ಕನ್ನಡ ರಾಜ್ಯೋತ್ಸವ 2024: ಹಳೇ ಮೈಸೂರು ಭಾಗದ ಬಗ್ಗೆ ನೀವು ತಿಳಿಯಬೇಕಾದ 10 ವೈಶಿಷ್ಟ್ಯಗಳು, ಹುಲಿ ಕಾಡಿನಿಂದ ಕಾವೇರಿ ನಂಟಿನವರೆಗೆ
ಕನ್ನಡ ಸುದ್ದಿ  /  ಕರ್ನಾಟಕ  /  ಕನ್ನಡ ರಾಜ್ಯೋತ್ಸವ 2024: ಹಳೇ ಮೈಸೂರು ಭಾಗದ ಬಗ್ಗೆ ನೀವು ತಿಳಿಯಬೇಕಾದ 10 ವೈಶಿಷ್ಟ್ಯಗಳು, ಹುಲಿ ಕಾಡಿನಿಂದ ಕಾವೇರಿ ನಂಟಿನವರೆಗೆ

ಕನ್ನಡ ರಾಜ್ಯೋತ್ಸವ 2024: ಹಳೇ ಮೈಸೂರು ಭಾಗದ ಬಗ್ಗೆ ನೀವು ತಿಳಿಯಬೇಕಾದ 10 ವೈಶಿಷ್ಟ್ಯಗಳು, ಹುಲಿ ಕಾಡಿನಿಂದ ಕಾವೇರಿ ನಂಟಿನವರೆಗೆ

ಕನ್ನಡ ರಾಜ್ಯೋತ್ಸವ 2024 (karnataka rajyotsava 2024) ಪ್ರಯುಕ್ತ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡವು ಹಳೆ ಮೈಸೂರು ಭಾಗದ ಮಹತ್ವವನ್ನು ಬಿಡಿಸಿಟ್ಟಿದೆ. ಮೈಸೂರು ಸಂಸ್ಥಾನದ ಕಾರಣದಿಂದ ಅಭಿವೃದ್ದಿಯ ರೂಪಕ್ಕೆ ಆಗಲೇ ವೇಗ ಪಡೆದಿದ್ದ ಭಾಗ. ಪ್ರವಾಸೋದ್ಯಮ. ನೀರಾವರಿ, ಕೃಷಿ, ಅರಣ್ಯ ಈ ಭಾಗದ ವಿಶೇಷತೆ. ಕಾವೇರಿಯದ್ದು ಬಿಡಿಸಲಾಗದ ನಂಟು.

ಹಳೆ ಮೈಸೂರು ಭಾಗ ಈಗಲೂ ಹಲವು ವೈಶಿಷ್ಟ್ಯಗಳ ಸಂಗಮ
ಹಳೆ ಮೈಸೂರು ಭಾಗ ಈಗಲೂ ಹಲವು ವೈಶಿಷ್ಟ್ಯಗಳ ಸಂಗಮ
  1. ಹಳೆ ಮೈಸೂರು ಭಾಗವನ್ನು ಕಾವೇರಿ ಸೀಮೆ ಎಂತಲೂ ಕರೆಯಲಾಗುತ್ತದೆ. ಹಿಂದೆ ಮೈಸೂರು ಸಂಸ್ಥಾನದ ಆಡಳಿತ ಇದ್ದುದರಿಂದ ಇದನ್ನು ಮೈಸೂರು ಭಾಗ ಎಂದು ಹೇಳಲಾಗುತ್ತದೆ. ಹೈದ್ರಾಬಾದ್‌, ಮುಂಬೈ ಮಾದರಿಯಲ್ಲಿಯೇ ಈ ಭಾಗದಲ್ಲಿ ಇದ್ದುದು ಮೈಸೂರು ಸರ್ಕಾರ. ಅದಕ್ಕೂ ಮೊದಲು ಟಿಪ್ಪುಸುಲ್ತಾನ್‌ ಆಡಳಿತ. ಮೈಸೂರು ಸರ್ಕಾರದ ಮುಂದೆ ಕರ್ನಾಟಕದ ಭಾಗವಾಗಿ ಮಾರ್ಪಾಡಾಯಿತು.
  2. ಹಳೆ ಮೈಸೂರು ಭಾಗಕ್ಕೆ ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ, ರಾಮನಗರ, ತುಮಕೂರು ಜಿಲ್ಲೆಗಳೂ ಬರುತ್ತವೆ. ಕೋಲಾರ, ಚಿಕ್ಕಬಳ್ಳಾಪುರವನ್ನೂ ಹಳೆ ಮೈಸೂರು ಭಾಗ ಎಂದೇ ಹಿಂದೆಲ್ಲಾ ಕರೆಯಲಾಗುತ್ತಿತ್ತು. ಇದು ದಾವಣಗೆರೆವರೆಗೂ ಇತ್ತು. ಕರ್ನಾಟಕವಾದ ಬಳಿಕ ಬೆಂಗಳೂರು  ಅಕ್ಕಪಕ್ಕದ ಬೆಂಗಳೂರು ಭಾಗವಾಗಿ, ಮಲೆನಾಡು,ಮಧ್ಯಕರ್ನಾಟಕ ಭಾಗವಾಗಿ ರೂಪುಗೊಂಡಿವೆ.
  3. ಮೈಸೂರು ಸಮೃದ್ದತೆಯ ನಾಡು. ಏಕೆಂದರೆ ಈ ಭಾಗದಲ್ಲಿ ಆಡಳಿತ ಇದ್ದುದು ಮೈಸೂರು ಅರಸರದ್ದು. ಮೈಸೂರು ಯದು ವಂಶಸ್ಥರು ಈ ಭಾಗವನ್ನು ಅಭಿವೃದ್ದಿಪಡಿಸಲು ಒತ್ತು ನೀಡಿದರು. ಶಿಕ್ಷಣ, ಆರೋಗ್ಯ, ಕೃಷಿ, ನೀರಾವರಿ, ನಗರಾಭಿವೃದ್ದಿಗೆ ಒತ್ತು ಕೊಟ್ಟರು. ಮೀಸಲಾತಿಯನ್ನು ಆಗಲೇ ಜಾರಿ ಮಾಡಿದ್ದರು. ಅದಕ್ಕೆ ಒಂದು ಶತಮಾನ ಪೂರೈಸಿದೆ.
  4. ಮೈಸೂರಿನ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸಿದವರು ಕೃಷ್ಣರಾಜ ಒಡೆಯರ್‌ ಅವರ ಪಾತ್ರವೇ ಹಿರಿದು. ಇದರಿಂದ ಮೈಸೂರು, ಮಂಡ್ಯ ಭಾಗದ ಹಲವಾರು ಊರುಗಳಿಗೆ ಈಗಲೂ ಅವರ ಹೆಸರೇ ಇದೆ. ನೀರಾವರಿಗೆ ಒತ್ತು ನೀಡಿದ್ದರಿಂದ ಈ ಭಾಗದ ಹಲವು ಜಿಲ್ಲೆಗಳ ಜನರ ಬದುಕು ಬದಲಾಗಿದೆ. ವಿಶೇಷವಾಗಿ ಕೆಆರ್‌ಎಸ್‌ ರೂಪಿಸಲು ಮಹಾರಾಜರ ಒತ್ತಾಸೆಯಿತ್ತು.
  5. ಮೈಸೂರು ಪ್ರವಾಸಿ ನಗರಿ, ಪಾರಂಪರಿಕ ನಗರಿ, ಮಹಾರಾಜರ ಊರು, ಸ್ವಚ್ಚ ನಗರಿ, ದಸರಾ ಊರು, ನಿವೃತ್ತರ ಸ್ವರ್ಗ ಎನ್ನುವ ಹಲವಾರು ಅಭಿದಾನಗಳನ್ನು ಹೊಂದಿದೆ. ಆ ರೀತಿಯ ವ್ಯವಸ್ಥಿತ ಹಾಗೂ ಮಾದರಿ ಅಭಿವೃದ್ದಿಗಳು ಇಲ್ಲಿ ಆಗಿವೆ. ಅದಕ್ಕೆ ಉದಾಹರಣೆ ಮೈಸೂರು ಅರಮನೆಗಳು, ವೃತ್ತ, ರಸ್ತೆಗಳು, ವಿಭಿನ್ನ ಕಟ್ಟಡಗಳು. ಮೈಸೂರು ಜಿಲ್ಲೆಯಲ್ಲಿಯೇ ದೇವರಾಜ ಅರಸು ಅವರ ನಂತರ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ.
  6. ಮಂಡ್ಯ ಜಿಲ್ಲೆ ಕೃಷಿ ನಾಡು. ರೈತರ ಬೀಡು. ಅದರಲ್ಲೂ ಕೃಷ್ಣರಾಜಸಾಗರ ಜಲಾಶಯ ರೂಪುಗೊಂಡ ನಂತರ ಜಿಲ್ಲೆಯ ಚಿತ್ರಣವೇ ಬದಲಾಗಿದೆ. ಭತ್ತ, ಕಬ್ಬು, ರಾಗಿ, ರೇಷ್ಮೆ ಬೆಳೆಯುವ ಮಂಡ್ಯದ ಕೃಷಿಯನ್ನು ಕಾವೇರಿ ನದಿ ಸಮೃದ್ದಗೊಳಿಸಿದೆ. ರಾಜಕೀಯದಲ್ಲೂ ಮಂಡ್ಯ ಜನಪ್ರಿಯ. ಈ ಜಿಲ್ಲೆಯವರೇ ಆದ ಎಸ್‌.ಎಂ. ಕೃಷ್ಣ, ಹಾಲಿ ಸಂಸದರಾಗಿ ಕೇಂದ್ರದಲ್ಲಿ ಮಂತ್ರಿಯೂ ಆಗಿರುವ ಎಚ್‌.ಡಿ.ಕುಮಾರಸ್ವಾಮಿ ಸಿಎಂ ಆದವರು. ಈಗಲೂ ನಟ ಅಂಬರೀಷ್‌ ಜಿಲ್ಲೆಯ ಸ್ಟಾರ್‌.
  7. ಭಾರತದಲ್ಲೇ ಅತಿ ಹೆಚ್ಚು ಹುಲಿ, ಆನೆಗಳ ಸಾಂಧ್ರತೆ ಹೊಂದಿರುವ ಭಾಗ ಹಳೆ ಮೈಸೂರು. ಬಂಡೀಪುರ, ನಾಗರಹೊಳೆ, ಬಿಳಿಗಿರಿರಂಗನಬೆಟ್ಟ, ಮಲೈಮಹದೇಶ್ವರ, ಕಾವೇರಿ ವನ್ಯಧಾಮಗಳು ಇಲ್ಲಿನ ಪ್ರಮುಖ ಆಕರ್ಷಣೆ. ಪರಿಸರ ಪ್ರವಾಸೋದ್ಯಮದ ಭಾಗವಾಗಿ ಈ ಪ್ರದೇಶ ವಿಶ್ವದ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಸಹಸ್ರಾರು ಮಂದಿ ಪ್ರವಾಸಿಗರು ಈ ಕಾರಣಕ್ಕೆ ಪ್ರವಾಸಕ್ಕೆಂದೇ ಬರುತ್ತಾರೆ.
  8. ಚಾಮರಾಜನಗರ ಜಿಲ್ಲೆ ಬೆಟ್ಟಗಳ ತಾಣ. ಅತಿ ಹೆಚ್ಚು ಅರಣ್ಯ ಹೊಂದಿರುವ ಕರ್ನಾಟಕದ ಎರಡನೇ ಜಿಲ್ಲೆಯ ಜತೆಗೆ ಮೂರು ಪ್ರಮುಖ ಬೆಟ್ಟಗಳೊಂದಿಗೆ ಗಮನ ಸೆಳೆದಿದೆ. ಹೆಚ್ಚು ಹುಲಿಧಾಮಗಳಿರುವುದು ಇದೇ ಜಿಲ್ಲೆಯಲ್ಲೇ. ಮಲೈ ಮಹದೇಶ್ವರ, ಬಿಳಿಗಿರಿರಂಗ, ಹಿಮವದ್‌ ಗೋಪಾಲಸ್ವಾಮಿ ಬೆಟ್ಟಗಳೂ ಬರೀ ಬೆಟ್ಟಗಳಲ್ಲ. ಲಕ್ಷಾಂತರ ಜನರ ಭಕ್ತಿ ಭಾವ, ಪರಿಸರ ಮಹತ್ವದ ತಾಣಗಳೂ ಹೌದು.
  9. ತುಮಕೂರು ಜಿಲ್ಲೆ ಕಲ್ಪತರು ನಾಡು. ಹೇಮಾವತಿ ನೀರಾವರಿ ಯೋಜನೆ ಜಾರಿಗೊಂಡ ಬಳಿಕ ಹೆಚ್ಚಿನ ಭಾಗ ನೀರಾವರಿ ಕಂಡು ಪ್ರಗತಿಯಾಗಿದೆ. ಬೆಂಗಳೂರು ಜತೆಗೆ ಒಡನಾಟ ಹೊಂದಿರುವ ತುಮಕೂರು ಹೆದ್ದಾರಿಗಳ ಕಾರಣದಿಂದ ಔದ್ಯಮಿಕವಾಗಿಯೂ ಬೆಳವಣಿಗೆ ಕಂಡಿದೆ. ಶೈಕ್ಷಣಿಕವಾಗಿಯೂ ಪ್ರಗತಿ ಕಂಡಿದೆ. ತೆಂಗು, ಭತ್ತ, ಕಬ್ಬು ಈ ಭಾಗದ ಪ್ರಮುಖ ಬೆಳೆಗಳು.
  10. ಹಾಸನ ಕಾಫಿಯ ತವರು. ನೀರಾವರಿಯ ನಾಡು. ಅದೇ ರೀತಿ ರಾಜಕೀಯಕ್ಕೂ ಹೆಸರುವಾಸಿ. ಭಾರತಕ್ಕೆ ಪ್ರಧಾನಿ ನೀಡಿದ, ಇಬ್ಬರು ಸಿಎಂಗಳನ್ನು ನೀಡಿದ ಕೀರ್ತಿ ಇರುವ ಜಿಲ್ಲೆ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಎಚ್‌.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದವರು. ಹೇಮಾವತಿ ನದಿ, ಜಲಾಶಯದ ನಂತರ ಈ ಜಿಲ್ಲೆಯ ಹಲವು ಭಾಗದ ಕೃಷಿಗೆ ಸಮೃದ್ದತೆ ಬಂದಿದೆ. ಶ್ರವಣಬೆಳಗೊಳದಂತಹ ಐತಿಹಾಸಿಕ, ಬೇಲೂರು, ಹಳೆಬೀಡಿನಂತಹ ಪಾರಂಪರಿಕ ಮಾನ್ಯತೆ ಪಡೆದ ದೇಗುಲಗಳ ತವರು ಹಾಸನ.

 

Whats_app_banner