ಕನ್ನಡ ರಾಜ್ಯೋತ್ಸವ 2024: ಕಿತ್ತೂರು ಕರ್ನಾಟಕದ ಬಗ್ಗೆ ನೀವು ತಿಳಿಯಬೇಕಾದ 10 ವೈಶಿಷ್ಟ್ಯಗಳು, ಧಾರವಾಡ ಪೇಡೆಯಿಂದ ಬೆಳಗಾವಿ ಗಡಿವರೆಗೆ
ಕನ್ನಡ ಸುದ್ದಿ  /  ಕರ್ನಾಟಕ  /  ಕನ್ನಡ ರಾಜ್ಯೋತ್ಸವ 2024: ಕಿತ್ತೂರು ಕರ್ನಾಟಕದ ಬಗ್ಗೆ ನೀವು ತಿಳಿಯಬೇಕಾದ 10 ವೈಶಿಷ್ಟ್ಯಗಳು, ಧಾರವಾಡ ಪೇಡೆಯಿಂದ ಬೆಳಗಾವಿ ಗಡಿವರೆಗೆ

ಕನ್ನಡ ರಾಜ್ಯೋತ್ಸವ 2024: ಕಿತ್ತೂರು ಕರ್ನಾಟಕದ ಬಗ್ಗೆ ನೀವು ತಿಳಿಯಬೇಕಾದ 10 ವೈಶಿಷ್ಟ್ಯಗಳು, ಧಾರವಾಡ ಪೇಡೆಯಿಂದ ಬೆಳಗಾವಿ ಗಡಿವರೆಗೆ

ಕನ್ನಡ ರಾಜ್ಯೋತ್ಸವ 2024 (karnataka rajyotsava 2024) ಪ್ರಯುಕ್ತ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡವು ಕಿತ್ತೂರು ಕರ್ನಾಟಕದ ಹತ್ತು ವೈಶಿಷ್ಟಗಳ ಮಾಹಿತಿಯನ್ನು ಇಲ್ಲಿ ನೀಡಿದೆ. ಇದರಲ್ಲಿ ಈ ಭಾಗದ ಮಹತ್ವ, ಈಗಿನ ಬೆಳವಣಿಗೆಗಳ ವಿವರಗಳಿವೆ.

ಕರ್ನಾಟಕದ ವಾಯುವ್ಯ ದಿಕ್ಕಿನಮುಂಬೈ ಕರ್ನಾಟಕ ಈಗ ಕಿತ್ತೂರು ಕರ್ನಾಟಕವಾಗಿ ಹಲವು ವೈವಿಧ್ಯತೆಗಳ ಸಂಗಮ ಎನ್ನಿಸಿದೆ.
ಕರ್ನಾಟಕದ ವಾಯುವ್ಯ ದಿಕ್ಕಿನಮುಂಬೈ ಕರ್ನಾಟಕ ಈಗ ಕಿತ್ತೂರು ಕರ್ನಾಟಕವಾಗಿ ಹಲವು ವೈವಿಧ್ಯತೆಗಳ ಸಂಗಮ ಎನ್ನಿಸಿದೆ.
  1. ಕಿತ್ತೂರು ಕರ್ನಾಟಕ ಎನ್ನುವುದು ಮೊದಲು ಮುಂಬೈ ಕರ್ನಾಟಕ ಎಂದು ಕರೆಯಲಾಗುತ್ತಿತ್ತು. ಮುಂಬೈ ಪ್ರಾಂತ್ಯದ ಭಾಗವಾಗಿದ್ದ ಈ ಜಿಲ್ಲೆಗಳ ಪ್ರದೇಶವನ್ನು ಮುಂಬೈ ಕರ್ನಾಟಕ ಎಂದೇ ಕರೆಯಲಾಗುತ್ತಿತ್ತು. ಕಿತ್ತೂರು ಹೋರಾಟ, ರಾಣಿ ಚನ್ನಮ್ಮನ ಇತಿಹಾಸಗಳು ಈ ಭಾಗದ ಗಟ್ಟಿ ನೆಲೆ.
  2. ಹಲವಾರು ವರ್ಷಗಳಿಂದ ಮುಂಬೈ ಕರ್ನಾಟಕ ಪ್ರಾಂತದ ಹೆಸರು ಬದಲಾವಣೆ ಬೇಡಿಕೆ ಇತ್ತಾದರೂ ಅದು ಈಡೇರರಲಿಲ್ಲ. ಹೋರಾಟಗಳೂ ನಡೆದಿದ್ದವು. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಬೆಳಗಾವಿಗೆ ಎರಡನೇ ರಾಜಧಾನಿ ಮಾನ್ಯತೆ ಪ್ರತ್ಯೇಕ ವಿಧಾನಸೌಧ ನಿರ್ಮಿಸಿದರು. ಈಗಲೂ ಇಲ್ಲಿ ವರ್ಷಕ್ಕೊಮ್ಮೆ ವಿಧಾನಸಭೆ ಅಧಿವೇಶನಗಳು ನಡೆಯುತ್ತವೆ.ಮೂರು ವರ್ಷದ ಹಿಂದೆ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ಧಾಗ ಇದು ಕಿತ್ತೂರು ಕರ್ನಾಟಕವಾಯಿತು.
  3. ಕಿತ್ತೂರು ಕರ್ನಾಟಕ ಮುಂಬೈ ಕರ್ನಾಟಕವಾಗಿದ್ದಾಗ ಇಲ್ಲಿ ಬೆಳಗಾವಿ, ಧಾರವಾಡ, ವಿಜಯಪುರ ಜಿಲ್ಲೆಗಳು ಮಾತ್ರ ಇದ್ದವು. ಆನಂತರ ವಿಜಯಪುರದಿಂದ ಬಾಗಲಕೋಟೆ, ಧಾರವಾಡದಿಂದ ಹಾವೇರಿ, ಗದಗ ಜಿಲ್ಲೆಗಳು ರಚನೆಯಾದವು. ಬೆಳಗಾವಿ ಜಿಲ್ಲೆಯನ್ನು ಚಿಕ್ಕೋಡಿ, ಗೋಕಾಕ್‌ ಇಲ್ಲವೇ ಬೈಲಹೊಂಗಲ ಜಿಲ್ಲೆಯನ್ನಾಗಿ ವಿಭಜಿಸುವ ಬೇಡಿಕೆ ಮಾತ್ರ ಈಡೇರಿಲ್ಲ. ಸದ್ಯ ಆರು ಜಿಲ್ಲೆಗಳು ಮುಂಬೈ ಪ್ರಾಂತ್ಯದ ಭಾಗಗಳಾಗಿವೆ.

    ಇದನ್ನೂ ಓದಿರಿ: ಕರ್ನಾಟಕದಲ್ಲಿ ಸಂಚರಿಸುವ 10 ವಂದೇ ಭಾರತ್‌ ಎಕ್ಸ್‌ಪ್ರೆಸ್ ರೈಲುಗಳ ವಿವರ ತಿಳಿಯಿರಿ, ರೈಲು ಪ್ರಯಾಣಿಕರಿಗೆ ಉಪಯುಕ್ತ ಮಾಹಿತಿ
  4. ಮುಂಬೈನೊಂದಿಗೆ ವಹಿವಾಟು ನಂಟು ಹೊಂದಿರುವ ಹುಬ್ಬಳ್ಳಿ. ಬೆಳಗಾವಿ, ವಿಜಯಪುರ, ಬಾಗಲಕೋಟೆ, ಜಮಖಂಡಿ, ಇಳಕಲ್‌, ರಾಣೆಬೆನ್ನೂರು ಈಗಲೂ ಪ್ರಮುಖ ನಗರಗಳೇ. ಧಾರವಾಡ ಸಾಂಸ್ಕೃತಿಕ ನಗರಿ ಎನ್ನುವ ಹಿರಿಮೆ ಪಡೆದುಕೊಂಡಿದೆ. ಮುಧೋಳ ನಾಯಿ, ಕೊಲ್ಹಾರ ಕೆನೆ ಮೊಸರು, ಹಾವೇರಿ ಏಲಕ್ಕಿ ಹಾರದಿಂದ, ಗದಗವು ಮುದ್ರಣ ಕಾಶಿಯಾಗಿ ಹೆಸರು ಪಡೆದಿವೆ.
  5. ಧಾರವಾಡ ಪೇಡಾ, ಬೆಳಗಾವಿ ಕುಂದಾ, ಗೋಕಾಕ್‌ ಕರದಂಟು, ಆಮಿನಗಡ ಕರದಂಟು, ಸವಣೂರು ಖಾರ, ಬ್ಯಾಡಗಿ ಮೆಣಸಿನ ಕಾಯಿ, ವಿಜಯಪುರದ ರುಚಿಕರ ದ್ರಾಕ್ಷಿ, ಬಾಗಲಕೋಟೆ ದಾಳಿಂಬೆ, ಗದಗದ ಬದನೆಕಾಯಿ ಬಜ್ಜಿ, ಲಕ್ಕುಂಡಿ ಬಾರೆಹಣ್ಣು, ಧಾರವಾಡದ ನವಲೂರ ಪೇರಲೆ, ರಾಣೆಬೆನ್ನೂರು ಹತ್ತಿ, ಇಳಕಲ್‌ ಸೀರೆ,ಬನಹಟ್ಟಿ ಸೀರೆ ಈ ಭಾಗದ ಪ್ರಮುಖ ಹೆಗ್ಗರುತುಗಳು.
  6. ಬೆಳಗಾವಿ ಭಾಗದಲ್ಲಿ ಈಗಲೂ ಮರಾಠಿ ಪ್ರಭಾವವಿದೆ. ಬೆಳಗಾವಿ ಕೆಲವು ಭಾಗ ಮಹಾರಾಷ್ಟ್ರದದ್ದು ಎನ್ನುವ ಹೋರಾಟಗಳು ನಿಂತಿಲ್ಲ. ಇದರ ನಡುವೆಯೂ ಸೌಹಾರ್ದತೆಯೂ ಉಳಿದುಕೊಂಡು ಬಂದಿದೆ. ಕಿತ್ತೂರು ತನ್ನ ಐತಿಹಾಸಿಕ ಹೋರಾಟದ ಮಹತ್ವದೊಂದಿಗೆ ಗಮನ ಸೆಳೆದ ಊರು. ಸವದತ್ತಿ ರೇಣುಕಾ ಯಲ್ಲಮ್ಮ ನಾಲ್ಕೈದು ರಾಜ್ಯದ ಭಕ್ತರ ನೆಲೆವೀಡು.

    ಇದನ್ನೂ ಓದಿರಿ: ಕನ್ನಡ ರಾಜ್ಯೋತ್ಸವ 2024: ಬ್ರಿಟಿಷರಿಗೆ ಕಪ್ಪ ಕೊಡಲು ನಿರಾಕರಿಸಿದ ಕಿತ್ತೂರು ಚೆನ್ನಮ್ಮ ಸೇರಿ ಕರ್ನಾಟಕದ 10 ಸ್ವಾತಂತ್ರ್ಯ ಹೋರಾಟಗಾರರ ಮಾಹಿತಿ
  7. ವಿಜಯಪುರ ಆದಿಲ್‌ ಶಾಹಿ ಆಡಳಿತದಿಂದ ಅಭಿವೃದ್ದಿ ಹೊಂದಿದ್ದ ಜಿಲ್ಲೆ. ಆಗಲೇ ಕರೇಜ್‌ ಸಹಿತ ಹಲವು ಆಧುನಿಕ ನೀರು ಸರಬರಾಜು ಮಾರ್ಗಗಳು ಇಲ್ಲಿದ್ದವು. ವಿಜಯಪುರದಲ್ಲಿ ಉರ್ದು,ಮಠಾಠಿ ಪ್ರಭಾವ ಇದ್ದರೂ ಬಸವಣ್ಣನ ನಾಡು ಸೌಹಾರ್ದತೆಯ ತವರು ಎನ್ನಿಸಿಕೊಂಡಿದೆ. ವಿಜಯಪುರದ ಬಸವನಬಾಗೇವಾಡಿ ಬಸವಣ್ಣನ ಜನುಮ ಸ್ಥಳ, ಬಾಗಲಕೋಟೆ ಕೂಡಲಸಂಗಮ ಬಸವಣ್ಣನ ಐಕ್ಯ ಮಂಟಪ. ಇವೆಲ್ಲವೂ ಈಗ ಪ್ರಮುಖ ಪ್ರವಾಸಿ ತಾಣ. ಬಾದಾಮಿ ಆರನೇ ಶತಮಾನದ ಗುಹೆಗಳ ಆಕರ್ಷಕ ಕೇಂದ್ರ. ಬನಶಂಕರಿ ಶಕ್ತಿ ದೇವತೆಯ ಊರು.
  8. ಗದಗ ಐತಿಹಾಸಿಕ ತಾಣಗಳ ಊರು. ತೋಂಟದಾರ್ಯ ಮಠ ಇಲ್ಲಿನ ಮಹತ್ವದ ಸ್ಥಳ. ಶತಮಾನಗಳ ಇತಿಹಾಸ ಇರುವ ಈ ಮಠ ಅಕ್ಷರ, ಅನ್ನ ದಾಸೋಹದ ಮೂಲಕ ಗಮನ ಸೆಳೆದಿದೆ. ಪಂಚಾಕ್ಷರಿ ಗವಾಯಿಗಳು ಸಂಗೀತದ ಮೂಲಕವೇ ಕ್ರಾಂತಿ ಮಾಡಿದವರು. ಉದಯವಾಯಿತು ನಮ್ಮ ಚಲುವ ಕನ್ನಡ ನಾಡು ಎಂದು ಬರೆದ ಹುಯಿಲಗೋಳ ನಾರಾಯಣರಾಯರ ತವರು. ಹಾವೇರಿ ಕಾಗಿನೆಲೆ ಸಂಸ್ಥಾನ, ಸಂತ ಶಿಶುನಾಳ ಷರೀಫರ ಊರು ಪ್ರವಾಸಿ ತಾಣವಾಗಿ ರೂಪುಗೊಂಡಿದೆ. ಧಾರವಾಡ ಮೂರು ಸಾವಿರ ಮಠವೂ ಸುದೀರ್ಘ ಇತಿಹಾಸ ಹೊಂದಿದೆ.

    ಇದನ್ನೂ ಓದಿರಿ: ಕನ್ನಡ ರಾಜ್ಯೋತ್ಸವ 2024: ಭಾರತೀಯ ಸೇನೆ ಸೇರಿದ ಕರ್ನಾಟಕದ ಹೆಮ್ಮೆ ಮುಧೋಳ ನಾಯಿ ತಳಿ ಬಗ್ಗೆ ನೀವು ತಿಳಿಯಬೇಕಾದ 10 ಅಂಶಗಳಿವು
  9. ಶಿಕ್ಷಣಕ್ಕೂ ಈ ಭಾಗದಲ್ಲಿ ಇನ್ನಿಲ್ಲದ ಒತ್ತು ಸಿಕ್ಕಿದೆ. ಕರ್ನಾಟಕ ಧಾರವಾಡ ವಿಶ್ವವಿದ್ಯಾನಿಲಯ ಈಗ ಬೆಳಗಾವಿ, ಹಾವೇರಿ ವಿಶ್ವವಿದ್ಯಾನಿಲಯಗಳಾಗಿ ವಿಭಜನೆಗೊಂಡಿದೆ. ಧಾರವಾಡದಲ್ಲಿ ಕೃಷಿ ವಿಶ್ವವಿದ್ಯಾನಿಲಯ, ಬೆಳಗಾವಿಯಲ್ಲಿ ತಾಂತ್ರಿಕ ವಿಶ್ವವಿದ್ಯಾನಿಲಯ, ಹಾವೇರಿಯಲ್ಲಿ ಜನಪದ ವಿಶ್ವವಿದ್ಯಾನಿಲಯ, ಗದಗದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾನಿಲಯಗಳೂ ಬಂದಿವೆ. ಧಾರವಾಡಕ್ಕೆ ಐಐಐಟಿ ಬಂದಿದ್ದು ದೂರದ ಊರುಗಳಿಗೆ ಹೋಗುವ ಬದಲು ತಮ್ಮ ಊರಲ್ಲೇ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗಿದೆ. ವಿಜಯಪುರದಲ್ಲಿ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ಬಾಗಲಕೋಟೆಯಲ್ಲಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯ, ಬಾಗಲಕೋಟೆ ವಿಶ್ವವಿದ್ಯಾನಿಲಯ ರಚನೆಯಾಗಿವೆ.
  10. ಕೃಷ್ಣಾ, ತುಂಗಭದ್ರಾ, ವರದಾ ನದಿ ಈ ಭಾಗದ ನೀರಾವರಿಗೆ ಬಲ ನೀಡಿದೆ. ಇದರಿಂದ ಕೃಷಿಯೂ ಸಾಕಷ್ಟು ಬೆಳವಣಿಗೆ ಕಂಡಿದೆ. ಹಾವೇರಿಗೆ ತುಂಗೆಯನ್ನು ಹರಿಸುವ ಪ್ರಯತ್ನ ನಡೆದಿದೆ. ಬೆಳಗಾವಿ ಭಾಗದಲ್ಲಿ ಕಬ್ಬಿನ ಬೆಳೆ ಜನರ ಬದುಕನ್ನೆ ಬದಲಿಸಿ ಸಕ್ಕರೆ ಉದ್ಯಮಕ್ಕೆ ಬಲ ತುಂಬಿದೆ. ಹತ್ತಿ,ಶೇಂಗಾದಂತಹ ಬೆಳೆಗಳೂ ಕೂಡ ರೈತರ ಆದಾಯವನ್ನು ಹೆಚ್ಚಿಸಿವೆ.

Whats_app_banner