logo
ಕನ್ನಡ ಸುದ್ದಿ  /  ಕರ್ನಾಟಕ  /  School Text Books: ಮಕ್ಕಳಿಗೆ ಕಲುಷಿತ ಪುಸ್ತಕಗಳು ಬೇಡ, ಶಾಲಾ ಪಠ್ಯ ಪುಸ್ತಕದಲ್ಲಿ ಬದಲಾವಣೆ ಮಾಡಲು ಸರಕಾರಕ್ಕೆ ಸಾಹಿತಿ ಬರಹಗಾರರಿಂದ ಮನವಿ

School Text Books: ಮಕ್ಕಳಿಗೆ ಕಲುಷಿತ ಪುಸ್ತಕಗಳು ಬೇಡ, ಶಾಲಾ ಪಠ್ಯ ಪುಸ್ತಕದಲ್ಲಿ ಬದಲಾವಣೆ ಮಾಡಲು ಸರಕಾರಕ್ಕೆ ಸಾಹಿತಿ ಬರಹಗಾರರಿಂದ ಮನವಿ

Praveen Chandra B HT Kannada

May 29, 2023 08:14 PM IST

google News

Karnataka Education: ಮಕ್ಕಳಿಗೆ ಕಲುಷಿತ ಪುಸ್ತಕಗಳು ಬೇಡ, ಶಾಲಾ ಪಠ್ಯ ಪುಸ್ತಕದಲ್ಲಿ ಬದಲಾವಣೆ ಮಾಡಲು ಸರಕಾರಕ್ಕೆ ಸಾಹಿತಿ ಬರಹಗಾರರಿಂದ ಮನವಿ

    • Karnataka School Text Books: ಕರ್ನಾಟಕದಲ್ಲಿ ಶಾಲೆಗಳು ಆರಂಭವಾಗುತ್ತಿದ್ದು, ಇದೇ ಸಂದರ್ಭದಲ್ಲಿ ಹಿಂದಿನ ಸರಕಾರ ಶಾಲಾ ಪಠ್ಯ ಪುಸ್ತಕಗಳಲ್ಲಿ ಸೇರಿಸಿದ ವಿಷಯಗಳನ್ನು ತೆಗೆದುಹಾಕಬೇಕೆಂದು ಬರಹಗಾರರು, ಸಾಹಿತಿಗಳು ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಮತ್ತೆ ಶಾಲಾ ಪಠ್ಯ ಪುಸ್ತಕ ವಿಚಾರ ಮುನ್ನಲೆಗೆ ಬರುವ ಸಾಧ್ಯತೆಯಿದೆ.
Karnataka Education: ಮಕ್ಕಳಿಗೆ ಕಲುಷಿತ ಪುಸ್ತಕಗಳು ಬೇಡ, ಶಾಲಾ ಪಠ್ಯ ಪುಸ್ತಕದಲ್ಲಿ ಬದಲಾವಣೆ ಮಾಡಲು ಸರಕಾರಕ್ಕೆ ಸಾಹಿತಿ ಬರಹಗಾರರಿಂದ ಮನವಿ
Karnataka Education: ಮಕ್ಕಳಿಗೆ ಕಲುಷಿತ ಪುಸ್ತಕಗಳು ಬೇಡ, ಶಾಲಾ ಪಠ್ಯ ಪುಸ್ತಕದಲ್ಲಿ ಬದಲಾವಣೆ ಮಾಡಲು ಸರಕಾರಕ್ಕೆ ಸಾಹಿತಿ ಬರಹಗಾರರಿಂದ ಮನವಿ

ಬೆಂಗಳೂರು: ಕರ್ನಾಟಕದಲ್ಲಿ ಶಾಲೆಗಳು ಆರಂಭವಾಗಿದ್ದು, ಇದೇ ಸಂದರ್ಭದಲ್ಲಿ ಶಾಲಾ ಪಠ್ಯ ಪುಸ್ತಕದಲ್ಲಿ ಬದಲಾವಣೆ ಮಾಡುವಂತೆ ಸಾಹಿತಿ, ಬರಹಗಾರರು ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರಕ್ಕೆ ಮನವಿ ಮಾಡಿದ್ದಾರೆ. "ರಾಜ್ಯಾಂದ್ಯಂತ ಇಂದು ಶಾಲೆಗಳು ಪ್ರಾರಂಭವಾಗಲಿದ್ದು ಸರ್ಕಾರ ಶಿಕ್ಷಣದ ವಿಷಯವನ್ನು ಅತ್ಯಂತ ಜರೂರಿನ ವಿಷಯವನ್ನಾಗಿ ಪರಿಗಣಿಸಿ , ಎಲ್ಲಾ ರೀತಿಯ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು, ಅವುಗಳಲ್ಲಿ ತಕ್ಷಣದ ಆದ್ಯತೆ ಈ ಕೆಳಗಿನ ಪ್ರಸ್ತಾಪಗಳನ್ನು ನಮ್ಮ ಒಕ್ಕೂಟ ಮುಂದಿಡುತ್ತಿದೆ" ಎಂದು ಸಮಾನ ಮನಸ್ಕರ ಒಕ್ಕೂಟದ ಹೆಸರಿನಲ್ಲಿ ರಾಜ್ಯ ಸರಕಾರಕ್ಕೆ ಪತ್ರ ಬರೆಯಲಾಗಿದೆ.

ಹಿಂದಿನ ಕಲುಷಿತ ಪುಸ್ತಕಗಳು ಬೇಡ

ತಾವು , ಮತ್ತೊಮ್ಮ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ರಾಜ್ಯದಲ್ಲಿ ಒಂದು ಪ್ರಜಾಸತ್ತಾತ್ಮಕ, ಜಾತ್ಯತೀತ ಮತ್ತು ಜನಪರ ಸರ್ಕಾರ ಆಸ್ತಿತ್ವಕ್ಕೆ ತರಬೇಕೆಂಬ ಜನರ ಜನಾದೇಶದ ಆಶಯಕ್ಕೆ ಚಾಲನೆ ನೀಡಿದ್ದೀರಿ. ತಮಗೆ ಮತ್ತು ತಮ್ಮ ಎಲ್ಲಾ ಸಹೋದ್ಯೋಗಿಗಳಿಗೆ ಸಮಾನ ಮನಸ್ಕರ ಒಕ್ಕೂಟ –ಕರ್ನಾಟಕದ ವತಿಯಿಂದ ತುಂಬು ಹೃದಯದ ಅಭಿನಂದನೆಗಳು. ತಮ್ಮ ಈ ಕಾಲಾವಧಿಯಲ್ಲಿ ಶಿಕ್ಷಣ, ಅದರಲ್ಲೂ ವಿಶೇಷವಾಗಿ ಶಾಲಾ ಶಿಕ್ಷಣದ ವಿಷಯ ಆದ್ಯತೆಯ ವಿಷಯವಾಗುವ ಮೂಲಕ ನೆರೆಹೊರೆಯ ಸಮಾನ ಶಾಲೆಯ ಕಲ್ಪನೆ ಜಾರಿಯಾಗಬೇಕೆಂಬುದು ನಮ್ಮ ಒತ್ತಾಸೆಯಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಹಿಂದಿನ ಸರ್ಕಾರ ಶಿಕ್ಷಣವನ್ನು ಸಂಪೂರ್ಣವಾಗಿ ರಾಜಕಾರಣಕ್ಕೆ ಬಳಸಿಕೊಳ್ಳುವ ಮೂಲಕ ಹಾಳು ಮಾಡಿದ್ದಲ್ಲದೆ ಸಾಕಷ್ಟು ಗೊಂದಲ ಸೃಷ್ಟಿಸಿತ್ತು . ಪೊಳ್ಳು ರಾಷ್ಟ್ರೀಯತೆಯ ಹೆಸರಿನಲ್ಲಿ ಎಳೆ ಮಕ್ಕಳಿಗೆ ವಿಷ ಉಣಿಸುವ ಕೆಲಸ ಮಾಡಿತ್ತು.ಅಸಂವಿಧಾನಿಕವಾಗಿ ಮತ್ತು ಅಪಾರದರ್ಶಕತೆಯಿಂದ ನಡೆದ ಈ ಕೆಲಸದಲ್ಲಿ ಕಣ್ಣಿಗೆ ಕಾಣಬಹುದಾದ ಹಾಗು ಕಣ್ಣಿಗೆ ಕಾಣದ ಹಲವು ಸಣ್ಣ ಸಣ್ಣ ಬದಲಾವಣೆಗಳಾಗಿವೆ . ಒಂದು ರೀತಿಯಲ್ಲಿ ಶಿಕ್ಷಣದ ಪ್ರಕ್ರಿಯೆಯನ್ನೇ ಸರ್ವನಾಶ ಮಾಡಿ ಮಕ್ಕಳ ಕಲಿಕೆಯ ಮೇಲೆ ಹತ್ತಾರು ವರ್ಷಗಳು ಸರಿಪಡಿಸಲಾಗದ ರೀತಿಯಲ್ಲಿ ನಾಶ ಮಾಡಿದ್ದಾರೆ . ಜೊತೆಗೆ , ದೀನ-ದಲಿತ ಬಡ ಮಕ್ಕಳಿಗೆ ಸಿಗುತ್ತಿದ್ದ ಹಲವು ಸಂವಿಧಾನಬದ್ಧ ಉತ್ತೇಜಕಗಳನ್ನು ಕಸಿದು , ಸರ್ಕಾರಿ ಶಾಲೆಗಳನ್ನು ಹೀನಾಯವಾಗಿ ದುರ್ಬಲಗೊಳಿಸದ್ದಾರೆ . ಇದರಲ್ಲಿ ಶಿಕ್ಷಣ ಇಲಾಖೆಯ ಹಲವು ಅಧಿಕಾರಿಗಳ ಪಾತ್ರವೂ ಇದೆ ಎಂಬುದು ಗಮನಿಸಬೇಕಾದ ಸಂಗತಿ ಎಂದು ಮನವಿ ಪತ್ರದಲ್ಲಿ ಬರೆಯಲಾಗಿದೆ.

ಈ ಹಿನ್ನೆಲೆಯಲ್ಲಿ , ರಾಜ್ಯದಲ್ಲಿನ ಹೊಸ ಸರ್ಕಾರ ಶಿಕ್ಷಣವನ್ನು ಸಾಮಾಜಿಕ ಒಳಿತು ಮತ್ತು ಸಾಮಾಜಿಕ ಪರಿವರ್ತನೆಯ ಸಾಧನವೆಂಬ ವಿಶಾಲ ದೃಷ್ಟಿಯಲ್ಲಿ ಪರಿಭಾವಿಸಬೇಕಾಗುತ್ತದೆ . ಕಾಂಗ್ರೆಸ್ ಪಕ್ಷ ಹೊರತಂದ ಚುನಾವಣಾ ಪ್ರಣಾಳಿಕೆಯಲ್ಲಿ ಈ ದೃಷ್ಟಿಕೋನದ ಕೊರತೆ ಎದ್ದು ಕಾಣುತ್ತದೆ . ಉದಾಹರಣೆಗೆ , ಕಾಂಗ್ರೆಸ್ ಪ್ರಣಾಳಿಕೆ ಸಮಿತಿಯಲ್ಲಿದ್ದ ಮೂವರೂ ಕೂಡ ಪುರುಷರೇ ! ಇದು ಅವರ ಲಿಂಗ ಸಂವೇದನೆಗೆ ಕೈಗನ್ನಡಿ. ಇನ್ನು ಶಿಕ್ಷಣದ ವಿಷಯ ಪ್ರಣಾಳಿಕೆಯ 12 ನೇ ಪುಟದಲ್ಲಿ ಪ್ರಸ್ತಾಪವಾಗಿದೆ . ದೇಶ /ರಾಜ್ಯದ ಭವಿಷ್ಯವನ್ನು ರೂಪಿಸುವ ನಿರ್ಣಾಯಕ ವಿಷಯವನ್ನು ವಿವೇಕವಿರುವ ಯಾರು ಕೂಡ 12 ನೇ ಪುಟಕ್ಕೆ ತಳ್ಳುವುದಿಲ್ಲ. ಶಿಕ್ಷಣ , ಆರೋಗ್ಯ ಹಾಗು ಉದ್ಯೋಗ ಒಂದು ಸರಕಾರದ ಮೊದಲ ಪುಟದಲ್ಲಿ ಇರಬೇಕಾದ ಆದ್ಯತೆ ವಿಷಯಗಳು. ಇಲ್ಲವಾದಲ್ಲಿ , ಜನ ಮುಂದೊಮ್ಮೆ ಸರಕಾರಗಳ ಅಗತ್ಯ ಏನು ಎಂದು ಪ್ರಶ್ನಿಸಬಹುದು.

ಎಲ್ಲಕ್ಕಿಂತ ಮುಖ್ಯವಾಗಿ , ರಾಜ್ಯಾಂದ್ಯಂತ ಇಂದು ಶಾಲೆಗಳು ಪ್ರಾರಂಭವಾಗಲಿದ್ದು ಸರ್ಕಾರ ಶಿಕ್ಷಣದ ವಿಷಯವನ್ನು ಅತ್ಯಂತ ಜರೂರಿನ ವಿಷಯವನ್ನಾಗಿ ಪರಿಗಣಿಸಿ , ಎಲ್ಲಾ ರೀತಿಯ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು, ಅವುಗಳಲ್ಲಿ ತಕ್ಷಣದ ಆದ್ಯತೆ ಈ ಕೆಳಗಿನ ಪ್ರಸ್ತಾಪಗಳನ್ನು ನಮ್ಮ ಒಕ್ಕೂಟ ತಮ್ಮ ಮುಂದೆ ಇಡ ಬಯಸುತ್ತದೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

  1. ಈಗಾಗಲೇ ಮುದ್ರವಾಗಿ ಬಿಇಒ ಕಚೇರಿಗಳನ್ನು/ಶಾಲೆಗಳಿಗೆ ತಲುಪಿರುವ ಕಲುಷಿತ ಪುಸ್ತಕಗಳನ್ನು ಯಥಾವತ್ತಾಗಿ ಮಕ್ಕಳಿಗೆ ವಿತರಿಸದಿರಲು ಸ್ಪಷ್ಟ ಸೂಚನೆಯನ್ನು ಸಂಬಂಧಿಸಿದ ಅಧಿಕಾರಿಗಳಿಗೆ ನೀಡಬೇಕು.
  2. ಈ ಪಠ್ಯಪುಸ್ತಕಗಳಲ್ಲಿ ಬದಲಾಗಿದ್ದ ಪ್ರಮುಖ ಪಾಠಗಳನ್ನು ಮತ್ತು ಕಲಿಕಾಂಶಗಳನ್ನು ಈ ಪುಸ್ತಕಗಳಿಂದ ತೆಗೆದು ಹಾಕಿ ವಿತರಿಸಲು ಅಯಾ ವ್ಯಾಪ್ತಿಯ ಸಿ ಆರ್‌ ಪಿ ಮತ್ತು ಶಾಲೆಯ ಶಿಕ್ಷಕರನ್ನು ಹೊಣೆ ಮಾಡಬೇಕು .
  3. ಜೊತೆಗೆ, ಈ ವಿಷಯಗಳನ್ನು ಕಲಿಕೆ ಮತ್ತು ಮೌಲ್ಯಮಾಪನದಿಂದ ಕೈಬಿಡಲು ಸ್ಪಷ್ಟ ಸೂಚನೆ ನೀಡಬೇಕು . ಜೊತೆಗೆ , ಶಿಕ್ಷಣ ಹಕ್ಕು ಕಾಯಿದೆ ಅನ್ವಯ ಕಡ್ಡಾಯವಾಗಿ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ಅಳವಡಿಸಿಕೊಳ್ಳುವ ಮೂಲಕ ಅತ್ಯುತ್ತಮವಾಗಿ ಕಲಿಸುವಂತೆ ಸ್ಪಷ್ಟ ಮಾರ್ಗಸೂಚಿ ಹೊರಡಿಸುವುದು .
  4. ಈ ಎಲ್ಲಾ ಪುಸ್ತಕಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಇಂದಿನ ಬದಲಾವಣೆಗೆ ತಕ್ಕಂತೆ ಪಠ್ಯಪುಸ್ತಕಗಳನ್ನು ಪರಿಷ್ಕರಿಸಲು ಕೂಡಲೇ ಒಂದು ತಜ್ಞರ ಸಮಿತಿಯನ್ನು ರಚಿಸಬೇಕು
  5. ಕಳೆದ ೪-೫ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಶಿಕ್ಷಕರ ನೇಮಕಾತಿ ಮಕ್ಕಳ ಕಲಿಕೆಯನ್ನು ಪೂರ್ಣವಾಗಿ ಹಳಿ ತಪ್ಪಿಸಿದೆ . 2021-22 ನೇ ಸಾಲಿನಲ್ಲಿ ರಾಜ್ಯದಲ್ಲಿ ಖಾಲಿ ಇರುವ ಹುದ್ದೆಗಳ ಸಂಖ್ಯೆ ಸರಿ ಸುಮಾರು1,41,358 . ಈ ಪೈಕಿ 13,352 ಶಿಕ್ಷಕರನ್ನು ನೇಮಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದ್ದು , ಶಾಲೆ ಪ್ರಾರಂಭವಾಗುವ ಮುನ್ನ ಅವರು ಶಾಲೆಗಳಲ್ಲಿರುವಂತೆ ತುರ್ತು ಕ್ರಮ ವಹಿಸುವುದು.
  6. ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಶಿಕ್ಷಕರ ನೇಮಕಾತಿ ಮಕ್ಕಳ ಕಲಿಕೆಯನ್ನು ಪೂರ್ಣವಾಗಿ ಹಳಿ ತಪ್ಪಿಸಿದೆ . 2021-22 ನೇ ಸಾಲಿನಲ್ಲಿ ರಾಜ್ಯದಲ್ಲಿ ಖಾಲಿ ಇರುವ ಹುದ್ದೆಗಳ ಸಂಖ್ಯೆ ಸರಿ ಸುಮಾರು1,41,358 . ಈ ಪೈಕಿ 13,352 ಖಾಯಂ ಶಿಕ್ಷಕರನ್ನು ನೇಮಿಸಿಕೊಳ್ಳುವ ಪ್ರಕ್ರಿಯೆ ಬಹುತೇಕ ಮುಗಿದಿದ್ದು ಮುಂದಿನ ಒಂದು ವಾರದ ಒಳಗಾಗಿ ಈ ಶಿಕ್ಷಕರು ಶಾಲೆಗಳಲ್ಲಿರುವಂತೆ ತುರ್ತು ಕ್ರಮ ವಹಿಸುವುದು.
  7. ಸರ್ಕಾರಿ ಶಾಲೆಯಲ್ಲಿ ಮಕ್ಕಳಿದ್ದರೂ ಶೂನ್ಯ ಶಿಕ್ಷಕರಿರುವ ಶಾಲೆಗಳಿಗೆ ಕೂಡಲೇ ಈ ಖಾಯಂ ಶಿಕ್ಷಕರ ನೇಮಕವಾಗಬೇಕು.
  8. ಬಾಕಿ ಖಾಲಿ ಉಳಿಯುವ ಹುದ್ದೆಗಳಿಗೆ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರನ್ನು ಜೂನ್‌ 15ರ ಒಳಗಾಗಿ ನೇಮಿಸಿಕೊಳ್ಳಲು ಯುದ್ಧೋಪಾದಿಯಲ್ಲಿ ಕ್ರಮ ವಹಿಸುವುದು. ಈ ಪ್ರಕ್ರಿಯೆಯನ್ನು ಶಾಲಾ ಹಂತದಲ್ಲಿ ಎಸ್ಡಿಎಂಸಿ ಹಾಗು ಶಿಕ್ಷಕರ ವ್ಯಾಪ್ತಿಗೆ ಹಾಗು ವಿವೇಚನೆಗೆ ಬಿಡಬೇಕು .ಇದನ್ನು ಸಂಬಂಧಿಸಿದ ಬಿ ಆರ್‌ ಸಿ ಮೇಲುಸ್ತುವಾರಿ ಮಾಡಬೇಕು .
  9. ಶಾಲೆ ಪ್ರಾರಂಭಕ್ಕೆ ಮುನ್ನ ಎಲ್ಲಾ ಮಕ್ಕಳಿಗೆ ದೊರೆಯಬೇಕಾದ ಉತ್ತೇಜಕಗಳಾದ ಪಠ್ಯಪುಸ್ತಕ, ಸಮವಸ್ತ್ರ , ಷೂ ಮತ್ತು ಸಾಕ್ಸ್‌ ಗಳನ್ನು ತಕ್ಷಣ ಸಕಾಲಕ್ಕೆ ಒದಗಿಸುವುದು .
  10. ಶಾಲಾ ಹಂತದಲ್ಲಿ ಮಕ್ಕಳ ಕಲಿಕೆಗೆ ತೊಂದರೆಯಾಗದಂತೆ ಸರ್ಕಾರಿ ಹಾಗು ಅನುದಾನಿತ ಶಾಲೆಗಳಲ್ಲಿ 1 ರಿಂದ 12 ನೇ ತರಗತಿಯವರೆಗೆ ಕಲಿಯುತ್ತಿರುವ ಎಲ್ಲಾ ಮಕ್ಕಳಿಗೆ ಉಚಿತ ಬಸ್‌ ಪಾಸ್‌ ನೀಡುವುದು . ಇದು ಶಾಲಾ ಲಾಗಿನ್ನಲ್ಲಿಯೇ ದೊರೆಯುವಂತೆ ಮಾಡುವುದು.
  11. ಕಳೆದ ಮೂರ್ನಾಲ್ಕು ವರ್ಷಗಳಿಂದ ಶಾಲಾ ಅನುದಾನಗಳು ಪೂರ್ಣ ಪ್ರಮಾಣದಲ್ಲಿ ಬಾರದಿರುವುದರಿಂದ ಸೀಮೇಸುಣ್ಣ-ಬಿಳೀ ಹಾಳೆಗಳ ಖರೀದಿಯೂ ಕಷ್ಟವಾಗಿದ್ದು , ತಕ್ಷಣ ಶಾಲಾ ಅನುದಾನವನ್ನು ಬಿಡುಗಡೆ ಮಾಡಲು ಕ್ರಮ ವಹಿಸಬೇಕು.
  12. ಸರ್ಕಾರಿ ಶಾಲೆಗಳಲ್ಲಿ ಬಳಸುವ ವಿದ್ಯುಚ್ಛಕ್ತಿ ಹಾಗು ನೀರಿನ ಬಳಕೆಯ ಬಿಲ್‌ ಗಳ ಹಣವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮನ್ನಾ ಮಾಡುವುದು
  13. ಪ್ರೌಢ ಶಿಕ್ಷಣ ಮುಂದುವರಿಸಲು ಅನುಕೂಲವಾಗುವಂತೆ ಹೆಣ್ಣು ಹಾಗು ಗಂಡು ಮಕ್ಕಳಿಗೆ ಸಿಗುತ್ತಿದ್ದ ಬೈಸಿಕಲ್‌ ವಿತರಣೆ ಕಳೆದ ನಾಲ್ಕು ವರ್ಷಗಳಿಂದ (2019-200) ಸ್ಥಗಿತವಾಗಿದ್ದು ಸಾವಿರಾರು ಮಕ್ಕಳು ಶಾಲೆ ಬಿಟ್ಟಿದ್ದಾರೆ . ಆದ್ದರಿಂದ, ಕೂಡಲೇ ಮಕ್ಕಳಿಗೆ ಬೈಸಿಕಲ್‌ ವಿತರಿಸುವ ಪ್ರಕ್ರಿಯೆ ಪ್ರಾರಂಭಿಸಬೇಕು.
  14. ವಿವಿಧ ಇಲಾಖೆಗಳ ಅಡಿಯಲ್ಲಿ ನಡೆಯುತ್ತಿರುವ ವಸತಿ ನಿಲಯಗಳಲ್ಲಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಜೂನ್ ಒಂದರ ಒಳಗೆ ಎಲ್ಲಾ ಮೆಟ್ರಿಕ್‌ ಪೂರ್ವ ವಿದ್ಯಾರ್ಥಿ ನಿಲಯಗಳು ಪುನರಾರಂಭಗೊಳ್ಳುವಂತೆ ಜರೂರು ಕ್ರಮ ವಹಿಸುವುದು.
  15. ಶುದ್ಧ ಕುಡಿಯುವ ನೀರು, ಮಕ್ಕಳ ಶೌಚಾಲಯ, ತರಗತಿ ಕೋಣೆ ಸೇರಿದಂತೆ ಮೂಲಭೂತ ಸೌಕರ್ಯಗಳು ಪ್ರಥಮ ಆದ್ಯತೆಯಾಗಬೇಕು
  16. ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವ ಭಾಗವಾಗಿ ಮಧ್ಯಾಹ್ನದ ಬಿಸಿಯೂಟದ ವೆಚ್ಚಕ್ಕೆ ಈಗಿರುವ ಪ್ರತೀ ಮಗುವಿನ ಯುನಿಟ್‌ ವೆಚ್ಚವನ್ನು ಹೆಚ್ಚಿಸಬೇಕು.
  17. ಪದವಿ ಪೂರ್ವ ಕಾಲೇಜುಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಇಂದಿರಾ ಕ್ಯಾಂಟೀನ್ ನಲ್ಲಿ / ಮಾದರಿಯಲ್ಲಿ ಮಧ್ಯಾಹ್ನ ಉಚಿತ ಊಟ ಒದಗಿಸಬೇಕು .
  18. ಸಂವಿಧಾನದಲ್ಲಿನ ಮೂಲಭೂತ ಹಕ್ಕಾಗಿರುವ 21ಎ ನ್ನು ಕೊಡಮಾಡುವ ಶಿಕ್ಷಣ ಹಕ್ಕು ಕಾಯಿದೆಯನ್ನು ಸಮರ್ಪಕವಾಗಿ ಹಾಗು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಹಾಗು ನಿಗದಿತ ಸಮಯದಲ್ಲಿ ಎಲ್ಲಾ ಮೂಲಭೂತ ಸೌಕರ್ಯ ಒದಗಿಸಲು ಹೊಸ ಸರ್ಕಾರ ಕಾಲಮಿತಿ ಯೋಜನೆ ರೂಪಿಸಬೇಕು.
  19. ಯಾವುದೇ ನೆಪಹೇಳಿ ಸರ್ಕಾರಿ ಶಾಲೆಗಳನ್ನು ಸಾಮೂಹಿಕವಾಗಿ ಮುಚ್ಚುವ/ ವಿಲೀನಗೊಳಿಸುವ ಪ್ರಕ್ರಿಯೆಯನ್ನುಪೂರ್ಣವಾಗಿ ನಿಲ್ಲಿಸುವುದು.
  20. ಬಾಲ್ಯಪೂರ್ವ ಆರೈಕೆ ಮತ್ತು ಶಿಕ್ಷಣವೂ ಒಳಗೊಂಡಂತೆ ಕನಿಷ್ಠ 12ನೆಯ ತರಗತಿಯವರೆಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ವಿಸ್ತರಿಸಲು ಸಂವಿಧಾನ ಹಾಗು ಶಿಕ್ಷಣಹಕ್ಕು ಕಾಯಿದೆಗೆ ಅಗತ್ಯ ತಿದ್ದುಪಡಿ ತರಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು
  21. ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಮತ್ತು ಸೂಕ್ತ ಆದೇಶವೇ ಇಲ್ಲದೆ ಪಠ್ಯ ಪರಿಷ್ಕರಣೆಯ ಹೆಸರಿನಲ್ಲಿ ರಾಜ್ಯ ಖಜಾನೆಗೆ ಕೋಟ್ಯಂತರ ನಷ್ಟ ಮಾಡಿದ ಹಿಂದಿನ ಪಠ್ಯಪರಿಷ್ಕರಣೆ ಸಮಿತಿಯ ಅಧ್ಯಕ್ಷರು ಮತ್ತು ತಂಡದ ಸದಸ್ಯರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.ಜೊತೆಗೆ, ಲಕ್ಷ ಲಕ್ಷ ಸಂಖ್ಯೆಯಲ್ಲಿ ಮುದ್ರಣವಾಗಿದ್ದ ಕನ್ನಡ ಹಾಗು ಇತಿಹಾಸದ ಪುಸ್ತಕಗಳ ಸರಬರಾಜನ್ನು ಸ್ಥಗಿತಗೊಳಿಸುವ ಮೂಲಕ ಪೋಲು ಮಾಡಿದ ಕೋಟ್ಯಂತರ ಸಾರ್ವಜನಿಕ ಹಣವನ್ನು ಅವರಿಂದ ವಸೂಲು ಮಾಡಬೇಕು.
  22. ಮಕ್ಕಳಿಗೆ ಕ್ಷೀರ ಭಾಗ್ಯ ಮತ್ತು ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಬೆಳಗಿನ ಉಪಹಾರ ಯೋಜನೆಯನ್ನು ಜಾರಿಗೊಳಿಸುವುದು ಹಾಗು ರಾಜ್ಯದಲ್ಲಿ ಅಪೌಷ್ಠಿಕತೆ ತೊಡೆದು ಹಾಕಲು ಅಂಗನವಾಡಿಯಿಂದ 10 ನೇ ತರಗತಿಯ ಎಲ್ಲಾ ಮಕ್ಕಳಿಗೆ ಪ್ರತಿದಿನ ಮೊಟ್ಟೆ ವಿತರಿಸಲು ಕ್ರಮ ಕೈಗೊಳ್ಳಬೇಕು.
  23. ಶಾಲಾ ಹಂತದಲ್ಲಿ ಸಂವಿಧಾನ ಬದ್ಧವಾಗಿ ಕಾರ್ಯನಿರ್ವಹಿಸುತ್ತಿರುವ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳನ್ನು ಪ್ರಜಾಸತ್ತಾತ್ಮಕವಾಗಿ ರಚಿಸಿ ಬಲವರ್ಧನೆಗೊಳಿಸಲು ಪರಿಣಾಮಕಾರಿ ತರಬೇತಿ ಒದಗಿಸಲು ಕ್ರಮ.
  24. ರಾಜ್ಯ ಆಯವ್ಯಯದಲ್ಲಿ ಶಿಕ್ಷಣಕ್ಕೆ ಶೇಕಡ 20 ರಷ್ಟು ಮೀಸಲಿಡಬೇಕು .

ಉನ್ನತ ಹಾಗು ಕಾಲೇಜು ಹಂತದ ಶಿಕ್ಷಣ

  1. ಕೇಂದ್ರ ಸರ್ಕಾರ ಅಸಂವಿಧಾನಿಕ ಮತ್ತು ಅಪ್ರಜಾಸತ್ತಾತ್ಮಕವಾಗಿ ಪಾರದರ್ಶಕತೆಯೇ ಇಲ್ಲದೆ ಗೌಪ್ಯವಾಗಿ ಸಂವಿಧಾನ ಪ್ರತಿಪಾದಿಸುವ ಬಹುತ್ವದ ರಾಷ್ಟ್ರೀಯತೆಗೆ ಬದಲಾಗಿ ಧರ್ಮಾಧಾರಿತ ಕೋಮುವಾದಿ ನೆಲೆಯ ಹಿಂದುತ್ವ ರಾಷ್ಟ್ರೀಯತೆಯನ್ನು ಸಾಧಿಸಲು ರೂಪಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿಧಾನ ಸಭೆಯ ಮೊದಲ ಅಧಿವೇಶನದಲ್ಲಿ ಸಾರಾಸಗಟಾಗಿ ತಿರಸ್ಕರಿಸುವ ನಿರ್ಣಯ ಕೈಗೊಳ್ಳಬೇಕು . ಅದನ್ನು ಒಕ್ಕೂಟ ಸರಕಾರಕ್ಕೆ ಅಧಿಕೃತವಾಗಿ ತಿಳಿಸಬೇಕು. ಶಿಕ್ಷಣ ಸಮವರ್ತಿ ಪಟ್ಟಿಯಲ್ಲಿರುವುದನ್ನು ಒಕ್ಕೂಟ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು.
  2. ಈ ನೀತಿ ಅನ್ವಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮತ್ತು ಉನ್ನತ ಶಿಕ್ಷಣದಲ್ಲಿ ಜಾರಿಯಾಗಿರುವ ಎಲ್ಲವನ್ನೂ ಸ್ಥಗಿತ ಗೊಳಿಸಿ ನೀತಿ ಜಾರಿಗೆ ಮುನ್ನ ಇದ್ದ ಯಥಾಸ್ಥಿತಿಯನ್ನು ಮುಂದುವರಿಸಬೇಕು
  3. ಎಲ್ಲಾ ವಿಶ್ವವಿದ್ಯಾಲಯ ಮತ್ತು ಸರ್ಕಾರಿ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ತುಂಬಬೇಕು.
  4. ವಿಶ್ವವಿದ್ಯಾಲಯದ ವಿವಿಧ ಹಂತದಲ್ಲಿನ ಪ್ರಾತಿನಿಧಿಕ ಸಂಸ್ಥೆಗಳಿಗೆ; ಸೆನೆಟ್‌, ಸಿಂಡಿಕೇಡ್‌, ಅಕಡೆಮಿಕ್‌ ಕೌನ್ಸಿಲ್‌ , ಇತ್ಯಾದಿಗಳಿಗೆ ಆಯ್ಕೆ ಸಮಿತಿಯ ಶಿಫಾರಸ್ಸಿನ ಮೂಲಕ ಅರ್ಹ ಮತ್ತು ವೃತ್ತಿನೈಪುಣ್ಯತೆಯ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕು
  5. ವಿಶ್ವವಿದ್ಯಾಲಯಗಳಿಗೆ ಕುಲಪತಿ ಹಾಗು ಕುಲಸಚಿವರನ್ನು ಆಯ್ಕೆ ಮಾಡುವಾಗ ವಿಷಯ ಪರಿಣಿತರು ಮತ್ತು ಪ್ರಾಮಾಣಿಕರನ್ನು ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಸಂವಿಧಾನದ ಮೌಲ್ಯಗಳಲ್ಲಿ ಪೂರ್ಣ ನಂಬಿಕೆ ಇರುವವರನ್ನು ಆಯ್ಕೆ ಮಾಡಬೇಕು.
  6. ಖಾಸಗಿ ಸ್ವಾಯತ್ತ ವಿಶ್ವವಿದ್ಯಾಲಯಗಳನ್ನು ಅಣಬೆಯಂತೆ ತೆರೆಯಲು ನೀಡುವ ಅನುಮತಿಯನ್ನು ಸ್ಥಗಿತಗೊಳಿಸಿ, ಸಾರ್ವಜನಿಕ ವಿಶ್ವವಿದ್ಯಾಲಯಗಳನ್ನು ಬಲವರ್ಧನೆಗೊಳಿಸಲು ಮತ್ತು ವಿಸ್ತರಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು.
  7. ಸಂವಿಧಾನದ ಆಶಯದಂತೆ ಸಾರ್ವಜನಿಕ ಶಿಕ್ಷಣವನ್ನು ಸಮಗ್ರ ವಾಗಿ ಬದಲಾಯಿಸಿ ಎಲ್ಲಾ ಮಕ್ಕಳಿಗೆ ಸಮಾನ ಗುಣಮಟ್ಟದ ಶಿಕ್ಷಣ ವ್ಯವಸ್ಥೆಯನ್ನು ಕಟ್ಟಿಕೊಡಬಲ್ಲ ರಾಜ್ಯ ಶಿಕ್ಷಣ ನೀತಿಯನ್ನು ರೂಪಿಸಿ, ಜಾರಿಗೊಳಿಸಿ ಮತ್ತು ನಿರಂತರ ಮೌಲ್ಯಾಂಕನ ಮೂಲಕ ಸಮಾನ ಗುಣಮಟ್ಟದ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಲು ಶಾಶ್ವತ ರಾಜ್ಯ ಶಿಕ್ಷಣ ಆಯೋಗವನ್ನು /ಪ್ರಾಧಿಕಾರವನ್ನು ಸ್ಥಾಪಿಸಬೇಕು ಎಂದು ಅಭಿವೃದ್ಧಿ ಶಿಕ್ಷಣ ತಜ್ಞ ಹಾಗು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಹರಿಕಾರ ನಿರಂಜನಾರಾಧ್ಯ ವಿ .ಪಿ., ಹೆಸರಿನಲ್ಲಿ ಸರಕಾರಕ್ಕೆ ಪತ್ರ ಬರೆಯಲಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ