G Parameshwar Profile: ಕೆಪಿಸಿಸಿ ಮಾಜಿ ಅಧ್ಯಕ್ಷ ಜಿ ಪರಮೇಶ್ವರ್ ಕೊರಟಗೆರೆಯಿಂದ ಸ್ಪರ್ಧೆ; ಕಾಂಗ್ರೆಸ್ ಹಿರಿಯ ನಾಯಕನ ಪರಿಚಯ ಹೀಗಿದೆ
May 06, 2023 03:28 PM IST
ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ್
ಡಾ ಜಿ ಪರಮೇಶ್ವರ್ ಕಾಂಗ್ರೆಸ್‌ನಲ್ಲಿ ದಲಿತ ಸಮುದಾಯದ ಪ್ರಭಾವಿ ನಾಯಕರಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷರು, ಡಿಸಿಎಂ ಸೇರಿದಂತೆ ಪಕ್ಷದಲ್ಲಿ ಹಲವು ಹುದ್ದೆಗಳನ್ನು ನಿರ್ವಹಿಸಿದ್ದಾರೆ.
ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ)ಗೆ ಸತತ ಎರಡು ಭಾರಿ ಅಧ್ಯಕ್ಷರಾಗಿದ್ದ ಡಾ ಜಿ ಪರಮೇಶ್ವರ್ (Dr G Parameshwar) ಪ್ರಭಾವಿ ದಲಿತ ನಾಯಕರಾಗಿದ್ದಾರೆ. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲೂ (Assembly Election 2023) ತುಮಕೂರು (Tumakur) ಜಿಲ್ಲೆಯ ಕೊರಟಗೆರೆಯಿಂದ (Koratagere) ಸ್ಪರ್ಧಿಸಿರುವ ಜಿ ಪರಮೇಶ್ವರ್ ಅವರು ಚುನಾವಣಾ ಪ್ರಣಾಳಿಕೆ ಸಮಿತಿಯ ಅಧ್ಯಕ್ಷರು ಕೂಡ ಹೌದು.
ಇವರ ರಾಜಕೀಯ ಹಾಗೂ ಬಾಲ್ಯದ ಜೀವನವನ್ನು ನೋಡುವುದಾದರೆ ಗಂಗಾಧರಯ್ಯ ಪರಮೇಶ್ವರ್ ಅವರು 1951ರ ಆಗಸ್ಟ್ 6 ರಂದು ತುಮಕೂರಿನ ಗೊಲ್ಲಹಳ್ಳಿಯಲ್ಲಿ ಜನಿಸಿದರು. ಇವರ ತಂದೆ ಮಾಜಿ ಎಂಎಲ್‌ಸಿ ಗಂಗಾಧರಯ್ಯ ಹೆಬ್ಬಾಳು ಮರಿಯಪ್ಪ ಹಾಗೂ ತಾಯಿ ಗಂಗಮಾಳಮ್ಮ.
ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಗೊಲ್ಲಹಳ್ಳಿ(ಈಗಿನ ಸಿದ್ದಾರ್ಥ ನಗರ) ಮತ್ತು ತುಮಕೂರಿನ ಹೆಗ್ಗೆರೆಯ ಸರ್ಕಾರಿಯಲ್ಲಿ ಮುಗಿಸುತ್ತಿದ್ದಾರೆ. ಇವರ ತಂದೆ ಗಂಗಾಧರಯ್ಯ ಅವರು 1959ರಲ್ಲಿ ಸ್ಥಾಪಿಸಿದ್ದ ಸಿದ್ದಾರ್ಥ ಶಿಕ್ಷಣ ಸಂಸ್ಥೆಯಲ್ಲಿ ಪ್ರೌಢ ಶಿಕ್ಷಣ, ತುಮಕೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬಿಎಸ್ಸಿ ಆನಂತರ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ವಿಷಯದಲ್ಲಿ ಎಂಎಸ್ಸಿ ಹಾಗೂ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.
ಸಸ್ಯ ಶಾಸ್ತ್ರದಲ್ಲಿ ಆಸ್ಟ್ರೇಲಿಯಾದ ಅಡಿಲೇಡ್ ವಿಶ್ವವಿದ್ಯಾಲಯದ ವೈಟ್ ಕೃಷಿ ಸಂಶೋಧನಾ ಕೇಂದ್ರದಿಂದ ಪಿಎಚ್‌ಡಿ ಪಡೆದಿದ್ದಾರೆ. ತಮ್ಮ ತಂದೆ ಸ್ಥಾಪಿಸಿದ್ದ ಸಿದ್ದಾರ್ಥ ಇನ್‌ಸ್ಟಿಟ್ಯೂಪ್ ಆಫ್ ಟೆಕ್ನಾಲಜಿಯಲ್ಲಿ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿರುವ ಪರಮೇಶ್ವರ್, 1988ರಲ್ಲಿ ಸಿದ್ದಾರ್ಥ ವೈದ್ಯಕೀಯ ಕಾಲೇಜು, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲು ಅವರ ತಂದೆಯ ಜೊತೆ ಕೈಜೋಡಿಸಿದ್ದರು.
ಪರಮೇಶ್ವರ್ ರಾಜಕೀಯ ಪ್ರವೇಶಿಸಿದ್ದು ಹೇಗೆ?
ಸಿದ್ದಾರ್ಥ ವೈದ್ಯಕೀಯ ಕಾಲೇಜು ಉದ್ಘಾಟನೆಗೆ ಪ್ರಧಾನಿ ರಾಜೀವ್ ಗಾಂಧಿ ಅವರಿಗೆ ಆಹ್ವಾನ ನೀಡಲು ಅಂದಿನ ಶಿಕ್ಷಣ ಸಚಿವ ಎಸ್‌ಎಂ ಯಾಹ್ಯ ಅವರೊಂದಿಗೆ ಪರಮೇಶ್ವರ್ ದೆಹಲಿಗೆ ಹೋಗಿದ್ದ ವೇಳೆ ರಾಜೀವ್ ಗಾಂಧಿ ಇವರನ್ನು ರಾಜಕೀಯಕ್ಕೆ ಬರುವಂತೆ ಆಹ್ವಾನ ನೀಡಿದ್ದರಂತೆ.
ಮುಂದಿನ ದಿನಗಳಲ್ಲಿ ಪರಮೇಶ್ವರ್ ಅವರು ಕಾಂಗ್ರೆಸ್ ಸೇರುತ್ತಿದ್ದಂತೆ ಶಿಕ್ಷಣ ಸಚಿವರಾಗಿದ್ದ ಎಸ್‌ಎಂ ಯಾಹ್ಯ ಅವರು ಅಂದಿನ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮೊಹ್ಸಿನಾ ಕಿದ್ವಾಯಿ ಅವರ ಬಳಿಗೆ ಕರೆದುಕೊಂಡು ಹೋಗಿದ್ದಾರೆ. ಆಗ ಇವರನ್ನು ಕೆಪಿಸಿಸಿ ಜಂಟಿ ಕಾರ್ಯದರ್ಶಿಯನ್ನಾಗಿ ಮಾಡಲಾಗಿದೆ. ಅಂದಿನಿಿಂದ ಇಂದಿನ ವರೆಗೆ ಪರಮೇಶ್ವರ್ ಅವರು ಹಲವು ಪ್ರಮುಖ ಹುದ್ದೆಗಳಲ್ಲಿ ಕೆಲಸ ಮಾಡಿರುವ ಅನುಭವ ಇದೆ.
1989ರಲ್ಲಿ ಮಧುಗಿರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪರಮೇಶ್ವರ್ ಮೊದಲ ಯತ್ನದಲ್ಲೇ ಶಾಸಕರಾಗಿ ಆಯ್ಕೆ ಆಗುತ್ತಾರೆ. 1993ರಲ್ಲಿ ಅಂದಿನ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಸಚಿವ ಸಂಪುಟದಲ್ಲಿ ರೇಷ್ಮೆ ಸಚಿವರಾಗಿ ಸೇವೆ ಮಾಡುತ್ತಾರೆ. 1994ರ ಚುನಾವಣೆಯಲ್ಲಿ ಸೋಲು ಕಾಣಬೇಕಾಗುತ್ತದೆ. ಆ ನಂತರ ಅಂದರೆ 1999 ಹಾಗೂ 2004ರಲ್ಲಿ ಅದೇ ಮಧುಗಿರಿಯಲ್ಲಿ ಗೆದ್ದು ಬರುತ್ತಾರೆ.
2008ರಲ್ಲಿ ವಿಧಾನಸಭಾ ಕ್ಷೇತ್ರಗಳ ಪುನರ್‌ವಿಂಗಡಣೆಯ ಬಳಿಕ ಕೊರಟಗೆರೆ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. 2013 ವಿಧಾನಸಭೆ ಚುನಾವಣೆಯಲ್ಲಿ ಪರಮೇಶ್ವರ್ ಕೊರಟಗೆರೆಯಲ್ಲಿ ಸೋಲು ಕಾಣುತ್ತಾರೆ. ಮತ್ತೆ 2018ರಲ್ಲಿ ಗೆದ್ದು ಬಂದಿದ್ದಾರೆ.
ಉನ್ನತ ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ, ವೈದ್ಯಕೀಯ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿರುವ ಪರಮೇಶ್ವರ್ ಅವರು, ವಿಧಾನ ಪರಿಷತ್ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ. 2018ರಲ್ಲಿ ರಚನೆಯಾಗಿದ್ದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದರು. ಕಾಂಗ್ರೆಸ್‌ನಲ್ಲಿ ದಲಿತ ಸಿಎಂ ವಿಚಾರ ಬಂದಾಗ ಇವರ ಹೆಸರು ಸದಾ ಮುಂಚೂಣಿಯಲ್ಲಿ ಇರುತ್ತದೆ.