರೀ ಶಾಲೆಗಳಲ್ಲಿ ಹೋಗಿ ನೋಡಿರುವಿರಾ, ದಾಖಲೆಯಲ್ಲಿ ಎಲ್ಲವೂ ಇದೆ, ಆದರೆ ವಸ್ತುಸ್ಥಿತಿ ಹಾಗಿಲ್ಲವಲ್ಲ. ನಿಮ್ಮ ಮಕ್ಕಳಂತೆ ನನ್ನ ಮಗಳೂ ಚೆನ್ನಾಗಿ ಓದಬೇಕು ಎನ್ನುವ ಕನಸು ನನ್ನದು" ಎಂದವನ ಮಾತಿಗೆ ನಾ ಮೂಕಳಾದೆ. ಕಾರಣವಿಲ್ಲದಿಲ್ಲ. ಈಗ್ಗೆ ಕೆಲ ತಿಂಗಳುಗಳ ಹಿಂದೆ ಕನ್ನಡ ಶಾಲೆಗಳ ಅಳಿವು-ಉಳಿವು ಕುರಿತ ವಿಚಾರ ಮಂಥನದಲ್ಲಿ ಭಾಗವಹಿಸುವ ಅವಕಾಶ ದೊರಕಿತ್ತು. ಕನ್ನಡದ ಶಾಲೆಗಳ ಸ್ಥಿತಿ-ಗತಿಯನ್ನು ವಿವರಿಸಿ ಅವುಗಳನ್ನು ಉಳಿಸಿಕೊಳ್ಳುವುದು ಹೇಗೆ? ಎಂದು ಗಂಭೀರವಾಗಿ ಆಲೋಚಿಸಲು ಆಯೋಜಿಸಿದ್ದ ಸಭೆಯದು. ಕನ್ನಡ ಮಾಧ್ಯಮ ಶಾಲೆಗಳು ತಮ್ಮ ಅಸ್ತಿತ್ವಕ್ಕಾಗಿ ಹೋರಾಟ ಮಾಡಬೇಕಾದ ಸ್ಥಿತಿಗೆ ಭಾಗವಹಿಸಿದವರು ಮುಂದಿಟ್ಟ ಕಾರಣಗಳನ್ನು ನನ್ನ ಮುಂದಿದ್ದ ಪಾಲಕ ಪ್ರತಿಧ್ವನಿಸಿದ್ದನಷ್ಟೇ!

ರಾಜ್ಯದಲ್ಲಿ ಸರ್ಕಾರಿ, ಸರ್ಕಾರದ ಮಾನ್ಯತೆ ಪಡೆದ ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು ರಾಜ್ಯದಲ್ಲಿ ಕೆಲಸ ಮಾಡುತ್ತಿವೆಯೆಷ್ಟೇ. ಅವುಗಳಲ್ಲಿ ರಾಜ್ಯದ ಸರ್ಕಾರದ ಶಾಲೆಗಳು ಬಹುತೇಕ ಕನ್ನಡ ಮಾಧ್ಯಮದ ಶಾಲೆಗಳಾದರೆ, ಸರ್ಕಾರದ ಮಾನ್ಯತೆ ಪಡೆದ ಖಾಸಗಿ ಶಾಲೆಗಳು ಕನ್ನಡ ಅಥವಾ ಆಂಗ್ಲಮಾಧ್ಯಮದ ಶಾಲೆಗಳಾಗಿವೆ. ಆಂಗ್ಲಮಾಧ್ಯಮ ಶಾಲೆಗಳು 19ನೇ ಶತಮಾನದಿಂದಲೂ ರಾಜ್ಯದಲ್ಲಿ ಅಸ್ತಿತ್ವದಲ್ಲಿವೆ. 1994ರ ಭಾಷಾ ನೀತಿಯ ಅನ್ವಯ ಎಲ್ಲ ಶಾಲೆಗಳನ್ನೂ ರಾಜ್ಯ ಸರ್ಕಾರ ಕನ್ನಡ ಮಾಧ್ಯಮ ಶಾಲೆಗಳೆಂದೇ ದಾಖಲಿಸಿಕೊಳ್ಳಲಾರಂಭಿಸಿತ್ತು.

ಹಲವಾರು ಶಾಲೆಗಳು ಕಾನೂನು ಹೋರಾಟ ಮಾಡಿ ತಮ್ಮ ಶಾಲೆಗೆ ಆಂಗ್ಲಮಾಧ್ಯಮ ಶಾಲೆಗಳೆಂದು ಕಾಲ ಕ್ರಮೇಣ ಬದಲಾಯಿಸಿಕೊಂಡವು. ಅದೇನೇ ಆದರೂ ಕನ್ನಡ ಮಾಧ್ಯಮದಲ್ಲಿ ಶಾಲಾ ಹಂತದ ಶಿಕ್ಷಣ ಸ್ವಾಭಾವಿಕ ಎನ್ನುವ ಸಮಯದಿಂದ 'ಕನ್ನಡ ಶಾಲೆಗಳನ್ನು ಉಳಿಸಿ' ಎನ್ನುವ ಹಂತಕ್ಕೆ ನಾವು ಬಂದಿದ್ದಾದರೂ ಯಾಕೆ? ಎನ್ನುವತ್ತ ಯೋಚಿಸಿದಾಗ ಪಾಲಕರು ಕನ್ನಡ ಶಾಲೆಗಳಿಂದ ತಮ್ಮ ಮಕ್ಕಳನ್ನು ದೂರವಿಟ್ಟು ಆಂಗ್ಲ ಮಾಧ್ಯಮ ಶಾಲೆಗೆ ದಾಖಲಿಸುತ್ತಿದ್ದಾರೆ, ರಾಜ್ಯ ಭಾಷೆ ಕನ್ನಡ ಮಾಧ್ಯಮದಲ್ಲಿ ಮಕ್ಕಳಿಗೆ ಶಿಕ್ಷಣ ನೀಡುವತ್ತ ನಿರ್ಲಕ್ಷ್ಯ ಭಾವ ಹೊಂದಿದ್ದಾರೆ ಎನ್ನುವ ಕೂಗು ಜೋರಾಗಿಯೇ ಕೇಳುತ್ತದೆ ಎನ್ನುವುದು ಅರಿವಾಗುತ್ತದೆ.

ಇಲ್ಲಿ ಸೂಕ್ಷ್ಮವಾಗಿ ಗಮನಿಸಬೇಕಾದ ಪ್ರಮುಖ ವಿಷಯವೆಂದರೆ ಇಂಗ್ಲಿಷ್‌ನತ್ತ ನಮ್ಮ ವ್ಯಾಮೋಹದ ವಿಚಾರ. ಇಂಗ್ಲಿಷ್ ಕಲಿತರೆ ಅಂತರರಾಷ್ಟ್ರೀಯ ಮಟ್ಟಕ್ಕೆ ಮಕ್ಕಳು ಸುಲಭವಾಗಿ ಏರುತ್ತಾರೆ ಎನ್ನುವ ಪಾಲಕರನ್ನು ಗುರಿಯಾಗಿರಿಸಿಕೊಂಡು ಸೃಷ್ಠಿಸಿದ ನರೇಟೀವ್‌ನ ಪ್ರಭಾವವಿದೆ ಎಂದೆನ್ನಿಸುವುದಿಲ್ಲವೇ? ಇದಕ್ಕೆ ಪೂರಕವಾಗಿ ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಸರ್ಕಾರಿ ನೌಕರಿಯ ಭರವಸೆಯನ್ನು ಪಾಲಿಸಲು ಸರ್ಕಾರ ವಿಫಲವಾಯಿತು. ಈ ಕುರಿತು ಕೇವಲ ಸರ್ಕಾರವನ್ನು ದೂಷಿಸಿದರೆ ಸಾಕೇ? ಇದೆಲ್ಲದಕ್ಕೆ ಕಳಸವಿಟ್ಟಂತಿರುವ ಕನ್ನಡದತ್ತ ಕೇವಲ ನವೆಂಬರ್ ತಿಂಗಳಲ್ಲಿ ಮಾತ್ರ ನಮ್ಮ ಒಲವು ಜಾಗೃತವಾಗುತ್ತದೆ. ಅಲ್ಲಿಗೆ ಸರ್ಕಾರಿ ಕನ್ನಡ ಶಾಲೆಗಳ ಸ್ಥಿತಿ, ಕನ್ನಡ ಅನುದಾನಿತ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳು, ಕನ್ನಡದ ಬಗ್ಗೆ ನಮ್ಮ ಭಾವನೆ ಮತ್ತು ಕನ್ನಡದ ಶ್ರೀಮಂತಿಕೆಯ ಕುರಿತು ಇರುವ ಶಿಕ್ಷಣದ ಕೊರತೆಯ ಸುತ್ತಲೇ ನಮ್ಮ ಚರ್ಚೆಗಳು ಸುತ್ತುತ್ತವೆ.

ಶಾಲೆಯಲ್ಲಿ ಮಕ್ಕಳೊಂದಿಗೆ ಶಿಕ್ಷಕರು ಎಷ್ಟು ಸಮಯ ಕಳೆಯುತ್ತಾರೆ?

ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶದ ಸಂಖ್ಯೆಗೆ ಹೋಲಿಸಿದರೆ ಶಿಕ್ಷಕರ ಸಂಖ್ಯೆ ಚೆನ್ನಾಗಿದೆ. ಆದರೆ ಬಹುತೇಕ ಶಾಲೆಗಳಲ್ಲಿ ಮೂಲ ಸೌಕರ್ಯಗಳಿಲ್ಲ. ಮಳೆಬಂದರೆ ಸೋರುವ, ಚಾವಣಿಯೇ ಇಲ್ಲದ ಅದೆಷ್ಟು ಶಾಲೆಗಳ ಕುರಿತು ನಾವು ಮಾಧ್ಯಮಗಳಲ್ಲಿ ಓದಿಲ್ಲ? ಶಿಕ್ಷಕರಿಗೆ ಸರ್ಕಾರ ಕೇಳುವ ದಾಖಲೆಗಳನ್ನು, ಅವರಿಗೆ ಒಪ್ಪಿಸಿದ ಕೆಲಸಗಳನ್ನು ಪೂರೈಸಲೇ ಸಮಯ ಸಾಲುವುದಿಲ್ಲ ಇನ್ನು ಪಾಠ ಯಾವಾಗ ಮಾಡುತ್ತಾರೋ ತಿಳಿಯದು. ಇನ್ನು ಗ್ರಾಮಗಳಲ್ಲಿರುವ ಶಾಲೆಗಳಿಗೆ ವರ್ಗವಾದ ಶಿಕ್ಷಕರಿಗೆ ಕತ್ತಲಾಗುವ ಮುನ್ನ ನಗರದಲ್ಲಿರುವ ತಮ್ಮ ಮನೆ ಸೇರುವ ತವಕವೇ ಹೆಚ್ಚು, ಶಾಲೆಯಲ್ಲಿ ಮಕ್ಕಳೊಂದಿಗೆ ಎಷ್ಟು ಸಮಯ ಕಳೆಯಲು ಸಾಧ್ಯ. ವ್ಯವಸ್ಥಿತವಾಗಿ ಕೆಲಸಮಾಡಲು ಶಿಕ್ಷಣ ಮಂಡಳಿಗಳಿದ್ದರೂ ಅವೆಲ್ಲವೂ ಶಿಕ್ಷಣದಲ್ಲೂ ರಾಜಕಾರಣ ಮಾಡುವ ಬಗೆ ಹೇಗೆ ಎಂದು ಯೋಚಿಸುವ ರಾಜಕಾರಣಿಗಳ ಹಿಡಿತದಲ್ಲಿದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸಿರುವ ಪ್ರಸ್ತುತ ಸರ್ಕಾರದ ನಿಲುವು ಇದಕ್ಕೊಂದು ಉದಾಹರಣೆ.

ಸರ್ಕಾರಿ ಅನುದಾನಿತ ಖಾಸಗಿ ಸಂಸ್ಥೆಗಳು ನಡೆಸುತ್ತಿರುವ ಶಾಲೆಗಳ ಎದುರಿಸುತ್ತಿರುವ ಸಮಸ್ಯೆ ಇನ್ನೊಂದು ಬಗೆ. ಅಗತ್ಯವಿರುವ ಶಿಕ್ಷಕರ ನೇಮಕಾತಿಗೆ ಪರವಾನಿಗೆಯೇ ಸರ್ಕಾರ ನೀಡುವುದಿಲ್ಲ. ಶಿಕ್ಷಕರು ನಿವೃತ್ತರಾದರೂ ಅವರ ಜಾಗಕ್ಕೆ ಹೊಸಬರನ್ನು ಶಾಲೆಗಳು ತುಂಬಿಕೊಳ್ಳುವಂತಿಲ್ಲ. ಇರುವ ಶಿಕ್ಷಕರೇ ಕೆಲಸ ಸಾಗಿಸಿಕೊಂಡು ಹೋಗುವ ಪರಿಸ್ಥಿತಿ. ಈ ಶಾಲೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ಬರುವವರೇ ಹೆಚ್ಚು. ವರ್ಷ ಪೂರ್ತಿಯ ಸಂಬಳ ಇವರಿಗೆ ಸಿಗದ ಕಾರಣ, ಪಾಠ ಮಾಡಲು ಉತ್ಸಾಹದಿಂದ ಬರುವವರ ಸಂಖ್ಯೆ ಕಡಿಮೆ. ಬಂದವರ ಗುಣಮಟ್ಟವೂ 'ಕಂತೆಗೆ ತಕ್ಕ ಬೊಂತೆ' ಎಂಬಂತೆ. ಇದು ಸರ್ಕಾರದಿಂದ ಅನುದಾನ ಪಡೆದು ನಡೆಸುತ್ತಿರುವ ಕನ್ನಡ ಶಾಲೆಗಳನ್ನು ಮುಚ್ಚುವ ಹುನ್ನಾರವೆಂದೇ ಕಾಣುತ್ತದೆ. ಪರಿಣಾಮ ಹೀಗೆ ಮುಚ್ಚುವ ಶಾಲೆಗಳು ಕ್ರಮೇಣ ಆಂಗ್ಲ ಮಾಧ್ಯಮದತ್ತ ಹೊರಳುತ್ತಿವೆ. ಈ ಬದಲಾವಣೆಯ ಜೊತೆಗೆ ಇನ್ನೊಂದು ಬದಲಾವಣೆಯನ್ನೂ ನಾವು ಗಮನಿಸಬೇಕು. ಬಹುತೇಕ ಖಾಸಗಿ ಶಾಲೆಗಳು ಸಿಬಿಎಸ್‌ಸಿ ಅಥವಾ ಐಸಿಎಸ್‌ಸಿ ಪಠ್ಯಕ್ರಮದತ್ತ ತಮ್ಮ ಆಸಕ್ತಿಯನ್ನು ತೋರಿಸುತ್ತಿವೆ.

ಮುಚ್ಚುವ ಖಾಸಗಿ ಕನ್ನಡ ಮಾಧ್ಯಮ ಶಾಲೆಗಳ ಸ್ಥಿತಿಗತಿಗೆ ತದ್ವಿರುದ್ಧವಾಗಿ ಉದಾಹರಣೆಯಾಗಿ ಕಲ್ಲಡ್ಕದ ಶ್ರೀರಾಮ ವಿದ್ಯಾಕೇoದ್ರ ದoತಹ ಶಾಲೆಗಳು ನಿoತಿವೆ. ಕಲ್ಕಡದ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ನೊಂದಾಯಿತ ಮಕ್ಕಳ ಸಂಖ್ಯೆ ಯಾವುದೇ ಆಂಗ್ಲ ಮಾಧ್ಯಮ ಶಾಲೆಯ ಊಹೆಗೂ ಮೀರಿದೆ. ಬೇಡಿಕೆಯೂ ಹೆಚ್ಚುತ್ತಲೇಯಿದೆ. ಕಳೆದ ವರ್ಷ 300 ಮಕ್ಕಳು ಈ ಶಾಲೆಯಿಂದ ಹತ್ತನೇ ತರಗತಿಯ ಪರೀಕ್ಷೆಯನ್ನು ಕನ್ನಡ ಮಾಧ್ಯಮದಲ್ಲಿ ಬರೆದರು ಎಂದು ಶಾಲೆಯ ದಾಖಲೆ ತಿಳಿಸುತ್ತದೆ.

ಸಂಕಟದ ಪರಿಸ್ಥಿತಿ ಸೃಷ್ಠಿಸಿದ್ದೇ ಹೆಚ್ಚು

ರಾಷ್ಟ್ರೀಯ ಪಠ್ಯಕ್ರಮವನ್ನು ಅಳವಡಿಸಿಕೊಳ್ಳುವ ಶಾಲೆಗಳಲ್ಲಿ ಮಕ್ಕಳ ಕನ್ನಡದ ಕಲಿಕೆ ಕೇವಲ ಒ೦ದು ವಿಷಯಕ್ಕೆ ಮಾತ್ರ ಸೀಮಿತ. ಖಾಸಗಿ ಅನುದಾನಿತ ಶಾಲೆಯೊಂದರ ಕನ್ನಡ ಅಧ್ಯಾಪಕರ ನೇಮಕಾತಿ ಸಂದರ್ಶನದ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾ ಶಾಲೆಯ ಕಾರ್ಯರ್ಶಿಯೊಬ್ಬರು ಸಂದರ್ಶನಕ್ಕಾಗಿ ಬಂದ ಯಾವ ಅಭ್ಯರ್ಥಿಗೂ ಕನ್ನಡದಲ್ಲಿ ಒಂದು ಪುಟ ತಪ್ಪಿಲ್ಲದೇ ಬರೆಯಲು ಬರುವುದಿಲ್ಲ. ಮಾತನಾಡುವಾಗಲಂತೂ 'ಅ' ಕಾರ 'ಹ'ಕಾರಗಳು ಅದಲು ಬದಲಾಗಿ ಸಂಕಟದ ಪರಿಸ್ಥಿತಿ ಸೃಷ್ಠಿಸಿದ್ದೇ ಹೆಚ್ಚು, ಹೀಗಾದರೆ ಹೇಗೆ " ಎoದು ಬೇಸರಿಸಿದರು. "ಕನ್ನಡ ಸ್ನಾತಕೋತ್ತರ ಮಾಡಿದವರಿಗೆ ಸಾಹಿತ್ಯದಲ್ಲಿ 'ಆತ್ಮಚರಿತ್ರೆ' ಮತ್ತು 'ಜೀವನ ಚರಿತ್ರೆ' ರಚನೆಯ ವ್ಯತ್ಯಾಸವೂ ಗೊತ್ತಿಲ್ಲವೆಂದರೆ ಕನ್ನಡ ಪಾಠಮಾಡಲು ಸಿದ್ಧರಾಗುತ್ತಿರುವವರ ಗುಣಮಟ್ಟವನ್ನು ನೀವೇ ನಿರ್ಣಯಿಸಿ" ಎ೦ದು ನಿರಾಸೆ ವ್ಯಕ್ತಪಡಿಸಿದರು. ದೃಶ್ಯವೇಕೋ ಭಯಾನಕವೆನ್ನಿಸುತ್ತಿದೆಯಲ್ಲವೇ?.

ಪ್ರಸ್ತುತ ಉನ್ನತ ಶಿಕ್ಷಣದಲ್ಲಿ ಇಂಜಿನಿಯರಿಂಗ್ ಹಾಗೂ ಕಾನೂನು ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶಮಾಡಿಕೊಡಲಾಗುತ್ತಿದೆ. ಆದರೆ ಪ್ರಾಥಮಿಕ ಹಂತದಲ್ಲಿಯೇ ಎಡವುತ್ತಿರುವ ನಾವು ಉನ್ನತ ಶಿಕ್ಷಣದಲ್ಲಿ ಕನ್ನಡಕ್ಕೆ ಎಷ್ಟು ಸಮರ್ಥನೆ ಕಾಣಲು ಸಾಧ್ಯ. ಮಾತೃಭಾಷೆಯೇ ಶಿಕ್ಷಣದ ಮಾಧ್ಯಮವಾಗಬೇಕೆಂದು ಶಿಕ್ಷಣತಜ್ಞರು ಹೇಳುತ್ತಲೇ ಬಂದಿದ್ದಾರೆ. ಅದರ ಲಾಭವೂ ವೈಜ್ಞಾನಿಕವಾಗಿ ದೃಢಪಟ್ಟಿದೆ. ಸದ್ಯಕ್ಕೆ ಕನ್ನಡ ಮಾಧ್ಯಮವನ್ನು ಆರಂಭಿಕ ಹಂತದ ಶಿಕ್ಷಣದಲ್ಲಿ ಉಳಿಸಿಕೊಳ್ಳುವುದು ಹೇಗೆ ಎನ್ನುವತ್ತ ಕನ್ನಡದ ಹೃದಯಗಳು ಒಟ್ಟಾಗಿ ಯೋಚಿಸಲಿ. ಕನ್ನಡ ಮಾಧ್ಯಮದಲ್ಲಿ ಓದಿದ ಸುಧಾ ಮೂರ್ತಿಯವರಾಗಲೀ, ಇಸ್ರೋದ ಮಂಗಳಯಾನ, ಚಂದ್ರಯಾನಗಳನ್ನು ಯೋಜನೆಗಳನ್ನು ಯಶಸ್ವಿಯಾಗಿ ನಡೆಸಿದ ಖ್ಯಾತ ವಿಜ್ಞಾನಿ ಕಿರಣ್ ಕುಮಾರ್ ಮುಂದಿನ ಜನಾಂಗಕ್ಕೆ ಉದಾಹರಣೆಯಾಗಲಿ. ಹೆತ್ತಮ್ಮನ್ನನ್ನು 'ಅಮ್ಮಾ' ಎ೦ದ ಕರೆದಾಗ ಸಿಗುವ ಆನಂದಕ್ಕೆ ಮಿಗಿಲುಂಟೇ? ಕನ್ನಡ ಮಾಧ್ಯಮದ ಶಿಕ್ಷಣ ಮತ್ತೆ ಮುಂಚೂಣಿಗೆ ತರುವ ಪ್ರಯತ್ನ ಕನ್ನಡದ ಮೇಲಿನ ಪ್ರೀತಿಯಿಂದಲಾದರೂ ಮಾಡೋಣ. (ಬರಹ: ಪ್ರೊ. ನ೦ದಿನಿ ಲಕ್ಷ್ಮೀಕಾ೦ತ್)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ