logo
ಕನ್ನಡ ಸುದ್ದಿ  /  ಕರ್ನಾಟಕ  /  ಏನ್ಮಾಡ್ತಿರೋ ಗೊತ್ತಿಲ್ಲ ಶೇ 100 ಫಲಿತಾಂಶ ಬೇಕೇ ಬೇಕು; ಪದವಿ ಪೂರ್ವ ಶಿಕ್ಷಣ ಇಲಾಖೆಯ ನಡೆಗೆ ಉಪನ್ಯಾಸಕ ಸಂಘದ ವಿರೋಧ

ಏನ್ಮಾಡ್ತಿರೋ ಗೊತ್ತಿಲ್ಲ ಶೇ 100 ಫಲಿತಾಂಶ ಬೇಕೇ ಬೇಕು; ಪದವಿ ಪೂರ್ವ ಶಿಕ್ಷಣ ಇಲಾಖೆಯ ನಡೆಗೆ ಉಪನ್ಯಾಸಕ ಸಂಘದ ವಿರೋಧ

HT Kannada Desk HT Kannada

Jan 05, 2024 08:11 AM IST

google News

ಏನ್ಮಾಡ್ತಿರೋ ಗೊತ್ತಿಲ್ಲ ಶೇ. 100 ಫಲಿತಾಂಶ ಬೇಕೇ ಬೇಕು; ಪದವಿ ಪೂರ್ವ ಶಿಕ್ಷಣ ಇಲಾಖೆಯ ನಡೆಗೆ ಉಪನ್ಯಾಸಕರ ಸಂಘದ ವಿರೋಧ

    • ಇಡೀ ರಾಜ್ಯದಲ್ಲಿ ನಮ್ಮ ಜಿಲ್ಲೆ ಮೊದಲ ಸ್ಥಾನಕ್ಕೆ ಏರಬೇಕು. ಎಲ್ಲ ಸರ್ಕಾರಿ ಕಾಲೇಜುಗಳು ಶೇ. 100ರಷ್ಟು ಫಲಿತಾಂಶ ದಾಖಲಿಸಬೇಕು ಎಂಬ ಕಾರಣಕ್ಕೆ ಕೆಲ ಉಪ ನಿರ್ದೇಶಕರು, ಲೆಕ್ಚರರ್ಸ್‌ ಬಳಿ ಮುಚ್ಚಳಿಕೆ ಬರೆಸಿಕೊಳ್ಳುತ್ತಿದ್ದಾರೆ. ಅಧಿಕಾರಿಗಳ ಈ ಕ್ರಮಕ್ಕೆ ಉಪನ್ಯಾಸಕರು ಮತ್ತು ಉಪನ್ಯಾಸಕ ಸಂಘಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಏನ್ಮಾಡ್ತಿರೋ ಗೊತ್ತಿಲ್ಲ ಶೇ. 100 ಫಲಿತಾಂಶ ಬೇಕೇ ಬೇಕು; ಪದವಿ ಪೂರ್ವ ಶಿಕ್ಷಣ ಇಲಾಖೆಯ ನಡೆಗೆ ಉಪನ್ಯಾಸಕರ ಸಂಘದ ವಿರೋಧ
ಏನ್ಮಾಡ್ತಿರೋ ಗೊತ್ತಿಲ್ಲ ಶೇ. 100 ಫಲಿತಾಂಶ ಬೇಕೇ ಬೇಕು; ಪದವಿ ಪೂರ್ವ ಶಿಕ್ಷಣ ಇಲಾಖೆಯ ನಡೆಗೆ ಉಪನ್ಯಾಸಕರ ಸಂಘದ ವಿರೋಧ

Karnataka Education news: ಶೇ. 100ರಷ್ಟು ಫಲಿತಾಂಶ ನೀಡುತ್ತೇವೆ. ಇಲ್ಲವಾದಲ್ಲಿ ಶಿಸ್ತುಕ್ರಮಕ್ಕೆ ಬದ್ಧರಾಗಿರುತ್ತೇವೆ ಎಂದು ಮುಚ್ಚಳಿಕೆ ಬರೆಸಿಕೊಳ್ಳುತ್ತಿರುವ ಪದವಿ ಪೂರ್ವ ಶಿಕ್ಷಣ ಇಲಾಖೆಯ ಕ್ರಮಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ. ಶ್ರಮ ಹಾಕಿ ಉತ್ತಮ ಫಲಿತಾಂಶ ಬರಲಿ. ವಿದ್ಯಾರ್ಥಿಗಳು ಒಳ್ಳೆಯ ಅಂಕ ಗಳಿಸಲಿ ಎಂದು ಶ್ರಮ ಹಾಕುತ್ತೇವೆ. ಅಂತಿಮವಾಗಿ ಪರೀಕ್ಷೆ ಎದುರಿಸುವುದು ವಿದ್ಯಾರ್ಥಿಗಳ ಜವಾಬ್ದಾರಿಯಾಗಿರುತ್ತದೆ ಎಂದು ಉಪನ್ಯಾಸಕರು ಹೇಳುತ್ತಾರೆ.

ಬೆಂಗಳೂರು ಉತ್ತರ, ಚಿತ್ರದುರ್ಗ ಮೊದಲಾದ ಜಿಲ್ಲೆಗಳಲ್ಲಿ ಮುಚ್ಚಳಿಕೆ ಬರೆಯಿಸಿ ಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇಡೀ ರಾಜ್ಯದಲ್ಲಿ ನಮ್ಮ ಜಿಲ್ಲೆ ಮೊದಲ ಸ್ಥಾನಕ್ಕೆ ಏರಬೇಕು. ಎಲ್ಲ ಸರ್ಕಾರಿ ಕಾಲೇಜುಗಳು ಶೇ. 100ರಷ್ಟು ಫಲಿತಾಂಶ ದಾಖಲಿಸಬೇಕು ಎಂಬ ಕಾರಣಕ್ಕೆ ಕೆಲ ಉಪ ನಿರ್ದೇಶಕರು ಇಂತಹ ಕ್ರಮಕ್ಕೆ ಮುಂದಾಗಿದ್ದಾರೆ. ಅಧಿಕಾರಿಗಳ ಈ ಕ್ರಮಕ್ಕೆ ಉಪನ್ಯಾಸಕರು ಮತ್ತು ಉಪನ್ಯಾಸಕರ ಸಂಘಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಬಹುತೇಕ ಕಾಲೇಜುಗಳು ವಿರೋಧ

ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ಮತ್ತು ವಿಷಯವಾರು ಉಪನ್ಯಾಸಕರಿಂದ ಈ ರೀತಿ ಪ್ರತ್ಯೇಕ ಮುಚ್ಚಳಿಕೆ ಪತ್ರ ಬರೆಸಿಕೊಳ್ಳಲಾಗುತ್ತಿದೆ. 2023–24ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಶೇ. 100ರಷ್ಟು ಫಲಿತಾಂಶ ನೀಡುತ್ತೇವೆ. ಒಂದು ವೇಳೆ ಕಳಪೆ ಫಲಿತಾಂಶ ಬಂದರೆ ಶಿಸ್ತುಕ್ರಮಕ್ಕೆ ಒಳಗಾಗುತ್ತೇವೆ ಎಂದು ಬರೆಯಿಸಿಕೊಳ್ಳಲಾಗುತ್ತಿದೆ. ಮುಚ್ಚಳಿಕೆ ಪತ್ರದ ಮಾದರಿಯನ್ನು ಉಪ ನಿರ್ದೇಶಕರ ಕಚೇರಿಯಿಂದಲೇ ಮುದ್ರಿಸಿ, ಆಯಾ ಕಾಲೇಜುಗಳ ಪ್ರಾಂಶುಪಾಲರಿಗೆ ಕಳುಹಿಸಲಾಗಿದೆ. ಕೆಲವು ಕಾಲೇಜುಗಳು ಈಗಾಗಲೇ ಮುಚ್ಚಳಿಕೆ ಪತ್ರ ಬರೆದುಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಬಹುತೇಕ ಕಾಲೇಜುಗಳು ವಿರೋಧ ವ್ಯಕ್ತಪಡಿಸಿವೆ.

ಎಲ್ಲರನ್ನೂ ಒಂದೇ ತಕ್ಕಡಿಗೆ ಹಾಕಬೇಡಿ; ನಿಂಗೇಗೌಡ

ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ನಿಂಗೇಗೌಡ ಎ.ಎಚ್. ಪ್ರತಿಕ್ರಿಯಿಸಿದ್ದು, ಉಪ ನಿರ್ದೇಶಕರ ಈ ಕ್ರಮವನ್ನು ವಿರೋಧಿಸಿದ್ದಾರೆ. ರಾಜ್ಯದ ಕಾಲೇಜುಗಳು ಗುಣಮಟ್ಟದಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿವೆ. ಇದಕ್ಕೆ ಉಪನ್ಯಾಸಕರ ಪಾಠದ ವೈಖರಿ ಕಾರಣವಾಗಿದೆ. ಆದರೆ, ಇಡೀ ರಾಜ್ಯದ ಕಾಲೇಜುಗಳನ್ನು ಒಂದೇ ಮಾನದಂಡದಿಂದ ಅಳೆಯಲಾಗದು. ಯಾದಗಿರಿ ವಿದ್ಯಾರ್ಥಿಗೂ ಮಂಗಳೂರಿನ ವಿದ್ಯಾರ್ಥಿಗೂ ಹೋಲಿಕೆ ಮಾಡಲಾಗದು. ಸರ್ಕಾರಿ ಕಾಲೇಜಿಗೆ ಸೇರುವ ಮಕ್ಕಳ ಕೌಟುಂಬಿಕ, ಸಾಮಾಜಿಕ ಪರಿಸ್ಥಿತಿ ಭಿನ್ನವಾಗಿರುತ್ತದೆ. ಕಾಲೇಜು ಶುಲ್ಕ ಕಟ್ಟಲು ಸಾಧ್ಯವಾಗದ ಕುಟುಂಬಗಳ ಮಕ್ಕಳು ಬರುತ್ತಾರೆ. ಪೋಷಕರಿಗೆ ತಮ್ಮ ಮಕ್ಕಳು ಓದಲೇಬೇಕೆಂಬ ಕಾಳಜಿ ಇರುವುದಿಲ್ಲ ಎನ್ನುತ್ತಾರೆ.

ಅಂಕ ಗಳಿಕೆಯೊಂದೇ ಶಿಕ್ಷಣದ ಉದ್ದೇಶ ಅಲ್ಲ

ನೂರರಷ್ಟು ಫಲಿತಾಂಶ ಬೇಕೆಂದರೆ ಕಾಪಿ ಹೊಡೆಸಲು ಅವಕಾಶ ನೀಡಬೇಕಾಗುತ್ತದೆ. ಮಕ್ಕಳ ಮೇಲೆ ಒತ್ತಡ ಹೇರಿದರೆ ಅವರು ಕಾಲೇಜು ಬಿಡುತ್ತಾರೆ ಎಂದು ಅಭಿಪ್ರಾಯಪಡುತ್ತಾರೆ. ಇಷ್ಟಕ್ಕೂ ಅಂಕ ಗಳಿಕೆಯೊಂದೇ ಶಿಕ್ಷಣದ ಉದ್ದೇಶ ಅಲ್ಲ. ಜಗತ್ತಿನ ಯಾವ ಶಿಕ್ಷಣ ತಜ್ಞನಿಗೂ ಶೇ. ನೂರರಷ್ಟು ಫಲಿತಾಂಶ ಕೊಡಲು ಸಾಧ್ಯವಾಗಿಲ್ಲ. 2022-23ನೇ ಸಾಲಿನ ಫಲಿತಾಂಶ ಏರಿಕೆಗೆ ಉಪನ್ಯಾಸಕರ ಶ್ರಮ ಕಾರಣ ಎಂದು ಮತ್ತೊಬ್ಬ ಉಪನ್ಯಾಸಕರು ಹೇಳುತ್ತಾರೆ. 2021–22ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ 61.88 ಫಲಿತಾಂಶ ಬಂದಿತ್ತು. ಇಲಾಖೆಯು ಫಲಿತಾಂಶ ಸುಧಾರಣೆಗೆ ಹಲವು ಕ್ರಮಗಳನ್ನು ಕೈಗೊಂಡಿತ್ತು. ಇದರಿಂದ 2022-23ನೇ ಸಾಲಿನ ಫಲಿತಾಂಶ ಶೇ 74.67ಕ್ಕೆ ಏರಿಕೆಯಾಗಿತ್ತು. ಹಲವು ಜಿಲ್ಲೆಗಳಲ್ಲಿ ಅಚ್ಚರಿಯ ಫಲಿತಾಂಶ ಬಂದಿತ್ತು.

ಶೇ 95 ರಷ್ಟು ಉಪನ್ಯಾಸಕರು ಚೆನ್ನಾಗಿಯೇ ಪಾಠ ಮಾಡುತ್ತಾರೆ. ವಿದ್ಯಾರ್ಥಿಗಳನ್ನು ಹುರಿ ದುಂಬಿಸಬಹುದು. ಪ್ರೇರಣೆ ನೀಡಬಹುದು. ಅದನ್ನೂ ಮೀರಿ ಒತ್ತಡ ಹೇರಿದರೆ ಅನಾಹುತಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ನಿಂಗೇಗೌಡ ಆತಂಕ ವ್ಯಕ್ತಪಡಿಸುತ್ತಾರೆ. ಜೊತೆಗೆ ಈ ಆದೇಶವನ್ನು ಇಲಾಖೆ ಹಿಂಪಡೆಯುವ ವಿಶ್ವಾಸ ಇದೆ. ಇದು ಉಪ ನಿರ್ದೇಶಕರ ಗಮನಕ್ಕೆ ಬಾರದೆ ನಡೆದಿದೆ ಎಂದು ಅವರು ಹೇಳುತ್ತಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ