logo
ಕನ್ನಡ ಸುದ್ದಿ  /  ಕರ್ನಾಟಕ  /  Udyogini Scheme: ಏನಿದು ಉದ್ಯೋಗಿನಿ ಯೋಜನೆ; ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ, ವಯೋಮಿತಿ, ಅಗತ್ಯ ದಾಖಲೆಗಳ ವಿವರ ಇಲ್ಲಿದೆ

Udyogini Scheme: ಏನಿದು ಉದ್ಯೋಗಿನಿ ಯೋಜನೆ; ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ, ವಯೋಮಿತಿ, ಅಗತ್ಯ ದಾಖಲೆಗಳ ವಿವರ ಇಲ್ಲಿದೆ

Reshma HT Kannada

Feb 27, 2024 07:00 AM IST

google News

ಏನಿದು ಉದ್ಯೋಗಿನಿ ಯೋಜನೆ; ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ, ವಯೋಮಿತಿ, ಅಗತ್ಯ ದಾಖಲೆಗಳ ವಿವರ ಇಲ್ಲಿದೆ

    • ಕರ್ನಾಟಕ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಉದ್ಯೋಗಿನಿ ಯೋಜನೆಯೂ ಒಂದು. ಸ್ವಂತ ಉದ್ಯಮ ನಡೆಸಲು ಬಯಸುವ ಮಹಿಳೆಯರಿಗೆ ಸಾಲ ನೀಡುವ ಯೋಜನೆ ಇದಾಗಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ, ಇದಕ್ಕೆ ಯಾರೆಲ್ಲಾ ಅರ್ಹರು, ಆದಾಯ ಮಿತಿ ಎಷ್ಟಿರಬೇಕು ಎಂಬೆಲ್ಲಾ ಮಾಹಿತಿ ಇಲ್ಲಿದೆ.
ಏನಿದು ಉದ್ಯೋಗಿನಿ ಯೋಜನೆ; ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ, ವಯೋಮಿತಿ, ಅಗತ್ಯ ದಾಖಲೆಗಳ ವಿವರ ಇಲ್ಲಿದೆ
ಏನಿದು ಉದ್ಯೋಗಿನಿ ಯೋಜನೆ; ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ, ವಯೋಮಿತಿ, ಅಗತ್ಯ ದಾಖಲೆಗಳ ವಿವರ ಇಲ್ಲಿದೆ

ಮಹಿಳೆಯರ ಸ್ವಾವಲಂಬನೆ ಹಾಗೂ ಅವರ ಸಾಮರ್ಥ್ಯವನ್ನು ನಿರೂಪಿಸಲು ಒತ್ತು ನೀಡುವ ಸಲುವಾಗಿ ಸರ್ಕಾರಗಳು ಸಾಕಷ್ಟು ಯೋಜನೆಗಳನ್ನು ರೂಪಿಸುತ್ತವೆ.‌ ಹೆಣ್ಣುಮಕ್ಕಳ ಸ್ವಾವಲಂಬನೆಗೆ ಒತ್ತು ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರವು ಉದ್ಯೋಗಿನಿ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆ ಉದ್ದೇಶವು ಮಹಿಳೆಯರಿಗೆ ಸ್ವಂತ ಉದ್ಯಮಕ್ಕೆ ಬೆಂಬಲ ನೀಡುವುದು. ಸರ್ಕಾರ ರೂಪಿಸುವ ಇಂತಹ ಹಲವು ಯೋಜನೆಗಳು ಹೆಣ್ಣುಮಕ್ಕಳನ್ನು ಬಡತನದಿಂದ ನಿರ್ಮೂಲನೆ ಮಾಡಿ, ಗಳಿಕೆಗೆ ನೆರವಾಗುವುದಾಗಿದೆ. ಕರ್ನಾಟಕ ಸರ್ಕಾರದ ಉದ್ಯೋಗಿನಿ ಯೋಜನೆಯು ಸ್ವಂತ ವ್ಯಾಪಾರ ನಡೆಸಲು ಬಯಸುವ ಹೆಣ್ಣುಮಕ್ಕಳಿಗಾಗಿ ರೂಪಿಸಲಾಗಿದೆ. ಈ ಯೋಜನೆಯಡಿ ಮಹಿಳೆಯರು ಯಾವುದೇ ಬಡ್ಡಿಯಿಲ್ಲದೇ ಸಾಲ ಪಡೆಯಬಹುದಾಗಿದೆ. ಈ ಯೋಜನೆಯ ಲಾಭಗಳೇನು, ಇದಕ್ಕೆ ಯಾರು ಅರ್ಜಿ ಸಲ್ಲಿಸಬಹುದು, ಅರ್ಹತೆಗಳೇನು, ಹೇಗೆ ಅರ್ಜಿ ಸಲ್ಲಿಸುವುದು ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

ಏನಿದು ಉದ್ಯೋಗಿನಿ ಯೋಜನೆ

ಉದ್ಯಮಗಳನ್ನು ಪ್ರಾರಂಭಿಸಲು ಮಹಿಳೆಯರಿಗೆ ಹಣಕಾಸಿನ ನೆರವು ನೀಡುವ ಯೋಜನೆ ಇದಾಗಿದೆ. ಆ ಮೂಲಕ ಈ ಕಾರ್ಯಕ್ರಮವು ಮಹಿಳೆಯರಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುತ್ತದೆ ಹಾಗೂ ಉದ್ಯಮರಂಗದಲ್ಲಿ ಬೆಳೆಯಲು ಮಹಿಳೆಯರಿಗೆ ಪ್ರೇರೇಪಿಸುತ್ತದೆ. ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳಲ್ಲಿ ವಾಸಿಸುವ ಮಹಿಳೆಯರಿಗೆ ಧನಸಹಾಯ ಹಾಗೂ ಬೆಂಬಲ ನೀಡುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.

ಈ ಯೋಜನೆಯು ಕುಟುಂಬದ ಒಟ್ಟು ಆದಾಯವನ್ನು ಹೆಚ್ಚಿಸುವ ಹಾಗೂ ರಾಷ್ಟ್ರದ ಒಟ್ಟಾರೆ ಬೆಳವಣಿಗೆಗೆ ಕೊಡುಗೆ ನೀಡಲು ಸಹಾಯ ಮಾಡುತ್ತದೆ. ಇದು ಸಮಾಜದ ಎಲ್ಲಾ ವರ್ಗದ ಮಹಿಳೆಯರಿಗೂ ಬಡ್ಡಿ ರಹಿತ ಸಾಲ ನೀಡುವ ಯೋಜನೆಯಾಗಿದೆ.

3 ಲಕ್ಷದವರೆಗೆ ಸಾಲ

ಈ ಯೋಜನೆಯು ವ್ಯವಹಾರ ಆರಂಭಿಸಲು ಬಯಸುವ ಹೆಣ್ಣುಮಕ್ಕಳಿಗೆ 3 ಲಕ್ಷ ರೂವರೆಗೆ ಸಾಲ ನೀಡುತ್ತದೆ. 18 ರಿಂದ 55 ವರ್ಷದ ಮಹಿಳೆಯರು ಈ ಯೋಜನೆಯ ಲಾಭವನ್ನು ಪಡೆಯಬಹುದು. ಈ ಸಾಲಕ್ಕೆ ಅವರು ಯಾವುದೇ ಶ್ಯೂರಿಟಿ ನೀಡುವ ಅಗತ್ಯವಿರುವುದಿಲ್ಲ. ಈ ಬಡ್ಡಿ ರಹಿತ ಸಾಲವನ್ನು ಪಡೆಯಲು ಕೆಲವು ಷರುತ್ತುಗಳು ಇವೆಯಾದರೂ ಎಲ್ಲಾ ಬ್ಯಾಂಕ್‌ಗಳು ಹಾಗೆ ಮಾಡುವುದಿಲ್ಲ.

ಉದ್ಯೋಗಿನಿ ಯೋಜನೆಯು ಪಂಜಾಬ್‌ ಮತ್ತು ಸಿಂಧ್‌ ಬ್ಯಾಂಕ್‌, ಸಾರಸ್ವತ್‌ ಬ್ಯಾಂಕ್‌ ಮತ್ತು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಸೇರಿದಂತೆ ಹಲವಾರು ವಾಣಿಜ್ಯ ಹಾಗೂ ಸಾರ್ವಜನಿಕ ವಲಯದ ಬ್ಯಾಂಕುಗಳ ಬೆಂಬಲ ಇದಕ್ಕೆ ಹೆಚ್ಚಿದೆ. ಈ ಸಂಸ್ಥೆಗಳು ಮಹಿಳೆಯರಿಗೆ ವೃತ್ತಿಪರ ಅಭಿವೃದ್ಧಿ ತರಬೇತಿ ಕಾರ್ಯಕ್ರಮಗಳನ್ನು ಸಂಘಟಿಸುತ್ತದೆ ಮತ್ತು ಕಾರ್ಯಗತಗೊಳಿಸುತ್ತದೆ. ಜೊತೆಗೆ ಆರ್ಥಿಕ ಸಹಾಯವನ್ನೂ ನೀಡುತ್ತದೆ.

ಸಬ್ಸಿಡಿ ಸಿಗಲಿದೆ

ಸಾಮಾನ್ಯವಾಗಿ ವೈಯಕ್ತಿಕ ಸಾಲ ಎಂದಾಗ ಸಾಲಕ್ಕಿಂತ ಹೆಚ್ಚು ಹಣವನ್ನು ಬಡ್ಡಿ ರೂಪದಲ್ಲಿ ಮರುಪಾವತಿ ಮಾಡಬೇಕು. ಆದರೆ ಉದ್ಯೋಗಿನಿ ಯೋಜನೆಯಲ್ಲಿ ಹಾಗಿಲ್ಲ. ಇದರಲ್ಲಿ ನಿಮಗೆ ಸರ್ಕಾರದಿಂದ ಸಹಾಯಧನ ನೀಡಲಾಗುತ್ತದೆ. ಈ ಯೋಜನೆಯಲ್ಲಿ ಸರ್ಕಾರವೇ ಮಹಿಳೆಯರಿಗೆ ಶೇ 30 ರಷ್ಟು ಸಹಾಯಧನ ನೀಡುತ್ತದೆ.

ಉದ್ಯೋಗಿನಿ ಯೋಜನೆಯ ಉದ್ದೇಶಗಳು

ಈ ಕಾರ್ಯಕ್ರಮ ಅನುಷ್ಠಾನಗೊಳಿಸಿದ ಮುಖ್ಯ ಉದ್ದೇಶವೇನೆಂದರೆ ಕರ್ನಾಟಕ ರಾಜ್ಯವು ತಮ್ಮ ರಾಜ್ಯದ ಮಹಿಳೆಯರು ಸ್ವಂತ ಕಂಪನಿಗಳನ್ನು ನಿರ್ಮಿಸಬೇಕು ಹಾಗೂ ಕಿರು ಉದ್ಯಮಗಳನ್ನು ಪ್ರಾರಂಭಿಸುವ ಮೂಲಕ ಸ್ವಾವಲಂಬಿಯಾಗಲು ಸಹಾಯ ಮಾಡುವುದಾಗಿದೆ. ಅಲ್ಲದೇ ಮಹಿಳೆಯರು ಉದ್ಯಮಕ್ಕಾಗಿ ಹೆಚ್ಚಿನ ಬಡ್ಡಿದರದಲ್ಲಿ ಹಣ ಎರವಲು ಪಡೆಯುವುದನ್ನು ತಡೆಯುವುದು ಈ ಯೋಜನೆ ಮುಖ್ಯ ಉದ್ದೇಶವಾಗಿದೆ. ಆರ್ಥಿಕ ಸಹಾಯದ ಜೊತೆಗೆ ಕೌಶಲ ಅಭಿವೃದ್ಧಿ ಕೋರ್ಸ್‌ಗಳನ್ನು ಸಹ ಇದರಲ್ಲಿ ನೀಡಲಾಗುತ್ತದೆ.

ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆಗಳೇನು?

* ಅಭ್ಯರ್ಥಿಯು ಮಹಿಳೆಯಾಗಿರಬೇಕು.

* ಆರಂಭದಲ್ಲಿ ಈ ಯೋಜನೆಗೆ 18 ರಿಂದ 45 ವರ್ಷದ ಒಳಗಿನ ಮಹಿಳೆಯರು ಅರ್ಜಿ ಸಲ್ಲಿಸಬಹುದು ಎಂಬುದಿತ್ತು. ಆದರೆ ಈ ವಯೋಮಿತಿಯನ್ನು 55ಕ್ಕೆ ಏರಿಸಲಾಗಿದೆ.

* ಈ ಹಿಂದೆ 40,000 ಕ್ಕಿಂತ ಕಡಿಮೆ ಆದಾಯ ಹೊಂದಿರುವವರಿಗೆ ಅರ್ಜಿ ಸಲ್ಲಿಸುವ ಅವಕಾಶ ಇತ್ತು. ಆದರೆ ಈಗ 1.5 ಲಕ್ಷಕ್ಕಿಂತ ಕಡಿಮೆ ಆದಾಯ ಇರುವ ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಏನೆಲ್ಲಾ ದಾಖಲೆಗಳು ಬೇಕು?

* ಪಾಸ್‌ಪೋರ್ಟ್‌ ಸೈಜ್‌ ಫೋಟೊ

* ಆಧಾರ್‌ ಕಾರ್ಡ್‌

* ಜನನ ಪ್ರಮಾಣಪತ್ರ

* ಸ್ಪಷ್ಟವಾಗಿ ಭರ್ತಿ ಮಾಡಿದ ಅರ್ಜಿ ನಮೂನೆ

* ವಿಳಾಸ ಹಾಗೂ ಆದಾಯದ ಪುರಾವೆ

* ಬಿಪಿಎಲ್‌ ಕಾರ್ಡ್‌

* ಜಾತಿ ಪ್ರಮಾಣಪತ್ರ (ಅನ್ವಯಿಸುವವರಿಗೆ)

* ಬ್ಯಾಂಕ್‌ ಪಾಸ್‌ಬುಕ್‌ ಪ್ರತಿ (ಖಾತೆ, ಬ್ಯಾಂಕ್‌ ವಿವರ, ಅಕೌಂಟ್‌ ನಂಬರ್‌, ಐಎಫ್‌ಎಸ್‌ಸಿ ನಂಬರ್‌, ಎಂಐಸಿಆರ್‌ ನಂಬರ್‌ ಇರುವಂತದ್ದು),

* ಬ್ಯಾಂಕ್‌ ಕೇಳುವ ಇತರ ಯಾವುದೇ ದಾಖಲೆಗಳು

ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ

ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವವರು ಅಗತ್ಯ ದಾಖಲೆಗಳೊಂದಿಗೆ ಹತ್ತಿರ ಬ್ಯಾಂಕ್‌ಗೆ ತೆರಳಿ ಅಲ್ಲಿ ಅರ್ಜಿ ಫಾರಂ ಭರ್ತಿ ಮಾಡಿ ನೀಡಬಹುದು. ಉದ್ಯೋಗಿನಿ ಯೋಜನೆಯಡಿ ಸಾಲ ನೀಡುವ ಬ್ಯಾಂಕ್‌ ವೆಬ್‌ಸೈಟ್‌ಗೆ ಹೋಗಿ ಅಲ್ಲಿ ಆನ್‌ಲೈನ್‌ ಮೂಲಕ ಕೂಡ ಅರ್ಜಿ ಸಲ್ಲಿಬಹುದು.

(This copy first appeared in Hindustan Times Kannada website. To read more like this please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ