Karnataka Election 2023: ಇದು ಫ್ಯಾಮಿಲಿ ಪಾಲಿಟಿಕ್ಸ್; ಮೂವರು ಮಾಜಿ ಮುಖ್ಯಮಂತ್ರಿಗಳ ಪುತ್ರ ವ್ಯಾಮೋಹ ಮತ್ತು ರಾಜಕಾರಣದ ಸ್ವಾರಸ್ಯ
Apr 04, 2023 05:15 PM IST
ಮೂವರು ಮಾಜಿ ಮುಖ್ಯಮಂತ್ರಿಗಳ ಪುತ್ರ ವ್ಯಾಮೋಹ ಮತ್ತು ಅವರ ರಾಜಕಾರಣ ಸ್ವಾರಸ್ಯದ ಕಡೆಗೊಂದು ಇಣುಕುನೋಟ.
Karnataka Election 2023: ರಾಜಕೀಯ ಪಡಸಾಲೆಯಲ್ಲಿ, ಅಷ್ಟೇ ಏಕೆ ಜನರ ನಡುವೆಯೂ ಕುಟುಂಬ ರಾಜಕಾರಣ ಇದು ಸದಾ ಸದ್ದು ಮಾಡುವ, ಸುದ್ದಿಯಾಗುವ ವಿಚಾರ. ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಮೂವರು ಮಾಜಿ ಮುಖ್ಯಮಂತ್ರಿಗಳ ಪುತ್ರ ವ್ಯಾಮೋಹ ಮತ್ತು ಅವರ ರಾಜಕಾರಣ ಸ್ವಾರಸ್ಯದ ಕಡೆಗೊಂದು ಇಣುಕುನೋಟ.
ರಾಜ್ಯ ಚುನಾವಣಾ ಅಖಾಡ ರಂಗೇರಿದೆ. ಚುನಾವಣಾ ಕಣದಲ್ಲಿ ಪ್ರಭಾವಿಗಳಾಗಿ ಗೋಚರಿಸಿರುವ ಪಂಚ ಪ್ರಮುಖರಲ್ಲಿ ಮೂವರು ಮಾಜಿ ಮುಖ್ಯಮಂತ್ರಿಗಳು. ಒಬ್ಬರು ಹಾಲಿ ಮುಖ್ಯಮಂತ್ರಿ. ಮತ್ತೊಬ್ಬರು ಮುಖ್ಯಮಂತ್ರಿ ಆಗಲೇಬೇಕು ಎಂದು ಪಣತೊಟ್ಟವರು. ಈ ಪೈಕಿ ಮೂವರು ಮಾಜಿ ಮುಖ್ಯಮಂತ್ರಿಗಳ ಪುತ್ರ ವ್ಯಾಮೋಹ ಕಣ್ಣಿಗೆ ಕಟ್ಟುವಂತೆ ಗೋಚರಿಸುತ್ತಿರುವುದು ವಿಶೇಷ.
ಮಕ್ಕಳ ರಾಜಕೀಯ ಭವಿಷ್ಯ ಗಟ್ಟಿಮಾಡಲು ಟೊಂಕ ಕಟ್ಟಿದ್ದಾರೆ ಈ ಮೂವರು ಮಾಜಿ ಮುಖ್ಯಮಂತ್ರಿಗಳು - ಸಿದ್ದರಾಮಯ್ಯ, ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ. ಪಕ್ಷವನ್ನು ಮುನ್ನಡೆಸಿ ಅಧಿಕಾರಕ್ಕೇರಿಸುವಷ್ಟು ಬಹುಮತ ತಂದುಕೊಡಬಲ್ಲಷ್ಟು ಸಾಮರ್ಥ್ಯ ಇವರದ್ದು. ಆದರೆ ಈ ಸಲದ ಚುನಾವಣೆಯಲ್ಲಿ ಇವರ ಗಮನ ಮಕ್ಕಳ ರಾಜಕೀಯ ಭವಿಷ್ಯ ರೂಪಿಸುವ ಕಡೆಗೇ ಇದೆ..
ಬಿ.ವೈ. ವಿಜಯೇಂದ್ರ
ರಾಜ್ಯದಲ್ಲಿ ಬಿಜೆಪಿಯ ಅತ್ಯಂತ ಪ್ರಭಾವಿ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ. ಪಕ್ಷದಲ್ಲಿ ಬಿ.ವೈ. ವಿಜಯೇಂದ್ರಗೆ ಉಪಾಧ್ಯಕ್ಷ ಹೊಣೆಗಾರಿಕೆ. ಈ ಸಲ ಬಿಜೆಪಿ ಸರ್ಕಾರ ರಚನೆ ಆದ ಬಳಿಕ ನಡೆದ ಉಪಚುನಾವಣೆಗಳಲ್ಲಿ ಪಕ್ಷವನ್ನು ಗೆಲ್ಲಿಸುವ ಹೊಣೆಗಾರಿಕೆ ಹೊತ್ತು ಯಶಸ್ವಿಯಾದವರು. ಲಿಂಗಾಯತ ಸಮುದಾಯದಲ್ಲಿ ಬಿಎಸ್‌ವೈ ಅವರ ಉತ್ತರಾಧಿಕಾರಿಯಾಗಿ ಗುರುತಿಸಲ್ಪಟ್ಟವರು. ಯಡಿಯೂರಪ್ಪ ಅವರಿಗೆ ಈಗ 80 ವರ್ಷ ವಯಸ್ಸು. ಬಿಜೆಪಿಯನ್ನು ರಾಜ್ಯದಲ್ಲಿ ಕಟ್ಟಿ ಬೆಳೆಸುವಲ್ಲಿಂದ ಹಿಡಿದು ಮುಖ್ಯಮಂತ್ರಿ ಆಗುವ ತನಕ ಅವರ ಪಕ್ಷ ಸಂಘಟನೆ ಕಾರ್ಯ, ಹೋರಾಟದ ಹಾದಿ ಎಲ್ಲವೂ ಈಗ ಸ್ಮರಣೀಯ. ಅವರು ಮುಖ್ಯಮಂತ್ರಿ ಆದಾಗ ಅವರ ಕುಟುಂಬ ಸದಸ್ಯರ ಪಾರುಪಥ್ಯ ಬಹಳಷ್ಟು ಸದ್ದುಮಾಡಿದೆ. ಈ ನಡುವೆ, ಪಕ್ಷದ ಪ್ರಮುಖರ ವಿರೋಧ ಎದುರಿಸುತ್ತಲೇ ಹಟದಿಂದ 2009ರ ಲೋಕಸಭೆ ಚುನಾವಣೆಯಲ್ಲಿ ಮಗ ಬಿ.ವೈ. ರಾಘವೇಂದ್ರ ಅವರನ್ನು ಶಿವಮೊಗ್ಗ ಕ್ಷೇತ್ರದಿಂದ ಕಣಕ್ಕಿಳಿಸಿ ಗೆಲ್ಲಿಸಿದರು. ಇನ್ನು 2018ರ ವಿಧಾನಸಭಾ ಚುನಾವಣೆಯಲ್ಲಿ ಬಿ.ವೈ.ವಿಜಯೇಂದ್ರನನ್ನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ ಕಣಕ್ಕೆ ಇಳಿಸಲು ಪ್ರಯತ್ನಿಸಿದ್ದರು. ಆದರೆ ಆ ಪ್ರಯತ್ನ ಕೈಗೂಡಿರಲಿಲ್ಲ. ಅಲ್ಲಿಂದೀಚೆಗೆ ಸಿದ್ದರಾಮಯ್ಯಗೆ ಎದುರಾಳಿ ಯಾರು ಎಂದರೆ ಬಿ.ವೈ.ವಿಜಯೇಂದ್ರ ಎಂಬ ಚಿತ್ರಣ ಉಂಟಾಗಿತ್ತು.
ಇದಾಗಿ 2019ರಲ್ಲಿ ಬಿಜೆಪಿ ಸರಕಾರ ರಚನೆ ಆದ ಬಳಿಕ ವಿಜಯೇಂದ್ರ ಅವರನ್ನು ವಿಧಾನ ಸೌಧದ ಪಡಸಾಲೆಗೆ ಕರೆದೊಯ್ಯಲು ಸಾಕಷ್ಟು ಪ್ರಯತ್ನ ಪಟ್ಟರು. ಇದಕ್ಕೆ ಅವರ ಮೂವರು ಪುತ್ರಿಯರ ಒತ್ತಡವೂ ಇತ್ತು. ಆದ್ದರಿಂದ ಪ್ರತಿ ಉಪಚುನಾವಣೆ ನಡೆದಾಗಲೂ ವಿಜಯೇಂದ್ರ ಹೆಸರು ಮುಂಚೂಣಿಗೆ ಬರುತ್ತಲೇ ಇತ್ತು. ಉಪಚುನಾವಣೆ ಗೆಲ್ಲಿಸುವ ಹೊಣೆಗಾರಿಕೆಯನ್ನು ವಿಜಯೇಂದ್ರ ಹೆಗಲೇರಿಸಿ ಆ ಯಶಸ್ಸಿನ ಮೂಲಕ ವರಿಷ್ಠರ ಗಮನಸೆಳೆಯುವ ಪ್ರಯತ್ನ ನಡೆಯಿತು. ಅದಾವುದೂ ಫಲಕೊಡಲಿಲ್ಲ. ಕೊನೆಗೆ ಎರಡು ವರ್ಷ ಎರಡು ದಿನ (2019ರ ಜುಲೈ 26ರಿಂದ 2021 ಜುಲೈ 28ರ ತನಕ)ದ ಮುಖ್ಯಮಂತ್ರಿ ಹೊಣೆಗಾರಿಕೆಯನ್ನು ದಿಢೀರ್ ಕೈ ಬಿಟ್ಟರು ಯಡಿಯೂರಪ್ಪ. ಕೆಲವು ದಿನಗಳ ರಾಜಕೀಯ ವಿದ್ಯಮಾನಗಳು ಕುತೂಹಲಕಾರಿಯಾಗಿದ್ದವು. ಯಡಿಯೂರಪ್ಪ ಅವರ ಉತ್ತರಾಧಿಕಾರಿ ಯಾರು ಎಂಬ ವಿಚಾರ ಗರಿಗೆದರಿದ್ದವು. ಕೊನೆಗೆ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದರು.
ಆದರೆ, ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿದ ಬಳಿಕ ಒಂದು ವರ್ಷ ಕಾಲ ಮೌನವಾಗಿದ್ದರು. ಕೊನೆಗೆ ಪಕ್ಷ ತನ್ನನ್ನು ಮೂಲೆಗುಂಪು ಮಾಡುತ್ತಿದೆ ಎಂಬುದು ಅರಿವಾಗುತ್ತಿದ್ದಂತೆ, ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ʻರಾಜಕೀಯ ನಿವೃತ್ತಿʼ ಘೋಷಣೆ ಮಾಡಿದರು. ಶಿಕಾರಿಪುರದಿಂದ ಬಿ.ವೈ.ವಿಜಯೇಂದ್ರ ಸ್ಪರ್ಧಿಸುವುದಾಗಿ ಹೇಳಿದರು. ಇದಾಗಿ ಒಂದೆರಡು ದಿನಕ್ಕೆ ಬಿಎಸ್‌ವೈ ಅವರನ್ನು ದೆಹಲಿಗೆ ಕರೆಯಿಸಿಕೊಂಡ ಅಮಿತ್ ಶಾ ಮಾತುಕತೆ ನಡೆಸಿದರು.
ಅಲ್ಲಿಂದ ಬಂದ ಬಿಎಸ್‌ವೈ ಅವರ ವರಸೆ ಬದಲಾಯಿತು. ರಾಜಕೀಯ ನಿವೃತ್ತಿ ಘೋಷಣೆ ಮಾಡಿಲ್ಲ. ಚುನಾವಣೆಯಿಂದ ದೂರ ಇರುತ್ತೇನೆ. ಪಕ್ಷ ಸಂಘಟನೆ ಮಾಡುತ್ತೇನೆ. ಶೀಘ್ರವೇ ರಾಜ್ಯ ಪ್ರವಾಸ ಶುರುಮಾಡುತ್ತೇನೆ. ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವುದೇ ನನ್ನ ಗುರಿ. ಶಿಕಾರಿಪುರದಲ್ಲಿ ಯಾರನ್ನು ಕಣಕ್ಕೆ ಇಳಿಸಬೇಕು ಎಂಬುದನ್ನು ಪಕ್ಷ ತೀರ್ಮಾನಿಸುತ್ತದೆ ಎಂದು ಹೇಳಿಕೆ ನೀಡಿ ಅಚ್ಚರಿ ಮೂಡಿಸಿದರು.
ಈ ಚುನಾವಣೆ ಸಮೀಪದಲ್ಲಿರುವಾಗ ವರಣಾದಿಂದ ವಿಜಯೇಂದ್ರ ಕಣಕ್ಕೆ ಇಳಿಯುವರೆಂಬ ಸುದ್ದಿ ಹರಿಡಿತು. ಸಿದ್ದರಾಮಯ್ಯ ಅವರಿಗೆ ಎದುರಾಳಿಯಾಗಿ ಗೆಲುವು ಕಷ್ಟ. ಅಲ್ಲದೆ, ಪಕ್ಷದ ಮೇಲಿನ ತಮ್ಮ ಹಿಡಿತ, ಪ್ರಭಾವ ತಗ್ಗಿಸಲು ನಡೆಸುತ್ತಿರುವ ಪ್ರಯತ್ನ ಎಂಬುದನ್ನು ಅರಿತ ಯಡಿಯೂರಪ್ಪ ಅವರು ಶಿಕಾರಿಪುರದಿಂದಲೇ ವಿಜಯೇಂದ್ರ ಸ್ಪರ್ಧೆ ಎಂದು ಮತ್ತೆ ಹೇಳಿದರು. ತನ್ನ ಚುನಾವಣಾ ರಾಜಕಾರಣದ ನಿವೃತ್ತಿ ವಿಜಯೇಂದ್ರ ಅವರ ರಾಜಕೀಯ ಭವಿಷ್ಯಕ್ಕೆ ಬುನಾದಿ ಆಗಬೇಕು ಎಂದು ಯಡಿಯೂರಪ್ಪ ಪ್ರಯತ್ನಿಸುತ್ತಿರುವುದು ಗುಟ್ಟಾಗೇನೂ ಉಳಿದಿಲ್ಲ.
ಮಗನಿಗಾಗಿ ಕ್ಷೇತ್ರ ಬಿಟ್ಟ ಸಿದ್ದರಾಮಯ್ಯ
ಜನತಾ ಪರಿವಾರದಿಂದ ಸಿಡಿದೆದ್ದು ಕಾಂಗ್ರೆಸ್ ಸೇರಿದವರು ಸಿದ್ದರಾಮಯ್ಯ. ಒಕ್ಕಲಿಗರ ಪ್ರಾಬಲ್ಯದ ಜೆಡಿಎಸ್ ಪಕ್ಷದಿಂದ ಹೊರಬಂದು ಅಹಿಂದ ಜಾಗೃತಿ ಮೂಲಕ 2013ರಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದ, ಕಳೆದ ಚುನಾವಣೆಯಲ್ಲಿ ಪುತ್ರ ಯತೀಂದ್ರನನ್ನು ಶಾಸಕನನ್ನಾಗಿ ಮಾಡಬೇಕು ಎಂದು ಸ್ವಕ್ಷೇತ್ರ ವರುಣಾದಲ್ಲಿ ಕಣಕ್ಕೆ ಇಳಿಸಿದರು. ಅಲ್ಲಿ ಯತೀಂದ್ರ ಬಹಳ ಸಲೀಸಾಗಿ ಗೆಲುವು ಕಂಡರು. ಆದರೆ, ಸಿದ್ದರಾಮಯ್ಯ ಅವರು ಕ್ಷೇತ್ರ ಮರುವಿಂಗಡಣೆಗೂ ಮುನ್ನ ತಮ್ಮ ಮೂಲ ಕ್ಷೇತ್ರವಾಗಿದ್ದ ಚಾಮುಂಡೇಶ್ವರಿಯನ್ನು ಆಯ್ಕೆ ಮಾಡಿಕೊಂಡರು. ಆದರೆ ಅಲ್ಲಿ ಗೆಲುವು ಸುಲಭವಲ್ಲ ಎಂದು ಮನವರಿಕೆ ಆದ ಕೂಡಲೇ ಪಕ್ಷದ ವರಿಷ್ಠರ ಜತೆಗಿನ ತಮ್ಮ ಪ್ರಭಾವ ಬಳಸಿಕೊಂಡು ಬಾದಾಮಿ ಟಿಕೆಟ್ ಗಿಟ್ಟಿಸಿಕೊಂಡರು. ಚಾಮುಂಡೇಶ್ವರಿಯಲ್ಲಿ ಸೋತರೆ, ಬಾದಾಮಿಯಲ್ಲಿ ಕಡಿಮೆ ಅಂತರದ ಗೆಲುವು ಕಂಡರು.
ಈ ಸಲದ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಸೋಲಿನ ಭೀತಿಯ ಕಾರಣ ವರುಣಾದಿಂದಲೇ ಸ್ಪರ್ಧಿಸುವ ಇರಾದೆ ವ್ಯಕ್ತಪಡಿಸಿದರು. ಮೊದಲ ಪಟ್ಟಿಯಲ್ಲೇ ಅವರ ಕ್ಷೇತ್ರ ಅಂತಿಮವಾಗಿದೆ. ಈಗ ಎರಡನೇ ಕ್ಷೇತ್ರವಾಗಿ ಕೋಲಾರದ ಹೆಸರು ಕೇಳುತ್ತಿದೆ. ಇದೇ ವೇಳೆ ಯತೀಂದ್ರ ಅವರಿಗೆ ಟಿಕೆಟ್ ಸಿಗುವುದೇ? ಸಿಕ್ಕರೆ ಅವರು ಎಲ್ಲಿಂದ ಸ್ಪರ್ಧಿಸುವರೆಂಬ ಪ್ರಶ್ನೆ ಇದೆ.
ಕೋಲಾರ, ಚಿಕ್ಕಬಳ್ಳಾಪುರ ಸುತ್ತಮುತ್ತ ಸಿದ್ದರಾಮಯ್ಯ ಪರ ಒಲವು ಇದೆ. ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಸ್ಥಾನ ಗೆಲ್ಲಲು ಸಿದ್ದರಾಮಯ್ಯ ಅವರ ಕೋಲಾರ ಸ್ಪರ್ಧೆ ಇಂಬು ನೀಡಬಹುದು ಎಂಬ ಲೆಕ್ಕಾಚಾರ ನಡೆದಿದೆ. ಹೀಗೆ ಎರಡು ಕ್ಷೇತ್ರದಲ್ಲಿ ಅವರು ಸ್ಪರ್ಧಿಸಿ ಗೆದ್ದರೆ, ಆಗ ವರುಣಾದ ಸ್ಥಾನಕ್ಕೆ ರಾಜೀನಾಮೆ ನೀಡಿ ಉಪಚುನಾವಣೆಯಲ್ಲಿ ಯತೀಂದ್ರ ಅವರನ್ನು ಕಣಕ್ಕೆ ಇಳಿಸಿ ಗೆಲ್ಲಿಸುವ ಲೆಕ್ಕಾಚಾರದಲ್ಲಿದ್ದಾರೆ ಸಿದ್ದರಾಮಯ್ಯ.
ನಿಖಿಲ್ ಗೆಲುವಿಗೆ ಕುಮಾರಸ್ವಾಮಿ ತಪಸ್ಸು
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ರಾಜಕೀಯವಾಗಿ ತಮ್ಮ ಭವಿಷ್ಯ ರೂಪಿಸುವಲ್ಲಿ ಎಡವಿದ್ದಾರೆ. ಕುಮಾರಸ್ವಾಮಿ ಅವರ ಅಣ್ಣ ಎಚ್.ಡಿ.ರೇವಣ್ಣ ತನ್ನ ಇಬ್ಬರು ಪುತ್ರರನ್ನು ಯಶಸ್ವಿಯಾಗಿ ರಾಜಕೀಯ ರಂಗಕ್ಕೆ ಕರೆದುಕೊಂಡು ಬಂದಿದ್ದಾರೆ. ಶಾಸಕರಾಗಿರುವ ರೇವಣ್ಣ, ಅವರ ಮಗ ಪ್ರಜ್ವಲ್ ಸಂಸದ, ಅವರ ಮತ್ತೊಬ್ಬ ಮಗ ಸೂರಜ್ ವಿಧಾನ ಪರಿಷತ್ ಸದಸ್ಯ. ಈಗ ಹಾಸನ ಕ್ಷೇತ್ರದ ಟಿಕೆಟ್ ಮೇಲೆ ರೇವಣ್ಣ ಪತ್ನಿ ಭವಾನಿ ಕಣ್ಣಿಟ್ಟಿದ್ದು ಇದಕ್ಕಾಗಿ ದೊಡ್ಡ ಕುಟುಂಬ ಕದನವೇ ನಡೆದಿದೆ. ರಾಮನಗರದಲ್ಲಿ ನಿಖಿಲ್‌ಗೆ ಟಿಕೆಟ್ ಕೊಟ್ಟ ಕಾರಣ, ಹಾಸನದಲ್ಲಿ ಭವಾನಿಗೆ ಟಿಕೆಟ್ ಕೊಡಬೇಕು ಎಂಬುದು ರೇವಣ್ಣ ಕುಟುಂಬದ ವಾದ. ಇದೇನಾದರೂ ಅಂತಿಮವಾದರೆ ರೇವಣ್ಣ ಕುಟುಂಬ ಕಂಪ್ಲೀಟ್ ಆಗಿ ರಾಜಕೀಯ ಪ್ರವೇಶಿಸಿದಂತಾಗುತ್ತದೆ.
ಇದನ್ನು ತಮಗಾದ ಹಿನ್ನಡೆ ಎಂದು ಎಚ್.ಡಿ.ಕುಮಾರಸ್ವಾಮಿ ಕುಟುಂಬ ಭಾವಿಸಿದಂತೆ ಇದೆ. ರಾಮನಗರ ಮತ್ತು ಚನ್ನಪಟ್ಟಣ ತಮ್ಮ ಎರಡು ಕಂಗಳು ಎಂದು ಕುಮಾರಸ್ವಾಮಿ ಆಗಾಗ ಹೇಳುವುದುಂಟು. 2018ರಲ್ಲಿ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆದ್ದಿದ್ದ ಕುಮಾರಸ್ವಾಮಿ, ಬಳಿಕ ರಾಮನಗರ ಕ್ಷೇತ್ರಕ್ಕೆ ರಾಜೀನಾಮೆ ಕೊಟ್ಟಿದ್ದರು. ಅಲ್ಲಿ ತಮ್ಮ ಪತ್ನಿ ಅನಿತಾ ಅವರನ್ನು ಕಣಕ್ಕೆ ಇಳಿಸಿ ಗೆಲ್ಲಿಸಿಕೊಂಡಿದ್ದರು.
ಈ ಸಲ ಪತ್ನಿಯ ಬದಲು ನಿಖಿಲ್ ಅವರನ್ನು ರಾಮನಗರದಲ್ಲಿ ಕಣಕ್ಕೆ ಇಳಿಸಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಕುಮಾರಸ್ವಾಮಿ ಮುಖ್ಯಮಂತ್ರಿ ಆದ ಬಳಿಕ, ಪುತ್ರ ನಿಖಿಲ್ ಅವರನ್ನೂ ಸಿನಿಮಾ ಕ್ಷೇತ್ರದಲ್ಲಿ ಪ್ರವರ್ಧಮಾನಕ್ಕೆ ತರುವ ಪ್ರಯತ್ನ ನಡೆಯಿತು. ಅದಾದ ಬಳಿಕ ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಕಣಕ್ಕೆ ಇಳಿಸಿದ್ದರು. ಆದರೆ ಗೆಲವು ದಕ್ಕಲಿಲ್ಲ. ಇದಕ್ಕೆ ದಾಯಾದಿಗಳೇ ಮೊದಲ ಅಡ್ಡಿ ಎಂಬುದು ಕುಮಾರಸ್ವಾಮಿಗೆ ಮನವರಿಕೆ ಆಯಿತು. ಈಗ ರಾಮನಗರ ಕ್ಷೇತ್ರವನ್ನು ಮಗನಿಗಾಗಿ ಬಿಟ್ಟುಕೊಟ್ಟಿದ್ದಾರೆ ಅನಿತಾ ಕುಮಾರಸ್ವಾಮಿ.
ಹಾಸನದಲ್ಲಿ ಭವಾನಿ ರೇವಣ್ಣ ಅವರಿಗೆ ಟಿಕೆಟ್ ಕೊಡಲು ಸಾಧ್ಯವೇ ಇಲ್ಲ ಎಂಬ ಹಟಕ್ಕೆ ಕುಮಾರಸ್ವಾಮಿ ಬಿದ್ದಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಮಂಡ್ಯ, ತುಮಕೂರಿನಲ್ಲಿ ಕುಟುಂಬ ರಾಜಕಾರಣವೇ ಪಕ್ಷದ ಗೆಲುವಿಗೆ ಮುಳುವಾಗಿತ್ತು. ಇದು ವಿಧಾನಸಭಾ ಚುನಾವಣೆಯಲ್ಲಿ ಹಾಸನ ಮಾತ್ರವಲ್ಲದೆ, ರಾಮನಗರ, ಚನ್ನಪಟ್ಟಣಗಳಲ್ಲೂ ಪರಿಣಾಮ ಬೀರಬಹುದು ಎಂಬ ತರ್ಕದಲ್ಲಿದ್ದಾರೆ ಕುಮಾರಸ್ವಾಮಿ. ಹಾಸನ ಟಿಕೆಟ್ ಭವಾನಿ ರೇವಣ್ಣಗೆ ಕೊಟ್ಟರೆ, ಹಾಸನ ಜಿಲ್ಲೆಯ ಹಿಡಿತ ಕೈ ತಪ್ಪಿಹೋಗಬಹುದು. ನಿಖಿಲ್ ರಾಜಕೀಯ ಭವಿಷ್ಯ ಮಸುಕಾಗಬಹುದು ಎಂಬ ಸ್ಪಷ್ಟತೆಯೊಂದಿಗೆ ಕುಮಾರಸ್ವಾಮಿ ಮುನ್ನಡೆಯುತ್ತಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆಯ ಮತ್ತಷ್ಟು ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
HT ಕನ್ನಡ ವಾಟ್ಸಾಪ್ ಕಮ್ಯುನಿಟಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ