ಪ್ರಶಸ್ತಿಯ ಹಪಾಹಪಿಗಳ ಸುನಾಮಿಯ ಮಧ್ಯೆ; ರಾಜ್ಯೋತ್ಸವ ಪ್ರಶಸ್ತಿಗಳ ಆಯ್ಕೆ ಸಮಿತಿಯಲ್ಲಿ ಪಡಿಪಾಟಲು ಪಟ್ಟ ಪತ್ರಕರ್ತ ನಾಗೇಶ್ ಹೆಗಡೆ ಕಥನ
Oct 31, 2024 09:26 PM IST
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಸಂಬಂಧಿಸಿದಂತೆ ಈ ಬಾರಿ ನಡೆದ ಲಾಬಿಗಳ ಅನುಭವವನ್ನು ಹಿರಿಯ ಪತ್ರಕರ್ತ ನಾಗೇಶ್ ಹೆಗಡೆ ದಾಖಲಿಸಿದ್ದಾರೆ.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆಯಲು ಕೆಲವರು ಮಾಡುವ ಲಾಬಿ, ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿರುವವರ ಕಷ್ಟಗಳ ಕುರಿತು ಈ ಬಾರಿ ತಾವು ಅನುಭವಿಸಿದ್ದನ್ನು ಹಿರಿಯ ಪತ್ರಕರ್ತ ನಾಗೇಶ್ ಹೆಗಡೆ ಸಾಮಾಜಿಕ ಮಾಧ್ಯಮದ ಫೇಸ್‌ಬುಕ್ ಮೂಲಕ ಬರೆದುಕೊಂಡಿದ್ದಾರೆ. ಅದರ ವಿವರ ಇಲ್ಲಿದೆ.
ಒಂದೂವರೆ ತಿಂಗಳ ಹಿಂದೆಯೇ ಪರಿಸರ ʻಹೋರಾಟಗಾರʼನೊಬ್ಬ ನನಗೆ ಫೋನ್ ಮಾಡಿದ್ದ. ತಾನು ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಹಾಕುತ್ತಿದ್ದೇನೆಂದೂ ಅದಕ್ಕೆ ಈಗಾಗಲೇ ತನ್ನ ಹೆಸರನ್ನು ಶಿಫಾರಸು ಮಾಡಿ ಇಂಥ ಖ್ಯಾತ ರಾಜಕಾರಣಿ, ಇಂಥ ಖ್ಯಾತ ಆಡಳಿತಗಾರ, ಇಂಥ ಖ್ಯಾತ ಚಿಂತಕರು ಹಸ್ತಾಕ್ಷರ ಹಾಕಿದ್ದಾರೆಂದೂ ʻನಿಮ್ಮ ಶಿಫಾರಸು ಕೂಡ ಅಗತ್ಯ ಬೇಕುʼ ಎಂದೂ ಹೇಳಿದ. ನಾನು ಖಡಾಖಂಡಿತ ನಿರಾಕರಿಸಿದೆ. ಅರ್ಜಿ ಹಾಕದೇ ಪ್ರಶಸ್ತಿ ಪಡೆಯುವವರ ಬಗ್ಗೆ ನನಗೆ ಹೆಚ್ಚಿನ ಗೌರವ ಇದೆಯೆಂದು ತಿಳಿಸಿದೆ. ಆತ, ʻಎಂತೆಂಥವರೋ ಹೊಡ್ಕೊಂಡ್ ಹೋಗ್ತಾರೆ….ʼ ಇತ್ಯಾದಿ ಹೇಳುತ್ತಿದ್ದಂತೆ ಆತನ ಫೋನ್ ಕಟ್ ಮಾಡಿದ್ದೆ.
ಪ್ರಕರಣ ಅಲ್ಲಿಗೇ ಮುಗಿಯಿತು ಎಂದು ಕೊಂಡೆ. ಆದರೆ ಅದು ಆರಂಭವಾಗಿತ್ತಷ್ಟೆ. ಅಕ್ಟೊಬರ್ ಆರಂಭದಲ್ಲಿ ಸರ್ಕಾರಿ ಆಯ್ಕೆ ಸಮಿತಿಯ ಪಟ್ಟಿಯನ್ನು Poornima Rajarao ನನಗೆ ಕಳಿಸಿದರು. ಯಾಕೆ ಕಳಿಸಿದರೆಂದು ಕೂಲಂಕಷ ನೋಡುತ್ತ ಹೋದಂತೆ ಆ ಪಟ್ಟಿಯಲ್ಲಿ ನನ್ನ ಹೆಸರೂ ಇತ್ತು. ʻಬಂತಲ್ಲಪ್ಪ ಕಷ್ಟ!ʼ ಎಂದುಕೊಂಡೆ. ಹಿಂದಿನ ಕಟು ಅನುಭವಗಳು ನೆನಪಾದವು.
ಸರಿ, ಅದೇ ದಿನದಿಂದ ನನಗೆ ಸಂದೇಶ, ಫೋನ್ ಕಾಲ್, ಇಮೇಲ್‌ಗಳ ಸುರಿಮಳೆ ಆರಂಭವಾಯಿತು. ಕೆಲವರು ಮೌನವಾಗಿ ತಮ್ಮ ಬಯೊಡಾಟಾ ಕಳಿಸಿದರೆ, ಇನ್ನು ಕೆಲವರು ʻಇಂಥವರನ್ನು ಆಯ್ಕೆ ಮಾಡಿʼ ಎಂದರು. ಮತ್ತೆ ಕೆಲವರು ʻನನಗೇ ಕೊಡಿಸಿʼ ಎಂದರು. ಇನ್ನೂ ಕೆಲವರು ಮನೆಗೇ ಬಂದು ಬಾಗಿಲು ತಟ್ಟತೊಡಗಿದರು.
ಮೊದಲ ಸಭೆಯಲ್ಲಿ ಸಚಿವ ತಂಗಡಗಿ ತಮ್ಮ ಪೇಚಾಟಗಳನ್ನು ಹೇಳಿಕೊಂಡರು. ಕಳೆದ ಒಂದು ತಿಂಗಳಿಂದ ಅವರು ಎಲ್ಲೇ ಹೋದರೂ ಜೊತೆಗೊಂದು ಖಾಲಿ ಕಾರನ್ನು ಒಯ್ಯುತ್ತಿದ್ದರಂತೆ- ಪ್ರಶಸ್ತಿ ಆಕಾಂಕ್ಷಿಗಳು ನೀಡುವ ದಾಖಲೆಗಳನ್ನು ಸಾಗಿಸಿ ತರಲು. ಅಷ್ಟಾದರೂ “ಅರ್ಜಿ ಹಾಕಿದವರಿಗಿಂತ ಹಾಕದೇ ಇದ್ದ ಅರ್ಹರನ್ನೂ ಪರಿಗಣಿಸಿ, ಆದ್ಯತೆ ಕೊಡೋಣʼ ಎಂಬ ಕಿವಿಮಾತನ್ನೂ ಹೇಳಿದರು.
ಆಯ್ಕೆ ಸಮಿತಿಯ ಸದಸ್ಯರ ಮುಂದೆ ರಾಶಿರಾಶಿ ಅರ್ಜಿಗಳು, ಅವರ ಕಡತಗಳು. ಸಾಲದೆಂಬಂತೆ ಅಧಿಕಾರಿಗಳು ಪ್ರಾಥಮಿಕ ಹಂತದಲ್ಲೇ ಪ್ರತ್ಯೇಕಿಸಿ ಇಟ್ಟ ದಾಖಲೆಗಳ ಎತ್ತರದ ರಾಶಿ. ಆಚೀಚೆ ಕೂತ ಸದಸ್ಯರ ಮುಖವೂ ಕಾಣದಷ್ಟು ಕಡತಗಳು. ಮಧ್ಯೆ ಆ ಸದಸ್ಯರೂ ಮೆಲ್ಲಗೆ ಬಂದು (ಕಿವಿಯಲ್ಲಿ ಯಾರದ್ದೋ ಹೆಸರನ್ನು ಉಸಿರಿ) ಎದುರಿಗೆ ತೂರಿಸಿ ಹೋಗುತ್ತಿದ್ದ ಹಾಳೆಗಳು. ಸಭೆಯ ನಡುವೆಯೂ, ನಂತರ ಹಿಂದಿರುಗುವ ಹಾದಿಯಲ್ಲೂ ಫೋನ್ ಕಾಲ್‌ಗಳು, ಸಂದೇಶಗಳು.
ಕೆಲವು ಪರಿಚಿತರಂತೂ ದಿನದಿನವೂ ಕಾಲ್ ಮಾಡೋರು. ʻಎಲ್ಲಿಯವರೆಗೆ ಬಂತು? ಈ ವಿಭಾಗದ ಹತ್ತು ಹೆಸರುಗಳ ಪಟ್ಟಿಯಲ್ಲಿ ನನ್ನ ಹೆಸರು ಉಳಿದಿದೆಯಾ?ʼ ಕೇಳೋರು. ಅವರಲ್ಲೂ ಎಷ್ಟೆಷ್ಟು ದೊಡ್ಡವರಂತೀರಿ!
ನಿಜ ಹೇಳ್ತೀನಿ, ಈ ಹದಿನೈದು ದಿನಗಳಲ್ಲಿ ನಾನು ಫೋನ್‌ನಲ್ಲಿ ಹೇಳಿದಷ್ಟು ಸುಳ್ಳುಗಳನ್ನು ಜೀವನವಿಡೀ ಹೇಳಿಲ್ಲವೇನೊ. ಹಿಂದಿನ ಆಯ್ಕೆ ಸಮಿತಿಯಲ್ಲಿದ್ದಾಗ ಸುಳ್ಳಿನ ಪ್ರಮಾಣ ಇದರ ಅರ್ಧದಷ್ಟೂ ಇರಲಿಲ್ಲ.
ಈ ಬಾರಿ ಒಬ್ಬ ಮಹಾಶಯನಂತೂ ʻಸಾರ್, ನನಗೆ ಪ್ರಶಸ್ತಿಯ ಹಣ ಬೇಡವೇ ಬೇಡ. ನಿಮ್ಮ ಮನೆಯ ವಿಳಾಸ ಕೊಡಿ, ಐದು ಲಕ್ಷದ ಚೆಕ್ ಮುಂಗಡ ಕೊಟ್ಟು ಹೋಗುತ್ತೇನೆʼ ಎಂದ. ʻಸರಿ ಬಿಡಿ, ನಿಮ್ಮ ಅನರ್ಹತೆ ಈಗಲೇ ಫೈನಲ್ ಆಯಿತುʼ ಎನ್ನಬೇಕಾಯಿತು (ಇದು ಸುಳ್ಳಲ್ಲ ಮತ್ತೆ!)
ಸಿಂಗಪೂರ್, ಲಾಸ್ ಏಂಜಲೀಸ್, ಲಂಡನ್, ದುಬೈಗಳಿಂದಲೂ ಕರೆ. ವಿಜ್ಞಾನಿಗಳದ್ದು, ಮೊಮ್ಮಕ್ಕಳನ್ನು ನೋಡಲು ಹೋದ ಸಾಧಕರದ್ದು, ಹೊರನಾಡ ಕನ್ನಡಿಗರದ್ದು ಹೀಗೆ. ಒಬ್ಬ ಅನಿವಾಸಿ ಉತ್ಸಾಹಿ ತನ್ನ ಸಿವಿ ಕಳಿಸಿ, ಸಂದೇಶದ ಮೇಲೆ ಸಂದೇಶ ಹಾಕಿ, ಕರೆಯನ್ನೂ ಮಾಡಿದಾಗ ಹೇಳಿದೆ: ʻನಿಮಗಿನ್ನೂ ಎಳೆ ವಯಸ್ಸು; 60 ದಾಟಿದ ಮೇಲೆ ಅರ್ಜಿ ಕಳಿಸಿʼ ಎಂದೆ.
ಅವರು ಅಷ್ಟೇ ವೇಗದಲ್ಲಿ ಹಳೆ ದಾಖಲೆಗಳನ್ನು ಮುಂದಿಟ್ಟರು. ಈಗಿನ ಮುಖ್ಯಮಂತ್ರಿ, ಹಿಂದಿನ ಮುಖ್ಯಮಂತ್ರಿಗಳು 60ರೊಳಗಿನ ಅನಿವಾಸಿಗಳಿಗೆ ಪ್ರಶಸ್ತಿ ಕೊಟ್ಟಿದ್ದರ ವಿಡಿಯೊ, ಫೋಟೊ ಕಳಿಸಿ ನನ್ನ ಬಾಯಿ ಕಟ್ಟಿದರು.
ಈ 60ರ ವಯೋಮಿತಿಯನ್ನು (ನಾನೂ ಸದಸ್ಯನಾಗಿದ್ದ) ನ್ಯಾಯಮೂರ್ತಿ ನಾಗಮೋಹನ ದಾಸ್ ಅವರ ಸಮಿತಿಯೇ ನಿರ್ಧರಿಸಿತ್ತು.
ಕ್ರೀಡಾರಂಗವೊಂದನ್ನು ಬಿಟ್ಟು ಬೇರೆ ಯಾವ ವಿಭಾಗದಲ್ಲೂ 60ಕ್ಕಿಂತ ಕಿರಿಯರನ್ನು ಪ್ರಶಸ್ತಿಗೆ ಪರಿಗಣಿಸಬಾರದು ಎಂಬ ಕಟ್ಟುನಿಟ್ಟಿನ ನಿಯಮ ಮಾಡಲಾಗಿತ್ತು. ಹಿಂದಿನ ಮುಖ್ಯಮಂತ್ರಿ ಬೊಮ್ಮಾಯಿಯವರು ಅದನ್ನು ಬಹಿರಂಗವಾಗಿ ಧಿಕ್ಕರಿಸಿ ʻಅರ್ಹರು ಯಾರೇ ಇರಲಿ, ವಯಸ್ಸಿನ ಮಾನದಂಡ ಇರಲೇಬಾರದುʼ ಎಂದು ಹೇಳಿದ್ದರ ವರದಿಯನ್ನೂ ಲಂಡನ್ನಿನ ಆ ಉತ್ಸಾಹಿ ನನಗೆ ಕಳಿಸಿದ್ದ. ಸದ್ಯ ಯಾರೂ ನ್ಯಾಯದ ಕಟ್ಟೆಗೆ ಹೋಗಲಿಲ್ಲ. ಪ್ರಶಸ್ತಿ ಪಡೆದ ಮಹನೀಯರು ಬಚಾವ್.
ʻಮಲ ಹೊರುವ ಶ್ರಮಿಕರಿಗೆ ವಯಸ್ಸಿನ ನಿರ್ಬಂಧ ಇರಲೇಬಾರದು, ಅವರಲ್ಲಿ 50 ವರ್ಷದಾಚೆ ಬದುಕುವುದೇ ಅಪರೂಪ; ಅಂಥವರಲ್ಲಿ ಯೋಗ್ಯರಾದ ಒಬ್ಬರಿಗೆ ಪ್ರಶಸ್ತಿ ಕೊಡಬೇಕು ಎಂಬ ಒತ್ತಾಯವೂ ಈ ವರ್ಷ ಬಂತು. ಅವರ ಕುರಿತು ನಮಗೆಲ್ಲ ಅನುಕಂಪ ಇರಬೇಕು. ಚರಂಡಿಯಲ್ಲಿ ಇಳಿಯುವ ಮುನ್ನ ಅಲ್ಲಿನ ವಿಷಾನಿಲವನ್ನು ಪತ್ತೆ ಮಾಡಬಲ್ಲ ಸರಳ ಸಾಧನಗಳನ್ನು ಅವರಿಗೆ ಕೊಡಬೇಕೆಂದು ನಾನು ಅನೇಕ ವಿಜ್ಞಾನ ವೇದಿಕೆಗಳಲ್ಲಿ ಹಿಂದೆಲ್ಲ ನಗರಪಾಲಿಕೆಗಳ, ಗುತ್ತಿಗೆದಾರರ ನಿಷ್ಕಾಳಜಿಯನ್ನು ಎತ್ತಿ ತೋರಿಸಿದ್ದೇನೆ. ನಗರದ ನರನಾಡಿಗಳನ್ನು ಶುದ್ಧ ಇಡಲೆಂದು ತಮ್ಮನ್ನೇ ಅಪಾಯಕ್ಕೆ ಒಡ್ಡಿಕೊಳ್ಳುವ ಅಂಥ ಶ್ರಮಜೀವಿಗಳಿಗೆ ಪ್ರಶಸ್ತಿಯನ್ನೂ ಕೊಡಬೇಕು ಸರಿ. ಆದರೆ ಅವರಲ್ಲಿ ಯೋಗ್ಯತೆಯ ಮಾನದಂಡ ಏನು? ಮಲಹೊರುವವರ ಕುಟುಂಬದಿಂದ ಬಂದ ಕೆಜಿಎಫ್‌ನ ಬೆಝ್‌ವಾಡಾ ವಿಲ್ಸನ್ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಪಡೆದಿದ್ದು ನಮಗೆ ಗೊತ್ತಿದೆ. ಅವರಷ್ಟೆತ್ತರ ಏರದಿದ್ದರೂ ವಿಪರೀತ ಕುಡಿತದ ಚಟಕ್ಕೆ ಬೀಳದೆ, ತಮ್ಮ ಆರೋಗ್ಯವನ್ನೂ ಕೌಟುಂಬಿಕ ಜವಾಬ್ದಾರಿಯನ್ನೂ ಅರಿತು, ಮುಖವಾಡದಂಥ ಸುರಕ್ಷಾ ಸಾಧನಗಳನ್ನು ಧರಿಸಿಯೇ ಕೆಲಸಕ್ಕೆ ಇಳಿಯಬೇಕೆಂದು ಸಹೋದ್ಯೋಗಿಗಳ ಮನವೊಲಿಸಿ ಕೆಲಮಟ್ಟಿನ ಲೀಡರ್‌ಶಿಪ್ ತೋರಿದವರನ್ನು ಹುಡುಕಬೇಕು. ಅಂಥ ಜಾಗ್ರತಿ ಇರುವ, 60-70 ವರ್ಷ ಬದುಕಿರುವವರನ್ನು ಗುರುತಿಸಲು ದು. ಸರಸ್ವತಿಯಂಥ ಸಾಮಾಜಿಕ ಕಾರ್ಯಕರ್ತೆಯರ ನೆರವು ಪಡೆದರೆ 60-70 ವರ್ಷದ ಯೋಗ್ಯವ್ಯಕ್ತಿ ಸಿಕ್ಕೇ ಸಿಗುತ್ತಾರೆ. ಅವರಿಗೆಂದೇ ವಯೋಮಿತಿ ಸಡಿಲಿಸುವ ಅಗತ್ಯವಿರುವುದಿಲ್ಲ.
ಸಿಎಮ್, ಡಿಸಿಎಮ್, ಸಚಿವರುಗಳ ಜೊತೆ ನಡೆದ ಅಂತಿಮ ಸುತ್ತಿನಲ್ಲಿ ಸಿದ್ದರಾಮಯ್ಯ ʻಈ ಆಯ್ಕೆಪಟ್ಟಿಯ ಬಹುಪಾಲು ಹೆಸರುಗಳು ಹಾಗೇ ಇರುತ್ತವೆ. ಒಂದು ಹತ್ತಾರೆಂಟು ಹೆಸರುಗಳನ್ನು ಸೇರಿಸುವ, ಕೈಬಿಡುವ ಸ್ವಾತಂತ್ರ್ಯ ನಮಗೆ ಇರಬೇಕುʼ ಎಂದು ಕೇಳಿಕೊಂಡರು.
ನಾನೆಂದೆ, ʻಆ ಸ್ವಾತಂತ್ರ್ಯವನ್ನು ನಾವು ಗೌರವಿಸುತ್ತೇವೆ. ಆದರೆ ನೀವು ಹೊಸ ಹೆಸರನ್ನು ಸೇರ್ಪಡೆ ಮಾಡುವಾಗ ಯೋಗ್ಯರ ಹೆಸರನ್ನೇ ಸೇರಿಸಿ. ಆಯ್ಕೆ ಸಮಿತಿಯ ಘನತೆಗೆ ಕುಂದುಬರುವ ಹೆಸರುಗಳನ್ನು ದಯವಿಟ್ಟು ಸೇರಿಸಬೇಡಿ; ನಿಗದಿತ 69ಕ್ಕಿಂತ ಹೆಚ್ಚಿನ ಸಂಖ್ಯೆಯ ಪ್ರಶಸ್ತಿಗಳನ್ನು ಘೋಷಿಸಬೇಡಿʼ ಎಂದು ವಿನಂತಿಸಿದೆ. ಹಿಂದೆ ಅಂಥ ಎಡವಟ್ಟುಗಳು ಆಗಿವೆ ಎಂತಲೂ ಹೇಳಿದೆ.
ಈ ವರ್ಷದ ವಿಶೇಷ ಏನಿತ್ತೆಂದರೆ, ಸುವರ್ಣ ಕರ್ನಾಟಕದ ಸಂದರ್ಭದಲ್ಲಿ ನೂರು ಸಮರ್ಥರಿಗೆ ಬೇರೊಂದು ಪ್ರಶಸ್ತಿ ಘೋಷಣೆಯಾಗುವುದರಲ್ಲಿತ್ತು. ತನಗೆ “ಈ ಪಟ್ಟಿಯಲ್ಲಿ ಸ್ಥಾನ ಇಲ್ಲದಿದ್ದರೆ ಆ ಪಟ್ಟಿಯಲ್ಲಾದರೂ ಹೆಸರನ್ನು ಸೇರಿಸಿʼ ಎಂತಲೂ ಕೆಲವರು ದುಂಬಾಲು ಬಿದ್ದರು. ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದರೂ ಬಿಡಲಾರರು.
ಅಂತೂ ರಾಜ್ಯೋತ್ಸವ ಪ್ರಶಸ್ತಿಗೆ ಯೋಗ್ಯರಾದವರ ಹೆಸರು ಫೈನಲ್ ಆಗುವ ಹಂತದಲ್ಲಿ ಇನ್ನೊಂದು ರಗಳೆ ಎದುರಾಯಿತು: ಅವರೆಲ್ಲ ಯಾವ ಜಾತಿ, ಯಾವ ಜಿಲ್ಲೆ, ಅವರ ಜನ್ಮದಿನಾಂಕ, ಆಧಾರ್ ಕಾರ್ಡ್ ಸಂಖ್ಯೆ ಇತ್ಯಾದಿ ವಿವರಗಳನ್ನು ಕಲೆಹಾಕುವುದು. ಹೊರೆಗಟ್ಟಲೆ ಸಿವಿ ಕಳಿಸಿದವರು ಈ ಮಾಹಿತಿಯನ್ನು ಕೊಡಲು ಮರೆತಿರುತ್ತಾರೆ. ಅಷ್ಟೇ ಅಲ್ಲ, ಪ್ರಶಸ್ತಿಯ ಖದರೇ ಇಲ್ಲದೆ ತನ್ನ ಪಾಡಿಗೆ ಯಾವುದೋ ಹಳ್ಳಿಯಲ್ಲಿ ಕೆಲಸ ಮಾಡಿಕೊಂಡಿದ್ದ ರೈತ, ಜಾನಪದ ಕಲಾವಿದ, ಶಿಲ್ಪಿ, ಜನಮಾನಸದಿಂದ ದೂರ ಉಳಿದ ಪರಿಸರಪ್ರೇಮಿ ಇವರೆಲ್ಲರನ್ನು ಸಂಪರ್ಕಿಸುವುದೇ ಕಷ್ಟದ್ದಾಯಿತು.
ಒಬ್ಬ ಮಹನೀಯರಂತೂ ತನಗೆ ಪ್ರಶಸ್ತಿ ಕೊಟ್ಟರೂ ಸ್ವೀಕರಿಸುವುದಿಲ್ಲ, ತನ್ನ ಹೆಸರನ್ನು ʻಪಟ್ಟಿಯಿಂದ ತೆಗೆದುಬಿಡಿʼ ಎಂದೇ ಪಟ್ಟು ಹಿಡಿದರು. ಅವರಿಗೆ ಶಿರಬಾಗಿಸಿ ನಮಸ್ಕಾರಗಳು.
ಕೊನೆಗೂ ಸಿಕ್ಕ ತೃಪ್ತಿ ಏನೆಂದರೆ, ನಾವು ಸೂಚಿಸಿದ ಬಹುತೇಕ ಎಲ್ಲರ ಹೆಸರುಗಳೂ ಅಂತಿಮ ಪಟ್ಟಿಯಲ್ಲಿ ಹಾಗೇ ಉಳಿದಿವೆ. ಸಚಿವ ಸಂಪುಟದ ಹಸ್ತಕ್ಷೇಪ ಅತ್ಯಲ್ಪ ಎಂಬಂತಿದೆ. ಅದು ಮೆಚ್ಚಬೇಕಾದ ಸಂಗತಿ.
ಪ್ರಶಸ್ತಿ ವಿಜೇತರಿಗೆಲ್ಲ ಅಭಿನಂದನೆಗಳು.
ಪ್ರಶಸ್ತಿಗೆ ಈ ವರ್ಷ ಸ್ವಲ್ಪದರಲ್ಲೇ ವಂಚಿತರಾದವರಿಗೆ ಮತ್ತು ಪ್ರಶಸ್ತಿಯ ಇತರ ಅರ್ಜಿದಾರರಿಗೆ ಮುಂದಿನ ವರ್ಷದ ಮುಂಗಡ ಶುಭಹಾರೈಕೆಗಳು. ಅವರ ಆಯುರಾರೋಗ್ಯ ಚೆನ್ನಾಗಿರಲಿ ಮತ್ತು ಮುಂದಿನ ವರ್ಷ ಅರ್ಜಿ ಹಾಕುವಾಗ ತಮ್ಮ ಜನ್ಮಜಾತಕವನ್ನು ತುಸು ಸಂಕ್ಷಿಪ್ತವಾಗಿ, (ಜಾತಿ, ಜಿಲ್ಲೆ, ವಿಳಾಸ, ಫೋನ್ ನಂಬರ್, ಆಧಾರ್ ಕಾರ್ಡ್ ಮಾಹಿತಿ ಸೇರಿಸಿ) ಬರೆಯುವ ಕಲೆ ಅವರಿಗೆ ಸಿದ್ಧಿಸಲಿ.
ಎಲ್ಲಕ್ಕಿಂತ ಹೆಚ್ಚಾಗಿ, ಅರ್ಜಿ ಹಾಕದೇ ಇದ್ದ ಅಗೋಚರ ಸಾಧಕರಿಗೆ ಮನಸಾರೆ ವಂದನೆಗಳು.