logo
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕದಲ್ಲಿ 13,722 ಕೋಟಿ ರೂ ಜಿಎಸ್‌ಟಿ ಸಂಗ್ರಹ, ದೇಶದಲ್ಲೇ ಎರಡನೇ ಸ್ಥಾನ; ಅಬಕಾರಿ ಇಲಾಖೆಯ ಗ್ರೂಪ್‌ ಸಿ ಹುದ್ದೆಗಳ ಭರ್ತಿಗೆ ಕ್ರಮ

ಕರ್ನಾಟಕದಲ್ಲಿ 13,722 ಕೋಟಿ ರೂ ಜಿಎಸ್‌ಟಿ ಸಂಗ್ರಹ, ದೇಶದಲ್ಲೇ ಎರಡನೇ ಸ್ಥಾನ; ಅಬಕಾರಿ ಇಲಾಖೆಯ ಗ್ರೂಪ್‌ ಸಿ ಹುದ್ದೆಗಳ ಭರ್ತಿಗೆ ಕ್ರಮ

Praveen Chandra B HT Kannada

Dec 03, 2024 06:56 PM IST

google News

ಕರ್ನಾಟಕದಲ್ಲಿ 13,722 ಕೋಟಿ ರೂ ಜಿಎಸ್‌ಟಿ ಸಂಗ್ರಹ, ದೇಶದಲ್ಲೇ ಎರಡನೇ ಸ್ಥಾನ

    • ಕರ್ನಾಟಕ ರಾಜ್ಯ ಜಿಎಸ್‌ಟಿ ಸಂಗ್ರಹದಲ್ಲಿ ಶೇಕಡಾ 15ರ ಬೆಳವಣಿಗೆ ದರ ಸಾಧಿಸಿದೆ. ರಾಜ್ಯದಲ್ಲಿ ನವೆಂಬರ್‌ ಅಂತ್ಯದವರೆಗೆ ರೂ.13,722 ಕೋಟಿ ಜಿಎಸ್‌ಟಿ ಸಂಗ್ರಹಿಸಲಾಗಿದ್ದು, ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕರ್ನಾಟಕದಲ್ಲಿ 13,722 ಕೋಟಿ ರೂ ಜಿಎಸ್‌ಟಿ ಸಂಗ್ರಹ, ದೇಶದಲ್ಲೇ ಎರಡನೇ ಸ್ಥಾನ
ಕರ್ನಾಟಕದಲ್ಲಿ 13,722 ಕೋಟಿ ರೂ ಜಿಎಸ್‌ಟಿ ಸಂಗ್ರಹ, ದೇಶದಲ್ಲೇ ಎರಡನೇ ಸ್ಥಾನ

ಬೆಂಗಳೂರು: ರಾಜ್ಯ ಜಿಎಸ್‌ಟಿ ಸಂಗ್ರಹದಲ್ಲಿ ಶೇಕಡಾ 15ರ ಬೆಳವಣಿಗೆ ದರ ಸಾಧಿಸಿದೆ. ರಾಜ್ಯದಲ್ಲಿ ನವೆಂಬರ್‌ ಅಂತ್ಯದವರೆಗೆ ರೂ.13,722 ಕೋಟಿ ಜಿಎಸ್‌ಟಿ ಸಂಗ್ರಹಿಸಲಾಗಿದ್ದು, ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸಿಎಂ ಅಧ್ಯಕ್ಷತೆಯಲ್ಲಿ ಕೃಷ್ಣಾದಲ್ಲಿ ವಾಣಿಜ್ಯ ತೆರಿಗೆ ಇಲಾಖೆ, ಅಬಕಾರಿ ಇಲಾಖೆ, ಮುದ್ರಾಂಕ ಮತ್ತು ನೋಂದಣಿ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆ ನಡೆದಿದೆ. ಸಭೆಯಲ್ಲಿ ಅಬಕಾರಿ ಇಲಾಖೆಯಲ್ಲಿ ಖಾಲಿಯಿರುವ ಗ್ರೂಪ್‌ ಸಿ ಹುದ್ದೆಗಳನ್ನು ತುಂಬಲು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಎಲ್ಲಾ ಆಸ್ತಿಗಳನ್ನು ಗುರುತಿಸಿ ತೆರಿಗೆ ವ್ಯಾಪ್ತಿಗೆ ತರಲು ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಹೇಳಿದ್ದಾರೆ. ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆಯ ಸಭೆಯ ಮುಖ್ಯಾಂಶಗಳು ಇಲ್ಲಿವೆ.

ವಾಣಿಜ್ಯ ತೆರಿಗೆ ಇಲಾಖೆ

2024 ನವೆಂಬರ್‌ ಅಂತ್ಯದವರೆಗಿನ ಒಟ್ಟು ವಾಣಿಜ್ಯ ತೆರಿಗೆ ಸಂಗ್ರಹಣೆ ಗುರಿ 56,317 ಕೋಟಿ ರೂ.ಇದ್ದು ಇದುವರೆಗೆ ರೂ.53,103 ಕೋಟಿ ತೆರಿಗೆ ಸಂಗ್ರಹ ಮಾಡಲಾಗಿದ್ದು, ಶೇ.94 ರಷ್ಟು ಸಾಧನೆ ಮಾಡಲಾಗಿದೆ. 2024-25 ಹಣಕಾಸು ಸಾಲಿನ ಒಟ್ಟು ವಾಣಿಜ್ಯ ತೆರಿಗೆ ಸಂಗ್ರಹ ಗುರಿ ರೂ. 84475 ಕೋಟಿ ಇದೆ. ಮಲೆನಾಡು ಮತ್ತು ಮೈಸೂರು ವಿಭಾಗದಲ್ಲಿ ತೆರಿಗೆ ಸಂಗ್ರಹ ನಿಗದಿತ ಗುರಿಗಿಂತ ಕಡಿಮೆಯಿದೆ. ಎಲ್ಲಾ ವಿಭಾಗಗಳು ಮುಂದಿನ ನಾಲ್ಕು ತಿಂಗಳಲ್ಲಿ ಗುರಿಯನ್ನು ಕಡ್ಡಾಯವಾಗಿ ಸಾಧಿಸಬೇಕು. 2023-24 ರ ಒಟ್ಟು ತೆರಿಗೆ ಸಂಗ್ರಹಣೆ 70,575 ಕೋಟಿ ರೂ. ಇತ್ತು. ವಿಜಿಲೆನ್ಸ್‌ ಹೆಚ್ಚಿಸಿ, ತೆರಿಗೆ ಸೋರಿಕೆಯನ್ನು ಪತ್ತೆ ಹಚ್ಚಿ ತೆರಿಗೆ ಸಂಗ್ರಹವನ್ನು ಹೆಚ್ಚಿಸಬೇಕು. ಬೆಂಗಳೂರು ವಿಭಾಗದಲ್ಲಿ ಹೆಚ್ಚಿನ ನಿಗಾ ವಹಿಸಬೇಕು. ವಿಶೇಷ ಅಭಿಯಾನ ಕೈಗೊಂಡು ಮುಂದಿನ ನಾಲ್ಕು ತಿಂಗಳ ಅವಧಿಯಲ್ಲಿ ತೆರಿಗೆ ಸಂಗ್ರಹವನ್ನು ಹೆಚ್ಚಿಸಿ ಶೇ.100ರಷ್ಟು ಬಜೆಟ್‌ ಗುರಿಯನ್ನು ಸಾಧಿಸಬೇಕು ಎಂದು ಸಭೆಯಲ್ಲಿ ಚರ್ಚಿಸಲಾಗಿದೆ.

ಜಿಎಸ್‌ಟಿ ಸಂಗ್ರಹ ಏರಿಕೆ

ಜಿಎಸ್‌ಟಿ ಸಂಗ್ರಹವನ್ನು ಹೆಚ್ಚಿಸಬೇಕು. ಲೆಕ್ಕಪರಿಶೋಧನೆ ಮತ್ತು ನ್ಯಾಯನಿರ್ಣಯದಿಂದ ಪ್ರಸ್ತುತ ಹಣಕಾಸು ಸಾಲಿನಲ್ಲಿ ರೂ.4671 ಕೋಟಿ ತೆರಿಗೆ ಸಂಗ್ರಹ ಗುರಿಯಿದ್ದು, ನವೆಂಬರ್‌ ಅಂತ್ಯದವರೆಗೆ ರೂ.3,076.86 ಕೋಟಿ ತೆರಿಗೆ ಸಂಗ್ರಹಿಸಲಾಗಿದೆ. • ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯಡಿಯಲ್ಲಿ ಸ್ವೀಕರಿಸಿದ ಮನವಿಗಳನ್ನು ವಿಲೇವಾರಿ ಮಾಡಿ ತೆರಿಗೆ ಸಂಗ್ರಹ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಚರ್ಚಿಸಲಾಯಿತು. ರಾಜ್ಯ ಜಿಎಸ್‌ಟಿ ಸಂಗ್ರಹದಲ್ಲಿ ಶೇಕಡಾ 15ರ ಬೆಳವಣಿಗೆ ದರ ಸಾಧಿಸಿದೆ. ರಾಜ್ಯದಲ್ಲಿ ನವೆಂಬರ್‌ ಅಂತ್ಯದವರೆಗೆ ರೂ.13,722 ಕೋಟಿ ಜಿಎಸ್‌ಟಿ ಸಂಗ್ರಹಿಸಲಾಗಿದ್ದು, ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ.

ಅಬಕಾರಿ ಇಲಾಖೆಯ ಸಾಧನೆ

2024-25 ನೇ ಸಾಲಿನಲ್ಲಿ ರೂ. 38,525 ಕೋಟಿ ಅಬಕಾರಿ ರಾಜಸ್ವ ಸಂಗ್ರಹ ಗುರಿಯಿದ್ದು, ನವೆಂಬರ್‌ ಅಂತ್ಯದವರೆಗೆ ರೂ.23,600 ಕೋಟಿ ಸಂಗ್ರಹಿಸಲಾಗಿದ್ದು, ಶೇ.61.26 ಗುರಿ ಸಾಧಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಅವಧಿಯಲ್ಲಿ ರೂ.1432.23 ಕೋಟಿ ರಾಜಸ್ವ ಸಂಗ್ರಹದಲ್ಲಿ ಹೆಚ್ಚಳವಾಗಿದ್ದು, ಶೇ.6.46 ಬೆಳವಣಿಗೆ ದರ ಸಾಧಿಸಲಾಗಿದೆ. ರಾಜ್ಯದಲ್ಲಿ 2023-24ರಲ್ಲಿ ರೂ. 34,628 ಕೋಟಿ ಅಬಕಾರಿ ರಾಜಸ್ವ ಸಂಗ್ರಹಿಸಲಾಗಿತ್ತು. ರಾಜಸ್ವ ಸಂಗ್ರಹ ಹೆಚ್ಚಿಸಲು ಜಾಗೃತ ದಳ ಇನ್ನಷ್ಟು ಚುರುಕಾಗಿ ಕಾರ್ಯನಿರ್ವಹಿಸಬೇಕು.

ಗ್ರೂಪ್‌ ಸಿ ಹುದ್ದೆ ಭರ್ತಿಗೆ ಕ್ರಮ

ಅಬಕಾರಿ ಇಲಾಖೆಯಲ್ಲಿ ಖಾಲಿಯಿರುವ ಗ್ರೂಪ್‌ ಸಿ ಹುದ್ದೆಗಳನ್ನು ತುಂಬಲು ಕ್ರಮಕೈಗೊಳ್ಳುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ನೋಂದಣಿ ಮತ್ತು ಮುದ್ರಾಂಕ ಇಲಾಖೆ

2024-25 ನೇ ಸಾಲಿನಲ್ಲಿ ರೂ.26 ಸಾವಿರ ಕೋಟಿ ಗುರಿ ನಿಗದಿಪಡಿಸಿದ್ದು, ನವೆಂಬರ್‌ ಕೊನೆಯವರೆಗೆ ರೂ.15,160.97 ಕೋಟಿ ರಾಜಸ್ವ ಸಂಗ್ರಹಿಸಲಾಗಿದ್ದು, ಶೇ.58ರಷ್ಟು ಪ್ರಗತಿ ಸಾಧಿಸಲಾಗಿದೆ. ರಾಜಸ್ವ ಸೋರಿಕೆಯನ್ನು ತಡೆಗಟ್ಟಿ, ರಾಜಸ್ವ ಸಂಗ್ರಹವನ್ನು ಹೆಚ್ಚಿಸಬೇಕು. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.21ರಷ್ಟು ಬೆಳವಣಿಗೆ ದರ ಸಾಧಿಸಲಾಗಿದೆ. ಕಾನೂನು ಬಾಹಿರ ನೋಂದಣಿಗಳಿಗೆ ಕಡಿವಾಣ ಹಾಕಿ, ರಾಜಸ್ವ ಸಂಗ್ರಹವನ್ನು ವ್ಯವಸ್ಥಿತಗೊಳಿಸಬೇಕು. ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಎಲ್ಲಾ ಆಸ್ತಿಗಳನ್ನು ಗುರುತಿಸಿ ತೆರಿಗೆ ವ್ಯಾಪ್ತಿಗೆ ತರಲು ಕ್ರಮ ಕೈಗೊಳ್ಳಬೇಕು. ಇ-ಖಾತಾ ನೀಡುವ ಪ್ರಕ್ರಿಯೆಯಲ್ಲಿನ ತೊಡಕುಗಳನ್ನು ನಿವಾರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಭೆಯಲ್ಲಿ ಚರ್ಚಿಸಲಾಗಿದೆ.

ಗಣಿ ಮತ್ತು ಭೂವಿಜ್ಞಾನ ಇಲಾಖೆ

ಕಳೆದ ವರ್ಷಕ್ಕಿಂತ ಶೇ.10ರಷ್ಟು ಹೆಚ್ಚಿನ ಬೆಳವಣಿಗೆ ದರ ಸಾಧಿಸಲಾಗಿದೆ. ಈ ವರ್ಷದ ಒಟ್ಟು ರಾಜಸ್ವ ಗುರಿ ರೂ.9ಸಾವಿರ ಕೋಟಿ ಇದ್ದು, ನವೆಂಬರ್‌ ಅಂತ್ಯದವರೆಗೆ ರೂ.4862 ಕೋಟಿ ರಾಜಸ್ವ ಸಂಗ್ರಹಿಸಲಾಗಿದೆ. ಖನಿಜ ಹಕ್ಕು ತೆರಿಗೆ ಅಧಿನಿಯಮ ಜಾರಿಗೆ ಕ್ರಮ ಕೈಗೊಳ್ಳಲಾಗುವುದು. 2025-26 ನೇ ಸಾಲಿನಲ್ಲಿ ಉಪ ಖನಿಜದಿಂದ ಹೆಚ್ಚುವರಿಯಾಗಿ ರಾಜಸ್ವ ಸಂಗ್ರಹಿಸಲು ಕ್ರಮ ಕೈಗೊಳ್ಲಲಾಗುತ್ತದೆ. ಅರಣ್ಯ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ