logo
ಕನ್ನಡ ಸುದ್ದಿ  /  ಕರ್ನಾಟಕ  /  ಕನ್ನಡ ರಾಜ್ಯೋತ್ಸವವನ್ನು ಕರಾಳ ದಿನವನ್ನಾಗಿ ಆಚರಿಸಲು ಕನ್ನಡ ಮಾಧ್ಯಮ ಖಾಸಗಿ ಶಾಲೆಗಳ ನಿರ್ಧಾರ: ಅನುದಾನಕ್ಕೆ ಆಗ್ರಹ

ಕನ್ನಡ ರಾಜ್ಯೋತ್ಸವವನ್ನು ಕರಾಳ ದಿನವನ್ನಾಗಿ ಆಚರಿಸಲು ಕನ್ನಡ ಮಾಧ್ಯಮ ಖಾಸಗಿ ಶಾಲೆಗಳ ನಿರ್ಧಾರ: ಅನುದಾನಕ್ಕೆ ಆಗ್ರಹ

Prasanna Kumar P N HT Kannada

Oct 28, 2024 11:12 AM IST

google News

ಕನ್ನಡ ರಾಜ್ಯೋತ್ಸವವನ್ನು ಕರಾಳ ದಿನವನ್ನಾಗಿ ಆಚರಿಸಲು ನಿರ್ಧಾರ; ಖಾಸಗಿ ಶಾಲೆಗಳು ಎಚ್ಚರಿಕೆ

    • Kannada Rajyotsava: ಕನ್ನಡ ಮಾಧ್ಯಮ ಖಾಸಗಿ ಶಾಲೆಗಳು ಕನ್ನಡ ರಾಜ್ಯೋತ್ಸವವನ್ನು ಕರಾಳ ದಿನವನ್ನಾಗಿ ಆಚರಿಸಲು ನಿರ್ಧರಿಸಿವೆ. ಅನುದಾನಕ್ಕೆ ಒಳಪಡಿಸುವ ವಿಚಾರದಲ್ಲಿ ಸರ್ಕಾರವು ಖಾಸಗಿ ಕನ್ನಡ ಮಾಧ್ಯಮ ಶಾಲೆಗಳ ಬೇಡಿಕೆ ಪರಿಗಣಿಸದಿರುವುದನ್ನು ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘ ಖಂಡಿಸಿದೆ.
ಕನ್ನಡ ರಾಜ್ಯೋತ್ಸವವನ್ನು ಕರಾಳ ದಿನವನ್ನಾಗಿ ಆಚರಿಸಲು ನಿರ್ಧಾರ; ಖಾಸಗಿ ಶಾಲೆಗಳು ಎಚ್ಚರಿಕೆ
ಕನ್ನಡ ರಾಜ್ಯೋತ್ಸವವನ್ನು ಕರಾಳ ದಿನವನ್ನಾಗಿ ಆಚರಿಸಲು ನಿರ್ಧಾರ; ಖಾಸಗಿ ಶಾಲೆಗಳು ಎಚ್ಚರಿಕೆ

ಬೆಂಗಳೂರು: ನವೆಂಬರ್​ 1ರಂದು ಕನ್ನಡ ರಾಜ್ಯೋತ್ಸವದ ಸಂಭ್ರಮಕ್ಕೆ ಸರ್ಕಾರ ಅಂತಿಮ ಹಂತದ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ. ಆದರೆ ಖಾಸಗಿ ಶಾಲೆಗಳು ಅಂದು ಕರಾಳ ದಿನವನ್ನಾಗಿ ಆಚರಿಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿವೆ. ರಾಜ್ಯ ಸರ್ಕಾರವು 1995ರ ನಂತರ ಖಾಸಗಿ ಕನ್ನಡ ಮೀಡಿಯಂ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸದೆ ತೀವ್ರ ನಿರ್ಲಕ್ಷ್ಯ ತೋರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಕರ್ನಾಟಕ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘ, ಕನ್ನಡ ರಾಜ್ಯೋತ್ಸವವನ್ನು ಕರಾಳ ದಿನವೆಂದು ಆಚರಿಸಲು ತೀರ್ಮಾನ ಕೈಗೊಂಡಿದೆ.

ಕರ್ನಾಟಕ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಅವರು ಪದಾಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಈ ಬಗ್ಗೆ ನಿರ್ಧಾರ ಪ್ರಕಟಿಸಿದ್ದಾರೆ. ಕಳೆದ ಮೂವತ್ತು ವರ್ಷಗಳಿಂದ ಈ ಬಗ್ಗೆ ಹೋರಾಟ ನಡೆಸಿದ್ದೇವೆ. ಆದರೆ ನಮ್ಮ ಬೇಡಿಕೆಗಳಿಗೆ ಯಾವುದೇ ಸರ್ಕಾರ ಈಡೇರಿಸಿಲ್ಲ. ಖಾಸಗಿ ಕನ್ನಡ ಮಾಧ್ಯಮ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸುವಂತೆ ಧರಣಿ ಸತ್ಯಾಗ್ರಹ ಮಾಡಿದ್ದರೂ ಸರ್ಕಾರಗಳು ನಿರ್ಲಕ್ಷ್ಯ ವಹಿಸುತ್ತಿವೆ. ಅಷ್ಟೇ ಯಾಕೆ, ಆತ್ಮಹತ್ಯೆಯಂತಹ ಹಲವು ಘಟನೆಗಳು ಸಂಭವಿಸಿದರೂ ಕರುಣೆ ತೋರದಿರುವುದು ನಿಜವಾಗಲೂ ಖಂಡನೀಯ ಎಂದು ಬೇಸರ ಹೊರಹಾಕಿದ್ದಾರೆ.

‘ಉದ್ದುದ್ದ ಭಾಷಣ ಬಿಗಿಯೋರಿಗೆ ನಾವು ಕಾಣಿಸುತ್ತಿಲ್ಲ’

ಇದೇ ವೇಳೆ ರಾಜಕೀಯ ನಾಯಕರ ಕನ್ನಡ ಭಾಷಾಭಿಮಾನದ ಬಗ್ಗೆ ಮಾತನಾಡಿದ ಲೋಕೇಶ್, ನವೆಂಬರ್ ಬಂತೆಂದರೆ ಕನ್ನಡ ನಾಡು ನುಡಿ ಬಗ್ಗೆ ಉದ್ದುದ್ದ ಭಾಷಣ ಬಿಗಿಯುತ್ತಾರೆ. ಕನ್ನಡ ಸಾಹಿತಿಗಳು, ಪ್ರಗತಿಪರ ಚಿಂತಕರು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಬಗ್ಗೆ ಹೇಳುತ್ತಾರೆ. ಇವರಿಗೆಲ್ಲಾ ನಮ್ಮ ಶಾಲೆಗಳ ಶಿಕ್ಷಕರು ಕಾಣಿಸುತ್ತಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ. ಖಾಸಗಿ ಶಾಲೆಗಳ ಕನ್ನಡ ಮಾಧ್ಯಮದ ಶಿಕ್ಷಕರು ಕಳೆದ 30 ವರ್ಷಗಳಿಂದ ನಮ್ಮ ಭಾಷೆಯನ್ನು ಸಾವಿರಾರು ಮಕ್ಕಳಿಗೆ ಕಲಿಸಿ ಬಿಡಿಗಾಸು ಪಡೆಯದೆಯೇ ನಿವೃತ್ತಿ ಪಡೆಯುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಹೀಗಾಗಿ ಸರ್ಕಾರದ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದೇವೆ. ಖಾಸಗಿ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸದೆ ನಿರ್ಲಕ್ಷ್ಯ ತೋರುತ್ತಿರುವ ಸರ್ಕಾರದ ನಡೆಯನ್ನು ಖಂಡಿಸಿ ಖಾಸಗಿ ಶಾಲೆಗಳ ಶಿಕ್ಷಕರು ಮತ್ತು ಆಡಳಿತ ಮಂಡಳಿಯ ಸದಸ್ಯರು ಕನ್ನಡ ರಾಜ್ಯೋತ್ಸವ ದಿನದಂದು ಕಪ್ಪು ಪಟ್ಟಿ ಧರಿಸಿ, ಕರಾಳ ದಿನವಾಗಿ ಆಚರಿಸಲು ನಿರ್ಧರಿಸಿದ್ದೇವೆ. ಆರ್‌ಟಿಇ ಮರುಚಾಲನೆ, ಆರ್‌ಟಿಇ ಶುಲ್ಕ ಮರುಪಾವತಿ, ಶಾಲೆಗಳ ಮಾನ್ಯತೆ ನವೀಕರಣ, ಗ್ರ್ಯಾಚುಯಿಟಿ ಸೇರಿದಂತೆ ಹಲವು ಸಮಸ್ಯೆಗಳ ವಿರುದ್ಧ ನ್ಯಾಯಾಲಯದ ಮೊರೆ ಹೋಗಲು ಸಹ ಸಭೆಯಲ್ಲಿ ಒಮ್ಮತ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಸೂಚಿಸಿದ್ದಾರೆ.

 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ