logo
ಕನ್ನಡ ಸುದ್ದಿ  /  ಕರ್ನಾಟಕ  /  ಚನ್ನಪಟ್ಟಣ ಉಪಚುನಾವಣೆ ಫಲಿತಾಂಶ: ಸೋತ ಮಾತ್ರಕ್ಕೆ ಮೂಲೆಯಲ್ಲಿ ಕೂರುವುದಿಲ್ಲ, ಕೊಟ್ಟ ಭರವಸೆ ಈಡೇರಿಸಲು ಪ್ರಯತ್ನಿಸುವೆ: ನಿಖಿಲ್‌ ಕುಮಾರಸ್ವಾಮಿ

ಚನ್ನಪಟ್ಟಣ ಉಪಚುನಾವಣೆ ಫಲಿತಾಂಶ: ಸೋತ ಮಾತ್ರಕ್ಕೆ ಮೂಲೆಯಲ್ಲಿ ಕೂರುವುದಿಲ್ಲ, ಕೊಟ್ಟ ಭರವಸೆ ಈಡೇರಿಸಲು ಪ್ರಯತ್ನಿಸುವೆ: ನಿಖಿಲ್‌ ಕುಮಾರಸ್ವಾಮಿ

Rakshitha Sowmya HT Kannada

Nov 23, 2024 03:09 PM IST

google News

ಚನ್ನಪಟ್ಟಣ ಉಪಚುನಾವಣೆ ಫಲಿತಾಂಶ: ನಿಖಿಲ್‌ ಕುಮಾರಸ್ವಾಮಿ ಪ್ರೆಸ್‌ಮೀಟ್‌

  • Karnataka By Election Result 2024: ಈ ಬಾರಿಯೂ ನಿಖಿಲ್‌ ಕುಮಾರಸ್ವಾಮಿಗೆ ಅದೃಷ್ಟ ಕೈ ಕೊಟ್ಟಿದೆ. ಚನ್ನಪಟ್ಟಣ ಉಪ ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್‌ನ ಸಿಪಿ ಯೋಗೇಶ್ವರ್‌ ಗೆದ್ದು ನಿಖಿಲ್‌ ಸೋತಿದ್ದಾರೆ. ಸೋತ ಮಾತ್ರಕ್ಕೆ ನಾನು ಮೂಲೆಯಲ್ಲಿ ಕೂರದೆ ಜನರ ಅಭಿವೃದ್ಧಿಗೆ ಪ್ರಯತ್ನಿಸುವೆ ಎಂದು ನಿಖಿಲ್‌ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. 

ಚನ್ನಪಟ್ಟಣ ಉಪಚುನಾವಣೆ ಫಲಿತಾಂಶ: ನಿಖಿಲ್‌ ಕುಮಾರಸ್ವಾಮಿ ಪ್ರೆಸ್‌ಮೀಟ್‌
ಚನ್ನಪಟ್ಟಣ ಉಪಚುನಾವಣೆ ಫಲಿತಾಂಶ: ನಿಖಿಲ್‌ ಕುಮಾರಸ್ವಾಮಿ ಪ್ರೆಸ್‌ಮೀಟ್‌ (PC: Nikhil Gowda Facebook)

Karnataka By Election Result 2024: ನವೆಂಬರ್‌ 13 ರಂದು ನಡೆದಿದ್ದ ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಉಪ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಬೆಳಗ್ಗೆ 8 ಗಂಟೆಗೆ ಆರಂಭವಾದ ಮತ ಎಣಿಕೆ ಮುಕ್ತಾಯವಾಗಿದೆ. ಎಕ್ಸಿಟ್‌ ಪೋಲ್‌ ಫಲಿತಾಂಶಗಳು ಸುಳ್ಳಾಗಿವೆ. ರಾಜ್ಯದ ಮೂರೂ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಜಯಭೇರಿ ಬಾರಿಸಿದೆ. ಚನ್ನಪಟ್ಟಣದಲ್ಲಿ ಈ ಬಾರಿ ಕೂಡಾ ನಿಖಿಲ್‌ ಕುಮಾರಸ್ವಾಮಿಗೆ ಮುಖಭಂಗವಾಗಿದೆ.

ರಾಜ್ಯದ ಮೂರೂ ಕಡೆ ಜಯಭೇರಿ ಬಾರಿಸಿದ ಕಾಂಗ್ರೆಸ್

ಸಂಡೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ, ಬಿಜೆಪಿಯ ಬಂಗಾರು ಹನುಮಂತು ಅವರನ್ನು ಹಿಂದಿಕ್ಕಿ ಗೆಲುವು ಸಾಧಿಸಿದ್ದಾರೆ. ಶಿಗ್ಗಾಂವಿಯಲ್ಲಿ ಕಾಂಗ್ರೆಸ್‌ ಪಕ್ಷದ ಯಾಸಿರ್‌ ಪಠಾಣ್‌ ಗೆಲುವು ಸಾಧಿಸುವ ಮೂಲಕ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪುತ್ರ ಭರತ್‌ ಬೊಮ್ಮಾಯಿ ಅವರನ್ನು ಸೋಲಿಸಿದ್ದಾರೆ. ಇನ್ನು ಆರಂಭದಿಂದಲೂ ಸುದ್ದಿಯಲ್ಲಿದ್ದ ಚನ್ನಪಟ್ಟಣದಲ್ಲಿ ಕೂಡಾ ಕಾಂಗ್ರೆಸ್‌ ವಿಕ್ಟರಿ ಸಾಧಿಸಿದೆ. ಸಿಪಿ ಯೋಗೇಶ್ವರ್‌ ಗೆದ್ದರೆ, ಮೈತ್ರಿ ಪಕ್ಷದ ನಿಖಿಲ್‌ ಕುಮಾರಸ್ವಾಮಿ ಸೋಲುಂಡಿದ್ದಾರೆ. ನಿಖಿಲ್‌ ಕುಮಾರಸ್ವಾಮಿ 3 ಚುನಾವಣೆಯಲ್ಲಿ ಸೋಲು ಅನುಭವಿಸಿರುವುದು ಪಕ್ಷದ ಕಾರ್ಯಕರ್ತರಿಗೆ ನಿರಾಸೆ ಉಂಟು ಮಾಡಿದೆ. ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ನಿಖಿಲ್‌ ಕುಮಾರಸ್ವಾಮಿ ಬಿಡದಿ ತೋಟದ ಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ.‌

ಸೋತ ಮಾತ್ರಕ್ಕೆ ಸುಮ್ಮನೆ ಮೂಲೆಯಲ್ಲಿ ಕೂರುವುದಿಲ್ಲ

ಜನರ ತೀರ್ಪಿಗೆ ತಲೆ ಬಾಗುತ್ತೇವೆ. ಚುನಾವಣೆಯಲ್ಲಿ ಸೋಲು, ಗೆಲುವು ಸಹಜ, ಜನತೆ ಕೊಟ್ಟ ತೀರ್ಪನ್ನು ಸ್ವೀಕರಿಸುತ್ತೇವೆ. ಹೌದು ನಾನು ಚುನಾವಣೆಯಲ್ಲಿ 3 ಬಾರಿ ಸೋಲು ಅನುಭವಿಸಿದ್ದೇನೆ, ಆದರೆ ಸೋತೆ ಎಂದ ಮಾತ್ರಕ್ಕೆ ನಾನು ಮೂಲೆಯಲ್ಲಿ ಕೂರುವುದಿಲ್ಲ. ಪ್ರಚಾರದ ಸಮಯದಲ್ಲಿ ನಾನು ಜನರಿಗೆ ಕೊಟ್ಟ ಭರವಸೆಗಳು ಕೇವಲ ಚುನಾವಣೆಗೆ ಮಾತ್ರ ಸೀಮಿತವಲ್ಲ, ಸೋತರೆ ಏನಂತೆ, ನಾವು ಕೊಟ್ಟ ಭರವಸೆಗಳನ್ನು ಈಡೇರಿಸಲು ಖಂಡಿತ ಪ್ರಯತ್ನಿಸುತ್ತೇನೆ. ನಮ್ಮ ತಾತ ಹೆಚ್‌ಡಿ ದೇವೇಗೌಡ, ತಂದೆ ಹೆಚ್‌ಡಿ ಕುಮಾರಸ್ವಾಮಿ ರಾಜಕಾರಣದಲ್ಲಿದ್ದಾರೆ, ನಾನೂ ರಾಜಕಾರಣ ಮಾಡಬೇಕು ಅಂತ ಇಲ್ಲಿಗೆ ಬಂದಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕೆಂಬ ಗುರಿ ನನಗೆ ಇದೆ.

ಮಾಧ್ಯಮ ಮಿತ್ರರಿಗೆ, ಹಗಲು ರಾತ್ರಿ ದುಡಿದ ಕಾರ್ಯಕರ್ತರಿಗೆ ಧನ್ಯವಾದಗಳು

ಇಷ್ಟು ವರ್ಷಗಳ ಕಾಲ ನನ್ನ ತಾತ, ತಂದೆಗೆ ರಾಮನಗರ ಜನತೆ ಆಶೀರ್ವಾದ ಮಾಡುತ್ತಾ ಬಂದಿದ್ದಾರೆ. ಆದ್ದರಿಂದಲೇ ನನಗೆ 86 ಸಾವಿರ ಓಟು ದೊರೆತಿದೆ. ತಾತ, ತಂದೆ ಜೊತೆ ಇದ್ದುಕೊಂಡು ರಾಜ್ಯದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಸೋಲಿಗೆ ಕಾರಣ ಏನು ಎಂಬುದನ್ನು ಪಕ್ಷದ ಹಿರಿಯರ ಜೊತೆ ಚರ್ಚಿಸಿ ತಪ್ಪುಗಳನ್ನು ತಿದ್ದಿಕೊಳ್ಳುತ್ತೇನೆ. ರಾಜ್ಯದಲ್ಲಿ ಬಹಳಷ್ಟು ಜನರು ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ. ಅದೆಲ್ಲದಕ್ಕೂ ಒಂದು ಪರಿಹಾರ ಬೇಕಿದೆ. ಪಕ್ಷದಿಂದ ನಿಖಿಲ್‌ ಕುಮಾರಸ್ವಾಮಿಯೇ ಹೊರತು ನಿಖಿಲ್‌ನಿಂದ ಪಕ್ಷವಲ್ಲ. ಸೋಲನ್ನು ನಾನೇ ಸ್ವೀಕಾರ ಮಾಡುವೆ. ನನಗೆ ಬೆಂಬಲ ನೀಡಿದ ಪಕ್ಷದ ಕಾರ್ಯಕರ್ತರಿಗೆ, ಮಾಧ್ಯಮ ಮಿತ್ರರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದು ನಿಖಿಲ್‌ ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ