Karnataka Election 2023: ಕರ್ನಾಟಕ ಚುನಾವಣಾ ಕಣದ ಪಂಚ ಪ್ರಮುಖರು
Karnataka Election 2023: ಕರ್ನಾಟಕ ವಿಧಾನಸಭೆ ಚುನಾವಣಾ ಕಣದಲ್ಲಿ ಗಮನ ಸೆಳೆಯುತ್ತಿರುವ ನಾಯಕರ ಪೈಕಿ ಐವರು ಪ್ರಮುಖರು. ಬಿಜೆಪಿಯ ಪ್ರಭಾವಿ ನಾಯಕ ಬಿ.ಎಸ್.ಯಡಿಯೂರಪ್ಪ, ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಪ್ರಮುಖರು.
(1 / 6)
ಕರ್ನಾಟಕ ವಿಧಾನಸಭಾ ಚುನಾವಣೆ 2023ಕ್ಕೆ ದಿನಗಣನೆ ಶುರುವಾಗಿದೆ. ಮೇ 10ರಂದು ಮತದಾನ ನಡೆಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ. ಈಗಾಗಲೇ ಚುನಾವಣಾ ಕಾವು ಏರಿದ್ದು, ಕಣದಲ್ಲಿ ಗಮನಸೆಳೆಯುತ್ತಿರುವ ನಾಯಕರ ಪೈಕಿ ಈ ಐವರೇ ಪ್ರಮುಖರು.
(2 / 6)
ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ (ಕೆಪಿಸಿಸಿ)ಯ ಅಧ್ಯಕ್ಷ. ಬಲಿಷ್ಠ ಪಕ್ಷ ಸಂಘಟಕ. ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ. ಒಕ್ಕಲಿಗರ ಬೆಂಬಲ ಬಹುತೇಕ ಜೆಡಿಎಸ್ ಕಡೆಗಿದ್ದು, ಕಾಂಗ್ರೆಸ್ ಕೂಡ ಹಂಚಿಕೊಂಡಿದೆ. ಇಷ್ಟಾಗ್ಯೂ ಕಾಂಗ್ರೆಸ್‌ನ ಮಟ್ಟಿಗೆ ಡಿ.ಕೆ.ಶಿವಕುಮಾರ್ ಪ್ರಭಾವಿ ಮತ್ತು ಮಾಸ್ ಲೀಡರ್. ಮುಂದಿನ ಮುಖ್ಯಮಂತ್ರಿ ಆಗಬೇಕೆಂಬ ಕನಸು ಹೊಂದಿರುವಂತಹ ಮಹತ್ವಾಕಾಂಕ್ಷಿ. ಆದರೆ, ಹಿಂದೆ ಜೆಡಿಎಸ್‌ನಲ್ಲಿದ್ದು ಬಳಿಕ ಅಹಿಂದ ನಾಯಕರಾಗಿ ಗುರುತಿಸಿಕೊಂಡು ಮುಖ್ಯಮಂತ್ರಿ ಗಾದಿ ಏರಿದ ಸಿದ್ದರಾಮಯ್ಯ ಅವರಿಂದ ಪ್ರಬಲ ಪೈಪೋಟಿ ಎದುರಿಸುತ್ತಿದ್ದಾರೆ.
(3 / 6)
ಜನತಾ ಪರಿವಾರದಿಂದ ಕಾಂಗ್ರೆಸ್ ಪಕ್ಷಕ್ಕೆ ಪಕ್ಷಾಂತರ ಮಾಡಿದವರು. ಮಾಜಿ ಮುಖ್ಯಮಂತ್ರಿ. 2013ರಿಂದ 2018ರ ತನಕ ಪೂರ್ಣ ಅವಧಿಗೆ ಮುಖ್ಯಮಂತ್ರಿ ಆಗಿದ್ದವರು. ಡಿ.ಕೆ.ಶಿವಕುಮಾರ್ ಅವರಿಗೆ ಪೈಪೋಟಿ ನೀಡುತ್ತಿರುವ ಪ್ರಮುಖ ಮಾಸ್ ಲೀಡರ್. ಪಕ್ಷಕ್ಕಿಂತ ತಾನು ಹೆಚ್ಚು ಪ್ರಭಾವಿ ಎಂಬುದನ್ನು ಸಿದ್ದರಾಮೋತ್ಸವದ ಮೂಲಕ ತೋರಿಸಿಕೊಟ್ಟವರು. ಕಾಂಗ್ರೆಸ್ ಪಕ್ಷದ ಮಟ್ಟಿಗೆ ತಳ್ಳಿಹಾಕಲಾಗದ ಪ್ರಭಾವಿ ನಾಯಕ. ಈ ಸಲ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಭರವಸೆ ಹುಟ್ಟಿಸಿರುವವರು.
(4 / 6)
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪುತ್ರ, ರಾಜ್ಯದ ಮಾಜಿ ಮುಖ್ಯಮಂತ್ರಿ. ರಾಜ್ಯದ ಪ್ರಮುಖ, ಅದೇ ರೀತಿ ಏಕೈಕ ರಾಜ್ಯ ಪಕ್ಷ ಜಾತ್ಯತೀತ ಜನತಾ ದಳ (ಜೆಡಿಎಸ್)ದ ನಾಯಕ. 2008ರಲ್ಲಿ ಕಾಂಗ್ರೆಸ್ ಜತೆಗೆ ಮೈತ್ರಿ ಮುರಿದುಕೊಂಡು ಬಿಜೆಪಿ ಜತೆ ಮೈತ್ರಿ ಸರ್ಕಾರ ರಚಿಸಿ ಮುಖ್ಯಮಂತ್ರಿ ಗಾದಿ ಏರಿದವರು. 20 ತಿಂಗಳ ಅಧಿಕಾರ ನಡೆಸಿದವರು. ಅದಾಗಿ 2018ರಲ್ಲಿ ಮತ್ತೆ ಕಾಂಗ್ರೆಸ್ ಪಕ್ಷದ ಜತೆಗೆ ಮೈತ್ರಿ ಮಾಡಿಕೊಂಡು 14 ತಿಂಗಳು ಮುಖ್ಯಮಂತ್ರಿ ಆಗಿದ್ದರು. ಒಕ್ಕಲಿ ಸಮುದಾಯದ ಪ್ರಭಾವಿ ನಾಯಕ. ಈ ಸಲ ಅತಂತ್ರ ಜನಾದೇಶ ಸಿಕ್ಕರೆ ಮುಖ್ಯಮಂತ್ರಿ ಗಾದಿ ಏರಬಹುದೆಂಬ ವಿಶ್ವಾಸ ಹೊಂದಿದವರು
(5 / 6)
ಮಾಜಿ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ ಅವರ ಪುತ್ರ. ಬಸವರಾಜ್ ಬೊಮ್ಮಾಯಿ 2021ರ ಜುಲೈನಲ್ಲಿ ಬಿಎಸ್ ಯಡಿಯೂರಪ್ಪ ಅವರ ಉತ್ತರಾಧಿಕಾರಿಯಾಗಿ ಮುಖ್ಯಮಂತ್ರಿ ಹೊಣೆಗಾರಿಕೆ ಹೊತ್ತುಕೊಂಡವರು. ಭ್ರಷ್ಟಾಚಾರದ ಆರೋಪಗಳಿಂದ ಬೇಸತ್ತ ಬೊಮ್ಮಾಯಿ ಕಳೆದ ಕೆಲವು ತಿಂಗಳುಗಳ ಅವಧಿಯಲ್ಲಿ ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡು ಜನಸ್ನೇಹಿ ಯೋಜನೆಗಳನ್ನು ಜಾರಿಗೊಳಿಸಿದವರು. ರಾಜ್ಯದಲ್ಲಿ ಮೂಡಿದ ಆಡಳಿತ ವಿರೋಧಿ ಅಲೆಯ ತೀವ್ರತೆ ಕಡಿಮೆ ಮಾಡುವುದಕ್ಕಾಗಿ ಮೀಸಲಾತಿ ನೀತಿಯಲ್ಲೂ ಪರಿಷ್ಕರಣೆ ಮಾಡಿ ಗಮನಸೆಳೆದವರು.
(6 / 6)
ಕರ್ನಾಟಕದಲ್ಲಿ ಬಿಜೆಪಿಯ ಮಟ್ಟಿಗೆ ದಶಕಗಳಿಂದ ಏಕಮೇವ ನಾಯಕರಾಗಿ ಕಾಣಿಸಿಕೊಂಡವರು ಬಿ.ಎಸ್.ಯಡಿಯೂರಪ್ಪ. ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದವರು ಎಂಬ ಕೀರ್ತಿಗೆ ಭಾಜನರಾದವರಲ್ಲಿ ಇವರೂ ಒಬ್ಬರು. ಪಕ್ಷವನ್ನು 2008ರಲ್ಲಿ ಮೊದಲ ಸಲ ಅಧಿಕಾರ ಗದ್ದುಗೆಯ ಮೇಲೆ ಕೂರಿಸಿದವರು. ಅಷ್ಟೇ ಅಲ್ಲ, ಬಿಜೆಪಿ ಆಳ್ವಿಕೆಯಲ್ಲಿ ಮೊದಲ ಮುಖ್ಯಮಂತ್ರಿ ಎನಿಸಿಕೊಂಡರು. 2019 ಮತ್ತು 2021ರಲ್ಲೂ ಮುಖ್ಯಮಂತ್ರಿ ಆದರೂ ಪೂರ್ಣ ಅವಧಿ ಇರಲಿಲ್ಲ. ಕರ್ನಾಟಕದ ಮಟ್ಟಿಗೆ ಮಾಸ್ ಲೀಡರ್ ಮತ್ತು ಬಿಜೆಪಿಯ ಬಹಳ ಜನಪ್ರಿಯ ನಾಯಕರು. ಲಿಂಗಾಯಿತರ ಪ್ರಭಾವಿ ನಾಯಕರಾಗಿದ್ದು, ಪಕ್ಷದ ಮೇಲೂ ಹಿಡಿತ ಸಾಧಿಸಿದವರು.
ಇತರ ಗ್ಯಾಲರಿಗಳು