logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Budget: ಕರ್ನಾಟಕ ಬಜೆಟ್‌ ವಿಶೇಷ, ವೋಟ್‌ ಆನ್‌ ಅಕೌಂಟ್‌, ಮಧ್ಯಂತರ ಬಜೆಟ್‌, ಪೂರಕಬಜೆಟ್‌; ಹೊಸ ಸರ್ಕಾರದ್ದು ಹೊಸ ಬಜೆಟ್‌ ವಿವರಣೆ

Karnataka Budget: ಕರ್ನಾಟಕ ಬಜೆಟ್‌ ವಿಶೇಷ, ವೋಟ್‌ ಆನ್‌ ಅಕೌಂಟ್‌, ಮಧ್ಯಂತರ ಬಜೆಟ್‌, ಪೂರಕಬಜೆಟ್‌; ಹೊಸ ಸರ್ಕಾರದ್ದು ಹೊಸ ಬಜೆಟ್‌ ವಿವರಣೆ

Umesh Kumar S HT Kannada

Jul 06, 2023 07:44 AM IST

google News

ಸಿದ್ದರಾಮಯ್ಯ ಅವರು ಹಿಂದಿನ ಅವಧಿಯಲ್ಲಿ ಬಜೆಟ್‌ ಮಂಡನೆಗೆ ಹೊರಟ ಸಂದರ್ಭ (ಕಡತ ಚಿತ್ರ)

  • Karnataka Budget: ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ (ಜುಲೈ 7) ಹೊಸ ಬಜೆಟ್‌ ಮಂಡಿಸಲು ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಚುನಾವಣೆಗೆ ಮೊದಲು ನಿಕಟಪೂರ್ವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾರ್ಚ್‌ನಲ್ಲಿ ವೋಟ್‌ ಆನ್‌ ಅಕೌಂಟ್‌ ಬಜೆಟ್‌ ಮಂಡಿಸಿದ್ದರು. ಇವೆರಡರ ವ್ಯತ್ಯಾಸ ಮತ್ತು ಪೂರಕ ವಿವರ ಇಲ್ಲಿದೆ.

ಸಿದ್ದರಾಮಯ್ಯ ಅವರು ಹಿಂದಿನ ಅವಧಿಯಲ್ಲಿ ಬಜೆಟ್‌ ಮಂಡನೆಗೆ ಹೊರಟ ಸಂದರ್ಭ (ಕಡತ ಚಿತ್ರ)
ಸಿದ್ದರಾಮಯ್ಯ ಅವರು ಹಿಂದಿನ ಅವಧಿಯಲ್ಲಿ ಬಜೆಟ್‌ ಮಂಡನೆಗೆ ಹೊರಟ ಸಂದರ್ಭ (ಕಡತ ಚಿತ್ರ) (LIVE MINT)

ಕರ್ನಾಟಕದಲ್ಲಿ ಈಗಾಗಲೇ ಬಜೆಟ್‌ ಅಧಿವೇಶನ (Karnataka Budget Session) ಸೋಮವಾರ (ಜುಲೈ 3) ದಿಂದ ಶುರುವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ (ಜುಲೈ 7) ಹೊಸ ಬಜೆಟ್‌ ಮಂಡಿಸಲಿದ್ದಾರೆ. ಚುನಾವಣಾ ವರ್ಷವಾಗಿದ್ದ ಕಾರಣ ಮಾರ್ಚ್‌ ತಿಂಗಳಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚುನಾವಣಾ ಬಜೆಟ್‌ ಅಥವಾ ವೋಟ್‌ ಆನ್‌ ಅಕೌಂಟ್‌ ಬಜೆಟ್‌ ಮಂಡಿಸಿದ್ದರು.

ಸರಳವಾಗಿ ಹೇಳಬೇಕು ಎಂದರೆ ಪ್ರತಿ ಐದು ವರ್ಷಕ್ಕೆ ಒಮ್ಮೆ ಆಯಾ ಸರ್ಕಾರದ ಅವಧಿಯ ಕೊನೆಯ ವರ್ಷದ ಬಜೆಟ್‌ ಚುನಾವಣಾ ಬಜೆಟ್‌ ಅಥವಾ ವೋಟ್‌ ಆನ್‌ ಅಕೌಂಟ್‌ ಬಜೆಟ್‌ ಆಗಿರುತ್ತದೆ. ಇದು ಚುನಾವಣಾ ಕೇಂದ್ರಿತವಾಗಿರುತ್ತದೆ. ಹೊಸ ಸರ್ಕಾರ ರಚನೆ ಆದ ಬಳಿಕ ಜುಲೈನಲ್ಲಿ ಸರ್ಕಾರ ಮುಂದಿನ ಮಾರ್ಚ್‌ ತನಕ ಅನ್ವಯವಾಗುವ ಹೊಸ ಬಜೆಟ್‌ ಅನ್ನು ಮಂಡಿಸುತ್ತದೆ. ಇದನ್ನೂ ಮಧ್ಯಂತರ ಬಜೆಟ್‌ ಎಂದು ಹೇಳುವ ಪರಿಪಾಠವಿದೆ.

ವೋಟ್‌ ಆನ್‌ ಅಕೌಂಟ್‌ ಬಜೆಟ್‌

ಮಧ್ಯಂತರ ಬಜೆಟ್ ಮೂಲಕ, ವಿಧಾನಮಂಡಲ ವೋಟ್-ಆನ್-ಅಕೌಂಟ್ ಅನ್ನು ಅಂಗೀಕರಿಸುತ್ತದೆ, ಇದು ಮೂಲಭೂತವಾಗಿ ಚುನಾವಣೆಗಳವರೆಗೆ ಆಡಳಿತದ ವೆಚ್ಚಗಳನ್ನು ಪೂರೈಸಲು ಸರ್ಕಾರಕ್ಕೆ ತಾತ್ಕಾಲಿಕ ಅನುಮತಿಯನ್ನು ನೀಡುತ್ತದೆ. ವೋಟ್-ಆನ್-ಖಾತೆ ಸಾಮಾನ್ಯವಾಗಿ ಎರಡು ತಿಂಗಳವರೆಗೆ ಮಾನ್ಯವಾಗಿರುತ್ತದೆ. ಆದರೆ ಇದನ್ನು ಇನ್ನಷ್ಟು ವಿಸ್ತರಿಸಲು ಅವಕಾಶವಿದೆ.

ಮಧ್ಯಂತರ ಬಜೆಟ್‌ vs ವೋಟ್‌ ಆನ್‌ ಆಕೌಂಟ್‌ ಬಜೆಟ್‌

ಆಡಳಿತಾವಧಿಯ ಕೊನೆಯ ವರ್ಷ ಮಂಡಿಸುವ ಬಜೆಟ್‌ ಕೆಲವೊಮ್ಮೆ ಮಧ್ಯಂತರ ಬಜೆಟ್ ಆಗಿರುತ್ತದೆ. ತಾಂತ್ರಿಕವಾಗಿ ಪೂರ್ಣ ಬಜೆಟ್‌ನಂತೆಯೇ ಇರುತ್ತದೆ. ಆದರೆ ತಾತ್ಕಾಲಿಕ ಅವಧಿಗೆ ಮಾತ್ರ. ಕೇಂದ್ರ ಬಜೆಟ್‌ನಂತೆ ಮತ್ತು ಪೂರ್ಣ ಬಜೆಟ್‌ನಂತೆ, ಇದು ಖರ್ಚು ಮತ್ತು ರಸೀದಿಗಳನ್ನು ಒಳಗೊಂಡಂತೆ ಸಂಪೂರ್ಣ ಖಾತೆಗಳನ್ನು ಒಳಗೊಂಡಿದೆ. ಅಂದಾಜುಗಳನ್ನು ಇಡೀ ವರ್ಷಕ್ಕೆ ಪ್ರಸ್ತುತಪಡಿಸಲಾಗುತ್ತದೆ.

ಆದಾಗ್ಯೂ, ಚುನಾವಣಾ ವರ್ಷದಲ್ಲಿ, ಸರ್ಕಾರವು ಸಾಮಾನ್ಯವಾಗಿ ಇಂತಹ ಮಧ್ಯಂತರ ಬಜೆಟ್‌ನಲ್ಲಿ ಯಾವುದೇ ಪ್ರಮುಖ ತೆರಿಗೆ ಬದಲಾವಣೆಗಳು ಅಥವಾ ಯೋಜನೆಗಳನ್ನು ಘೋಷಿಸುವುದನ್ನು ಮಾಡುವುದಿಲ್ಲ. ಅದು ಸಾಂವಿಧಾನಿಕವಾಗಿ ಕೂಡ ನಿಷೇಧಿತ. ಮತ್ತೊಂದೆಡೆ, ವೋಟ್-ಆನ್-ಕೌಂಟ್ ಬಜೆಟ್‌ನಲ್ಲಿ, ಆಡಳಿತದ ಖರ್ಚು ವೆಚ್ಚಗಳ ಬದಿಯಲ್ಲಿ ಮಾತ್ರ ವ್ಯವಹರಿಸುತ್ತದೆ. ಔಪಚಾರಿಕ ಚರ್ಚೆಯಿಲ್ಲದೆ ಇದು ಸಂಸತ್ತು ಅಥವಾ ವಿಧಾನಮಂಡಲದಲ್ಲಿ ಅಂಗೀಕಾರವಾಗುವುದು ವಾಡಿಕೆ.

ಮಧ್ಯಂತರ ಪದ ಹೇಗೆ ಬಂತು..

ಹಿಂದಿನ ಸರ್ಕಾರದ ಅವಧಿ ಮೇ ತಿಂಗಳಿಗೆ ಕೊನೆಗೊಂಡಿರುವ ಕಾರಣ, ಆ ಪಕ್ಷದ ಸರ್ಕಾರ ಮಂಡಿಸಿದ ಹಿಂದಿನ ವರ್ಷದ (2022-23) ಬಜೆಟ್‌ ಕಳೆದ ಹಣಕಾಸು ವರ್ಷದ ಕೊನೆ ಅಂದರೆ 2023ರ ಮಾರ್ಚ್‌ 31ರ ತನಕ ಮಾತ್ರ ಅನ್ವಯ. ಮಾರ್ಚ್‌ ತಿಂಗಳಲ್ಲಿ ಅದು ಮಂಡಿಸುವ ಬಜೆಟ್‌ 2023-24ರ ಹಣಕಾಸು ವರ್ಷಕ್ಕೆ ಅನ್ವಯವಾದರೂ ಅದು ಕೇವಲ ಎರಡು ಅಥವಾ ಮೂರು ತಿಂಗಳಿಗೆ ಅನ್ವಯ. ಇದು ಸರ್ಕಾರಕ್ಕೆ ಖರ್ಚು ಮಾಡುವ ಹಕ್ಕನ್ನು ನೀಡುತ್ತದೆ.‌ ಅಧಿಕಾರಾವಧಿಯ ಕೊನೆಯ ವರ್ಷ ಪೂರ್ಣ ಪ್ರಮಾಣದ ಬಜೆಟ್‌ ಮಂಡಿಸುವುದಕ್ಕೆ ಸರ್ಕಾರಕ್ಕೆ ಅಧಿಕಾರ ಇರುವುದಿಲ್ಲ. ಹಾಗಾಗಿ ಹಣಕಾಸು ವರ್ಷಾಂತ್ಯದ ಮೊದಲು ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲು ಸರ್ಕಾರಕ್ಕೆ ಸಾಧ್ಯವಾಗದೇ ಇದ್ದಾಗ, ಹೊಸ ಹಣಕಾಸು ವರ್ಷ ಆರಂಭವಾದಾಗಿನಿಂದ ಹೊಸ ಬಜೆಟ್ ಮಂಡನೆಯಾಗುವವರೆಗೆ ವೆಚ್ಚವನ್ನು ಭರಿಸಲು ಸಂಸತ್ತಿನ ಅನುಮೋದನೆಯ ಅಗತ್ಯವಿದೆ. ಆದ್ದರಿಂದ "ಮಧ್ಯಂತರ" ಪದ ಬಜೆಟ್‌ ಮುಂದೆ ಸೇರಿಕೊಂಡಿದೆ.

ಪೂರಕ ಬಜೆಟ್‌ ಎಂದರೆ...

ಚುನಾವಣಾ ವರ್ಷದ ಮಾರ್ಚ್‌ ತಿಂಗಳಲ್ಲಿ ಮಂಡಿಸಿದ ಬಜೆಟ್‌ಗೆ ಪೂರಕವಾದ ಬಜೆಟ್‌ ಅನ್ನು ನಂತರ ಅದೇ ಸರ್ಕಾರ ಮಂಡಿಸುವ ಕ್ರಮವಿದೆ. ಇದಕ್ಕೆ ಪೂರಕ ಬಜೆಟ್‌ ಎನ್ನುತ್ತಾರೆ. ಈ ಪೂರಕ ಬಜೆಟ್‌ ಮಂಡನೆ ಸಂಪ್ರದಾಯವೂ ನಮ್ಮಲ್ಲಿ ಇದೆ. ಅಂದರೆ ಬಿಟ್ಟು ಹೋಗಿರುವುದು, ಸದಸ್ಯರಿಂದ ಬರುವ ಸಲಹೆಗಳನ್ನು ಬಜೆಟ್‌ನಲ್ಲಿ ಸೇರಿಸಿ ಅನುಮತಿ ಪಡೆಯಲಾಗುತ್ತದೆ. ಇದೂ ಜುಲೈನಲ್ಲಿಯೇ ನಡೆಯುವುದು ಸಾಮಾನ್ಯ.

ಪೂರ್ಣ ಪ್ರಮಾಣದ ಬಜೆಟ್‌ ಎಂದರೆ..

ಸರ್ಕಾರವು ಏಪ್ರಿಲ್‌ 1ರಿಂದ ಮಾರ್ಚ್‌ 31ರ ತನಕದ ಪೂರ್ಣ ಹಣಕಾಸು ವರ್ಷಕ್ಕೆ ಅನ್ವಯವಾಗುವ ಬಜೆಟ್‌ ಮಂಡಿಸಿದರೆ ಅದು ಪೂರ್ಣ ಪ್ರಮಾಣದ ಬಜೆಟ್.‌ ಒಂದು ಸರ್ಕಾರಕ್ಕೆ ಈ ರೀತಿ ಪೂರ್ಣ ಬಜೆಟ್‌ ನಾಲ್ಕು ಸಿಗುತ್ತದೆ. ಮತ್ತೆರಡು ವೋಟ್‌ ಆನ್‌ ಅಕೌಂಟ್‌ ಮತ್ತು ಮಧ್ಯಂತರದ ಹೊಸ ಬಜೆಟ್‌. ಈ ರೀತಿ ಮುಂಗಡಪತ್ರಗಳು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳಿಗು ಸಿಗುತ್ತವೆ.

ಕರ್ನಾಟಕದಲ್ಲಿ 2018ರಲ್ಲಿ ಹೀಗಾಗಿತ್ತು...

ಸಿದ್ದರಾಮಯ್ಯ ಸರ್ಕಾರ 2013ರಿಂದ 2018ರ ತನಕ ಆಡಳಿತ ನಡೆಸಿತ್ತು. ಮುಂದೆ 2018ರ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಜನಾದೇಶ ಸಿಕ್ಕಾಗ, ಹೆಚ್‌.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್‌ ಕಾಂಗ್ರೆಸ್‌ ಮೈತ್ರಿ ಸರ್ಕಾರ ರಚನೆ ಆಯಿತು. ಆಗ, ಹಿಂದಿನ ಕಾಂಗ್ರೆಸ್‌ ಸರ್ಕಾರ ಕೊನೆಯದಾಗಿ ಮಂಡಿಸಿದ್ದ ಬಜೆಟ್‌ ಅನ್ನು ಈ ಸರ್ಕಾರ ಮುಂದುವರಿಸಬೇಕು ಎಂದು ಸಿದ್ದರಾಮಯ್ಯ ಪಟ್ಟು ಹಿಡಿದಿದ್ದರು. ಕುಮಾರಸ್ವಾಮಿ ಅವರು ಹೊಸ ಬಜೆಟ್‌ ಮಂಡಿಸುತ್ತೇನೆ ಎಂದು ಹಟಕ್ಕೆ ಬಿದ್ದಿದ್ದರು. ಹೆಚ್ಚು ಕಡಿಮೆ ಹದಿನೈದು ದಿನ ಈ ಹಗ್ಗಜಗ್ಗಾಟ ಮುಂದುವರೆಯಿತು. ಆದರೆ ಕುಮಾರಸ್ವಾಮಿ ಸುತಾರಾಂ ಒಪ್ಪಲಿಲ್ಲ. ನಾನು ಸಿಎಂ. ರೈತರ ಸಾಲಮನ್ನಾ ಸೇರಿದಂತೆ ನಮ್ಮ ಪಕ್ಷದ ವಿಚಾರಗಳು ಹಲವು ಇವೆ. ಅದನ್ನು ಬಜೆಟ್‌ ಮೂಲಕ ಜನರಿಗೆ ತಲುಪಿಸಬೇಕು ಎಂದು ಹೇಳಿದರು. ಕೊನೆಗೆ ಪ್ರತ್ಯೇಕ ಬಜೆಟ್‌ ಅನ್ನು ಕುಮಾರಸ್ವಾಮಿ ಮಂಡಿಸಿದ್ದು ಇತಿಹಾಸ.

(ಪೂರಕ ಮಾಹಿತಿ - ಏಜೆನ್ಸಿಗಳು ಮತ್ತು ಕುಂದೂರು ಉಮೇಶ್ ಭಟ್ಟ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ