logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Politics: ಸಿಎಂ ಸಿದ್ದರಾಮಯ್ಯ ಪರ ನಿಂತ ಕರ್ನಾಟಕ ಕಾಂಗ್ರೆಸ್‌ ನಾಯಕರು, ಮೈಸೂರು ಜನಾಂದೋಲನ ಸಮಾವೇಶದಲ್ಲಿ ಕೈ ಒಗ್ಗಟ್ಟು

Karnataka Politics: ಸಿಎಂ ಸಿದ್ದರಾಮಯ್ಯ ಪರ ನಿಂತ ಕರ್ನಾಟಕ ಕಾಂಗ್ರೆಸ್‌ ನಾಯಕರು, ಮೈಸೂರು ಜನಾಂದೋಲನ ಸಮಾವೇಶದಲ್ಲಿ ಕೈ ಒಗ್ಗಟ್ಟು

Umesha Bhatta P H HT Kannada

Aug 09, 2024 02:59 PM IST

google News

ಮೈಸೂರಿನಲ್ಲಿ ಕಾಂಗ್ರೆಸ್‌ ಜನಾಂದೋಲನ ಸಮಾವೇಶವನ್ನು ಸಿಎಂ ಸಿದ್ದರಾಮಯ್ಯ ಹಾಗೂ ಇತರರು ಉದ್ಘಾಟಿಸಿದರು.

    • Mysore News ಮೈಸೂರಿನಲ್ಲಿ ಕಾಂಗ್ರೆಸ್‌ ಜನಾಂದೋಲನ( Congress Convention) ಸಮಾವೇಶ ನಡೆದು ಸಿಎಂ ಸಿದ್ದರಾಮಯ್ಯ( CM Siddaramaiah) ಅವರ ಬೆಂಬಲಕ್ಕೆ ನಿಂತಿತು.
ಮೈಸೂರಿನಲ್ಲಿ ಕಾಂಗ್ರೆಸ್‌ ಜನಾಂದೋಲನ ಸಮಾವೇಶವನ್ನು ಸಿಎಂ ಸಿದ್ದರಾಮಯ್ಯ ಹಾಗೂ ಇತರರು ಉದ್ಘಾಟಿಸಿದರು.
ಮೈಸೂರಿನಲ್ಲಿ ಕಾಂಗ್ರೆಸ್‌ ಜನಾಂದೋಲನ ಸಮಾವೇಶವನ್ನು ಸಿಎಂ ಸಿದ್ದರಾಮಯ್ಯ ಹಾಗೂ ಇತರರು ಉದ್ಘಾಟಿಸಿದರು.

ಮೈಸೂರು: ಕರ್ನಾಟಕದ ಸಿಎಂ ಸಿದ್ದರಾಮಯ್ಯ ಪರವಾಗಿ ಕಾಂಗ್ರೆಸ್‌ ಗಟ್ಟಿ ದನಿ ಮೊಳಗಿಸಿದೆ. ಒಗ್ಗಟ್ಟನ್ನು ಪ್ರದರ್ಶಿಸಿದೆ. ಕಳೆದ ಒಂದು ತಿಂಗಳಿನಿಂದ ಕರ್ನಾಟಕದಲ್ಲಿ ನಡೆದಿರುವ ವಾಲ್ಮೀಕಿ ನಿಗಮದ ಹಗರಣ ಹಾಗೂ ಮೈಸೂರು ಮುಡಾ ಹಗರಣದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ದ ಗಂಭೀರ ಆರೋಪಗಳೇ ಕೇಳಿ ಬಂದಿವೆ. ಇದನ್ನೇ ಅಸ್ತ್ರವಾಗಿಟ್ಟುಕೊಂಡು ಬಿಜೆಪಿ ಹಾಗೂ ಜೆಡಿಎಸ್‌ ಮೈಸೂರು ಪಾದಯಾತ್ರೆ ಆರಂಭಿಸಿವೆ. ಇದಕ್ಕೆ ಠಕ್ಕರ್‌ ನೀಡಲೆಂದೇ ಕಾಂಗ್ರೆಸ್‌ ಜನಾಂದೋಲನ ಸಮಾವೇಶ ಆಯೋಜಿಸಿದ್ದು ಮೈಸೂರಿನಲ್ಲಿ ಸಮಾವೇಶದ ಕೊನೆಯ ಕಾರ್ಯಕ್ರಮ ನಡೆಯಿತು. ಈ ವೇಳೆ ಕಾಂಗ್ರೆಸ್‌ ಒಗ್ಗಟ್ಟನ್ನು ಸಿಎಂ ಸಿದ್ದರಾಮಯ್ಯ ಅವರ ಪರವಾಗಿ ವ್ಯಕ್ತಪಡಿಸಿತು.ಪಕ್ಷದ ನಾಯಕರು, ಸಚಿವರು ಬಿಜೆಪಿ ಹಾಗೂ ಜೆಡಿಎಸ್‌ ಅನ್ನು ಟೀಕಿಸುತ್ತಲೇ ಸಿದ್ದರಾಮಯ್ಯ ಅವರ ಪರವಾಗಿ ದನಿ ಮೊಳಗಿಸಿದರು.

ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ, ಹಾಸನ, ರಾಮನಗರ ಸಹಿತ ನಾನಾ ಭಾಗಗಳಿಂದ ಮೂರು ಲಕ್ಷಕ್ಕೂ ಅಧಿಕ ಕಾರ್ಯಕರ್ತರು ಭಾಗಿಯಾದರು. ಬೆಳಿಗ್ಗೆಯಿಂದಲೇ ನಡೆದ ಸಮಾವೇಶದಲ್ಲಿ ಸಿದ್ದರಾಮಯ್ಯ ಅವರ ಭಾಷಣವೇ ಕೇಂದ್ರ ಬಿಂದುವಾಗಿತ್ತು. ಡಿಸಿಎಂ ಡಿಕೆ ಶಿವಕುಮಾರ್‌ ಹಾಗೂ ಸಚಿವರು, ನಾಯಕರು ಭಾಷಣ ಮಾಡಿದರು.

ಡಿಸಿಎಂ ಡಿಕೆಶಿ ಏನು ಹೇಳಿದರು

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ಬಿಜೆಪಿ ಹಾಗೂ ಜೆಡಿಎಸ್‌ನವರೇ ಸಿದ್ದರಾಮಯ್ಯ ಅವರ ರಾಜೀನಾಮೆ ನಿಮಗೆ ಬೇಕಾ, ಈ ಬಂಡೆ ಸಿದ್ದರಾಮಯ್ಯ ಅವರ ಜೊತೆ ಇರುವುದರಿಂದ ಏನು ಆಗುವುದಿಲ್ಲ. ನನ್ನೊಂದಿಗೆ 136 ಜನ ಶಾಸಕರು ಇದ್ದಾರೆ. ನಾವೆಲ್ಲವೂ ಸಿದ್ದರಾಮಯ್ಯ ಅವರ ಜೊತೆಗಿದ್ದೇವೆ. ನಿಮ್ಮ ಕೈಯಲ್ಲಿ ಏನೂ ಮಾಡಲಾಗುವುದಿಲ್ಲ ಎಂದು ಪ್ರತಿಪಕ್ಷಗಳ ಮೈಸೂರು ಚಲೋ ವಿರುದ್ದ ಹರಿಹಾಯ್ದರು.

ಈ ಸರ್ಕಾರವನ್ನು 10 ತಿಂಗಳಲ್ಲಿ ತೆಗೆದು ಹಾಕುತ್ತೇವೆ ಎಂದು ಹೊರಟಿರುವವರ ವಿರುದ್ಧ ನಮ್ಮ ಅಲ್ಲ. ಅದರ ಬದಲು ಬಡವರಿಗಾಗಿ ನಾವು ಹೋರಾಟ ನಡೆಸಿದ್ದೇವೆ. ಕುಮಾರಸ್ವಾಮಿ, ಅಶೋಕ ಹಾಗೂ ವಿಜಯೇಂದ್ರ ಅವರೇ ಈ ಡಿಕೆಶಿ ನೇತೃತ್ವದಲ್ಲಿ 136 ಸೀಟುಗಳನ್ನು ಪಡೆದಿದ್ದು ಸರ್ಕಾರ ತೆಗೆಯಲು ಏನೇ ಕುತಂತ್ರ ಮಾಡಿದರೂ ಆಗುವುದಿಲ್ಲ. ಬಿಜೆಪಿ-ಜೆಡಿಎಸ್‌ನವರದ್ದು ಪಾಪವಿಮೋಚನೆಯ ಯಾತ್ರೆಯಾಗಿದೆ. ನಮ್ಮದು ಅಧರ್ಮಿಗಳ ವಿರುದ್ಧದ ಧರ್ಮಯುದ್ಧವಾಗಿದೆ. ಅಸತ್ಯದ ವಿರುದ್ಧದ ಸತ್ಯದ ಹೋರಾಟವಾಗಿದೆ ರಾಜ್ಯದ ಜನರು, ಸಂವಿಧಾನದ ರಕ್ಷಣೆಗಾಗಿ ಈ ಜನಾಂದೋಲನವನ್ನು ನಡೆಸುತ್ತಿದ್ದೇವೆ ಎಂದು ಹೇಳಿದರು.

ಹರಿಪ್ರಸಾದ್‌ ಟೀಕಾಪ್ರಹಾರ

ಕಾಂಗ್ರೆಸ್‌ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್‌ ಮಾತನಾಡಿ, ಆಪರೇಷನ್ ಕಮಲದಿಂದ ಅಧಿಕಾರ ಗಳಿಸಿದ ಬಿ.ಎಸ್. ಯಡಿಯೂರಪ್ಪ ಅವರು ನಾಚಿಕೆ, ಮಾನ- ಮರ್ಯಾದೆ ಬಿಟ್ಟು ಕಾಂಗ್ರೆಸ್ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ವಿಜಯೇಂದ್ರ ಪರೋಕ್ಷ ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತಿದ್ದರು. ಅವರು ಆಗ ಎಷ್ಟು ಕಡತಗಳಿಗೆ ಅಪ್ಪನ ಡೂಪ್ಲಿಕೇಟ್ ಸಹಿ ಮಾಡಿದ್ದರು ಎಂಬುದನ್ನು ಸರ್ಕಾರವು ತನಿಖೆ ಮಾಡಬೇಕು. ಆಗ, ಯಡಿಯೂರಪ್ಪ ಅವರ ಕಾಲದ ಮತ್ತಷ್ಟು ಹಗರಣಗಳು ಹೊರಬರಲಿವೆ ಎಂದು ಹೇಳಿದರು.

ಗೌಡರ ವಿರುದ್ದ ಎಂಬಿ ಪಾಟೀಲ್‌ ಗುಡುಗು

ದೇವೇಗೌಡರ ಕುಟುಂಬದವರು ಮೈಸೂರು, ಹಾಸನದಲ್ಲಿ ನೂರಾರು ನಿವೇಶನಗಳನ್ನು ಪಡೆದುಕೊಂಡಿದ್ದಾರೆ. ಇದನ್ನು ರಾಜ್ಯದ ಜನತೆ ಗಮನಿಸಬೇಕು. ಜಾತ್ಯತೀತ ಪದವನ್ನು ತೆಗೆದು ಬಿಜೆಪಿಯವರ ಜೊತೆ ಸೇರಿಕೊಂಡಿರುವ ಜೆಡಿಎಸ್‌ನವರಿಗೆ ತಕ್ಕಪಾಠ ಕಲಿಸುವ ಕೆಲಸವನ್ನು ನಾವು ಮಾಡಲಿದ್ದೇವೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಟೀಕಿಸಿದರು.

ಬಿಜೆಪಿ ಸರ್ಕಾರವಿದ್ದಾಗಲೇ ಮುಡಾ ತಪ್ಪಾಗಿದೆ ಎಂದು ಹೇಳಿ, ಮುಖ್ಯಮಂತ್ರಿ ಕುಟುಂಬಕ್ಕೆ ಭೂಪರಿಹಾರವಾಗಿ ನಿವೇಶನಗಳನ್ನು ಹಂಚಿಕೆ ಮಾಡಿದೆ. ಇದರಲ್ಲಿ ಸಿದ್ದರಾಮಯ್ಯ ಅವರ ತಪ್ಪು ಇಲ್ಲ ಎನ್ನುವುದನ್ನು ಈಗಾಗಲೇ ಸ್ಪಷ್ಟಪಡಿಸಲಾಗಿದೆ. ಹೀಗಿದ್ದರೂ ವಿವಾದ ಮಾಡಲಾಗುತ್ತಿದೆ. ಸಿದ್ದರಾಮಯ್ಯ ಅವರು ನಾಲ್ಕು ದಶಕಗಳ ರಾಜಕೀಯ ಜೀವನದಲ್ಲಿ ಕಪ್ಪುಚುಕ್ಕೆ ಇಲ್ಲದಂತೆ ನಡೆದುಕೊಂಡಿದ್ದಾರೆ. ಹಿಂದುಳಿದ ವರ್ಗದಿಂದ ಬಂದು ಎರಡನೇ ಬಾರಿಗೆ ಕರ್ನಾಟಕದ ಮುಖ್ಯಮಂತ್ರಿ ಆಗಿರುವ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಬಿಜೆಪಿ-ಜೆಡಿಎಸ್‌ನವರು ಪಾದಯಾತ್ರೆ ನಡೆಸುತ್ತಿದ್ದು, ಜನರ ಇದನ್ನು ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಚಿವರಾದ ಎಚ್.ಕೆ.ಪಾಟೀಲ್‌, ಡಾ.ಮಹದೇವಪ್ಪ, ಕೆ.ಎಚ್‌.ಮುನಿಯಪ್ಪ, ಜಮೀರ್‌ ಅಹಮದ್‌ ಖಾನ್‌, ಈಶ್ವರಖಂಡ್ರೆ, ಕೆ.ಜೆ.ಜಾರ್ಜ್‌, ಕೆ.ವೆಂಕಟೇಶ್‌ ಮತ್ತಿತರರು ಮಾತನಾಡಿದರು. ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಯಡಿಯೂರಪ್ಪ ಹಾಗೂ ವಿಜಯೇಂದ್ರ ಬಗ್ಗೆ ಮಾಡಿದ್ದ ಆರೋಪಗಳ ವಿಡಿಯೊವನ್ನು ಸಮಾವೇಶದ ಹಿನ್ನೆಲೆಯ ಎಲ್‌ಇಡಿ ಪರದೆಯಲ್ಲಿ ಪ್ರದರ್ಶನ ಮಾಡಲಾಯಿತು.

ಇದೇ ವೇಳೆ ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರು ಬರೆದರುವ ಮುಡಾ ಕುರಿತಾದ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ