logo
ಕನ್ನಡ ಸುದ್ದಿ  /  ಕರ್ನಾಟಕ  /  Hsrp Number Plate: ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ; ಬಂದೇ ಬಿಡ್ತಾ ಇದೆ ಮತ್ತೊಂದು ಗಡುವು, ಎಲ್ಲಿವರೆಗೂ ಉಂಟು

HSRP Number Plate: ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ; ಬಂದೇ ಬಿಡ್ತಾ ಇದೆ ಮತ್ತೊಂದು ಗಡುವು, ಎಲ್ಲಿವರೆಗೂ ಉಂಟು

Umesha Bhatta P H HT Kannada

Nov 05, 2024 07:55 AM IST

google News

ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಸುವ ಗಡುವಿನ ದಿನ ಕರ್ನಾಟಕದಲ್ಲಿ ಮತ್ತೆ ಸಮೀಪಿಸುತ್ತಿದೆ.

    • HSRP Deadline: ಕರ್ನಾಟಕದಲ್ಲಿ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಸುವ ನಾಲ್ಕನೇ ಗಡುವು ಸಮಯವೂ ಸಮೀಪಿಸುತ್ತಿದೆ. ಈ ತಿಂಗಳಾಂತ್ಯದ ಒಳಗೆ ನಂಬರ್‌ ಪ್ಲೇಟ್‌ ಬದಲಿಸಿಕೊಳ್ಳಲು ಸಾರಿಗೆ ಇಲಾಖೆ ಅವಕಾಶ ನೀಡಿದೆ.
ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಸುವ ಗಡುವಿನ ದಿನ ಕರ್ನಾಟಕದಲ್ಲಿ ಮತ್ತೆ ಸಮೀಪಿಸುತ್ತಿದೆ.
ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಸುವ ಗಡುವಿನ ದಿನ ಕರ್ನಾಟಕದಲ್ಲಿ ಮತ್ತೆ ಸಮೀಪಿಸುತ್ತಿದೆ.

ಬೆಂಗಳೂರು: ವಾಹನಗಳ ಸುರಕ್ಷತೆಯ ದೃಷ್ಟಿಯಿಂದ ಭಾರತದಾದ್ಯಂತ ಜಾರಿಗೊಂಡಿರುವ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್‌ ಪ್ಲೇಟ್‌ (HSRP) ಅಳವಡಿಕೆಗೆ ಮತ್ತೊಂದು ಗಡುವು ಮುಗಿಯುವ ಸಮಯ ಬರುತ್ತಿದೆ. ಅದರಲ್ಲೂ ನವೆಂಬರ್‌ನಲ್ಲಿ ನಂಬರ್‌ಪ್ಲೇಟ್‌ ಅನ್ನು ಅಳಪಡಿಸುವ ಗಡುವನ್ನು ಕರ್ನಾಟಕ ರಾಜ್ಯ ಸಾರಿಗೆ ಇಲಾಖೆ ಈಗಾಗಲೇ ನೀಡಿದೆ. ಗಡುವು ನೀಡಿಯೇ ಒಂದೂವರೆ ತಿಂಗಳು ಕಳೆದಿದ್ದು, ನವೆಂಬರ್‌ 20 ರಂದು ಗಡುವು ಮುಗಿಯಲಿದೆ. ಈ ದಿನಾಂಕದೊಳಗೆ ಎಲ್ಲಾ ದ್ವಿಚಕ್ರ, ತ್ರಿಚಕ್ರ, ನಾಲ್ಕು ಚಕ್ರ ವಾಹನಗಳ ನಂಬರ್‌ ಪ್ಲೇಟ್‌ ಅನ್ನು ಬದಲಿಸಿಕೊಳ್ಳಬೇಕು ಎನ್ನುವ ಕಟ್ಟುನಿಟ್ಟಿನ ಸೂಚನೆಯನ್ನು ಕರ್ನಾಟಕ ಸಾರಿಗೆ ಇಲಾಖೆ ನೀಡಿದೆ. ಇದಕ್ಕೆ ಇನ್ನು 15 ದಿನಗಳು ಮಾತ್ರ ಬಾಕಿ ಉಳಿದುಕೊಂಡಿವೆ.

ಎಚ್‌ಎಸ್‌ಆರ್‌ಪಿ ಏಕೆ

ಭದ್ರತೆ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಮೋಟಾರು ವಾಹನ ಕಾಯ್ದೆ-1989 ಸೆಕ್ಷನ್‌ 50 ಹಾಗೂ 51 ಅನ್ವಯ ಎಲ್ಲಾ ವಾಹನಗಳಿಗೆ ಗರಿಷ್ಠ ಭದ್ರತೆಯ ನಂಬರ್‌ ಪ್ಲೇಟ್‌ಗಳನ್ನು ಅಳವಡಿಸಬೇಕಿದೆ. ಹೆಚ್‌ಎಸ್ಆರ್‌ಪಿ ನಂಬರ್ ಪ್ಲೇಟ್ ಎಂದರೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಶನ್ ಪ್ಲೇಟ್ ಎಂದರ್ಥ. ಕರ್ನಾಟಕದ ವಾಹನಗಳಿಗೆ ಇದನ್ನು ಕಡ್ಡಾಯಗೊಳಿಸಲಾಗಿದೆ.

ಒಂದು ವೇಳೆ ಹೆಚ್‌ಎಸ್‌ಆರ್‌ಪಿ ಅಳವಡಿಸದಿದ್ದರೆ ಮಾಲೀಕತ್ವದ ಬದಲಾವಣೆ, ವಿಳಾಸ ಬದಲಾವಣೆ, ನಕಲಿ ಆರ್‌ಸಿ, ವಿಮೆ ಹಾಗೂ ಇನ್ನಿತರ ಕೆಲಸಗಳನ್ನು ಮಾಡಲಾಗುವುದಿಲ್ಲ. ಸಾರಿಗೆ ಇಲಾಖೆ ಹೊರಡಿಸಿರುವ ಈ ಸೂಚನೆಯಿಂದ ಅಧಿಕೃತವಾಗಿಲ್ಲದ ವಾಹನಗಳು ರಸ್ತೆಯಲ್ಲಿ ಓಡಾಡುವುದನ್ನು ಸುಲಭವಾಗಿ ಪತ್ತೆ ಹಚ್ಚಲು ಸಹಾಯಕವಾಗಲಿದೆ.

ಕರ್ನಾಟಕದಲ್ಲಿ ಎಷ್ಟಾಗಿದೆ

ಐದು ವರ್ಷದ ಹಿಂದೆಯೇ ಭಾರತದಲ್ಲಿನ ವಾಹನ ಸುರಕ್ಷತೆ ಹಾಗೂ ಏಕರೂಪದ ನಂಬರ್‌ ಪ್ಲೇಟ್‌ ಅಳವಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಎಚ್‌ಎಸ್ಆರ್‌ಪಿ ನಂಬರ್‌ ಪ್ಲೇಟ್‌ ಕಡ್ಡಾಯಗೊಳಿಸಿದೆ. ಈಗಾಗಲೇ ಹಲವು ರಾಜ್ಯಗಳಲ್ಲಿ ಇದು ಜಾರಿಯಾಗಿದೆ. ಕರ್ನಾಟಕದಲ್ಲೂ ಒಂದೂವರೆ ವರ್ಷದಿಂದ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಕರ್ನಾಟಕ ಸರ್ಕಾರದ ಸಾರಿಗೆ ಇಲಾಖೆ ಮುಂದಾಗಿದೆ. ಇದರಂತೆ ಕರ್ನಾಟಕದಲ್ಲಿ ನಿರೀಕ್ಷೆಯಷ್ಟು ಅಲ್ಲದೇ ಇದ್ದರೆ ಸಾಕಷ್ಟು ವಾಹನ ಸವಾರರು ತಮ್ಮ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳಪಡಿಸಿಕೊಂಡಿದ್ದಾರೆ.

ಕರ್ನಾಟಕದಲ್ಲಿರುವ ಎಲ್ಲಾ ರೀತಿಯ 1.90 ಕೋಟಿ ಹಳೆ ವಾಹನಗಳ ಪೈಕಿ 80 ಲಕ್ಷ ವಾಹನಗಳಿಗೆ ಮಾತ್ರ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಲಾಗಿದೆ. ಇದರಲ್ಲಿ ದ್ವಿಚಕ್ರವಾಹನಗಳ ಪ್ರಮಾಣವೇ ಅಧಿಕ. ಸಾಕಷ್ಟು ಬಾರಿ ಗಡುವು ನೀಡಿದ್ದರೂ ಇನ್ನೂ ಶೇ. 50 ರಷ್ಟು ಗುರಿ ತಲುಪಿಲ್ಲ.

ಗಡುವು ವಿಸ್ತರಣೆ

ತಮ್ಮ ತಮ್ಮ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್‌ ಪ್ಲೇಟ್‌ ಅಳವಡಿಕೆ ಮಾಡದ ವಾಹನ ಸವಾರರಿಗೆ ನಿರಂತರವಾಗಿ ಸಾರಿಗೆ ಇಲಾಖೆಯು ಕೊನೆ ದಿನಾಂಕವನ್ನು ವಿಸ್ತರಿಸುತ್ತಾ ಬಂದಿದೆ. ಮತ್ತೆ ಹಳೆಯ ನಂಬರ್‌ ಪ್ಲೇಟ್‌ಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್‌ ಪ್ಲೇಟ್‌ ಅಳವಡಿಸಲು ಈಗಾಗಲೇ ಗಡುವು ವಿಸ್ತರಣೆ ಮಾಡಿದ್ದು. ಈ ತಿಂಗಳ 20ಕ್ಕೆ ಇದು ಮುಗಿಯಲಿದೆ.

ಹೆಚ್ಎಸ್ಆರ್​​ಪಿ ನಂಬರ್ ಪ್ಲೇಟ್ ಅಳವಡಿಸಲು ಈಗಾಗಲೇ ರಾಜ್ಯ ‌ಸರ್ಕಾರ ಮೂರ್ನಾಲ್ಕು ಬಾರಿ ಗಡುವು ವಿಸ್ತರಣೆ ಮಾಡಿದೆ. ಬರೋಬ್ಬರಿ 4 ಬಾರಿ ಸಮಯ ವಿಸ್ತರಿಸಿದರೂ ಸಹ ವಾಹನ ಮಾಲೀಕರು ತಮ್ಮ ವಾಹನಕ್ಕೆ HSRP ನಂಬರ್ ಪ್ಲೇಟ್ ಅಳವಡಿಸಿಕೊಂಡಿಲ್ಲ. ನವೆಂಬರ್ 20ರವರೆಗೆ ಹೆಚ್ಎಸ್ಆರ್​ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಸಮಯ ನೀಡಿ ಈಗಾಗಲೇ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 2019ಕ್ಕೂ ಮೊದಲು ನೋಂದಣಿಯಾದ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಳ್ಳಬೇಕಿದೆ.

ನೋಂದಣಿ ವಿಚಾರ ಹೈಕೋರ್ಟ್‌ ಮೆಟ್ಟಿಲು ಏರಿರುವುದರಿಂದ ನ್ಯಾಯಾಲಯ ಕೂಡ ಗಡುವು ವಿಸ್ತರಣೆಗೆ ಎರಡು ತಿಂಗಳ ಹಿಂದೆ ನಿರ್ದೇಶನ ನೀಡಿತ್ತು. ಈ ತಿಂಗಳ ಮೂರನ ವಾರದಲ್ಲಿ ಮತ್ತೆ ಪ್ರಕರಣವು ವಿಚಾರಣೆಗೆ ಬರಲಿದೆ. ನ್ಯಾಯಾಲಯದ ನಿರ್ದೇಶನ ಆಧರಿಸಿ ಸಾರಿಗೆ ಇಲಾಖೆ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದೆ ಎನ್ನುವುದು ಹಿರಿಯ ಅಧಿಕಾರಿಗಳು ನೀಡುವ ವಿವರಣೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ