ಒಟಿಟಿ ಸಬ್‌ಸ್ಕ್ರಿಪ್ಷನ್, ಸಿನಿಮಾ ಟಿಕೆಟ್‌ಗಳ ಮೇಲೆ ಶೇ 2 ಸೆಸ್ ವಿಧಿಸಲಿದೆ ಕರ್ನಾಟಕ ಸರ್ಕಾರ, ಉದ್ದೇಶವೇನು, ಪ್ರಯೋಜನ, ಹೊರೆ ಯಾರಿಗೆ-ವಿವರ
ಚಿತ್ರರಂಗದ ಕಲಾವಿದರು ಮತ್ತು ತಂತ್ರಜ್ಞರಿಗೆ ನೆರವಾಗುವ ಉದ್ದೇಶದೊಂದಿಗೆ ಕರ್ನಾಟಕ ಸರ್ಕಾರ ಸಿನಿಮಾ ಟಿಕೆಟ್ ಮತ್ತು ಒಟಿಟಿ ಸಬ್ ಸ್ಕ್ರಿಪ್ಷನ್ ಮೇಲೆ ಶೇ.2ರಷ್ಟು ಸೆಸ್ ವಿಧಿಸುವ ಮಸೂದೆ ಮಂಡಿಸಿದ್ದು, ಅಂಗೀಕಾರವಾಗಿದೆ. ಇದರ ಪ್ರಯೋಜನ ಮತ್ತು ಹೊರೆ ಯಾರಿಗೆ ಎಂಬಿತ್ಯಾದಿ ವಿವರ ಇಲ್ಲಿದೆ. (ವರದಿ- ಎಚ್.ಮಾರುತಿ, ಬೆಂಗಳೂರು)
ಬೆಂಗಳೂರು: ಒಟಿಟಿ ಸಬ್‌ಸ್ಕ್ರಿಪ್ಷನ್ ಮತ್ತು ಸಿನಿಮಾ ಟಿಕೆಟ್‌ಗಳ ಮೇಲೆ ಶೇ.2 ರಷ್ಟು ಸೆಸ್ ವಿಧಿಸುವ ಮೂಲಕ ಒಟಿಟಿ ಮತ್ತು ಸಿನಿಮಾ ವೇದಿಕೆಗಳ ಮೇಲೆ ರಾಜ್ಯ ಸರ್ಕಾರ ಹೊರೆಯನ್ನು ಹೇರಿದೆ. ಆದರೆ ಒಟಿಟಿ ವೇದಿಕೆಗಳು ಮತ್ತು ಚಿತ್ರಮಂದಿರಗಳು ಈ ಸೆಸ್ ಅನ್ನು ಗ್ರಾಹಕರ ಮೇಲೆ ವರ್ಗಾಯಿಸಲಿವೆ. ಅಂತಿಮವಾಗಿ ಸೆಸ್ ಭರಿಸುವುದು ಗ್ರಾಹಕನೇ ಹೊರತು ಒಟಿಟಿ ಅಲ್ಲ. ಸಿನಿಮಾ ಉದ್ಯಮಿಗಳ ಪ್ರಕಾರ ಈ ಶೇ.2ರಷ್ಟು ಸೆಸ್ ವಿಧಿಸುವುದರಿಂದ ಸರ್ಕಾರಕ್ಕೆ ವಾರ್ಷಿಕ 60 ಕೋಟಿ ರೂ. ಆದಾಯ ಬರಬಹುದು ಎಂದು ಹೇಳುತ್ತಾರೆ.
ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಲಾವಿದರ ಸಾಮಾಜಿಕ ಭದ್ರತೆ ಮಸೂದೆ 2024
ಈ ಮಸೂದೆಯ ಪ್ರಕಾರ ಸಿನಿಮಾ ಟಿಕೆಟ್ ಗಳು ಮತ್ತು ಸಬ್ ಸ್ಕ್ರಿಪ್ಷನ್ ಶುಲ್ಕಗಳು ಮತ್ತು ಸಂಬಂಧಿತ ವ್ಯವಹಾರಗಳಿಂದ ಆದಾಯ ಸಂಗ್ರಹಣೆಯ ಗುರಿ ಹೊಂದಿದೆ. ಸೆಸ್ ಶೇ.1ರಿಂದ ಶೇ2ರಷ್ಟು ಇರಲಿದ್ದು ಪ್ರತಿ ಮೂರು ವರ್ಷಗಳಿಗೊಮ್ಮೆ ಪರಿಷ್ಕರಿಸಲಾಗುತ್ತದೆ.
ಭವಿಷ್ಯದಲ್ಲಿ ಈ ಮಸೂದೆಯ ಪ್ರಯೋಜನವನ್ನು ರಂಗಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವವರಿಗೂ ವಿಸ್ತರಿಸುವ ಗುರಿ ಹೊಂದಿದೆ. ಸೆಸ್ ಮೂಲಕ ಗಳಿಸುವ ಹಣವನ್ನು ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ಕಲ್ಯಾಣ ಮಂಡಳಿಗೆ ವರ್ಗಾಯಿಸಲಾಗುತ್ತದೆ. ಈ ನಿಧಿಯಿಂದ ಸಿನಿಮಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಲೈಟ್ ಬಾಯ್ ಯಿಂದ ಹಿಡಿದು ನಿರ್ಮಾಪಕರವರೆಗೆ ಎಲ್ಲರಿಗೂ ಸಹಾಯ ಒದಗಿಸುವುದು ಸರ್ಕಾರದ ಉದ್ಧೇಶವಾಗಿದೆ. ಒಟ್ಟಾರೆ ಕಲಾವಿದರು, ತಂತ್ರಜ್ಞರು ನಿರ್ಮಾಪಕರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ಈ ನಿಧಿಯ ಪ್ರಯೋಜನವಾಗಲಿದೆ. ಈ ಮಂಡಳಿಯಲ್ಲಿ ಸಂಬಂಧಪಟ್ಟ ಸಚಿವರು, ಕಾರ್ಮಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಥವಾ ಪ್ರಧಾನ ಕಾರ್ಯದರ್ಶಿ, ಕಾರ್ಮಿಕ ಆಯುಕ್ತರು ಮತ್ತು ಸರ್ಕಾರ ನೇಮಿಸುವ 17 ಸದಸ್ಯರು ಸದಸ್ಯರಾಗಿರುತ್ತಾರೆ.
ಸದ್ಯದ ಮಾಹಿತಿಗಳ ಪ್ರಕಾರ ಸಿನಿಮಾ ಕ್ಷೇತ್ರದಲ್ಲಿ ಕಲಾವಿದರು ಮತ್ತು ತಂತ್ರಜ್ಞರು ಸೇರಿ 2,355 ಕಾರ್ಮಿಕರಿದ್ದಾರೆ. ಅರೆಕಾಲಿಕ ಕಲಾವಿದರು ಮತ್ತು ತಂತ್ರಜ್ಞರು ಯಾವುದೇ ಸಂಘಟನೆಗಳಲ್ಲಿ ಗುರುತಿಸಿಕೊಳ್ಳದೇ ಇರುವವರೂ ದುಡಿಯುತ್ತಿದ್ದಾರೆ. ಪ್ರತಿಯೊಬ್ಬ ಸದಸ್ಯನಿಗೂ ವಿಶಿಷ್ಟ ಗುರುತಿನ ಚೀಟಿ ನೀಡಲಾಗುತ್ತದೆ. ಆ ಮೂಲಕ ಅವರು ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.
ಮನರಂಜನಾ ತೆರಿಗೆ ಲೆಕ್ಕಾಚಾರ
ರಾಜ್ಯ ಸರ್ಕಾರ ಈಗಾಗಲೇ ಶೇ.30ರಷ್ಟು ಮನರಂಜನಾ ತೆರಿಗೆ ವಿಧಿಸುತ್ತಿದ್ದು, ಹೆಚ್ಚುವರಿಯಾಗಿ ಶೇ.2ರಷ್ಟು ಸೆಸ್ ವಿಧಿಸುವುದರಿಂದ ಗ್ರಾಹಕರು ಸಿನಿಮಾ ನೋಡುವ ಹವ್ಯಾಸದಿಂದಲೇ ಹಿಂದೆ ಸರಿಯುವ ಅಪಾಯವಿರುತ್ತದೆ ಎಂದೂ ಭಾವಿಸಲಾಗಿದೆ. ಒಟಿಟಿ ಸಬ್‌ಸ್ಕ್ರಿಪ್ಷನ್ ಯಾವುದೆ ಸ್ಥಳೀಯ ವಿಳಾಸವಿಲ್ಲದೆ ಆನ್ ಲೈನ್ ನಲ್ಲಿಯೇ ನಡೆಯುವ ವ್ಯವಹಾರವಾಗಿದ್ದು, ಸರ್ಕಾರ ಸೆಸ್ ಅನ್ನು ಹೇಗೆ ಸಂಗ್ರಹಿಸುತ್ತದೆ ಎನ್ನುವುದು ಸ್ಪಷ್ಟವಾಗಿಲ್ಲ.
ಸಿನಿತಂತ್ರಜ್ಞರ ಹಿತದೃಷ್ಟಿಯಿಂದ ಇಂತಹ ಕಲಾಣ ಕಾರ್ಯಕ್ರಮ ಒಳ್ಳೆಯದೇ ಆದರೂ ಜಾರಿಗೊಳಿಸುವ ಮಾದರಿ ಸೂಕ್ತವಾಗಿಲ್ಲ. ಮೇಲಾಗಿ ಈ ಸೆಸ್ ಕಲಾವಿದರ ಪಾಲಿಗೆ ಹೇಗೆ ನೆರವಿಗೆ ಬರಲಿದೆ ಎನ್ನುವುದೂ ಸ್ಪಷ್ಟವಾಗಿಲ್ಲ ಎನ್ನುತ್ತಾರೆ.
ಒಟಿಟಿ ಮೇಲೆ ಸೆಸ್ ವಿಧಿಸುವ ರಾಜ್ಯ ಸರ್ಕಾರದ ಕ್ರಮವನ್ನು ಬಿಜೆಪಿ ತೀವ್ರವಾಗಿ ಟೀಕಿಸಿದೆ. ಪಕ್ಷದ ರಾಷ್ಟ್ರೀಯ ವಕ್ತಾರ ಸೆಹಜಾದ್ ಪೂನಾವಾಲಾ ರಾಜ್ಯದ ಭ್ರಷ್ಟ ಕಾಂಗ್ರೆಸ್ ಸರ್ಕಾರ ಸಾರ್ವಜನಿಕರ ಲೂಟಿಗೆ ಇಳಿದಿದೆ. ಹಲವಾರು ಹಗರಣಗಳಲ್ಲಿ ಸಿಲುಕಿರುವ ಸರ್ಕಾರ ಸಿನಿಮಾ ರಂಗದ ಲೂಟಿಗೂ ಹೊರಟಿದೆ ಎಂದು ಲೇವಡಿ ಮಾಡಿದ್ದಾರೆ.
(ವರದಿ- ಎಚ್.ಮಾರುತಿ, ಬೆಂಗಳೂರು)
(ಕನ್ನಡದಲ್ಲಿ ಸ್ಪಷ್ಟ ಸುದ್ದಿ, ನಿಖರ ವಿಶ್ಲೇಷಣೆ, ಸಮಗ್ರ ಮಾಹಿತಿಗೆಎಚ್‌ಟಿ ಕನ್ನಡ ಬೆಸ್ಟ್.ಕರ್ನಾಟಕದ ತಾಜಾ ವಿದ್ಯಮಾನ, ಅದೇ ರೀತಿರಾಜಕೀಯ ವಿಶ್ಲೇಷಣೆ, ದೇಶ ಮತ್ತು ಜಗತ್ತಿನ ವಿದ್ಯಮಾನಗಳ ವರದಿಗಳನ್ನು ಓದಲುkannada.hindustantimes.com/nation-and-world ಕ್ಕೆ ಭೇಟಿ ನೀಡಿ.)