Ration Card Conversion: ನಿಮ್ಮ ಬಿಪಿಎಲ್ ಕಾರ್ಡ್ ಎಪಿಎಲ್‌ಗೆ ಬದಲಾಗಿದೆಯೇ, ಏನೆಲ್ಲಾ ಸೌಲಭ್ಯಗಳು ನಿಮಗೆ ಸಿಗುವುದಿಲ್ಲ
Nov 20, 2024 04:46 PM IST
ಕರ್ನಾಟಕದಲ್ಲಿ ಪಡಿತರ ಕಾರ್ಡ್ ಅನ್ನು ಬಿಪಿಎಲ್‌ನಿಂದ ಎಪಿಎಲ್‌ಗೆ ಅನರ್ಹರನ್ನು ಬದಲಿಸುವ ಪ್ರಕ್ರಿಯೆ ಜೋರಾಗಿದೆ.
- ಕರ್ನಾಟಕದಲ್ಲಿ ಪಡಿತರ ಕಾರ್ಡ್‌ಗಳ ಬದಲಾವಣೆ ಚಟುವಟಿಕೆ ಬಿರುಸಾಗಿದೆ. ಬಿಪಿಎಲ್ ಕಾರ್ಡ್ ಅನ್ನು ಎಪಿಎಲ್ ಕಾರ್ಡ್ ಗೆ ಬದಲಾಯಿಸಲಾಗುತ್ತಿದೆ. ಇದರಿಂದ ಬಿಪಿಎಲ್ ಕಾರ್ಡ್ ದಾರರಿಗೆ ಸಿಗುತ್ತಿದ್ದ ಹಲವಾರು ಸೌಲಭ್ಯಗಳು ಬಂದ್ ಆಗಲಿವೆ.
ಕರ್ನಾಟಕದಲ್ಲಿ ಸದ್ದಿಲ್ಲದೇ ಪಡಿತರ ಕಾರ್ಡ್‌ಗಳ ಬದಲಾವಣೆ ಯಜ್ಞ ನಡೆದಿದೆ. ಅಂದರೆ ಬಡತನ ರೇಖೆಗಿಂತ ಕೆಳಗಡೆ ಇರುವವರಿಗೆ ನೀಡುವ ಬಿಪಿಎಲ್ ಕಾರ್ಡ್‌ಗಳನ್ನು ಬಡತನ ರೇಖೆಗಿಂತ ಮೇಲೆ ಇರುವವರಿಗೆ ನೀಡುವ ಎಪಿಎಲ್ ಕಾರ್ಡ್‌ಗೆ ಬದಲಾಯಿಸಲಾಗುತ್ತದೆ. ಕರ್ನಾಟಕದಲ್ಲಿ ಕೆಲ ವರ್ಷಗಳಿಂದ ಉಳ್ಳವರಿಗೂ ಬಿಪಿಎಲ್ ಕಾರ್ಡ್ ಮಾಡಿಕೊಡಲಾಗಿದೆ. ಈಗ ಗ್ಯಾರಂಟಿ ಯೋಜನೆ ಜಾರಿಗೊಂಡ ನಂತರ ಬಿಪಿಎಲ್ ಕಾರ್ಡ್ ಹೆಸರಿನಲ್ಲಿ ಸೌಲಭ್ಯ ದುರ್ಬಳಕೆ ಮಾಡಿಕೊಳ್ಳುವವರ ಪ್ರಮಾಣ ಅಧಿಕವಾಗುತ್ತಿರುವುದರಿಂದ ಇದಕ್ಕೆ ಬ್ರೇಕ್ ಹಾಕಲು ಕರ್ನಾಟಕ ಸರ್ಕಾರದ ಆಹಾರ ಇಲಾಖೆಯೇ ಅನರ್ಹ ಬಿಪಿಎಲ್ ಕಾರ್ಡ್ ಅನ್ನು ಎಪಿಎಲ್ ಕಾರ್ಡ್‌ಗೆ ಬದಲಿಸುವ ಚಟುವಟಿಕೆ ಬಿರುಸುಗೊಳಿಸಿದೆ. ಈಗಾಗಲೇ ಒಂದು ಲಕ್ಷಕ್ಕೂ ಅಧಿಕ ಕಾರ್ಡ್‌ಗಳು ಬಿಪಿಎಲ್‌ನಿಂದ ಎಪಿಎಲ್‌ಗೆ ಬದಲಾಗಿವೆ. ಇನ್ನೂ ಕೆಲವು ಕಾರ್ಡ್‌ಗಳ ಬದಲಾವಣೆಯೂ ಹಂತ ಹಂತವಾಗಿ ಆಗಬಹುದು ಎನ್ನುವ ಚರ್ಚೆಗಳು ನಡೆದಿವೆ. ಇದರ ನಡುವೆಯೇ ಬಿಪಿಎಲ್ ಕಾರ್ಡ್ ಬದಲಾವಣೆಯಾದರೆ ಸಹಜವಾಗಿಯೇ ಸರ್ಕಾರದಿಂದ ಸಿಗುವ ಹಲವಾರು ಸೌಲಭ್ಯಗಳು ಕಡಿತಗೊಳ್ಳಲಿವೆ. ಭಾಗ್ಯ ಲಕ್ಷ್ಮಿ ಸಹಿತ ಇತರೆ ಯೋಜನೆಗಳ ಉಪಯೋಗ ಪಡೆದವರಿಗೂ ಕಾರ್ಡ್ ರದ್ದತಿಯಿಂದ ಹೊಡೆತ ಬೀಳಲಿದೆ.
ಬಿಪಿಎಲ್ ಹಾಗೂ ಅಂತ್ಯೋದ್ಯಯ ಕಾರ್ಡ್ ಪಡೆಯಲು ರಾಜ್ಯ ಸರ್ಕಾರವು ನಿಗದಿತ ಮಾನದಂಡಗಳನ್ನು ರೂಪಿಸಿದೆ. ಮುಖ್ಯವಾಗಿ ಆದಾಯ ತೆರಿಗೆ ಪಾವತಿಸುವುದಾಗಿ ಮಾಹಿತಿ ನೀಡಿರುವವರೂ ಸೇರಿದಂತೆ ಸರ್ಕಾರವೇ ರೂಪಿಸಿರುವ ಮಾನದಂಡಗಳನ್ನು ಉಲ್ಲಂಘಿಸಿದ್ದರೆ ಅಂತಹವರ ಕಾರ್ಡ್‌ಗಳನ್ನು ಪತ್ತೆ ಮಾಡಿ ಅನರ್ಹ ಎಂದು ಪರಿಗಣಿಸಿ ಆಹಾರ ಇಲಾಖೆ ಅಧಿಕಾರಿಗಳು ರದ್ದು ಮಾಡುತ್ತಿದ್ದಾರೆ. ಈ ತಿಂಗಳಿನಿಂದ ಹಲವರಿಗೆ ಕಾರ್ಡ್ ಬದಲಾವಣೆಯಾಗಿ ಪಡಿತರವೂ ಸಿಕ್ಕಿಲ್ಲ.
ಬಿಪಿಎಲ್ ಕಾರ್ಡ್ ರದ್ದು ಅಥವಾ ಅನರ್ಹವಾದರೆ ಮುಂದೇನು?
ಕರ್ನಾಟಕದಲ್ಲಿ ಅನರ್ಹ ರೇಷನ್ ಕಾರ್ಡ್‌ಗಳನ್ನು ರದ್ದು ಮಾಡಲು ರಾಜ್ಯ ಸರ್ಕಾರ ಕಠಿಣ ಕ್ರಮಕೈಗೊಂಡಿದೆ. ಈಗಾಗಲೇ ಹಲವು ಜಿಲ್ಲೆಗಳಲ್ಲಿ ಲಕ್ಷಾಂತರ ಬಿಪಿಎಲ್ ಕಾರ್ಡ್‌ಗಳನ್ನು ಪತ್ತೆ ಮಾಡಿ ರದ್ದು ಮಾಡಲಾಗುತ್ತಿದೆ. ಈ ಬೆನ್ನಲ್ಲೆ ನಮ್ಮ ಮನೆಗಳ ಬಿಪಿಎಲ್ ಕಾರ್ಡ್ ಅರ್ಹವೋ ಅಥವಾ ಅನರ್ಹವೋ ಎಂಬ ಚರ್ಚೆ ಜೋರಾಗಿದೆ. ಕಾರ್ಡ್ ಬದಲಾಗಿದೆ ಎನ್ನುವುದು ನಿಮಗೆ ಪಡಿತರ ಸಿಗುವ ಮೇಲೆಗೆ ತಿಳಿಯಲಿದೆ. ಪಡಿತರ ಅಂಗಡಿಗೆ ಹೋಗಿ ಈ ತಿಂಗಳ ಪಡಿತರವನ್ನು ಕೇಳಿದಾಗ ನಿರಾಕರಿಸಿದರೆ ಕಾರ್ಡ್ ಬದಲಾಗಿದೆ ಎನ್ನುವುದು ಮೊದಲ ಹಂತ. ಇದರಿಂದ ನಿಮಗೆ ಅಕ್ಕಿ. ರಾಗಿ ಹಾಗೂ ಇತರೆ ಪಡಿತರ, ರಾಜ್ಯ ಸರ್ಕಾರ ನೀಡುವ 170 ರೂ.ಕೂಡ ಸಿಗುವುದಿಲ್ಲ.
ಇದಲ್ಲದೇ ಆರೋಗ್ಯ ಇಲಾಖೆಯಡಿ ಆಯುಷ್ಮಾನ್ ಸಹಿತ ಇತರೆ ಸೌಲಭ್ಯಗಳನ್ನು ಬಿಪಿಎಲ್ ಕಾರ್ಡ್‌ನೊಂದಿಗೆ ಪಡೆದಿದ್ದರೆ ಅದೂ ರದ್ದಾಗಬಹುದು. ಇದೇ ರೀತಿ ಬಿಪಿಎಲ್ ಕಾರ್ಡ್ ಬಳಸಿ ಸರ್ಕಾರದ ಇತರೆ ಸೌಲಭ್ಯ ಪಡೆಯುತ್ತಿದ್ದರೆ ಅದೂ ಕೂಡ ಸೃಗಿತಗೊಳ್ಳಲಿದೆ ಎನ್ನುವುದು ಅಧಿಕಾರಿಗಳ ವಿವರಣೆ.
ದಂಡವೂ ಇದೆ ಹುಷಾರ್
ಅನರ್ಹ ಬಿಪಿಎಲ್ ಕಾರ್ಡ್‌ಗಳನ್ನು ಹೊಂದಿರುವವರು ಅನ್ನಭಾಗ್ಯ ಗ್ಯಾರಂಟಿ ಯೋಜನೆಯಡಿ ಅಕ್ಕಿಯನ್ನು ಪಡೆದುಕೊಂಡಿದ್ದದ್ದರೆ ಅವರಿಗೆ ದಂಡ ಹಾಕಲಾಗುತ್ತದೆ. ಪ್ರತಿ ಕೆಜಿ ಅಕ್ಕಿಗೆ 33 ರೂಪಾಯಿಗಳಂತೆ ದಂಡ ವಿಧಿಸಲಾಗುತ್ತದೆ. ದಂಡ ಪಾವತಿಗೆ ನಿರಾಕರಿಸಿದರೆ ಕಾನೂನು ಕ್ರಮಕ್ಕೆ ಮುಂದಾಗಲಾಗುತ್ತದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಕ್ರಮವಾಗಿ ಬಿಪಿಎಲ್ ಕಾರ್ಡುಗಳನ್ನು ಪಡೆದಿರುವವರಿಗೆ ಅಥವಾ ಅನರ್ಹರಿಗೆ ಕಾರ್ಡ್‌ಗಳನ್ನು ಹಿಂದಿರುಗಿಸಲು ಅವಕಾಶ ನೀಡಲಾಗಿದೆ. ಕಾರ್ಡ್ ದಾರರು ಸಮೀಪದ ಆಹಾರ ಇಲಾಖೆ ಕಚೇರಿ ಅಥವಾ ತಹಶೀಲ್ದಾರ್ ಕಚೇರಿನಿ ನೀಡಿ ಅಲ್ಲಿ ಕಾರ್ಡ್ ರದ್ದು ಮಾಡಿಸಿಕೊಳ್ಳಬಹುದು.
ಆಹಾರ ಇಲಾಖೆ ಅಧಿಕಾರಿಗಳು ಬಿಪಿಎಲ್ ಕಾರ್ಡ್ ರದ್ದು ಮಾಡಿದರೆ ಆ ಕುಟುಂಬಕ್ಕೆ ಎಪಿಎಲ್ ಯೋಜನೆಯಡಿ ಕಾರ್ಡ್ ನೀಡಲು ಅಗತ್ಯ ಕ್ರಮಕೈಗೊಳ್ಳುತ್ತಾರೆ. ಈ ಬಗ್ಗೆ ಆಹಾರ ಇಲಾಖೆ ಸಚಿವರು ಮಾಹಿತಿ ನೀಡಿದ್ದಾರೆ. ರೇಷನ್ ಕಾರ್ಡ್‌ಗಳನ್ನು ಪರಿಷ್ಕರಣೆ ಮಾಡಿದಾಗ ಬಿಪಿಎಲ್ ಅರ್ಹರು ಅಲ್ಲದೇ ಇರೋರನ್ನು ಎಪಿಎಲ್ ಮಾಡಿದ್ದೇವೆ. ಎಪಿಎಲ್ಗೆ ಅರ್ಜಿ ಹಾಕಿದವರನ್ನು ರದ್ದು ಮಾಡುವುದಿಲ್ಲ ಎನ್ನುವುದು ಸಚಿವರ ವಿವರಣೆ.
ಬಿಪಿಎಲ್ ಕಾರ್ಡ್ ಅನರ್ಹತೆಗೆ ಮಾನದಂಡ ಏನು
- ಕುಟುಂಬದಲ್ಲಿ ಯಾರಾದರು ಸರ್ಕಾರಿ ನೌಕರರು ಇದ್ದರೆ ಅನರ್ಹ.
- ಸಕಾರದಿಂದ ಅನುದಾನವನ್ನು ಪಡೆಯುತ್ತಿರುವ ಸಂಸ್ಥೆಗಳು ಅಥವಾ ಸರ್ಕಾರಿ ಪ್ರಾಯೋಜಿತ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು/ಮಂಡಳಿಗಳು/ನಿಗಮಗಳು/ಸ್ವಾಯತ್ತ ಸಂಸ್ಥೆಗಳು ನೌಕರರು ಇದ್ದರೆ ಅವಕಾಶವಿಲ್ಲ.
- ಆದಾಯ ತೆರಿಗೆ/ಸೇವಾ ತೆರಿಗೆ/ವ್ಯಾಟ್/ವೃತ್ತಿ ತೆರಿಗೆ ಪಾವತಿ ಮಾಡುತ್ತಿದ್ದರೂ ರದ್ದು
- ಗ್ರಾಮೀಣ ಪ್ರದೇಶಗಳಲ್ಲಿ 3 ಹೆಕ್ಟೇರ್ ಒಣಭೂಮಿ ಅಥವಾ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು ಅನರ್ಹ.
- ನಗರ ಪ್ರದೇಶಗಳಲ್ಲಿ 1000 ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳಿಗೆ ಅವಕಾಶವಿಲ್ಲ.
- ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ ಒಂದು ವಾಣಿಜ್ಯ ವಾಹನವನ್ನು ಅಂದರೆ ಟ್ರಾಕ್ಟರ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ ಇತ್ಯಾದಿಗಳನ್ನು ಹೊಂದಿದ ಕುಟುಂಬವನ್ನು ಹೊರತುಪಡಿಸಿ ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುವ ಎಲ್ಲಾ ಕುಟುಂಬಗಳು ಅನರ್ಹವಾಗಲಿವೆ.
- ಕುಟುಂಬದ ವಾರ್ಷಿಕ ಆದಾಯವು 1.20 ಲಕ್ಷ ರೂಪಾಯಿಗಳಿಗಿಂತಲೂ ಹೆಚ್ಚು ಇರುವ ಕುಟುಂಬಗಳು ಬಿಪಿಎಲ್ ಕಾರ್ಡ್ ಪಡೆಯಲು ಆಗೋಲ್ಲ.