logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Donald Trump: ಅಧಿಕಾರ ಬಂದರೆ ಅಮೆರಿಕದ ಎಲ್ಲರ ಆದಾಯ ತೆರಿಗೆ ರದ್ದು; ಡೊನಾಲ್ಡ್ ಟ್ರಂಪ್ ಘೋಷಣೆ

Donald Trump: ಅಧಿಕಾರ ಬಂದರೆ ಅಮೆರಿಕದ ಎಲ್ಲರ ಆದಾಯ ತೆರಿಗೆ ರದ್ದು; ಡೊನಾಲ್ಡ್ ಟ್ರಂಪ್ ಘೋಷಣೆ

Prasanna Kumar P N HT Kannada

Oct 26, 2024 10:36 PM IST

google News

ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್.

  • Donald Trump: ಎಲ್ಲಾ ಸುಂಕ ಯೋಜನೆಯನ್ನು ಸ್ಥಾಪಿಸುವ ಮೂಲಕ ಪ್ರತಿಯೊಬ್ಬ ಅಮೆರಿಕನ್ ನಾಗರಿಕರಿಗೆ ಫೆಡರಲ್ ಆದಾಯ ತೆರಿಗೆಗಳನ್ನು ತೆಗೆದುಹಾಕಲು ಸಾಧ್ಯವಿದೆ ಎಂದು ಟ್ರಂಪ್ ಹೇಳಿದ್ದಾರೆ.

ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್.
ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್. (AP)

Donald Trump: ಅಮೆರಿಕ ಅಧ್ಯಕ್ಷೀಯ ಚುನಾವಣೆ ನವೆಂಬರ್​​ 5ರಂದು ನಡೆಯಲಿದ್ದು, ಪಕ್ಷಗಳು ಭರ್ಜರಿ ಪ್ರಚಾರ ಕೈಗೊಂಡಿವೆ. ಇದೇ ವೇಳೆ ಯುನೈಟೆಡ್ ಸ್ಟೇಟ್ಸ್​ ತೆರಿಗೆ ಸುಧಾರಣೆಗಳ ಬಗ್ಗೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ತಮ್ಮ ಅಸಾಮಾನ್ಯ ತೆರಿಗೆ ಸುಧಾರಣಾ ಯೋಜನೆಯನ್ನು ಮುಂದಿಟ್ಟಿದ್ದಾರೆ. ಎಲ್ಲಾ ಅಮೆರಿಕನ್ನರಿಗೆ ಫೆಡರಲ್ ಆದಾಯ ತೆರಿಗೆ ರದ್ದುಪಡಿಸಲು ಒಂದು ಮಾರ್ಗ ಇರುವುದಾಗಿ ಹೇಳಿದ್ದಾರೆ.

ಆದಾಯ ತೆರಿಗೆಯನ್ನು ರದ್ದುಗೊಳಿಸುವ ಮೂಲಕ ಕಳೆದು ಹೋದ ಆದಾಯವನ್ನು ಸುಂಕದ ಮೂಲಕ ಮರು ಪಡೆಯಬಹುದು ಎಂದು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾದಿಸಿದ್ದಾರೆ. ತನ್ನ ಪ್ರಚಾರದಲ್ಲಿ ಹೆಚ್ಚಾಗಿ ಇದೇ ಪ್ರಣಾಳಿಕೆಯ ಕುರಿತು ಮಾತನಾಡಿರುವುದು ವಿಶೇಷ. ಸರ್ಕಾರದ ಬೊಕ್ಕಸಕ್ಕೆ ಯಾವುದೇ ನಷ್ಟವಾಗದಂತೆ ಆದಾಯ ತೆರಿಗೆ ರದ್ದುಗೊಳಿಸಲು ಒಂದು ಮಾರ್ಗವಿದೆ ಎಂದು ಟ್ರಂಪ್ ತಿಳಿಸಿದ್ದಾರೆ. ಆದರೆ, ಇದು ಅಪ್ರಾಯೋಗಿಕ ಮತ್ತು ಅವಾಸ್ತವಿಕ ಕಲ್ಪನೆ ಎಂದು ಹಣಕಾಸು ತಜ್ಞರು ಹೇಳಿದ್ದಾರೆ.

ಆದಾಯ ತೆರಿಗೆ ರದ್ದತಿ ಸಾಧ್ಯವೇ?

ಬ್ರಾಂಕ್ಸ್‌ನ ಕ್ಷೌರಿಕ ಅಂಗಡಿಯಲ್ಲಿ ಇತ್ತೀಚೆಗೆ ಕಾಣಿಸಿಕೊಂಡ ಟ್ರಂಪ್, ಎಲ್ಲಾ ಸುಂಕದ ಯೋಜನೆಯನ್ನು ಸ್ಥಾಪಿಸುವ ಮೂಲಕ ಅಮರಿಕದ ಪ್ರತಿಯೊಬ್ಬ ನಾಗರಿಕರಿಗೆ ಫೆಡರಲ್ ಆದಾಯ ತೆರಿಗೆ ತೆಗೆದುಹಾಕಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ. ಇದನ್ನು ಹೇಗೆ ಸಾಧಿಸಬಹುದು ಎಂದು ಕೇಳಿದಾಗ, ಅವರು 1800ರ ತೆರಿಗೆ ವ್ಯವಸ್ಥೆ ಮರಳಿ ತರಲು ಸಲಹೆ ನೀಡಿದ್ದಾರೆ. 'ನಿಮಗೆ ಗೊತ್ತಾ, 1890ರ ದಶಕದಲ್ಲಿ ಅಮೆರಿಕ ತುಲನಾತ್ಮಕವಾಗಿ ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾಗಿತ್ತು. ಅಂದೇ ಎಲ್ಲಾ ಸುಂಕಗಳಿದ್ದವು. ಆದಾಯ ತೆರಿಗೆ ಇರಲಿಲ್ಲ ಎಂದಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಅಮೆರಿಕನ್ನರು ತೆರಿಗೆ ಕಟ್ಟುವುದು ಕಷ್ಟ ಎಂದು ಪ್ರತಿಕ್ರಿಯಿಸಿರುವ ಟ್ರಂಪ್, ಆದಾಯ ತೆರಿಗೆಯಿಂದ ಜನರು ಸಾಯುತ್ತಿದ್ದಾರೆ ಎಂದು ಹೇಳಿದ್ದಾರೆ. ಜನರ ಬಳಿ ತೆರಿಗೆ ಕಟ್ಟಲು ಹಣವಿಲ್ಲ. ಹಳೆಯ ದಿನಗಳಲ್ಲಿ, 1890, 1880ರ ದಶಕದಲ್ಲಿ ನಮ್ಮಲ್ಲಿ ಸಾಕಷ್ಟು ಹಣವಿತ್ತು. ನಂತರ ನಾವು ನಮ್ಮ ಸಂಪತ್ತನ್ನು ಹೇಗೆ ಖರ್ಚು ಮಾಡಬೇಕು ಎಂದು ಲೆಕ್ಕಾಚಾರ ಮಾಡಲು ಬ್ಲೂ ರಿಬ್ಬನ್ ಸಮಿತಿಯಂತಹ ಸಮಿತಿಗಳನ್ನು ಸ್ಥಾಪಿಸಬೇಕಾಯಿತು ಎಂದು ಟ್ರಂಪ್ ವಿವರಿಸಿದ್ದಾರೆ.

ಆ ಸಮಯದಲ್ಲಿ ಅಮೆರಿಕನ್ನರಿಗೆ ಅಷ್ಟು ಸಂಪತ್ತನ್ನು ಹೇಗೆ ಖರ್ಚು ಮಾಡಬೇಕೆಂದು ತಿಳಿದಿರಲಿಲ್ಲ ಎಂದಿರುವ ಟ್ರಂಪ್, ಅದರ ನಂತರ ನಾವು ಆದಾಯ ತೆರಿಗೆ ವ್ಯವಸ್ಥೆಗೆ ಹೋದೆವು. ಇದರಿಂದ ಜನರ ಬಳಿ ಯಾವುದೇ ಹಣ ಉಳಿಯುತ್ತಿಲ್ಲ. ಈಗ ಹಳೆಯ ವ್ಯವಸ್ಥೆಗೆ ಮರಳಿದರೆ ಜನರಿಗೆ ಲಾಭವಾಗಲಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ