logo
ಕನ್ನಡ ಸುದ್ದಿ  /  ಕರ್ನಾಟಕ  /  ನೀವು ಕರ್ನಾಟಕದಲ್ಲಿ ವ್ಯವಹಾರ ಮಾಡೋವಾಗ ಕನ್ನಡದಲ್ಲಿ ಬೋರ್ಡ್‌ ಹಾಕಬೇಕು, ತಪ್ಪೇನು; ಪ್ರತಿಷ್ಠಿತ ಚಿಲ್ಲರೆ ವ್ಯಾಪಾರಸ್ಥರಿಗೆ ಕೋರ್ಟ್‌ ಸೂಚನೆ

ನೀವು ಕರ್ನಾಟಕದಲ್ಲಿ ವ್ಯವಹಾರ ಮಾಡೋವಾಗ ಕನ್ನಡದಲ್ಲಿ ಬೋರ್ಡ್‌ ಹಾಕಬೇಕು, ತಪ್ಪೇನು; ಪ್ರತಿಷ್ಠಿತ ಚಿಲ್ಲರೆ ವ್ಯಾಪಾರಸ್ಥರಿಗೆ ಕೋರ್ಟ್‌ ಸೂಚನೆ

Umesh Kumar S HT Kannada

Oct 25, 2024 11:54 AM IST

google News

ನೀವು ಕರ್ನಾಟಕದಲ್ಲಿ ವ್ಯವಹಾರ ಮಾಡೋವಾಗ ಕನ್ನಡದಲ್ಲಿ ಬೋರ್ಡ್‌ ಹಾಕಬೇಕು, ತಪ್ಪೇನು, ಅಳವಡಿಸಿ ಎಂದು ಪ್ರತಿಷ್ಠಿತ ಚಿಲ್ಲರೆ ವ್ಯಾಪಾರಸ್ಥರಿಗೆ ಕೋರ್ಟ್‌ ಸೂಚನೆ ನೀಡಿರುವುದಾಗಿ ವರದಿ ಹೇಳಿದೆ. (ಸಾಂಕೇತಿಕ ಚಿತ್ರ)

  • ನೀವು ಕರ್ನಾಟಕದಲ್ಲಿ ವ್ಯಾಪಾರ, ವ್ಯವಹಾರ ಮಾಡುವಾಗ ಅಂಗಡಿ ಬೋರ್ಡ್ ಕನ್ನಡದಲ್ಲಿ ಹಾಕಬೇಕು. ಅದರಲ್ಲಿ ತಪ್ಪೇನು ಎಂದು ಕರ್ನಾಟಕ ಹೈಕೋರ್ಟ್‌, ದಾವೆ ಹೂಡಿದ ಚಿಲ್ಲರೆ ವ್ಯಾಪಾರಸ್ಥರ ಸಂಘವನ್ನು ಕೇಳಿದೆ. ಬಿಬಿಎಂಪಿ ಸುತ್ತೋಲೆ ಪ್ರಶ್ನಿಸಿದ ದಾವೆ ವಿಚಾರಣೆಯಲ್ಲಿದೆ.

ನೀವು ಕರ್ನಾಟಕದಲ್ಲಿ ವ್ಯವಹಾರ ಮಾಡೋವಾಗ ಕನ್ನಡದಲ್ಲಿ ಬೋರ್ಡ್‌ ಹಾಕಬೇಕು, ತಪ್ಪೇನು, ಅಳವಡಿಸಿ ಎಂದು ಪ್ರತಿಷ್ಠಿತ ಚಿಲ್ಲರೆ ವ್ಯಾಪಾರಸ್ಥರಿಗೆ ಕೋರ್ಟ್‌ ಸೂಚನೆ ನೀಡಿರುವುದಾಗಿ ವರದಿ ಹೇಳಿದೆ. (ಸಾಂಕೇತಿಕ ಚಿತ್ರ)
ನೀವು ಕರ್ನಾಟಕದಲ್ಲಿ ವ್ಯವಹಾರ ಮಾಡೋವಾಗ ಕನ್ನಡದಲ್ಲಿ ಬೋರ್ಡ್‌ ಹಾಕಬೇಕು, ತಪ್ಪೇನು, ಅಳವಡಿಸಿ ಎಂದು ಪ್ರತಿಷ್ಠಿತ ಚಿಲ್ಲರೆ ವ್ಯಾಪಾರಸ್ಥರಿಗೆ ಕೋರ್ಟ್‌ ಸೂಚನೆ ನೀಡಿರುವುದಾಗಿ ವರದಿ ಹೇಳಿದೆ. (ಸಾಂಕೇತಿಕ ಚಿತ್ರ)

ಬೆಂಗಳೂರು: ಕರ್ನಾಟಕದಲ್ಲಿ ವ್ಯಾಪಾರ, ವ್ಯವಹಾರ ಮಾಡುವಾಗ ಅಂಗಡಿಗಳ ನಾಮಫಲಕ ಕನ್ನಡ ಭಾಷೆಯಲ್ಲಿರಬೇಕು. ಅದರಲ್ಲಿ ತಪ್ಪೇನು, ವ್ಯವಹರಿಸುವುದು ಕನ್ನಡಿಗರ ಜೊತೆಗೇ ಅಲ್ವ. ಹಾಗಾಗಿ ನಾಮಫಲಕ ನಿಯಮ ಅನುಸರಣೆಯಲ್ಲಿ ತಪ್ಪಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಹೇಳಿದೆ. ಬೆಂಗಳೂರು ವ್ಯಾಪ್ತಿಯಲ್ಲಿ ವಾಣಿಜ್ಯ, ವ್ಯವಹಾರ ನಡೆಸುವ ಅಂಗಡಿಗಳ ಮುಂದಿನ ನಾಮಫಲಕಗಳಲ್ಲಿ ಶೇ 60 ರಷ್ಟು ಕನ್ನಡವನ್ನು ಕಡಾಯವಾಗಿ ಬಳಸಬೇಕು ಎಂಬ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯ ಸುತ್ತೋಲೆ ಪ್ರಶ್ನಿಸಿ ಚಿಲ್ಲರೆ ವ್ಯಾಪಾರಸ್ಥರ ಸಂಘವು ಕರ್ನಾಟಕ ಹೈಕೋರ್ಟ್‌ ಮೆಟ್ಟಿಲೇರಿತ್ತು. ಅಲ್ಲದೆ, ಅರ್ಜಿಯ ತುರ್ತು ವಿಚಾರಣೆಗೆ ಮನವಿ ಮಾಡಿತ್ತು. ಆದರೆ, ಇದರ ವಿಚಾರಣೆ ಕೈಗೆತ್ತಿಕೊಂಡ ಕೋರ್ಟ್, ಅರ್ಜಿಯ ತುರ್ತು ವಿಚಾರಣೆ ಸಾಧ್ಯವಿಲ್ಲ ಎಂದು ಹೇಳಿದ್ದಲ್ಲದೆ, 'ನೀವು ಕರ್ನಾಟಕದಲ್ಲಿದ್ದ ಮೇಲೆ ಸೂಚನಾ ಫಲಕಗಳನ್ನು ಕನ್ನಡದಲ್ಲಿ ಪ್ರದರ್ಶಿಸಲೇಬೇಕು' ಎಂದು ದಾವೆ ಹೂಡಿದವರ ಪರ ವಕೀಲರಿಗೆ ಮೌಖಿಕವಾಗಿ ಸೂಚಿಸಿದೆ.

ಕನ್ನಡ ನಾಮಫಲಕ ಅಳವಡಿಕೆ ವಿರುದ್ಧ ಪ್ರತಿಷ್ಠಿತ ಚಿಲ್ಲರೆ ವ್ಯಾಪಾರಸ್ಥರ ಕೇಸ್‌

ರಿಟೇಲರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ, ಆದಿತ್ಯ ಬಿರ್ಲಾ ಫ್ಯಾಷನ್ ಆ್ಯಂಡ್ ರೀಟೇಲ್ ಲಿಮಿಟೆಡ್, ಟೈಟಾನ್ ಕಂಪನಿ ಲಿಮಿಟೆಡ್, ಅಡಿಡಾಸ್ ಇಂಡಿಯಾ ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಡ್ ಸೇರಿ 24 ಪ್ರತಿಷ್ಠಿತ ಖಾಸಗಿ ಸಂಸ್ಥೆಗಳು ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿವೆ. ದೂರುದಾರ ಸಂಸ್ಥೆಗಳ ಪರ ವಕೀಲರು ನ್ಯಾಯಮೂರ್ತಿ ಹೇಮಂತ ಚಂದನ ಗೌಡರ್ ಅವರ ನ್ಯಾಯಪೀಠದ ಮುಂದೆ ಹಾಜರಾಗಿ, ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವದ ಆಚರಣೆಗಳು, ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳು ತೀವ್ರಗೊಳ್ಳುವ ಕಾರಣ ಅರ್ಜಿಯನ್ನು ತುರ್ತು ವಿಚಾರಣೆಗೆ ನಿಗದಿಪಡಿಸಬೇಕು ಎಂದು ಕೋರಿದ್ದರು.

ಆದರೆ, ದಾವೆ ಹೂಡಿದವರ ಮನವಿಯನ್ನು ತಳ್ಳಿ ಹಾಕಿದ ನ್ಯಾಯಮೂರ್ತಿ, “ನೀವು ಕರ್ನಾಟಕದಲ್ಲಿ ವಹಿವಾಟು ನಡೆಸುತ್ತಿದ್ದೀರಿ ಎಂದ ಮೇಲೆ ನಿಮ್ಮ ಸೂಚನಾ ಫಲಕ ಅಥವಾ ನಾಮಫಲಕಗಳು ಕನ್ನಡದಲ್ಲೇ ಇರಬೇಕು. ಅದಕ್ಕೆ ವಿನಾಯಿತಿ ಇಲ್ಲ. ಸಂಸ್ಥೆಗಳಿಗೆ ಕನ್ನಡ ಹೋರಾಟದಿಂದ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಅವರ ವಿರುದ್ಧ ಬಲವಂತದ ಕ್ರಮ ಜರುಗಿಸಬಾರದು ಎಂದು ಬಿಬಿಎಂಪಿ ಮತ್ತು ಸರ್ಕಾರಕ್ಕೆ ನಿರ್ದೇಶಿಸಿದರು. ಮಾರ್ಚ್ 18ರಂದು ನೀಡಿದ್ದ ಮಧ್ಯಂತರ ಆದೇಶವನ್ನು ಮುಂದುವರಿಸುವುದಾಗಿ ಹೇಳಿದ ಅವರು, ಎರಡು ವಾರ ನಂತರ ಮುಂದಿನ ವಿಚಾರಣೆ ಎಂದು ನ್ಯಾಯಮೂರ್ತಿ ಹೇಳಿದ್ದಾಗಿ ಲೈವ್ ಲಾ ವರದಿ ಮಾಡಿದೆ.

ಟ್ರೇಡ್ ಮಾರ್ಕ್ ನಿಯಮ ಉಲ್ಲಂಘನೆ

ಚಿಲ್ಲರೆ ವ್ಯಾಪಾರಸ್ಥರ ಸಂಘವು ಕರ್ನಾಟಕ ಹೈಕೋರ್ಟ್‌ನಲ್ಲಿ ಕನ್ನಡ ನಾಮಫಲಕದ ವಿರುದ್ಧ ದಾವೆ ಹೂಡುವಾಗ, ಕರ್ನಾಟಕ ಭಾಷಾ ಸಮಗ್ರ ಅಭಿವೃದ್ಧಿ(ತಿದ್ದುಪಡಿ) ಕಾಯ್ದೆ 2024ರ ಸೆಕ್ಷನ್ 17 (6), 23 ಮತ್ತು 27 ಸರಿ ಇಲ್ಲ ಎಂದು ವಾದಿಸಿವೆ. ಇವು ಅಸಾಂವಿಧಾನಿಕ ಮತ್ತು ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತವೆ. ಅದೇ ರೀತಿ ಟ್ರೇಡ್ ಮಾರ್ಕ್‌ ಕಾಯ್ದೆಯನ್ನೂ ಉಲ್ಲಂಘಿಸುತ್ತಿದೆ ಎಂದು ಪ್ರತಿಪಾದಿಸಿದೆ.

ಈ ಹಿಂದೆಯೂ ಚಿಲ್ಲರೆ ವ್ಯಾಪಾರಸ್ಥರ ಸಂಘವು 2009ರಲ್ಲಿ ಪ್ರಯತ್ನಿಸಿ ವಿಫಲವಾಗಿತ್ತು. ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಕಾಯಿದೆಗೆ ತಿದ್ದುಪಡಿ ಮಾಡಬೇಕು ಎಂದು ಕೋರ್ಟ್‌ನಲ್ಲಿ ದಾವೆ ಹೂಡಿತ್ತು. ಅಂದು ಆ ದಾವೆಯ ವಿಚಾರಣೆ ನಡೆಸಿದ ಹೈಕೋರ್ಟ್‌, 2009ರ ಜೂನ್ ತಿಂಗಳಲ್ಲಿ ಅಸೋಸಿಯೇಷನ್‌ ಸಲ್ಲಿಸಿದ್ದ ದಾವೆ ಅರ್ಜಿಯನ್ನು ತಿರಸ್ಕರಿಸಿತ್ತು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ