Shiggaon byelection results 2024: ಶಿಗ್ಗಾಂವಿ ಬಿಜೆಪಿ ಲೆಕ್ಕಾಚಾರಕ್ಕೆ ಒಳಹೊಡೆತದ ರಾಜಕೀಯ: ಬೊಮ್ಮಾಯಿಗೆ ಒಳೇಟು ಕೊಟ್ಟವರು ಯಾರು
ಕನ್ನಡ ಸುದ್ದಿ  /  ಕರ್ನಾಟಕ  /  Shiggaon Byelection Results 2024: ಶಿಗ್ಗಾಂವಿ ಬಿಜೆಪಿ ಲೆಕ್ಕಾಚಾರಕ್ಕೆ ಒಳಹೊಡೆತದ ರಾಜಕೀಯ: ಬೊಮ್ಮಾಯಿಗೆ ಒಳೇಟು ಕೊಟ್ಟವರು ಯಾರು

Shiggaon byelection results 2024: ಶಿಗ್ಗಾಂವಿ ಬಿಜೆಪಿ ಲೆಕ್ಕಾಚಾರಕ್ಕೆ ಒಳಹೊಡೆತದ ರಾಜಕೀಯ: ಬೊಮ್ಮಾಯಿಗೆ ಒಳೇಟು ಕೊಟ್ಟವರು ಯಾರು

Shiggaon byelection results 2024: ಶಿಗ್ಗಾಂವಿ ವಿಧಾನಸಭೆ ಚುನಾವಣೆಯಲ್ಲಿ ಅನುಭವಿ ಬಸವರಾಜ ಬೊಮ್ಮಾಯಿ ಅವರಿಗೆ ಭಾರೀ ಹಿನ್ನಡೆ ನೀಡಿದೆ. ಅದೂ ಬಿಜೆಪಿಯಲ್ಲಿನ ಒಳೇಟಿನಿಂದ ಬೊಮ್ಮಾಯಿ ಅವರಿಗೆ ಮೂರು ದಶಕದ ಹಿಂದೆ ಆದ ಸೋಲಿನ ಅನುಭವ ಮಗನಿಗೂ ಆಯಿತೇ ಎನ್ನುವ ಚರ್ಚೆಗಳು ನಡೆದಿವೆ.

ಹಾವೇರಿ ಜಿಲ್ಲೆಯ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ಭರತ್‌ ಬೊಮ್ಮಾಯಿ ಸೋಲಿನ ವಿಶ್ಲೇಷಣೆ ನಡೆದಿದೆ.
ಹಾವೇರಿ ಜಿಲ್ಲೆಯ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ಭರತ್‌ ಬೊಮ್ಮಾಯಿ ಸೋಲಿನ ವಿಶ್ಲೇಷಣೆ ನಡೆದಿದೆ.

Shiggaon byelection results 2024: ಶಿಗ್ಗಾಂವಿ ಕರ್ನಾಟಕದ ಬಿಜೆಪಿ-ಜೆಡಿಎಸ್ ಹಾಗೂ ಆಡಳಿತ ಪಕ್ಷವಾಗಿದ್ದ ಕಾಂಗ್ರೆಸ್ಗೆ ಪ್ರತಿಷ್ಠೆಯ ಪಣವಾಗಿ ಪರಿಣಮಿಸಿದ್ದ ರಾಜ್ಯ ವಿಧಾನಸಭೆಯ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯಭೇರಿ ಬಾರಿಸಿದೆ. ಆದರೆ, ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ ಬಸವರಾಜ ಬೊಮ್ಮಾಯಿಯವರ ಪುತ್ರ ಭರತ್‌ ಬೊಮ್ಮಾಯಿಗೆ ಸೋಲುಣಿಸಿದ ಶಿಗ್ಗಾವಿ-ಸವಣೂರು ಕ್ಷೇತ್ರದಲ್ಲಿ ಬಿಜೆಪಿಯವರ ಲೆಕ್ಕಾಚಾರಕ್ಕೆ ಒಳಹೊಡೆತದ ಪೆಟ್ಟು ಬಲವಾಗಿ ಬಿದ್ದಿದೆ ಎನ್ನುವ ಚಟುವಟಿಕೆಗಳು ಕಾಂಗ್ರೆಸ್‌ನ ಗೆಲುವಿನ ನಂತರ ಚರ್ಚೆಗಳು ನಡೆದಿವೆ. ಬಸವರಾಜ ಬೊಮ್ಮಾಯಿ ಅವರು ಚುನಾವಣೆಗಳನ್ನು ಗೆಲ್ಲುವಲ್ಲಿ ನಿಷ್ಣಾತರಾಗಿ ಎರಡು ಬಾರಿ ಎಂಎಲ್ಸಿ, ನಾಲ್ಕು ಬಾರಿ ಶಾಸಕ, ಒಮ್ಮೆ ಸಂಸದರಾಗಿ ಆಯ್ಕೆಯಾಗಿದ್ದರೂ ತಮ್ಮ ಮಗನನ್ನು ಗೆಲ್ಲಿಸಲು ಪಕ್ಷದಿದ ಒಳೇಟು ಅನುಭವಿಸಿದರೇ ಎನ್ನುವ ಅಭಿಪ್ರಾಯಗಳು ಪಕ್ಷದಲ್ಲೇ ಬಲವಾಗಿದೆ.

ಶಿಗ್ಗಾವಿ-ಸವಣೂರು ಕ್ಷೇತ್ರದ ಉಪಚುನಾವಣೆ ನಂತರ ಕಾಂಗ್ರೆಸ್ ವಲಯದಲ್ಲಿ ಸುಮಾರು 5 ರಿಂದ 6 ಸಾವಿರ ಮತಗಳಿಂದ ಯಾಸೀರ ಪಠಾಣ ಗೆಲ್ಲಲಿದ್ದಾರೆ ಎಂದು ಅಂದಾಜಿಸಲಾಗಿತ್ತು. ಇನ್ನೊಂದೆಡೆ ಬಿಜೆಪಿ ವಲಯದಲ್ಲಿ ತಮ್ಮ ಅಭ್ಯರ್ಥಿ ಭರತ ಬೊಮ್ಮಾಯಿ 8 ರಿಂದ 10 ಸಾವಿರ ಮತಗಳಿಂದ ಗೆಲ್ಲಲಿದ್ದಾರೆ ಎಂದು ಲೆಕ್ಕಾಚಾರ ಹಾಕಲಾಗಿತ್ತು. ಇದೀಗ ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪಠಾಣ 100756ಮತಗಳನ್ನು ಪಡೆದು ಜಯಸಾಧಿಸಿದರೆ. ಬಿಜೆಪಿಯ ಭರತ ಬೊಮ್ಮಾಯಿ 87308 ಮತಗಳನ್ನು ಪಡೆದಿದ್ದು, 13448 ಮತಗಳ ಗೆಲುವಿನ ಅಂತರವಾಗಿದೆ. ಈ ಅಂಕಿಸಂಖ್ಯೆ ಎರಡೂ ಪಕ್ಷದ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದೆ.

ಈ ಅನಿರೀಕ್ಷಿತ ಫಲಿತಾಂಶದ ಕುರಿತು ಮತದಾರರು ಈಗ ತಮ್ಮದೇ ರೀತಿಯಲ್ಲಿ ವಿಶ್ಲೇಷಿಸುತ್ತಿದ್ದಾರಾದರೂ ಜನರ ಅನಿಸಿಕೆಯಲ್ಲಿ ಸಾಕಷ್ಟು ವಾಸ್ತವಿಕತೆ ಇದೆ ಎನ್ನುವುದು ಮೇಲ್ನೋಟದಲ್ಲೇ ಕಾಣಿಸುತ್ತಿದೆ.

ಬಿಜೆಪಿಗೆ ಒಳಹೊಡೆತದ ಪೆಟ್ಟು

ಬಸವರಾಜ ಬೊಮ್ಮಾಯಿಯವರ ಭದ್ರಕೋಟೆಯಾಗಿದ್ದ ಶಿಗ್ಗಾವಿ-ಸವಣೂರು ಕ್ಷೇತ್ರದಲ್ಲಿ ಈ ಬಾರಿ ಬೊಮ್ಮಾಯಿಯವರಿಗೆ ಒಳ ಹೊಡೆತದ ಪೆಟ್ಟು ಸೋಲುಣಿಸಿದೆ ಎಂಬ ಮಾತು ಕ್ಷೇತ್ರದಲ್ಲಿ ಕೇಳಿಬರುತ್ತಿದೆ. ಹಿಂದಿನ ಪ್ರತಿಯೊಂದು ಚುನಾವಣೆಯಲ್ಲಿ ಕ್ಷೇತ್ರದ ಪ್ರಮುಖ ಹಾಗೂ ಗಣನೀಯ ಮತದಾರರ ಸಂಖ್ಯೆ ಹೊಂದಿರುವ ಸಮುದಾಯಗಳಾದ ಪಂಚಮಸಾಲಿ ( 31 ಸಾವಿರ ಮತ), ಕುರುಬ(30 ಸಾವಿರ), ವಾಲ್ಮೀಕಿ(ಸುಮಾರು 20 ಸಾವಿರ ಮತ) ಸೇರಿದಂತೆ ಸ್ವಲ್ಪ ಮಟ್ಟಿನ ಮುಸ್ಲಿಂ ಮತಗಳು, ಹಿಂದುಳಿದ ವರ್ಗಗಳ ಮತಗಳ ಬಲದಿಂದ ಈ ಎಲ್ಲ ಸಮುದಾಯಗಳ ಮನವೊಲಿಸುವ ಮೂಲಕ ಬಸವರಾಜ ಬೊಮ್ಮಾಯಿಯವರು ಗೆಲುವು ಸಾಧಿಸುತ್ತಿದ್ದರು.

ಆದರೆ, ಈ ಚುನಾವಣೆಯಲ್ಲಿ ಪ್ರಮುಖವಾಗಿ ಪಂಚಮಸಾಲಿಗರ ಮನವೊಲಿಸುವಲ್ಲಿ ಬೊಮ್ಮಾಯಿಯವರು ಮುಂದಾಗದೇ ಸಮುದಾಯದ ಶ್ರೀಕಾಂತ ದುಂಡಿಗೌಡ್ರ ಸೇರಿದಂತೆ ಪ್ರಮುಖ ಟಿಕೆಟ್ ಆಕಾಂಕ್ಷಿಗಳನ್ನು ನಿರ್ಲಕ್ಷಿಸಿದ್ದು ಮಗನ ಸೋಲಿಗೆ ಕೊಡುಗೆ ನೀಡಿದೆ. ಟಿಕೆಟ್‌ ವಿಚಾರದಲ್ಲಿ ಮೌನವಾಗಿಯೇ ಕೆಲಸ ಮಾಡಿದ ಬೊಮ್ಮಾಯಿ ವಿರುದ್ದ ಪಕ್ಷದ ಹಿರಿಯ ನಾಯಕರೇ ಏಟು ಕೊಟ್ಟಿರುವ ಚರ್ಚೆಗಳು ನಡೆದಿವೆ

ಬೊಮ್ಮಾಯಿ ಅನುಭವಕ್ಕೆ ಹಿನ್ನಡೆ

ಇನ್ನು ಕಾಗಿನೆಲೆ ಶ್ರೀಗಳೊಂದಿಗೆ ಉತ್ತಮ ಸಂಬಂಧ ಹೊಂದಿರುವ ಬೊಮ್ಮಾಯಿಯವರು ಕುರುಬ ಸಮುದಾಯದ ಮತಗಳ ನಿರೀಕ್ಷೆಯಲ್ಲಿದ್ದರಾದರೂ ಈ ಸಲ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕ್ಷೇತ್ರಕ್ಕೆ ಎರಡು ಸಲ ಆಗಮಿಸಿ ಶಕ್ತಿಮೀರಿ ಪ್ರಯತ್ನಿಸಿದ್ದರು.

ವಾಲ್ಮೀಕಿ ಸಮುದಾಯದ ಕಾಂಗ್ರೆಸ್ ನಾಯಕರು ಕೂಡ ಕ್ಷೇತ್ರದಲ್ಲಿ ತಮ್ಮ ಸಮುದಾಯದ ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿರಬಹುದು. ಸಚಿವ ಸತೀಶ್‌ ಜಾರಕಿಹೊಳಿ ಈ ವಿಚಾರದಲ್ಲಿ ಪ್ರಯತ್ನ ನಡೆಸಿರುವುದೂ ಗಮನಾರ್ಹ.

ಇನ್ನು ಕ್ಷೇತ್ರದಲ್ಲಿ ಸುಮಾರು 69 ಸಾವಿರ ಮತದಾರರ ಸಂಖ್ಯೆ ಹೊಂದಿರುವ ಮುಸ್ಲಿಂ ಸಮುದಾಯ ಹೆಚ್ಚಿನ ಮತಗಳು ಈ ಸಲ ತಮ್ಮದೇ ಅಭ್ಯರ್ಥಿ ಪಠಾಣ ಅವರಿಗೆ ಒಲವು ತೋರಿರುವುದು ಸಹಜವಾಗಿದೆ. ಹಾನಗಲ್ನ ಕಾಂಗ್ರೆಸ್ ಶಾಸಕ ಮಾನೆ ಅವರೂ ಸುಮಾರು 11 ಸಾವಿರದಷ್ಟಿರುವ ಮರಾಠ ಮತದಾರರ ಮನಗೆಲ್ಲಲು ಇನ್ನಿಲ್ಲದ ಪ್ರಯತ್ನ ಮಾಡಿದ್ದರು. ಹೀಗಾಗಿ ಬಿಜೆಪಿಯ ಎಲ್ಲ ಲೆಕ್ಕಾಚಾರಕ್ಕೂ ಒಳಹೊಡೆತದ ಪೆಟ್ಟು ಜೋರಾಗಿ ಬಿದ್ದಿರುವುದು ಫಲಿತಾಂಶದಲ್ಲಿ ತೋರಿಸುತ್ತಿದೆ ಎನ್ನಲಾಗುತ್ತಿದೆ.

ಮೊದಲ ಯತ್ನದಲ್ಲಿ ಅಪ್ಪನಂತೆಯೇ ಪರಾಭವ

ಈ ಹಿಂದೆ 1994ರಲ್ಲಿ ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರದಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ್ದ ಬಸವರಾಜ ಬೊಮ್ಮಾಯಿ ಪ್ರಥಮ ಯತ್ನದಲ್ಲಿ ಮುಗ್ಗರಿಸಿದ್ದರು. ಬಿಜೆಪಿಯ ಹುರಿಯಾಳು ಜಗದೀಶ ಶೆಟ್ಟರ್ ವಿರುದ್ಧ ಪರಾಭವಗೊಂಡಿದ್ದರು.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸಂಸದರಾದ ನಂತರ ಖಾಲಿಯಾದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ತಮ್ಮ ಪುತ್ರನಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾದರೂ ಭರತ ಬೊಮ್ಮಾಯಿ 13448 ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ. ಹಲವು ಬಿಜೆಪಿ ಆಕಾಂಕ್ಷಿಗಳಿಗೆ ನಿಮಗೆ ಟಿಕೆಟ್ ಎಂದು ಮಗನಿಗೆ ಕೊಡಿಸಿದ್ದು ಬೊಮ್ಮಾಯಿ ಸೋಲಿನಲ್ಲಿ ಮಹತ್ವದ ಪಾತ್ರವಹಿಸಿದೆ.

ಪರಿಣಾಮ ಬೀರದ ವಕ್ಫ್, ಮುಡಾ

ಬಿಜೆಪಿಯವರು ಮುಖ್ಯವಾಗಿ ಚುನಾವಣೆಯಲ್ಲಿ ವಕ್ಫ ಹಾಗೂ ವಾಲ್ಮೀಕಿ ನಿಗಮದ ಹಗರಣ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣಗಳನ್ನಿಟ್ಟುಕೊಂಡು ಮತದಾರರನ್ನು ಸೆಳೆಯಲು ಸಾಕಷ್ಟು ಯತ್ನಿಸಿದ್ದರಾದರೂ ಈ ಹಗರಣಗಳು ಮತದಾರರ ಮೇಲೆ ಬೀರಿದ ಪರಿಣಾಮ ಅಷ್ಟಕ್ಕಷ್ಟೇ ಎಂಬು ಫಲಿತಾಂಶದಲ್ಲೇ ತೋರಿಸಿದೆ ಎಂದು ಕ್ಷೇತ್ರಗಳಲ್ಲಿ ಜನ ಮಾತನಾಡಿಕೊಳ್ಳುತ್ತಿದ್ದಾರೆ.

ಕಾಂಗ್ರೆಸ್ ಪರ ಮತದಾರ ಒಲವು

ಇನ್ನೊಂದೆಡೆ ಬಿಜೆಪಿ ಅಪಪ್ರಚಾರಕ್ಕೆ ಕಾಂಗ್ರೆಸ್ ಗೆಲುವೆ ತಕ್ಕ ಉತ್ತರ ಎಂದು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಅಪಪ್ರಚಾರ ಮಾಡಿದರೂ ಉಪಚುನಾವಣೆಯ ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಜನರು ಬಿಜೆಪಿಗರಿಗೆ ತಕ್ಕ ಪಾಠ ಕಲಿಸಿದ್ದಾರೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಮತ್ತು ಜನಪರ ಕಾರ್ಯಕ್ರಮಗಳಿಗೆ ಜನರು ಮನ್ನಣೆ ನೀಡುವ ಮೂಲಕ ಕಾಂಗ್ರೆಸ್ ಉತ್ತಮ ಆಡಳಿತವನ್ನು ಬೆಂಬಲಿಸಿದ್ದಾರೆ.

ಮುಖ್ಯಮಂತ್ರಿಗಳ ವಿರುದ್ಧ ಎಷ್ಟೇ ಷಡ್ಯಂತ್ರ ಮಾಡಿದರೂ ಬಿಜೆಪಿಗರ ಆಟ ಉಪಚುನಾವಣೆಯಲ್ಲಿ ನಡೆಯಲಿಲ್ಲ. ಉಪಚುನಾವಣೆಯ ಗೆಲುವು ಇನ್ನಷ್ಟು ಬಲ ನೀಡಿದಂತಾಗಿದೆ. ಕಾಂಗ್ರೆಸ್ ಯಾವತ್ತೂ ಬಡವರ ಮತ್ತು ಜನಪರ ಆಡಳಿತ ನೀಡುತ್ತದೆ ಎಂಬುದಕ್ಕೆ ಮೂರು ಕ್ಷೇತ್ರದ ಗೆಲುವೇ ನಿದರ್ಶನವಾಗಿದೆ. ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಬಿಜೆಪಿಯ ಯಾವುದೇ ಷಡ್ಯಂತ್ರಗಳು ಫಲಿಸುವುದಿಲ್ಲ ಎಂದು ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಮೂರು ದಶಕದ ನಂತರ ಪಕ್ಷದ ಅಭ್ಯರ್ಥಿಯ ಗೆಲುವನ್ನು ಸಂಭ್ರಮಿಸುತ್ತಿದ್ದಾರೆ.\

Whats_app_banner