logo
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕದಲ್ಲಿ ಶಾಸಕರ ವೇತನ, ಭತ್ಯೆ ಮತ್ತೆ ಹೆಚ್ಚಳ ಬೇಡಿಕೆ, ಈಗ ಶಾಸಕರಿಗೆ ಪ್ರತಿ ತಿಂಗಳು ಸಿಗುವ ವೇತನ ಎಷ್ಟು?

ಕರ್ನಾಟಕದಲ್ಲಿ ಶಾಸಕರ ವೇತನ, ಭತ್ಯೆ ಮತ್ತೆ ಹೆಚ್ಚಳ ಬೇಡಿಕೆ, ಈಗ ಶಾಸಕರಿಗೆ ಪ್ರತಿ ತಿಂಗಳು ಸಿಗುವ ವೇತನ ಎಷ್ಟು?

Umesha Bhatta P H HT Kannada

Dec 17, 2024 07:59 PM IST

google News

ಶಾಸಕರ ವೇತನ ಹೆಚ್ಚಳಕ್ಕೆ ಸಂಬಂಧಿಸಿ ಕರ್ನಾಟಕ ವಿಧಾನಸಭೆ ಅಧಿವೇಶನದಲ್ಲಿ ಚರ್ಚೆ ನಡೆದಿದೆ.

    • ಕರ್ನಾಟಕದ ಶಾಸಕರಿಗೆ ವೇತನ ಹಾಗೂ ಭತ್ಯೆ ಹೆಚ್ಚಳದ ಬೇಡಿಕೆ ಕೇಳಿ ಬಂದಿದೆ.ಬೆಳಗಾವಿ ಅಧಿವೇಶನದಲ್ಲಿ ಈ ಕುರಿತು ಶಾಸಕರು ಚರ್ಚಿಸಿದ್ದು ಆಯೋಗ ರಚನೆ ಪರಿಶೀಲನೆ ಮಾಡುವ ಬಗ್ಗೆ ಸ್ಪೀಕರ್‌ ಯು.ಟಿ.ಖಾದರ್‌, ಸಚಿವ ಕೃಷ್ಣಬೈರೇಗೌಡ ಪ್ರಸ್ತಾಪಿಸಿದ್ದಾರೆ.
ಶಾಸಕರ ವೇತನ ಹೆಚ್ಚಳಕ್ಕೆ ಸಂಬಂಧಿಸಿ ಕರ್ನಾಟಕ ವಿಧಾನಸಭೆ ಅಧಿವೇಶನದಲ್ಲಿ ಚರ್ಚೆ ನಡೆದಿದೆ.
ಶಾಸಕರ ವೇತನ ಹೆಚ್ಚಳಕ್ಕೆ ಸಂಬಂಧಿಸಿ ಕರ್ನಾಟಕ ವಿಧಾನಸಭೆ ಅಧಿವೇಶನದಲ್ಲಿ ಚರ್ಚೆ ನಡೆದಿದೆ.

ಬೆಳಗಾವಿ: ಎರಡು ವರ್ಷದಿಂದ ಏರಿಕೆಯಾಗಿದ್ದ ಕರ್ನಾಟಕದ ವಿಧಾನಸಭಾ ಸದಸ್ಯರು ಹಾಗೂ ವಿಧಾನಪರಿಷತ್‌ ಸದಸ್ಯರ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಮತ್ತೆ ಬೇಡಿಕೆ ಕೇಳಿ ಬಂದಿದೆ.ಬೆಳಗಾವಿಯಲ್ಲಿ ನಡೆದಿರುವ ಅಧಿವೇಶನದಲ್ಲಿ ಪಕ್ಷ ಬೇಧ ಮರೆತು ಶಾಸಕರ ವೇತನ ಹಾಗೂ ಭತ್ಯೆಗಳ ಹೆಚ್ಚಳಕ್ಕೆ ಬೆಂಬಲ ದೊರಕಿದೆ. ಶಾಸಕರ ವೇತನ ಹಾಗೂ ಭತ್ಯೆಯಲ್ಲಿ ಹೆಚ್ಚಳ ಏರಿಕೆ ಅಗತ್ಯವಿದೆ ಎನ್ನುವ ಅಭಿಪ್ರಾಯಕ್ಕೆ ವಿಧಾನಸಭೆ ಅಧ್ಯಕ್ಷ ಯು.ಟಿ. ಖಾದರ್‌, ವೇತನ ಆಯೋಗ ರಚಿಸಿ ಪರಿಷ್ಕರಣೆಗೆ ಅವಕಾಶ ನೀಡಬಹುದೇ ಎನ್ನುವ ಕುರಿತು ತೀರ್ಮಾನ ಕೈಗೊಳ್ಳುತ್ತೇವೆ ಎಂದು ದನಿ ಗೂಡಿಸಿದರು. ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಕೂಡ ಇದಕ್ಕೆ ಬೆಂಬಲ ಸೂಚಿಸಿ, ನಾವೇ ತೀರ್ಮಾನ ಕೈಕೊಳ್ಳುವ ಆಯೋಗ ರಚಿಸಿ ಅಲ್ಲಿಂದ ಬರುವ ಶಿಫಾರಸು. ಸಲಹೆಗಳನ್ನು ಆಧರಿಸಿ ನಿರ್ಧರಿಸುವುದು ಒಳ್ಳೆಯ ಕ್ರಮವಾಗಲಿದೆ ಎಂದು ಹೇಳಿದ್ಧಾರೆ.

ಸೋಮವಾರ ವಿಧಾನಸಭೆ ಅಧಿವೇಶನ ನಡೆಯುವಾಗಲೇ ಬಿಜೆಪಿ ಉಪನಾಯಕ ಅರವಿಂದ ಬೆಲ್ಲದ್‌ ಶಾಸಕರ ವೇತನ ಹಾಗೂ ಭತ್ಯೆ ಏರಿಕೆ ಪ್ರಸ್ತಾಪಿಸಿದರು.

ಪ್ರಸ್ತುತ, ಶಾಸಕರು ಮತ್ತು ಎಂಎಲ್‌ಸಿಗಳು ಪಡೆಯುವ ಸಂಬಳ ಮತ್ತು ಭತ್ಯೆಗಳನ್ನು ಕರ್ನಾಟಕ ಶಾಸಕಾಂಗದ ವೇತನಗಳು, ಪಿಂಚಣಿಗಳು ಮತ್ತು ಭತ್ಯೆಗಳ ಕಾಯಿದೆಯಡಿ ಅವರೇ ನಿರ್ಧರಿಸುತ್ತಾರೆ. ತಮಗೆ ಬೇಕಾದ ರೀತಿಯಲ್ಲಿ ಹೆಚ್ಚಿಸಿಕೊಳ್ಳುತ್ತಾರೆ ಎನ್ನುವ ಭಾವನೆ ಜನರಲ್ಲಿದೆ. ಆದರೆ ವೇತನ ಏರಿಕೆ ಕುರಿತು ಸೂಕ್ತ ಮಾರ್ಗೋಪಾಯ ಬೇಕು.ಸರ್ಕಾರಿ ನೌಕರರಿಗೆ ಇರುವಂತೆ ಶಾಸಕರ ಸಂಬಳ ಮತ್ತು ಭತ್ಯೆಯನ್ನು ವಿಶ್ಲೇಷಿಸಲು ಮತ್ತು ಪರಿಶೀಲಿಸಲು ನಮಗೆ ವೇತನ ಆಯೋಗದ ಅಗತ್ಯವಿದೆ ಎನ್ನುವ ಸಲಹೆ ನೀಡಿದರು.

ಬೆಲ್ಲದ್ ಅವರ ಈ ವಿಚಾರವನ್ನು ಜೆಡಿಎಸ್ ಪಕ್ಷದ ನಾಯಕ ಸಿಬಿ ಸುರೇಶ್ ಬಾಬು ಸಮರ್ಥಿಸಿಕೊಂಡು ಇದಕ್ಕೊಂದು ಸೂಕ್ತ ಮಾರ್ಗ ಕಂಡುಕೊಳ್ಳಿ ಎಂದು ಹೇಳಿದರು.

ಸಚಿವರ ಬೆಂಬಲ

ಸರ್ಕಾರದ ಪರವಾಗಿ ಪ್ರತಿಕ್ರಿಯಿಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಶಾಸಕರ ವೇತನವನ್ನು ನಿರ್ಧರಿಸಲು ವೇತನ ಆಯೋಗದಂತಹ ಸಂಸ್ಥೆ ಬೇಕು ಎನ್ನುವ ಅಭಿಪ್ರಾಯ ಸೂಕ್ತವಾದದ್ದು.ಯಾವುದೇ ವ್ಯವಸ್ಥೆಯಲ್ಲಿ, ನಮಗೆ ಸಂಬಂಧಿಸಿದ ವಿಷಯಗಳಲ್ಲಿ ನಾವೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ ಎನ್ನುವ ತಪ್ಪು ಮನೋಭಾವ ಸಾರ್ವಜನಿಕವಾಗಿ ಇದೆ. ಇದು ಎಲ್ಲಾ ನ್ಯಾಯೋಚಿತ ತತ್ವಗಳಿಗೆ ವಿರುದ್ಧವಾಗಿದೆ. ಶಾಸನಬದ್ಧ ಸಂಸ್ಥೆ ಅಥವಾ ಹೊರಗಿನವರು ಇದನ್ನು ಮಾಡಬೇಕು ಎಂದು ಅಭಿಪ್ರಾಯಪಟ್ಟರು.

ಖಾಸಗಿ ವಲಯದಲ್ಲಿ ವೆಚ್ಚದ ಮೌಲ್ಯಮಾಪನ ಮಾಡಲಾಗುತ್ತದೆ. ಅದರಲ್ಲೂ ಜನಪ್ರತಿನಿಧಿಗಳಾಗಿ ಕೆಲಸ ಮಾಡುವವರಿಗೆ ಸವಾಲು ಅಧಿಕವಾಗಿರುತ್ತವೆ. ಪ್ರತಿನಿತ್ಯ ಎಂಎಲ್ಎ ಎಷ್ಟು ದೂರ ಕ್ರಮಿಸುತ್ತಾನೆ? ಒಬ್ಬ ಎಂಎಲ್ ಎ ದಿನಕ್ಕೆ ಎಷ್ಟು ಜನರನ್ನು ಭೇಟಿಯಾಗುತ್ತಾನೆ? ಸಿಬ್ಬಂದಿ ಅವಶ್ಯಕತೆ ಏನು? ಇದನ್ನು ವೈಜ್ಞಾನಿಕವಾಗಿ ಮೌಲ್ಯಮಾಪನ ಮಾಡಬೇಕು’ ಎಂದು ವಿವರಿಸಿದರು.

ಇದಕ್ಕೆ ಉತ್ತರಿಸಿದ ಸಭಾಧ್ಯಕ್ಷ ಯು.ಟಿ.ಖಾದರ್‌, ಕರ್ನಾಟಕದಲ್ಲಿ ಶಾಸಕರ ವೇತನ ಮತ್ತು ಭತ್ಯೆಗಳನ್ನು ನಿರ್ಧರಿಸಲು ವೇತನ ಆಯೋಗವನ್ನು ರಚಿಸುವ ಪ್ರಸ್ತಾವನೆಯನ್ನು ಚರ್ಚಿಸಿ ನಿರ್ಧರಿಸುವುದಾಗಿ ಭರವಸೆ ನೀಡಿದರು.

ಶಾಸಕರ ವೇತನ ಎಷ್ಟು

2022 ರಲ್ಲಿ, ಕರ್ನಾಟಕದಲ್ಲಿ ಶಾಸಕರು ಶೇ. 60 ಸಂಬಳವನ್ನು ಹೆಚ್ಚಿಸಿಕೊಂಡಿದ್ದರು. ಸದ್ಯ ಶಾಸಕರಿಗೆ ತಿಂಗಳಿಗೆ 40,000 ರೂ. ವರೆಗೆ ಮಾಸಿಕ ವೇತನ ಸಿಗುತ್ತಿದೆ. ಕ್ಷೇತ್ರ ಪ್ರಯಾಣ ಭತ್ಯೆಯಾಗಿ ಪ್ರತಿ ತಿಂಗಳು 60,000 ರೂ. ನೀಡಲಾಗುತ್ತಿದೆ.

ಸಭೆಗೆ ಹಾಜರಾದರೆ ದಿನಭತ್ಯೆ 7 ಸಾವಿರ ರೂ. ದೂರವಾಣಿ ಮೊಬೈಲ್‌ಗೆಂದು ಮಾಸಿಕ 20 ಸಾವಿರ ರೂ. ಅಂಚೆ ವೆಚ್ಚಕ್ಕೆ 5 ಸಾವಿರ ರೂ. ಆಪ್ತ ಸಹಾಯಕನ ವೇತನ 20 ಸಾವಿರ ರೂ. ಹಾಗೂ ವಾರ್ಷಿಕ ಪ್ರಮಾಣ ಭತ್ಯೆ2.50 ಲಕ್ಷ ರೂ. ಗಳನ್ನು ಶಾಸಕರಿಗಾಗಿ ನೀಡಲಾಗುತ್ತಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ