ವರ್ಷಧಾರೆಗೆ ರಾಜ್ಯ ತತ್ತರ, ಒಬ್ಬ ಸಾವು, ಆಗುಂಬೆಯಲ್ಲಿ ಅಧಿಕ ಮಳೆ; ಇಂದೂ ವರುಣನ ಆರ್ಭಟ ಜೋರು, 15 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
Oct 06, 2024 07:36 AM IST
ವರ್ಷಧಾರೆಗೆ ರಾಜ್ಯ ತತ್ತರ, ಒಬ್ಬ ಸಾವು, ಆಗುಂಬೆಯಲ್ಲಿ ಅಧಿಕ ಮಳೆ; ಇಂದೂ ವರುಣನ ಆರ್ಭಟ ಜೋರು, 15 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
- Heavy Rainfall in Karnataka: ಕರ್ನಾಟಕದಲ್ಲಿ ಅಕ್ಟೋಬರ್ 6ರಿಂದ ಅಕ್ಟೋಬರ್ 12ರವರೆಗೆ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 15 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಬೆಂಗಳೂರು: ರಾಜ್ಯದಲ್ಲಿ ಹಿಂಗಾರು ಮಳೆಯ ಆರ್ಭಟ ದಿನೇದಿನೆ ತೀವ್ರವಾಗಿದ್ದು, ಇನ್ನೂ ಒಂದು ವಾರ ಅಂದರೆ ಅಕ್ಟೋಬರ್ 6ರಿಂದ ಅಕ್ಟೋಬರ್ 12ರವರೆಗೆ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅ.6ರಿಂದ 8ರ ತನಕ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದ್ದು, ಉಳಿದ ದಿನಗಳಲ್ಲಿ ಸಾಧಾರಣ ಮಳೆ ಸುರಿಯಲಿದೆ. ಆದರೆ ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲೂ ವ್ಯಾಪಾಕ ಮಳೆಯಾಗಲಿದೆ. ಇನ್ನೂ ಒಂದು ವಾರ ಭಾರೀ ಮಳೆಯಾಗುವ ಕಾರಣ 15 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ತಿಳಿಸಿದೆ.
ಇಂದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಒಂದೆರಡು ಕಡೆ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ರಾಮನಗರ, ಕೋಲಾರ, ಶಿವಮೊಗ್ಗ, ತುಮಕೂರು, ವಿಜಯನಗರ ಜಿಲ್ಲೆಗಳ ಹಲವೆಡೆ ಗುಡುಗು ಸಹಿತ ಧಾರಾಕಾರ ಮಳೆಯಾಗಲಿದೆ. ಬಳ್ಳಾರಿ, ಚಾಮರಾಜನಗರ, ಮೈಸೂರು ಮತ್ತು ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆ ಅಥವಾ ಜೋರು ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 29° C ಮತ್ತು 20° C ಆಗಿರಲಿದೆ.
ಗರಿಷ್ಠ/ಕನಿಷ್ಠ ತಾಪಮಾನ
ರಾಜ್ಯದ ಪಣಂಬೂರಿನಲ್ಲಿ ಅತಿ ಹೆಚ್ಚಿನ ಗರಿಷ್ಠ ಉಷ್ಣಾಂಶ 34.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ರಾಜ್ಯದ ವಿಜಯಪುರದಲ್ಲಿ ಅತಿ ಕಡಿಮೆ ಕನಿಷ್ಠ ಉಷ್ಣಾಂಶ 18.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಆಗುಂಬೆಯಲ್ಲಿ ಅತ್ಯಧಿಕ ಮಳೆ
ಅಕ್ಟೋಬರ್ 5ರಂದು ಶಿವಮೊಗ್ಗದ ಆಗುಂಬೆಯಲ್ಲಿ ಅತ್ಯಧಿಕ ಅಂದರೆ 17 ಸೆಂಟಿ ಮೀಟರ್ ಮಳೆಯಾಗಿದೆ. ಬಳ್ಳಾರಿಯ ಸಂಡೂರಿನಲ್ಲಿ 15 ಸೆಂ.ಮೀ, ಚಿತ್ರದುರ್ಗದ ನಾಯಕನಹಟ್ಟಿಯಲ್ಲಿ 13 ಸೆಂ.ಮೀ ಮಳೆ ಸುರಿದಿದೆ. ದಕ್ಷಿಣ ಕನ್ನಡದ ಧರ್ಮಸ್ಥಳ, ಬಳ್ಳಾರಿಯ ಕಂಪ್ಲಿಯಲ್ಲಿ ತಲಾ 8 ಸೆಂ.ಮೀ, ವಿಜಯನಗರದ ಕೂಡ್ಲಿಗಿ, ಚಿತ್ರದುರ್ಗದ ಹೊಸದುರ್ಗ, ಚಾಮರಾಜನಗರದ ಕೊಳ್ಳೆಗಾಲದಲ್ಲಿ ತಲಾ 7 ಸೆಂ.ಮೀ ಮಳೆಯಾಗಿದೆ. ಗಂಗಾವತಿ, ರಾಮನಗರ, ಕನಕಪುರ, ಪಾವಗಡದಲ್ಲಿ ತಲಾ 6 ಸೆಂ.ಮೀ ಮಳೆಯಾಗಿದೆ. ಕುಡತಿನಿ, ಗುಬ್ಬಿ, ಗಂಗಾವತಿ, ಕಕ್ಕೇರಿ, ಕವಡಿಕಟ್ಟಿ, ಹುಣಸಗಿಯಲ್ಲಿ ತಲಾ 4 ಸೆಂ.ಮೀ ಮಳೆಯಾಗಿದೆ. ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದೆ.
ಒಬ್ಬ ಸಾವು, ಧರೆಗುರುಳಿದ 40ಕ್ಕೂ ಅಧಿಕ ಮರಗಳು
ಬಳ್ಳಾರಿ ತಾಲೂಕಿನ ಶಂಕರಬಂಡೆ ಸಮೀಪ ಅಕ್ಟೋಬರ್ 5ರ ಬೆಳಿಗ್ಗೆ ಸೇತುವೆ ಮೇಲೆ ತುಂಬಿ ಹರಿಯುತ್ತಿದ್ದ ಹಳ್ಳದ ನೀರಿನಲ್ಲಿ ಕಾರು ಚಲಾಯಿಸಲು ಯತ್ನಿಸಿದ ವಿಘ್ನೇಶ್ವರ ಕ್ಯಾಂಪ್ ನಿವಾಸಿ ಶಿವು ಎಂಬವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಹಳ್ಳದಲ್ಲಿ ಕಾರು ಕೊಚ್ಚಿಕೊಂಡು ಹೋಗುತ್ತಿದ್ದ ವೇಳೆ ಕಾರಿನಿಂದ ಜಿಗಿದ ಆತ, ದಡದಲ್ಲಿ ಮರದ ಮೇಲೆ ಕುಳಿತಿದ್ದರು. ಸ್ಥಳೀಯರು, ಪೊಲೀಸರು ನೆರವಿಗೆ ಧಾವಿಸಿ ಆತನನ್ನು ಮನೆಗೆ ಕಳುಹಿಸಿದ್ದರು. ಆದರೆ, ಮನೆಯಲ್ಲಿ ಅಸ್ವಸ್ಥಗೊಂಡು ಆಸ್ಪ್ರತೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟರು. ಗಂಗಾವತಿ, ಚಿತ್ರದುರ್ಗ ಸೇರಿದಂತೆ ಪ್ರಮುಖ ಜಿಲ್ಲೆಗಳಲ್ಲಿ 40 ಹೆಚ್ಚು ಬೃಹತ್ ಮರಗಳು ಧರೆಗುರುಳಿವೆ ಎಂದು ವರದಿಯಾಗಿದೆ.
ಬೆಂಗಳೂರಿನಲ್ಲಿ ರಸ್ತೆಗಳು ಜಲಾವೃತ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅಕ್ಟೋಬರ್ 5ರ ತಡರಾತ್ರಿವರೆಗೂ ಸುರಿದ ಗುಡುಗು-ಮಿಂಚು ಸಹಿತ ವ್ಯಾಪಕ ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗಿದೆ. ತಡರಾತ್ರಿವರೆಗೂ ಮಳೆ ಸುರಿಯುತ್ತಿತ್ತು. ಸರ್ಜಾಪುರ, ಸಿಲ್ಕ್ಬೋರ್ಡ್ ಜಂಕ್ಷನ್, ಓಕುಳಿಪುರ, ಅಂಡರ್ಪಾಸ್, ಚಿಕ್ಕಪೇಟೆ ಮೆಟ್ರೋ ಸ್ಟೇಷನ್ ಮುಂಭಾಗ, ಕೆಆರ್ ಮಾರುಕಟ್ಟೆ, ಚಿಕ್ಕಪೇಟೆ, ಸುಲ್ತಾನ್ಪೇಟೆ, ಕಾಟನ್ ಪೇಟೆ, ವಿಜಯನಗರ, ಕಾಮಾಕ್ಷಿಪಾಳ್ಯ, ಮೆಜೆಸ್ಟಿಕ್, ಮೈಸೂರು ರಸ್ತೆ, ಬಸವನಗುಡಿ, ಮಲ್ಲೇಶ್ವರಂ, ಜೆಪಿ ನಗರ, ಹೆಬ್ಬಾಳ, ಯಲಹಂಕ, ಸೇರಿದಂತೆ ಪ್ರಮುಖ ರಸ್ತೆಗಳು ಜಲಾವೃತವಾಗಿದ್ದವು. ಹಲವೆಡೆ ವಿದ್ಯುತ್ ಪೂರೈಕೆ ಸ್ಥಗಿತವಾಗಿತ್ತು. ಅಲ್ಲದೆ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಟ್ರಾಫಿಕ್ ಪೊಲೀಸರು ಪರದಾಡಿದರು. ಅಲ್ಲದೆ, ಬಹುತೇಕ ಕಡೆ ಮನೆಗಳಿಗೆ ನೀರು ನುಗ್ಗಿದೆ.