ಕರ್ನಾಟಕದ ನಗರ ಪ್ರದೇಶ ನಿವಾಸಿಗಳು ನದಿ ನೀರು ಕುಡಿಯುತ್ತೀದ್ದೀರಾ, ಸೆಸ್ ಪಾವತಿಸಲು ಅಣಿಯಾಗಿ; ಇದು ಅರಣ್ಯ ಸಚಿವರ ಹೊಸ ಪ್ರಸ್ತಾವನೆ
Nov 14, 2024 04:00 PM IST
ಕರ್ನಾಟಕದಲ್ಲಿ ನದಿ ನೀರನ್ನು ಬಳಸುವ ನಗರವಾಸಿಗೆ ಸೆಸ್ ವಿಧಿಸುವ ಸಂಬಂಧ ಪ್ರಸ್ತಾವನೆ ಸಲ್ಲಿಸಲು ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ,
ಕರ್ನಾಟಕದ ಪಶ್ಚಿಮ ಘಟ್ಟಗಳ ಭಾಗದಿಂದ ಉಗಮವಾಗುವ ನದಿ ನೀರನ್ನು ಸೇವಿಸುವ ನಗರವಾಸಿಗಳಿಗೆ ಸೆಸ್ ವಿಧಿಸಿ ಅದನ್ನು ಪಶ್ಚಿಮಘಟ್ಟಗಳ ಪ್ರಗತಿಗೆ ಬಳಸಲು ಅರಣ್ಯ, ಪರಿಸರ ಇಲಾಖೆ ಮುಂದಾಗಿದೆ. ಹೇಗಿರಲಿದೆ ಸೆಸ್ ರೂಪ.
ಬೆಂಗಳೂರು: ರಸ್ತೆ ಬಳಕೆ, ಕಸ ಸಂಗ್ರಹಣೆ ಸಹಿತ ಹಲವು ರೀತಿಯ ಸೆಸ್‌ಗಳನ್ನು ಈಗಾಗಲೇ ಜನ ಪಾವತಿಸುತ್ತಿದ್ದಾರೆ. ನೀರು ಪಡೆಯಲು ಸ್ಥಳೀಯ ಸಂಸ್ಥೆಗಳಿಗೆ ಕರ ಪಾವತಿಸಲೇಬೇಕು. ಈಗ ನೀರಿಗಾಗಿ ಇನ್ನೊಂದು ರೀತಿ ಸೆಸ್ ಅನ್ನು ಕರ್ನಾಟಕದ ನಗರ ಪ್ರದೇಶದ ಜನ ಪಾವತಿಸಲು ಸಿದ್ದರಾಗಬೇಕು. ಅದು ನದಿ ನೀರನ್ನು ಪಡೆಯುವ ನಗರ ವಾಸಿಗಳು ವಿಶೇಷ ಹಸಿರು ಸೆಸ್ ಅನ್ನು ಇನ್ನು ಮುಂದೆ ಪಾವತಿಸಬೇಕಾಗಬಹುದು. ಏಕೆಂದರೆ ಜೀವವೈವಿಧ್ಯತೆಯ ತಾಣ ಪಶ್ಚಿಮಘಟ್ಟ ಹಲವು ನದಿಗಳ ಮೂಲವಾಗಿದ್ದು, ಈ ನದಿಗಳ ನೀರು ಪೂರೈಕೆಯಾಗುವ ನಗರಗಳಿಗೆ ಹಸಿರು ಸೆಸ್ ವಿಧಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸೂಚಿಸಿದ್ದಾರೆ. ಇದು ಜಾರಿಯಾದರೆ ಮುಂದಿನ ವರ್ಷ ಒಂದಷ್ಟು ಸೆಸ್ ಹೊರೆ ಬೀಳಬಹುದು.
ಪಶ್ಚಿಮಘಟ್ಟದ ಸಂರಕ್ಷಣೆಗೆ ಕಾಪುನಿಧಿ ಸಂಗ್ರಹ ಗುರಿಯನ್ನು ಹೊಂದಲಾಗಿದ್ದು, ಇದರಲ್ಲಿ ಪಶ್ಚಿಮ ಘಟ್ಟಗಳ ಭಾಗದಿಂದ ಹರಿದು ಬರುವ ನದಿಗಳ ನೀರನ್ನು ಸೇವಿಸುವ ನಗರಗಳ ಪ್ರದೇಶದ ಜನರ ನೀರಿನ ಬಿಲ್ ನಲ್ಲಿ ಹಸಿರು ಸೆಸ್ ಸೇರ್ಪಡೆಯಾಗಿದೆ.
ಏನಿದು ಸೆಸ್
ಕರ್ನಾಟಕದಲ್ಲಿ ಕಾವೇರಿ, ಕಬಿನಿ ನದಿ ನೀರನ್ನು ಬೆಂಗಳೂರು, ಮೈಸೂರು ಭಾಗದ ಜನ ಸೇವಿಸುತ್ತಾರೆ. ಹೇಮಾವತಿ ನದಿ ನೀರು ಹಾಸನ, ತುಮಕೂರು, ರಾಮನಗರ ಭಾಗಕ್ಕೆ ಹೋಗುತ್ತಿದೆ.ತುಂಗ ಹಾಗೂ ಭದ್ರಾ ನದಿ ನೀರನ್ನು ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಹಾವೇರಿ, ಬಳ್ಳಾರಿ, ರಾಯಚೂರು, ಕೊಪ್ಪಳ. ಗದಗ ಭಾಗದವರು ಸೇವಿಸುತ್ತಾರೆ. ಇದೇ ರೀತಿ ಕರಾವಳಿ ಭಾಗದವರಿಗೆ ನೇತ್ರಾವತಿ ನದಿ ನೀರಿನ ಆಸರೆಯಿದೆ. ಕೃಷ್ಣಾ ನದಿ ನೀರು ಉತ್ತರ ಕರ್ನಾಟಕದ ಹಲವು ಜಿಲ್ಲೆಗಳ ಕುಡಿಯುವ ನೀರಿನ ದಾಹ ತೀರಿಸುತ್ತಿದೆ. ಹೀಗೆ ಪಶ್ಚಿಮ ಘಟ್ಟಗಳಿಂದ ಬರುವ ನದಿಗಳ ನೀರನ್ನು ಬಳಸುವ ನಗರಗಳನ್ನು ಪಟ್ಟಿ ಮಾಡಿಕೊಂಡು ಸೆಸ್ ನಿಗದಿಪಡಿಸಲಾಗುತ್ತದೆ.
ಪಶ್ಚಿಮಘಟ್ಟಗಳು ತುಂಗಾ, ಭದ್ರಾ, ಕಾವೇರಿ, ಕಬಿನಿ, ಹೇಮಾವತಿ, ಕೃಷ್ಣಾ, ಮಲಪ್ರಭಾ, ಘಟಪ್ರಭಾ ಸೇರಿದಂತೆ ಹಲವು ನದಿಗಳ ಮೂಲವೂ ಆಗಿದೆ. ರಾಜ್ಯದ ಹಲವು ನಗರ, ಪಟ್ಟಣ ಪ್ರದೇಶಗಳಿಗೆ ಈ ನದಿಗಳ ನೀರನ್ನೇ ಪೂರೈಕೆ ಮಾಡಲಾಗುತ್ತಿದೆ. ಮುಂದೆಯೂ ರಾಜ್ಯದ ನೀರಿನ ಅಗತ್ಯವನ್ನು ಈ ನದಿಗಳೇ ಪೂರೈಸಬೇಕಾಗುತ್ತದೆ. ಹೀಗಾಗಿ ಈ ಎಲ್ಲ ನದಿಗಳ ಮೂಲವಾಗಿರುವ ಪಶ್ಚಿಮಘಟ್ಟವನ್ನು ಸಂರಕ್ಷಿಸಿದರೆ ಮಾತ್ರ ಮುಂದಿನ ದಿನಗಳಲ್ಲಿ ನದಿಗಳು ತುಂಬಿ ಹರಿಯಲು ಸಾಧ್ಯ ಎನ್ನುವುದು ಸಚಿವರು ನೀಡಿರುವ ಸಲಹೆ.
ಮುಂಗಾರು ಮಳೆಯ ಮಾರುತಗಳನ್ನು ತಡೆದು ದೇಶದಾದ್ಯಂತ ವ್ಯಾಪಕ ಮಳೆ ಆಗುವಂತೆ ಮಾಡುವಲ್ಲಿ ಪಶ್ಚಿಮಘಟ್ಟಗಳು ಮಹತ್ವದ ಪಾತ್ರ ವಹಿಸುತ್ತವೆ. ಈ ನಿಟ್ಟಿನಲ್ಲಿ ಪಶ್ಚಿಮಘಟ್ಟದ ನದಿಗಳಿಂದ ನಗರ, ಪಟ್ಟಣಗಳಿಗೆ ಪೂರೈಕೆ ಆಗುವ ನೀರಿನ ಬಳಕೆಯ ಬಿಲ್ ನಲ್ಲಿ ಕೆಲವೇ ಕೆಲವು ರೂಪಾಯಿ ಹಸಿರು ಸೆಸ್ ವಿಧಿಸಿ, ಕಾಪು ನಿಧಿ ಸ್ಥಾಪಿಸಿದರೆ, ಈ ಹಣವನ್ನು ಪಶ್ಚಿಮಘಟ್ಟ ಅರಣ್ಯ ಅಭಿವೃದ್ಧಿಗಾಗಿ, ವೃಕ್ಷ ಸಂವರ್ಧನೆಗಾಗಿ, ಅರಣ್ಯದಂಚಿನ ರೈತರು ಸ್ವಯಂ ಪ್ರೇರಿತವಾಗಿ ಅರಣ್ಯ ಇಲಾಖೆಗೆ ಮಾರಾಟ ಮಾಡಲು ಇಚ್ಛಿಸುವ ಕೃಷಿ ಭೂಮಿ ಖರೀದಿಸಲು ಬಳಸಬಹುದು ಎಂಬದು ಅವರ ಅಭಿಪ್ರಾಯ.
ಸಚಿವರ ಸೂಚನೆ ಏನು
ನೀರಿನ ಬಿಲ್ ಜೊತಯಲ್ಲಿ ಬಳಕೆದಾರರು 2 ಅಥವಾ 3 ರೂ. ಪಾವತಿಸಿದರೆ, ಅವರಲ್ಲಿ ಪರಿಸರ ಸಂರಕ್ಷಣೆ ಮತ್ತು ಪಶ್ಚಿಮ ಘಟ್ಟದ ಮಹತ್ವದ ಅರಿವು ಮೂಡುತ್ತದೆ. ಹೀಗೆ ಸಂಗ್ರಹವಾಗುವ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಲಾಗುವುದಿಲ್ಲ. ಅದನ್ನು ಪರಿಸರದ ಸಂರಕ್ಷಣೆ, ನದಿಗಳ ರಕ್ಷಣೆಗಾಗಿ ಬಳಸಲಾಗುತ್ತದೆ ಎನ್ನುವುದು ಎನ್ನುವುದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಖಂಡ್ರೆ ಅಭಿಮತ.
ವಿಭಾಗ