ಮುಡಾ ಹಗರಣ; ದೆಹಲಿಯಿಂದ ಬಂದ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌; ಸಿದ್ದರಾಮಯ್ಯ ವಿರುದ್ಧ ಪ್ರಾಷಿಕ್ಯೂಷನ್‌ ಗೆ ಅನುಮತಿ ನೀಡುವರೇ?
ಕನ್ನಡ ಸುದ್ದಿ  /  ಕರ್ನಾಟಕ  /  ಮುಡಾ ಹಗರಣ; ದೆಹಲಿಯಿಂದ ಬಂದ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌; ಸಿದ್ದರಾಮಯ್ಯ ವಿರುದ್ಧ ಪ್ರಾಷಿಕ್ಯೂಷನ್‌ ಗೆ ಅನುಮತಿ ನೀಡುವರೇ?

ಮುಡಾ ಹಗರಣ; ದೆಹಲಿಯಿಂದ ಬಂದ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌; ಸಿದ್ದರಾಮಯ್ಯ ವಿರುದ್ಧ ಪ್ರಾಷಿಕ್ಯೂಷನ್‌ ಗೆ ಅನುಮತಿ ನೀಡುವರೇ?

Mysore Muda Scam ಮೈಸೂರಿನ ಮುಡಾದಲ್ಲಿ ನಡೆದಿದೆ ಎನ್ನಲಾದ ನಿವೇಶನ ಹಂಚಿಕೆ ಹಗರಣ ವಿಚಾರದಲ್ಲಿ ರಾಜ್ಯಪಾಲರ ನಡೆ ಕುರಿತು ಕುತೂಹಲ ಮೂಡಿಸಿದೆ.ವರದಿ: ಎಚ್‌.ಮಾರುತಿ. ಬೆಂಗಳೂರು

ಸಿಎಂ ಸಿದ್ದರಾಮಯ್ಯ ವಿರುದ್ದ ತನಿಖೆಗೆ ಕರ್ನಾಟಕ ರಾಜ್ಯಪಾಲರ ನಡೆ ಏನು ಎನ್ನುವ ಕುರಿತು ಕುತೂಹಲ ಮೂಡಿಸಿದೆ.
ಸಿಎಂ ಸಿದ್ದರಾಮಯ್ಯ ವಿರುದ್ದ ತನಿಖೆಗೆ ಕರ್ನಾಟಕ ರಾಜ್ಯಪಾಲರ ನಡೆ ಏನು ಎನ್ನುವ ಕುರಿತು ಕುತೂಹಲ ಮೂಡಿಸಿದೆ.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಪಡೆದಿರುವ 14 ಮುಡಾ ನಿವೇಶನಗಳ ಪ್ರಕರಣ ಕುರಿತು ಎಲ್ಲರ ಚಿತ್ತ ಈಗ ರಾಜಭವನದತ್ತ ನೆಟ್ಟಿದೆ. ದೆಹಲಿ ಪ್ರವಾಸ ಮುಗಿಸಿ ಬೆಂಗಳೂರಿಗೆ ಆಗಮಿಸಿರುವ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬ ಕುತೂಲಹ ಎಲ್ಲರಲೂ ಮನೆ ಮಾಡಿದೆ. ಬುಧವಾರ ಇಲ್ಲವೇ ಗುರುವಾರ ರಾಜ್ಯಪಾಲರು ಅನುಮತಿ ನೀಡಬಹುದು ಎನ್ನುವ ಚರ್ಚೆಗಳು ನಡೆದಿವೆ. ಪ್ರಾಷಿಕ್ಯೂಷನ್‌ ಗೆ ಅನುಮತಿ ನೀಡುವುದು, ಸ್ವತಂತ್ರ ತನಿಖೆಗೆ ಆದೇಶಿಸುವ ಆಯ್ಕೆಗಳು ರಾಜ್ಯಪಾಲರ ಮುಂದಿವೆ ಎನ್ನಲಾಗುತ್ತಿದೆ. ಅಬ್ರಹಾಂ ಈಗಾಗಲೇ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದು, ಅಲ್ಲಿಯೇ ತನಿಖೆ ನಡೆಸಲು ಸೂಚಿಸಲೂಬಹುದು ಎಂದು ತಜ್ಞರೊಬ್ಬರು ಅಭಿಪ್ರಾಯಪಡುತ್ತಾರೆ.

ಈ ಹಿಂದೆ ಮುಖ್ಯಮಂತ್ರಿಗಳ ಪತ್ನಿಗೆ ಹಂಚಿಕೆ ಮಾಡಿರುವ ನಿವೇಶನಗಳ ಪ್ರಕ್ರಿಯೆಯಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ರಾಜ್ಯಪಾಲರಿಗೆ ದೂರು ನೀಡಿ, ಮುಖ್ಯಮಂತ್ರಿಗಳ ವಿರುದ್ಧ ತನಿಖೆ ನಡೆಸಲು ಅನುಮತಿ ನೀಡಬೇಕೆಂದು ಕೋರಿದ್ದರು. ಇವರ ದೂರನ್ನು ಆಧರಿಸಿ ರಾಜ್ಯಪಾಲರು ಜುಲೈ 26ರಂದು ಷೋಕಾಸ್‌ ನೋಟಿಸ್‌ ನೀಡಿ 7 ದಿನಗಳಲ್ಲಿ ಉತ್ತರ ನೀಡುವಂತೆ ಮುಖ್ಯಮಂತ್ರಿಗಳಿಗೆ ತಿಳಿಸಿದ್ದರು.

ಈ ನಿಟ್ಟಿನಲ್ಲಿ ರಾಜ್ಯಪಾಲರು ಏಕಾಏಕಿ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಇದೊಂದು ಸೂಕ್ಷ್ಮ ವಿಷಯವಾಗಿರುವುದರಿಂದ ಎಚ್ಚರಿಕೆಯ ಹೆಜ್ಜೆ ಇಡಬೇಕಾಗಿದೆ. ಹಾಗಾಗಿ ಕಾನೂನು ತಜ್ಞರ ಸಲಹೆ ಪಡೆದು ಕೂಲಂಕಷವಾಗಿ ಚರ್ಚಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಷಿಕ್ಯೂಷನ್‌ ಗೆ ಅನುಮತಿ ನೀಡಬೇಕೇ ಬೇಡವೇ ಎಂದು ನಿರ್ಧರಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಸಂವಿಧಾನದ 163ನೇ ವಿಧಿ ರಾಜ್ಯಪಾಲರ ವಿವೇಚನಾ ಅಧಿಕಾರವನ್ನು ಕುರಿತು ಹೇಳುತ್ತದೆ. ಈ ಪ್ರಕರಣ ಕುರಿತು ಅವರು ಸರ್ಕಾರದ ಮನವಿಯನ್ನು ತಿರಸ್ಕರಿಸಲೂಬಹುದು, ಪುರಸ್ಕರಿಸಲೂಬಹುದು, ಆದರೆ ಅವರು ಏಕಾಏಕಿ ನಿರ್ಣಯವನ್ನು ಕೈಗೊಳ್ಳಲು ಬರುವುದಿಲ್ಲ. ಮುಂದಿನ ಕ್ರಮಕ್ಕಾಗಿ ಅವರು ಕಡತಗಳನ್ನು ತರಿಸಿಕೊಳ್ಳಬಹುದು. ಅವರು ಮಂತ್ರಿಪರಿಷತ್‌ ನಿರ್ಣಯವನ್ನು ತಿರಸ್ಕರಿಸುವುದಾದರೆ ಸ್ಪಷ್ಟ ಕಾರಣವನ್ನು ನೀಡಬೇಕಾಗುತ್ತದೆ ಎಂದು ಕಾನೂನು ತಜ್ಞರು ಹೇಳುತ್ತಾರೆ

ಮುಖ್ಯಮಂತ್ರಿಗಳ ವಿರುದ್ಧ ತನಿಖೆಗೆ ಆದೇಶಿಸುವ ಅಧಿಕಾರ ರಾಜ್ಯಪಾಲರಿಗೆ ಇದೆಯೇ ಎಂಬ ಪ್ರಶ್ನೆಗೆ ಈ ಬಗ್ಗೆ ಸಂವಿಧಾನ ಸ್ಪಷ್ಟವಾಗಿ ಏನನ್ನೂ ಹೇಳಿಲ್ಲ. ಆದರೆ ವಿವೇಚನಾ ಅಧಿಕಾರವನ್ನು ಬಳಸುವ ಅಧಿಕಾರ ಇದೆ ಎನ್ನುತ್ತಾರೆ. ಒಂದು ವೇಳೆ ಪ್ರಾಷಿಕ್ಯೂಷನ್‌ ಗೆ ಅನುಮತಿ ನೀಡಿದರೆ ಆ ನಿರ್ಧಾರವನ್ನು ಮುಖ್ಯಮಂತ್ರಿಗಳು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು. ಆಗ ಈ ವಿಷಯ ಮತ್ತಷ್ಡು ಮುಂದಕ್ಕೆ ಹೋಗುವ ಸಾಧ್ಯತೆಗಳಿವೆ.

ಅಬ್ರಹಾಂ ಅವರು ಮತ್ತೆ ಮಂಗಳವಾರವೂ ರಾಜ್ಯಪಾಲರನ್ನು ಭೇಟಿ ಮಾಡಿ ಈ ವಿಷಯ ಕುರಿತು ಚರ್ಚೆ ನಡೆಸಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಅಬ್ರಹಾಂ ಈ ಭೇಟಿ ಪೂರ್ವ ನಿಗದಿಯಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ. ನನ್ನ ದೂರನ್ನು ಸರ್ಕಾರ ತಿರಸ್ಕರಿಸಿಯೂ ಇಲ್ಲ, ಮೇಲಾಗಿ ಉತ್ತರವನ್ನೂ ನೀಡಿಲ್ಲ ಎಂದಿದ್ದಾರೆ.

ಆಗಸ್ಟ್‌ 1ರಂದು ಮುಖ್ಯಮಂತ್ರಿಗಳ ಅನುಪಸ್ಥಿತಿಯಲ್ಲಿ ನಡೆದ ಮಂತ್ರಿ ಪರಿಷತ್‌ ಸಭೆಯಲ್ಲಿ ಅಬ್ರಹಾಂ ಅವರ ಬದ್ಧತೆ ಕುರಿತು ಚರ್ಚೆ ನಡೆದಿದೆ. ಅವರಿಗೆ ಯಾವುದೇ ಬದ್ಧತೆ ಇಲ್ಲ. ಕಾನೂನು ದುರ್ಬಳಕೆ ಮಾಡಿಕೊಳ್ಳುವುದರಲ್ಲಿ ನಿಷ್ಣಾತರಾಗಿರುವ ಅಬ್ರಹಾಂ ಅವರಿಗೆ ಸುಪ್ರೀಂ ಕೋರ್ಟ್‌ ರೂ. 25 ಲಕ್ಷ ದಂಡ ವಿಧಿಸಿದೆ. ಇಂತಹವರ ದೂರನ್ನು ಆಧರಿಸಿ ರಾಜ್ಯಪಾಲರು ನೋಟಿಸ್‌ ನೀಡಿರುವುದು ಸರಿಯಲ್ಲ ಎಂಬ ನಿರ್ಣಯವನ್ನು ಕೈಗೊಂಡಿದೆ. ಮಂತ್ರಿ ಪರಿಷತ್‌ ನಿರ್ಣಯವನ್ನು ರಾಜ್ಯಪಾಲರು ಪುರಸ್ಕರಿಸುತ್ತಾರೆ ಎಂಬ ವಿಶ್ವಾಸ ಇದೆ ಎಂದೂ ಸಂಪುಟ ಸಭೆ ನಿರ್ಣಯ ಕೈಗೊಂಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿರುವ ಷೋಕಾಸ್‌ ನೋಟಿಸ್‌ ಅನ್ನು ಹಿಂಪಡೆಯಬೇಕು ಮತ್ತು ದೂರನ್ನು ತಿರಸ್ಕರಿಸಬೇಕು ಎಂದು ಸಂಪುಟ ಸಬೆ ನಿರ್ಣಯ ಕೈಗೊಂಡ ನಂತರ ಈ ಪ್ರಕರಣದಲ್ಲಿ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳಲಾಗಿದೆ. ಯಾವುದೇ ಬೆಳವಣಿಗೆಗಳಾಗಿಲ್ಲ. ಅವರು (ರಾಜ್ಯಪಾಲರು) ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂದು ತಿಳಿದಿಲ್ಲ. ಬಹುಶಃ ಅವರು ಮತ್ತೊಮ್ಮೆ ಸ್ಪಷ್ಟನೆ ಕೇಳಬಹುದು.ಅವರು ಯಾವುದೇ ಆತುರದ ನಿರ್ಧಾರವನ್ನು ಕೈಗೊಳ್ಳುವುದಿಲ್ಲ ಎಂಬ ವಿಶ್ವಾಸ ನಮಗಿದೆ. ನಾವೂ ಸಹ ಕಾನೂನು ತಜ್ಞರೊಂದಿಗೆ ಚರ್ಚೆ ನಡೆಸುತ್ತಿದ್ದೇವೆ ಎಂದು ಹಿರಿಯ ಸಚಿವರೊಬ್ಬರು ತಿಳಿಸಿದ್ದಾರೆ.

Whats_app_banner