HD Kumaraswamy Profile: ಎಚ್‌ಡಿ ಕುಮಾರಸ್ವಾಮಿ ಕಿಂಗ್‌ ಆಗ್ತಾರಾ ಅಥವಾ ಕಿಂಗ್‌ ಮೇಕರ್‌ ಆಗ್ತಾರಾ; ಜೆಡಿಎಸ್‌ ನಾಯಕನ ಪರಿಚಯ
ಕನ್ನಡ ಸುದ್ದಿ  /  ಕರ್ನಾಟಕ  /  Hd Kumaraswamy Profile: ಎಚ್‌ಡಿ ಕುಮಾರಸ್ವಾಮಿ ಕಿಂಗ್‌ ಆಗ್ತಾರಾ ಅಥವಾ ಕಿಂಗ್‌ ಮೇಕರ್‌ ಆಗ್ತಾರಾ; ಜೆಡಿಎಸ್‌ ನಾಯಕನ ಪರಿಚಯ

HD Kumaraswamy Profile: ಎಚ್‌ಡಿ ಕುಮಾರಸ್ವಾಮಿ ಕಿಂಗ್‌ ಆಗ್ತಾರಾ ಅಥವಾ ಕಿಂಗ್‌ ಮೇಕರ್‌ ಆಗ್ತಾರಾ; ಜೆಡಿಎಸ್‌ ನಾಯಕನ ಪರಿಚಯ

HD Kumaraswamy Profile: ಚುನಾವಣೆ ಕಣ ರಂಗೇರಿದೆ. ಹೇಗಾದರೂ ಸರಿ 40 ಸೀಟಿಗಿಂತ ಹೆಚ್ಚು ಸ್ಥಾನದಲ್ಲಿ ಪಕ್ಷ ಗೆಲ್ಲಲೇಬೇಕು. ಈ ಸಲ ಮುಖ್ಯಮಂತ್ರಿ ಆಗಲೇಬೇಕೆಂದು ಕೆಲಸ ಮಾಡುತ್ತಿದ್ದಾರೆ ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ. ಅವರು ಈ ಸಲ ಕಿಂಗ್‌ ಆಗ್ತಾರಾ ಅಥವಾ ಕಿಂಗ್‌ ಮೇಕರ್‌ ಆಗ್ತಾರಾ ಎಂಬುದು ಸದ್ಯದ ಪ್ರಶ್ನೆ. ಈ ಸನ್ನಿವೇಶದಲ್ಲಿ ಅವರ ಕಿರುಪರಿಚಯ ಹೀಗಿದೆ.

ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ (ಫೋಟೋ-ಫೈಲ್)
ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ (ಫೋಟೋ-ಫೈಲ್)

ಈ ಸಲ ನಾನೇ ಮುಖ್ಯಮಂತ್ರಿ. ಉಳಿದವರಿಗೆ ದೈವಬಲವಿಲ್ಲ. ಸಮೀಕ್ಷೆಗಳು ನಿಜವಾಗಲ್ಲ ಎಂದು ಹೇಳುತ್ತಲೇ ರಾಜ್ಯಾದ್ಯಂತ ಪ್ರವಾಸ ಮಾಡುತ್ತ ವರ್ಷದ ಹಿಂದೆಯೇ ಪ್ರಚಾರ ಆರಂಭಿಸಿದವರು ಜೆಡಿಎಸ್‌ ನಾಯಕ, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ. ಆಪ್ತರು, ಅಭಿಮಾನಿಗಳ ಬಳಗದಲ್ಲಿ ʻಕುಮಾರಣ್ಣʼ ಎಂದೇ ಜನಪ್ರಿಯರು.

ರಾಜ್ಯದ ಚುನಾವಣಾ ಕಣದಲ್ಲಿ ಜನಾಭಿಪ್ರಾಯದ ಪ್ರಕಾರ ಪ್ರಭಾವಿ ಪಂಚ ನಾಯಕರ ಪಟ್ಟಿಯಲ್ಲಿ ಕುಮಾರಸ್ವಾಮಿ ಕೂಡ ಇದ್ದಾರೆ. ಹೆಚ್‌ಡಿಕೆ ಎಂಬ ಮೊದಲಕ್ಷರಗಳಿಂದಲೂ ಕರೆಯಲ್ಪಡುವ ಕುಮಾರಸ್ವಾಮಿ, ಜೆಡಿಎಸ್‌ ಅನ್ನು ಮತ್ತೆ ಅಧಿಕಾರದ ಗದ್ದುಗೇರಿಸುವ ಕೆಲಸದಲ್ಲಿ ಹುಮ್ಮಸ್ಸಿನಿಂದ ತೊಡಗಿಸಿಕೊಂಡಿದ್ದಾರೆ.

ಎಚ್‌ಡಿ ಕುಮಾರಸ್ವಾಮಿ, 1998ರಲ್ಲಿ ಕನಕಪುರ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿ ವಿಫಲರಾಗಿದ್ದರು. 1999ರಲ್ಲಿ ಅಂದಿನ ಸಾತನೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. 2004ರಲ್ಲಿ ರಾಮನಗರ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿ ಪ್ರಥಮ ಬಾರಿಗೆ ಶಾಸಕರಾದರು. ಲೋಕಸಭೆಗೆ ಮೂರು ಸಲ, ವಿಧಾನಸಭೆಗೆ 7 ಸಲ ಸ್ಪರ್ಧಿಸಿದ್ದರು. ಈ ಫೈಕಿ ಲೋಕಸಭೆಗೆ ಒಮ್ಮೆ, ವಿಧಾನಸಭೆಗೆ 6 ಸಲ ಆಯ್ಕೆಯಾದರು.

ದೇವೇಗೌಡರ ಒಪ್ಪಿಗೆಯಿಲ್ಲದೆ ಬಿಜೆಪಿಯೊಂದಿಗೆ ಮೈತ್ರಿ ಸರ್ಕಾರ ರಚಿಸಿದ ಎಚ್‌ಡಿಕೆ 2006 ರಿಂದ 2007 ರವರೆಗೆ ಮೊದಲ ಬಾರಿಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. ಅದಕ್ಕೂ ಮೊದಲು ಕಾಂಗ್ರೆಸ್‌ ಜತೆಗೆ ಸೇರಿ ಮೈತ್ರಿ ಸರ್ಕಾರದ ಭಾಗವಾಗಿದ್ದರು. 2018ರ ಕರ್ನಾಟಕ ರಾಜ್ಯ ಚುನಾವಣೆಯಲ್ಲಿ ಎಚ್‌ಡಿ ಕುಮಾರಸ್ವಾಮಿ ಜೆಡಿಎಸ್‌ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದರು. ಅತಂತ್ರ ಜನಾದೇಶ ಬಂದ ಕಾರಣ, ಕಾಂಗ್ರೆಸ್‌ ಜತೆ ಸೇರಿ ಸರ್ಕಾರ ರಚಿಸಿದ ಎಚ್‌ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. 2019ರ ಮಧ್ಯಭಾಗದಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷದ 12ಕ್ಕೂ ಹೆಚ್ಚು ಶಾಸಕರು ರಾಜೀನಾಮೆ ನೀಡಿದ್ದರ ಫಲವಾಗಿ ಸರ್ಕಾರ ಪತನವಾಯಿತು. ಮುಖ್ಯಮಂತ್ರಿ ಪದವಿಯೂ ಕುಮಾರಸ್ವಾಮಿಯವರ ಕೈತಪ್ಪಿತು.

ದಿವಂಗತ ಪ್ರಧಾನಿ ಇಂದಿರಾಗಾಂಧಿ ಆರಂಭಿಸಿದ ಜನತಾದರ್ಶನ ಕಾರ್ಯಕ್ರಮ ಜನಪ್ರಿಯತೆ ಗಳಿಸಿದ್ದು ಎಚ್‌ಡಿ ಕುಮಾರಸ್ವಾಮಿ ಅವರ ಮುಖ್ಯಮಂತ್ರಿ ಅವಧಿಯಲ್ಲೇ. ಜನರು ಮೊದಲು ತಮ್ಮ ಸಮಸ್ಯೆಗಳನ್ನು ಸಿಎಂ ಬಳಿ ಹೇಳಿಕೊಳ್ಳುವುದು ಸವಾಲಾಗಿ ಕಂಡಿತು. ಜನತಾ ದರ್ಶನದ ಮೂಲಕ ಕರ್ನಾಟಕದ ಜನರು ಅಧಿಕಾರದಲ್ಲಿರುವವರಿಗೆ ತಮ್ಮ ಅಹವಾಲುಗಳನ್ನು ಹೇಳಲು ವೇದಿಕೆ ಕಲ್ಪಿಸಿದರು. ಸಿಎಂ ಭೇಟಿ ಮಾಡಲು ಗ್ರಾಮಾಂತರ ಪ್ರದೇಶದಲ್ಲಿ ವಾಸಿಸುವ ಜನರು ಬೆಂಗಳೂರಿಗೆ ತೆರಳುವುದು ಕಷ್ಟಕರವಾದ ಕಾರಣ, ನಂತರ ತಾವೇ ಗ್ರಾಮಕ್ಕೆ ಸ್ಥಳಾಂತರಗೊಂಡರು. ಹಳ್ಳಿಯಲ್ಲಿ ಉಳಿದುಕೊಳ್ಳುವ ಮೂಲಕ ವ್ಯಕ್ತಿಗಳನ್ನು ಅವರ ಮನೆಗಳಿಗೆ ಭೇಟಿ ಮಾಡುವ ʻಗ್ರಾಮವಾಸ್ತವ್ಯʼದ ಪರಿಕಲ್ಪನೆಯನ್ನು ಆಚರಣೆಗೆ ತಂದರು.

ಸಿನಿಮಾ ಮತ್ತು ಟೆಲಿವಿಷನ್‌ ರಂಗದಲ್ಲಿ ಕುಮಾರಸ್ವಾಮಿ...

ಶಿಕ್ಷಣದ ಬಳಿಕ ಸಿನಿಮಾ ವಿತರಣೆಯನ್ನು ಕಾಯಕವಾಗಿ ಸ್ವೀಕರಿಸಿದರು. ಕನ್ನಡ ಚಲನಚಿತ್ರ ವಿತರಣೆಯಿಂದ ಬಂದ ಲಾಭವನ್ನು ಬಳಸಿಕೊಂಡು ಚನ್ನಾಂಬಿಕಾ ಫಿಲಮ್ಸ್‌ ಎಂಬ ಸ್ವಂತ ಸಿನಿಮಾ ನಿರ್ಮಾಣ ಸಂಸ್ಥೆಯನ್ನು ಶುರುಮಾಡಿದರು. ಚನ್ನಾಂಬಿಕಾ ಎಂಬುದು ಕುಮಾರಸ್ವಾಮಿ ಅವರ ತಾಯಿಯ ಹೆಸರು. ಚನ್ನಾಂಬಿಕಾ ಫಿಲಮ್ಸ್‌ ಬ್ಯಾನರ್‌ನಲ್ಲಿ ಹಲವು ಸಿನಿಮಾಗಳನ್ನು ಅವರು ನಿರ್ಮಿಸಿದ್ದಾರೆ. ಆ ಪೈಕಿ ಚಂದ್ರಚಕೋರಿ ಸೂಪರ್‌ ಹಿಟ್‌ ಆಗಿದ್ದು, ಥಿಯೆಟರ್‌ಗಳಲ್ಲಿ 365 ದಿನ ಪ್ರದರ್ಶನಕ್ಕೆ ಒಳಗಾದ ದಾಖಲೆ ಇದೆ. ಚನ್ನಾಂಬಿಕಾ ಫಿಲಮ್ಸ್‌ ನಿರ್ಮಾಣದ ಚೊಚ್ಚಲ ಸಿನಿಮಾ ಎಸ್‌.ನಾರಾಯಣ ನಿರ್ದೇಶನದ ಸೂರ್ಯ ವಂಶ.

ಇನ್ನು 2016ರಲ್ಲಿ ಕುಮಾರಸ್ವಾ,ಮಿಯವರ ಪುತ್ರ ನಿಖಿಲ್‌ ನಾಯಕನಟನಾಗಿ ಅಭಿನಯಿಸಿದ ಜಾಗ್ವಾರ್‌ ಸಿನಿಮಾವನ್ನೂ ಚನ್ನಾಂಬಿಕಾ ಫಿಲಮ್ಸ್‌ ನಿರ್ಮಿಸಿದೆ. ಇದಾಗಿ 2019ರಲ್ಲಿ ನಿಖಿಲ್‌ನ ಎರಡನೇ ಸಿನಿಮಾ ಸೀತಾರಾಮ ಕಲ್ಯಾಣ ನಿರ್ಮಾಣವಾಗಿ ಪ್ರದರ್ಶನಗೊಂಡಿತ್ತು.

ಕುಮಾರಸ್ವಾಮಿ ಅವರು ರಾಜ್ಯದ ಸುದ್ದಿ ಮಾಧ್ಯಮ ರಂಗದಲ್ಲೂ ಕೈಯಾಡಿಸಿದ್ದಾರೆ. 2007ರ ಸೆಪ್ಟೆಂಬರ್‌ನಲ್ಲಿ ಕನ್ನಡ ಟೆಲಿವಿಷನ್‌ ಚಾನೆಲ್‌ ಕಸೂರಿಯನ್ನು ಆರಂಭಿಸಿದರು. ಇದರ ಮಾಲೀಕತ್ವ ಕುಮಾರಸ್ವಾಮಿ ಪತ್ನಿ ಅನಿತಾ ಅವರದ್ದಾಗಿತ್ತು. ಕಸ್ತೂರಿ ಮನರಂಜನೆ ಚಾನೆಲ್‌ ಜತೆಗೆ, ಸುದ್ದಿವಾಹಿನಿಯನ್ನೂ ಆರಂಭಿಸಿದ್ದರು. ಸುದ್ದಿವಾಹಿನಿಯು ಕೆಲವು ವರ್ಷ ನಡೆಯಿತು. ಈಗ ಈ ಚಾನೆಲ್‌ ಚಾಲನೆಯಲ್ಲಿ ಇಲ್ಲ.

ಕುಮಾರಸ್ವಾಮಿಯವರ ವೈಯಕ್ತಿಕ ಬದುಕು...

ಎಚ್‌ಡಿ ಕುಮಾರಸ್ವಾಮಿ ಅವರು ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡರ ಪುತ್ರ. ಅವರ ಸಹೋದರ ಎಚ್.ಡಿ.ರೇವಣ್ಣ ಮಾಜಿ ಸಚಿವ ಹಾಗೂ ಹೊಳೆನರಸೀಪುರದ ಶಾಸಕ. ಕುಮಾರಸ್ವಾಮಿ ಅವರ ಪತ್ನಿ ಮತ್ತು ಮಗ ಇಬ್ಬರೂ ಕೂಡ ರಾಜಕಾರಣಿಗಳು.

ಎಚ್ ಡಿ ಕುಮಾರಸ್ವಾಮಿ 1959ರ ಡಿಸೆಂಬರ್ 16 ರಂದು ಹಾಸನ ಜಿಲ್ಲೆಯ ಹರದನಹಳ್ಳಿ ಗ್ರಾಮದಲ್ಲಿ ಜನಿಸಿದರು. ಅವರು ಬೆಂಗಳೂರಿನ ಜಯನಗರದ ನ್ಯಾಷನಲ್ ಕಾಲೇಜಿನಲ್ಲಿ ತಮ್ಮ ಬಿಎಸ್ಸಿ ಮುಗಿಸಿದರು. 1986 ರಲ್ಲಿ ಅನಿತಾ ಅವರನ್ನು ಕುಮಾರಸ್ವಾಮಿ ವಿವಾಹವಾದರು. ಈ ದಾಂಪತ್ಯದಲ್ಲಿ ಅವರಿಗೆ ಒಬ್ಬ ಪುತ್ರ - ನಿಖಿಲ್‌. ಈತ ಈಗ ರಾಮನಗರ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿದ್ದಾರೆ.

ಇಪ್ಪತ್ತು ವರ್ಷಗಳ ಬಳಿಕ 2006ರಲ್ಲಿ ಕುಮಾರಸ್ವಾಮಿ ಮತ್ತೆ ಸಿನಿಮಾ ನಟಿ ರಾಧಿಕಾ ಅವರನ್ನು ವಿವಾಹವಾದರು. 2010ರ ನವೆಂಬರ್‌ನಲ್ಲಿ ರಾಧಿಕಾ ತನ್ನ ವಿವಾಹ ಕುಮಾರಸ್ವಾಮಿ ಅವರೊಂದಿಗೆ ಆಗಿರುವುದನ್ನು ಬಹಿರಂಗಪಡಿಸಿದರು. ಈ ದಾಂಪತ್ಯದಲ್ಲಿ ಅವರಿಗೆ ಶಮಿಕಾ ಎಂಬ ಮಗಳಿದ್ದಾಳೆ. ಕುಮಾರಸ್ವಾಮಿ ಕೂಡ ಇದನ್ನು ದೃಢೀಕರಿಸಿದ್ದಾರೆ.

ವಿವಾದಗಳು...

ಹಿಂದು ವಿವಾಹ ಕಾಯ್ದೆ ಮೀರಿ ಕುಮಾರಸ್ವಾಮಿ ಎರಡು ಮದುವೆ ಆಗಿದ್ದಾರೆ ಎಂದು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಾಗಿತ್ತು. ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠ ಈ ಪ್ರಕರಣದಲ್ಲಿ ಸಾಕ್ಷ್ಯದ ಕೊರತೆ ಕಾರಣ ದಾವೆಯನ್ನು ವಜಾಗೊಳಿಸಿತ್ತು.

ಜಂತಕಲ್‌ ಗಣಿಹಗರಣದಲ್ಲಿ ಕುಮಾರಸ್ವಾಮಿ ಮತ್ತು ಅವರ ಪತ್ನಿ ಅನಿತಾ ಹೆಸರು ಕೇಳಬಂದಿತ್ತು. ನಿಯಮ ಮೀರಿ ಗಣಿಗಾರಿಕೆಗೆ ಅನುಮತಿ ಕೊಟ್ಟ ಆರೋಪ ಅವರ ಮೇಲಿತ್ತು.ಇದಲ್ಲದೆ, ವಿಶ್ವಭಾರತಿ ಹೌಸ್‌ ಬಿಲ್ಡಿಂಗ್‌ ಕೋಆಪರೇಟಿವ್‌ ಸೊಸೈಟಿಗೆ 80 ಎಕರೆ ಜಮೀನು ಹಂಚಿಕೆಯ ವಿಚಾರದಲ್ಲಿ 2006ರಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಅಧಿಕಾರ ದುರ್ಬಳಕೆ ಮಾಡಿದ ಆರೋಪವೂ ಇತ್ತು.ಇದಲ್ಲದೆ ಕೆಲವು ವಿವಾದಾತ್ಮಕ ಹೇಳಿಕೆಗಳಿಂದಾಗಿಯೂ ಅವರು ಸುದ್ದಿಯಲ್ಲಿದ್ದರು.

Whats_app_banner