ಶಕ್ತಿ ಯೋಜನೆ ಪರಿಷ್ಕರಣೆ ಪ್ರಸ್ತಾವನೆ ಇಲ್ಲ, ಮಹಿಳೆಯರ ಉಚಿತ ಪ್ರಯಾಣಕ್ಕೆ ಇಲ್ಲ ಅಡ್ಡಿ: ಸಿಎಂ ಸಿದ್ದರಾಮಯ್ಯ ಸ್ಪಷ್ಟೀಕರಣ, ಗೊಂದಲ ಯಾಕಾಯಿತು
Oct 31, 2024 02:23 PM IST
ಶಕ್ತಿ ಯೋಜನೆ ಪರಿಷ್ಕರಣೆ ಪ್ರಸ್ತಾವನೆ ಇಲ್ಲ, ಎಲ್ಲ ಮಹಿಳೆಯರೂ ಉಚಿತವಾಗಿ ಪ್ರಯಾಣಿಸಬಹುದು: ಸಿಎಂ ಸಿದ್ದರಾಮಯ್ಯ ಸ್ಪಷ್ಟೀಕರಣ ನೀಡಿದರು. (ಸಾಂಕೇತಿಕ ಚಿತ್ರ)
ಶಕ್ತಿ ಯೋಜನೆ ಎಲ್ಲ ಮಹಿಳೆಯರೂ ಉಚಿತವಾಗಿ ಬಸ್ ಪ್ರಯಾಣ ಮಾಡುವ ಅವಕಾಶ ನೀಡಿದ್ದು, ಇದರ ಪರಿಷ್ಕರಣೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ (ಅಕ್ಟೋಬರ್ 31) ಸ್ಪಷ್ಟಪಡಿಸಿದರು. ಇದಕ್ಕೂ ಮೊದಲು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಶಕ್ತಿ ಯೋಜನೆ ಪರಿಷ್ಕರಣೆ ವಿಚಾರ ಪ್ರಸ್ತಾಪಿಸಿದ್ದರು. ಯಾಕೆ ಗೊಂದಲ ಎಂಬುದರ ವಿವರ ಇಲ್ಲಿದೆ.
ಬೆಂಗಳೂರು: ಕರ್ನಾಟಕದ ಮಹಿಳೆಯರಿಗೆ ಉಚಿತ ಪ್ರಯಾಣ ಒದಗಿಸುವ ಶಕ್ತಿ ಯೋಜನೆ ಪರಿಷ್ಕರಿಸುವ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ. ಆ ರೀತಿಯ ಉದ್ದೇಶವೂ ಸರ್ಕಾರಕ್ಕೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು (ಅಕ್ಟೋಬರ್ 31) ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡುತ್ತ ಸ್ಪಷ್ಟಪಡಿಸಿದರು. ವಕ್ಫ್ ಆಸ್ತಿ ನೋಟೀಸುಗಳಿಗೆ ಸಂಬಂಧಿಸಿ ನವೆಂಬರ್ 4ರಂದು ಬಿಜೆಪಿ ಪ್ರತಿಭಟನೆ ಮಾಡುವುದರ ಕುರಿತು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಸುಮಾರು 200ಕ್ಕೂ ಹೆಚ್ಚು ನೋಟಿಸ್‌ಗಳನ್ನು ನೀಡಿದ್ದಾರೆ. ಅವರದು ಇಬ್ಬದಿ ರಾಜಕೀಯ ನಡೆ. ಯಾವ ರೈತರನ್ನೂ ಒಕ್ಕಲೆಬ್ಬಿಸಿಸುವುದಿಲ್ಲ ಎಂದು ಈಗಾಗಲೇ ಹೇಳಿದ್ದೇವೆ. ಕೊಟ್ಟಿರುವ ನೋಟಿಸ್‌ಗಳನ್ನು ಹಿಂಪಡೆಯಲು ಈಗಾಗಲೇ ಸೂಚಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ನವೆಂಬರ್ 4ರ ಅವರ ಪ್ರತಿಭಟನೆ ಉಪ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪ್ರೇರಿತವಾದದ್ದು, ಸಮಸ್ಯೆಗಳು ಇರದ ಕಡೆ ಸಮಸ್ಯೆಗಳನ್ನು ಸೃಷ್ಟಿಸುತ್ತಾರೆ. ಈಗ ಮುಡಾ ಪ್ರಕರಣದಲ್ಲಿ ಮಾಡಿಲ್ಲವೇ? ಎಂದು ಪ್ರಶ್ನಿಸಿದರು.
ಶಿಗ್ಗಾಂವಿಯಲ್ಲಿ ಅಜ್ಜಂಪೀರ್ ಖಾದ್ರಿ ಅವರು ನಾಮಪತ್ರ ವಾಪಸ್ ಪಡೆದಿದ್ದು, ಉಪಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಶ್ರಮಿಸುತ್ತಾರೆ. ಶಿಗ್ಗಾಂವಿ, ಸಂಡೂರು ಹಾಗೂ ಚನ್ನಪಟ್ಟಣ ಮೂರೂ ಕ್ಷೇತ್ರಗಳಲ್ಲಿಯೂ ಗೆಲುವು ನಮ್ಮದೇ ಎಂದು ಹೇಳಿದರು.
ಶಕ್ತಿ ಯೋಜನೆಯಲ್ಲಿ ಯಾವುದೇ ಬದಲಾವಣೆಯಿಲ್ಲ; ಸಾರಿಗೆ ಸಚಿವ ಸ್ಪಷ್ಟೀಕರಣ
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಹೇಳಿಕೆಗೆ ಸಂಬಂಧಿಸಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಕೂಡ ಹೇಳಿಕೆ ನೀಡಿದ್ದು, ಶಕ್ತಿ ಯೋಜನೆ ಈಗ ಇರುವಂತೆಯೇ ಮುಂದುವರೆಯಲಿದೆ. ಶಕ್ತಿ ಯೋಜನೆಯಲ್ಲಿ ಯಾವುದೇ ಬದಲಾವಣೆಯಿಲ್ಲ. ಈ ಅವಧಿ ಅಷ್ಟೇ ಅಲ್ಲ, ಮುಂದಿನ ಅವಧಿಗೂ ಇರುತ್ತೆ. ಅಷ್ಟುಕ್ಕೂ ಡಿಸಿಎಂ ಈ ಬಗ್ಗೆ ನನ್ನ ಬಳಿ ಮಾತನಾಡಿಲ್ಲ. ನನಗೆ ಯಾವ ಮಹಿಳೆಯರು ಟಿಕೆಟ್ ಖರೀದಿಸ್ತೇವೆ ಅಂದಿಲ್ಲ. ಡಿ.ಕೆ ಶಿವಕುಮಾರ್ ಅವರಿಗೆ ಇಮೇಲ್ ಮೂಲಕ ತಿಳಿಸಿದ್ದಾರಂತೆ. ಐಷಾರಾಮಿ ಕಾರುಗಳಲ್ಲಿ ಸಂಚರಿಸುವವರು ಹೇಳಿರಬಹುದು. ಅದರ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಶಕ್ತಿ ಯೋಜನೆ ಬಗ್ಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಏನು ಹೇಳಿದ್ದರು
''ಮಹಿಳೆಯರ ಉಚಿತ ಪ್ರಯಾಣಕ್ಕೆ ಶಕ್ತಿ ಯೋಜನೆ ಮಾಡುವುದಾಗಿ ರಾಹುಲ್‌ಗಾಂಧಿ ಹಾಗೂ ನಾನು ಘೋಷಿಸಿದ್ದೆವು. ಇದರಂತೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಎಲ್ಲ ಮಹಿಳೆಯರಿಗೂ ಉಚಿತ ಪ್ರಯಾಣ ಘೋಷಿಸಿದೆವು. ಇತ್ತೀಚೆಗೆ ಹಲವು ಮಹಿಳೆಯರು ಇ-ಮೇಲ್, ಟ್ವಿಟ್ ಹಾಗೂ ಮೊಬೈಲ್ ಮೂಲಕ ಸಂಪರ್ಕಿಸುತ್ತಿದ್ದು, ಅವರಿಗೆೆ ಟಿಕೆಟ್ ಖರೀದಿಸುವ ಸಾಮರ್ಥ್ಯವಿದೆ. ಅವರಿಗೆ ಉಚಿತ ಬೇಡ ಎಂದು ತಿಳಿಸುತ್ತಿದ್ದಾರೆ. ಇಂತಹ ವರ್ಗದ ಮಹಿಳೆಯರ ಸಂಖ್ಯೆ ಶೇಕಡ 5 -10 ಇರಬಹುದು. ಹಾಗಾಗಿ ಅವರ ಬೇಡಿಕೆ ಈಡೇರಿಸುವ ವಿಚಾರವಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೇರಿ ನಾವೆಲ್ಲರೂ ಕೂಡಿ ಅಗತ್ಯ ತೀರ್ಮಾನ ಮಾಡುತ್ತೇವೆ' ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದರು. ಅವರು ನಿನ್ನೆ (ಅಕ್ಟೋಬರ್ 30) ವಿಧಾನಸೌಧದ ಮುಂಭಾಗ ಐರಾವತ ಕ್ಲಬ್ ಕ್ಲಾಸ್ 2.0 ನೂತನ ಬಸ್ಸುಗಳ ಲೋಕಾರ್ಪಣೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡುತ್ತ ಇದನ್ನು ಹೇಳಿದ್ದರು. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಈ ಹೇಳಿಕೆಯು ಚಾಲ್ತಿಯಲ್ಲಿರುವ ಮಹಿಳೆಯರ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಯಲ್ಲಿ ಮಾರ್ಪಾಡುವ ಮಾಡುವ ಸುಳಿವಿನಂತೆ ಕಂಡುಬಂದಿತ್ತು. ಉಪಚುನಾವಣೆ ಘೋಷಣೆಯಾಗಿರುವ ಹೊತ್ತಿನಲ್ಲಿ ಶಕ್ತಿ ಯೋಜನೆ ಪರಿಷ್ಕರಣೆ ವಿಚಾರ ರಾಜಕೀಯವಾಗಿ ಸಂಚಲನ ಮೂಡಿಸಿತ್ತು. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಕೂಡಲೇ ಸ್ಪಷ್ಟೀಕರಣ ನೀಡಿದ್ದಾರೆ.