MSSC: ಮಹಿಳೆಯರಿಗೆ ಆರ್ಥಿಕ ಭದ್ರತೆ ಒದಗಿಸುವ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ಯೋಜನೆ ಬಗ್ಗೆ ಇಲ್ಲಿದೆ ಮಾಹಿತಿ-mahila samman savings certificate scheme what is mssc scheme how to apply for central government plan rsa ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Mssc: ಮಹಿಳೆಯರಿಗೆ ಆರ್ಥಿಕ ಭದ್ರತೆ ಒದಗಿಸುವ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ಯೋಜನೆ ಬಗ್ಗೆ ಇಲ್ಲಿದೆ ಮಾಹಿತಿ

MSSC: ಮಹಿಳೆಯರಿಗೆ ಆರ್ಥಿಕ ಭದ್ರತೆ ಒದಗಿಸುವ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ಯೋಜನೆ ಬಗ್ಗೆ ಇಲ್ಲಿದೆ ಮಾಹಿತಿ

Mahila Samman Savings Certificate Scheme: ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ಯೋಜನೆಯು ದೇಶದ ಮಹಿಳೆಯರ ಸದೃಢ ಆರ್ಥಿಕತೆಗೆ ಭದ್ರ ಬುನಾದಿ ಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿ ಮಾಡಿರುವ ಯೋಜನೆ ಆಗಿದ್ದು ಇದರ ಅಡಿಯಲ್ಲಿ ಮಹಿಳೆಯರು ಹೆಚ್ಚಿನ ಬಡ್ಡಿ ದರ ಪಡೆಯಲಿದ್ದಾರೆ.

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ಯೋಜನೆ
ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ಯೋಜನೆ (PC: Unsplash)

Mahila Samman Savings Certificate Scheme: ದೇಶದಲ್ಲಿರುವ ಮಹಿಳೆಯರ ಸಬಲೀಕರಣ ಮಾಡಬೇಕೆಂದು ಕೇಂದ್ರ ಸರ್ಕಾರ ಈಗಾಗಲೇ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2023-24ನೇ ಸಾಲಿನ ಬಜೆಟ್‌ ಭಾಷಣದ ಸಂದರ್ಭದಲ್ಲಿ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರಗಳನ್ನು ಪರಿಚಯಿಸುವುದಾಗಿ ಘೋಷಿಸಿದ್ದರು. ಈ ಯೋಜನೆಯು ಮಹಿಳೆಯರಿಗೆ ಪ್ರತ್ಯೇಕವಾದ ಲಾಭದಾಯಕ ಉಳಿತಾಯವನ್ನು ಮಾಡುವ ಹೊಸ ಮಾರ್ಗವನ್ನು ನೀಡುತ್ತದೆ.

ಏನಿದು ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ..?

ಈ ಯೋಜನೆಯ ಅಡಿಯಲ್ಲಿ ಕೇವಲ ಮಹಿಳೆಯರು ಹಾಗೂ ಯುವತಿಯರು ಮಾತ್ರ ಹೂಡಿಕೆ ಮಾಡಬಹುದಾಗಿದೆ. ಮಹಿಳೆಯರು ಸ್ವತಃ ತಾವೇ ಹಾಗೂ ಅಪ್ರಾಪ್ತ ಬಾಲಕಿಯರ ಪರವಾಗಿ ಅವರ ಪೋಷಕರು ಈ ಖಾತೆಯನ್ನು ನಿರ್ವಹಿಸಬಹುದಾಗಿದೆ.

ಠೇವಣಿ ಮಿತಿ

ಈ ಯೋಜನೆಗೆ ಕನಿಷ್ಠ ಠೇವಣಿ ಮಿತಿ 1000 ರೂಪಾಯಿಯಾಗಿದ್ದು ಈ ಮೊತ್ತಕ್ಕೆ ನೂರರ ಗುಣಕದಂತೆ ಗರಿಷ್ಠ 2 ಲಕ್ಷಗಳವರೆಗೆ ನೀವು ಠೇವಣಿ ಇಡಬಹುದಾಗಿದೆ.

ಮೆಚ್ಯೂರಿಟಿ

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಖಾತೆಗೆ ಮೆಚ್ಯೂರಿಟಿ ಅವಧಿಯನ್ನು 2 ವರ್ಷಗಳಿಗೆ ನಿಗದಿಪಡಿಸಲಾಗಿದೆ. ಈ ಅವಧಿಯನ್ನು ಪೂರ್ಣಗೊಳಿಸಿದ ಬಳಿಕ ಖಾತೆದಾರರಿಗೆ ಮೆಚ್ಯೂರಿಟಿ ಮೊತ್ತ ಪಾವತಿಯಾಗುತ್ತದೆ.

ಹಣ ಹಿಂಪಡೆಯುವಿಕೆ

ಒಮ್ಮೆ ಮಹಿಳಾ ಸಮ್ಮಾನ್ ಖಾತೆಯನ್ನು ಆರಂಭಿಸಿದ ಬಳಿಕ ನಿಮ್ಮ ಖಾತೆಯಲ್ಲಿರುವ ಒಟ್ಟೂ ಮೊತ್ತದಲ್ಲಿ 40 ಪ್ರತಿಶತದವರೆಗೆ ನೀವು ಮೊತ್ತವನ್ನು ಹಿಂಪಡೆಯಬಹುದಾಗಿದೆ. ಮಹಿಳಾ ಸಮ್ಮಾನ್ ಉಳಿತಾಯ ಖಾತೆಯನ್ನು ತೆರೆದು ಒಂದು ವರ್ಷದ ಬಳಿಕವೇ ನಿಮಗೆ ಈ ಸೌಲಭ್ಯ ಸಿಗಲಿದೆ.

ತೆರಿಗೆ ಪ್ರಯೋಜನಗಳು

ಈ ಯೋಜನೆಯಡಿಯಲ್ಲಿ ನೀವು ಗಳಿಸಿದ ಬಡ್ಡಿಯಲ್ಲಿ ಟಿಡಿಎಸ್ ಕಡಿತಗೊಳ್ಳುವುದಿಲ್ಲ. ತೆರಿಗೆ ಉಳಿತಾಯ ಮಾಡಬೇಕು ಎಂದುಕೊಳ್ಳುವವರಿಗೆ ಇದು ಸೂಕ್ತ ಆಯ್ಕೆಯಾಗಿದೆ. ಆದರೆ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 194A ಅಡಿಯಲ್ಲಿ ಬಡ್ಡಿಯು ನಿಗದಿತ ಮಿತಿಯನ್ನು ಮೀರಿದ್ದರೆ ಟಿಡಿಎಸ್ ಅನ್ವಯಿಸಬಹುದಾಗಿದೆ.

ಬಡ್ಡಿ ದರ

ಈ ಖಾತೆಯನ್ನು ಹೊಂದಿರುವವರಿಗೆ ವಾರ್ಷಿಕ 7.5 ಪ್ರತಿಶತ ನಿಶ್ಚಿತ ಬಡ್ಡಿ ದರವನ್ನು ನೀಡಲಾಗುತ್ತದೆ. ಬ್ಯಾಂಕ್‌ನ ಸ್ಥಿರ ಠೇವಣಿ ಹಾಗೂ ಇತರೆ ಸಣ್ಣ ಉಳಿತಾಯ ಯೋಜನೆಗಳಿಗೆ ಹೋಲಿಕೆ ಮಾಡಿದರೆ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರದ ಅಡಿಯಲ್ಲಿ ಮಹಿಳೆಯರಿಗೆ ಹೆಚ್ಚಿನ ಬಡ್ಡಿದರ ಸಿಗಲಿದೆ.

ಅಕಾಲಿಕವಾಗಿ ಖಾತೆ ಬಂದ್ ಮಾಡುವುದು

ಆಯ್ದ ಸಂದರ್ಭಗಳಲ್ಲಿ ಖಾತೆಗಳನ್ನು ಅಕಾಲಿಕವಾಗಿ ಖಾತೆಯನ್ನು ಬಂದ್ ಮಾಡಲು ಅನುಮತಿಸಲಾಗುತ್ತದೆ. ಖಾತೆದಾರ ಮಹಿಳೆ ಮೃತಪಟ್ಟಾಗ ಅಥವಾ ಸಹಾನುಭೂತಿಯ ಆಧಾರದಲ್ಲಿ ಯಾವುದೇ ಕಾರಣ ನೀಡದೇ ಆರು ತಿಂಗಳ ಬಳಿಕ ಖಾತೆಯನ್ನು ಸ್ಥಗಿತಗೊಳಿಸಬಹುದಾಗಿದೆ. ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಅನೇಕ ಸರ್ಕಾರಿ ಹಾಗೂ ಖಾಸಗಿ ವಲಯ ಬ್ಯಾಂಕುಗಳಲ್ಲಿ ಮಹಿಳಾ ಸಮ್ಮಾನ್ ಉಳಿತಾಯ ಯೋಜನೆಯ ಖಾತೆಯನ್ನು ತೆರೆಯಬಹುದಾಗಿದೆ.

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಖಾತೆಯನ್ನು ತೆರೆಯುವುದು ಹೇಗೆ..?

ಈ ಯೋಜನೆಯ ಅಡಿಯಲ್ಲಿ ಉಳಿತಾಯ ಮಾಡಬೇಕು ಎಂದುಕೊಳ್ಳುವ ಮಹಿಳೆಯರು ಅಂಚೆ ಕಚೇರಿಗಳಲ್ಲಿ ಅಥವಾ ನಿಗದಿಪಡಿಸಲಾದ ಬ್ಯಾಂಕುಗಳಲ್ಲಿ ಖಾತೆಯನ್ನು ತೆರೆಯಬಹುದಾಗಿದೆ. ಇದಕ್ಕಾಗಿ ನೀಡಲಾಗುವ ಪ್ರತ್ಯೇಕ ಅರ್ಜಿಗಳನ್ನು ಭರ್ತಿ ಮಾಡಿ ಬಳಿಕ ಶಾಖಾಧಿಕಾರಿಗಳಿಗೆ ಕೆವೈಸಿ ದಾಖಲೆಗಳನ್ನು ಒದಗಿಸಿ ಆರಂಭಿಕ ಠೇವಣಿ ಮೊತ್ತವನ್ನು ಇಡುವ ಮೂಲಕ ಖಾತೆಯನ್ನು ತೆರೆಯಬಹುದಾಗಿದೆ. ಅಂಚೆ ಕಚೇರಿ ಖಾತೆದಾರರು ಅಧಿಕೃತ ವೆಬ್‌ಸೈಟ್‌ಗಳಿಂದ ಅರ್ಜಿ ನಮೂನೆ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. ಅಥವಾ ಹತ್ತಿರದ ಶಾಖೆಗಳಿಗೆ ತೆರಳಿ ಅರ್ಜಿ ಭರ್ತಿ ಮಾಡಬಹುದಾಗಿದೆ.

ಯಾವ್ಯಾವ ದಾಖಲೆಗಳು ಬೇಕು..?

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರದ ಖಾತೆಗಳನ್ನು ತೆರೆಯಲು ಅರ್ಜಿದಾರರು ಈ ಕೆಳಗಿನ ಮಾಹಿತಿಗಳನ್ನು ಒದಗಿಸಬೇಕು

  • ಪೂರ್ಣಗೊಳಿಸಲಾದ ಅರ್ಜಿ ನಮೂನೆ
  • KYC ದಾಖಲೆಗಳು (ಆಧಾರ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್)
  • ಠೇವಣಿ ಮೊತ್ತ ಅಥವಾ ಚೆಕ್ ಜೊತೆಗೆ ಪೇ-ಇನ್-ಸ್ಲಿಪ್
  • ಹೂಡಿಕೆ ಲೆಕ್ಕಾಚಾರ

ಉದಾಹರಣೆಗೆ ನೀವು ಈ ಯೋಜನೆ ಅಡಿಯಲ್ಲಿ 2 ಲಕ್ಷ ರೂಪಾಯಿ ಹೂಡಿಕೆ ಮಾಡಿದಲ್ಲಿ ವಾರ್ಷಿಕ 7.5 ಪ್ರತಿಶತ ಬಡ್ಡಿ ದರದಲ್ಲಿ ಮೊದಲ ವರ್ಷ 15 ಸಾವಿರ ರೂಪಾಯಿ ಬಡ್ಡಿ ಹಾಗೂ ಎರಡನೇ ವರ್ಷದಲ್ಲಿ 16,125 ರೂಪಾಯಿ ಬಡ್ಡಿ ಹಣ ಸಿಗಲಿದೆ. 2 ವರ್ಷಗಳಲ್ಲಿ ಮಹಿಳೆಯರು ತಾವು ಹೂಡಿಕೆ ಮಾಡಿದ 2 ಲಕ್ಷ ರೂಪಾಯಿ ಹಣದ ಬದಲಿಗೆ ಆರಂಭಿಕ ಬಡ್ಡಿ ಹಾಗೂ ಸಂಚಿತ ಬಡ್ಡಿ ಎರಡನ್ನೂ ಸೇರಿಸಿ 2,31,125 ರೂಪಾಯಿಗಳನ್ನು ಪಡೆದುಕೊಳ್ಳುತ್ತಾರೆ.

ದೇಶದ ಮಹಿಳೆಯರು ಹಾಗೂ ಯುವತಿಯರು ಆರ್ಥಿಕವಾಗಿ ಸದೃಢಗೊಳ್ಳಬೇಕು ಎಂಬ ಭರವಸೆಯೊಂದಿಗೆ ಕೇಂದ್ರ ಸರ್ಕಾರ ಈ ಯೋಜನೆಯನ್ನು ಆರಂಭಿಸಿದ್ದು ಮಹಿಳೆಯರು ತಮ್ಮ ಉಳಿತಾಯದ ಹಣಕ್ಕೆ ಒಳ್ಳೆಯ ಮೊತ್ತದ ಬಡ್ಡಿ ದರವನ್ನು ಪಡೆಯಲಿದ್ದಾರೆ.

mysore-dasara_Entry_Point