ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ; ದಾಸನಿಗೆ ಮತ್ತೆ ಸೆರೆಮನೆ ವಾಸ, ಅಕ್ಟೋಬರ್ 8ಕ್ಕೆ ಬೇಲ್ ನಿರೀಕ್ಷೆ
Darshan Thoogudeepa: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ತೂಗುದೀಪ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆಯಾಗಿದೆ. ಅಕ್ಟೋಬರ್ 8ಕ್ಕೆ ಮತ್ತೆ ವಿಚಾರಣೆ ಮುಂದುವರೆಯಲಿದ್ದು, ಅಂದು ಬೇಲ್ ಸಿಗುವ ನಿರೀಕ್ಷೆ ಇದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ತೂಗುದೀಪ ಅವರ ಜಾಮೀನು ಅರ್ಜಿ ವಿಚಾರಣೆ ಅಕ್ಟೋಬರ್ 8ಕ್ಕೆ ಮುಂದೂಡಲಾಗಿದೆ. ಇಂದು ಶೇ. ನೂರರಷ್ಟು ಜಾಮೀನು ಸಿಕ್ಕೇ ಸಿಗುತ್ತದೆ ಎಂದು ದರ್ಶನ್ ಕುಟುಂಬದವರು ಮತ್ತು ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ಜಾಮೀನು ಮಾತ್ರ ಸಿಕ್ಕಿಲ್ಲ. ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯದಲ್ಲಿ ಇಂದು ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದುವರೆಯಿತು. ನಿನ್ನೆ ವಾದ ಆರಂಭಿಸಿದ್ದ ದರ್ಶನ್ ಪರ ಹಿರಿಯ ವಕೀಲ ಸಿವಿ ನಾಗೇಶ್, ಇಂದೂ ಸಹ ಸುದೀರ್ಘ ವಾದ ಮಂಡಿಸಿದರು. ಬೇಲ್ ಈಸ್ ಎ ರೂಲ್, ಜೈಲ್ ಈಸ್ ಎಕ್ಸೆಪ್ಷನ್ (ಜಾಮೀನು ಕೊಡುವುದು ನಿಯಮ, ಆದರೆ ಜೈಲು ಅಪವಾದ). ಹೀಗಾಗಿ ಸೆಷನ್ಸ್ ಕೋರ್ಟ್, ಹೈಕೋರ್ಟ್‌ಗಳು ಜಾಮೀನು ನೀಡಲು ಹಿಂಜರಿಯಬಾರದು. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳೇ ಈ ಮಾತನ್ನು ಹೇಳಿದ್ದಾರೆ ಎಂದು ಅವರು ತಿಳಿಸಿದರು.
ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆ ದಾಖಲಿಸಲು ವಿಳಂಬ ಮಾಡುವಂತಿಲ್ಲ. 3 ದಿನ ವಿಳಂಬ ಮಾಡಿದ್ದಕ್ಕೆ ಸುಪ್ರೀಂಕೋರ್ಟ್ ಜಾಮೀನು ನೀಡಿದೆ ಎಂಬ ಅಂಶವನ್ನು ಅವರು ನ್ಯಾಯಾಲಯದ ಗಮನಕ್ಕೆ ತಂದರು. ಅರ್ಜಿಯಲ್ಲಿ ಸಾಕ್ಷಿಗಳ ಮಾಹಿತಿ ಒದಗಿಸಿಲ್ಲ. ಯಾವ ಯಾವ ದಾಖಲೆ ಸಂಗ್ರಹಿಸಿದ್ದಾರೆಂದು ಮಾಹಿತಿ ನೀಡಿಲ್ಲ. ಎಲ್ಲೆಲ್ಲಿ ತನಿಖೆ ನಡೆಸಿದ್ದಾರೆಂದು ಮಾಹಿತಿ ನೀಡಬೇಕು. ಕೇಸ್ ಡೈರಿಯಲ್ಲಿ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಬೇಕು. ಆದರೆ ಇಂತಹ ಯಾವುದೇ ಅಂಶಗಳನ್ನು ಪಾಲಿಸಿಲ್ಲ ಎಂದು ಸಿವಿ ನಾಗೇಶ್ ವಾದಿಸಿದರು.
ದರ್ಶನ್ ವಿರುದ್ಧ ಸಾಕ್ಷ್ಯಗಳು ಕಪೋಲಕಲ್ಪಿತವಾಗಿವೆ. ತನಿಖೆಯ ಸಂದರ್ಭದಲ್ಲಿ ಪೊಲೀಸರು ನಿಯಮಗಳನ್ನು ಪಾಲಿಸಿಲ್ಲ. ಕೊಲೆ ಪ್ರಕರಣದಲ್ಲಿ ದರ್ಶನ್ ಅವರನ್ನು ಸಿಲುಕಿಸಲು ಸಂಚು ರೂಪಿಸಲಾಗಿದೆ ಎಂದು ವಾದಿಸಿದರು. ದೋಷಾರೋಪ ಪಟ್ಟಿಯಲ್ಲಿನ ಸಣ್ಣ ಸಣ್ಣ ಲೋಪಗಳನ್ನೂ ಪಟ್ಟಿ ಮಾಡಿ ನ್ಯಾಯಾಲಯದ ಗಮನಕ್ಕೆ ತಂದರು. ಅಂತಿಮವಾಗಿ ತಮ್ಮ ಕಕ್ಷಿದಾರರಿಗೆ ಜಾಮೀನು ನೀಡುವಂತೆ ಅವರು ಮನವಿ ಮಾಡಿದರು.
ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನ ಕುಮಾರ್ ವಾದ ಮಂಡಿಸಲು ಅಕ್ಟೋಬರ್ 8, ಮಂಗಳವಾರಕ್ಕೆ ಸಮಯ ಕೋರಿದರು. ನಂತರ ನ್ಯಾಯಾಧೀಶರು ಜಾಮೀನು ಅರ್ಜಿ ಕುರಿತು ನಿರ್ಧಾರ ಕೈಗೊಳ್ಳಲಿದ್ದಾರೆ. ಈ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ದರ್ಶನ್, ನ್ಯಾಯಾಂಗ ಬಂಧನದಲ್ಲಿ ಬಳ್ಳಾರಿ ಜೈಲಿನಲ್ಲಿದ್ದಾರೆ. ಅವರ ಜಾಮೀನು ಅರ್ಜಿ ಭವಿಷ್ಯ ಇಂದು (ಶನಿವಾರ) ನಿರ್ಧಾರವಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಅವರು ಇನ್ನೂ ಮೂರು ದಿನ ಅವರು ಜೈಲಿನಲ್ಲೇ ಕಾಲ ತಳ್ಳಬೇಕಾಗಿದೆ. ಹಾಗಾಗಿ ಅವರ ಅಭಿಮಾನಿ ಬಳಗ ನಿರಾಶೆ ಹೊಂದಿದೆ.
ಪೊಲೀಸರ ತನಿಖೆ ಮೇಲೆ ಪ್ರಶ್ನೆ
ಶುಕ್ರವಾರ ದರ್ಶನ್ ಪರ ವಕೀಲರು ಮಂಡಿಸಿದ ವಾದದ ಆಧಾರದ ಹಿನ್ನೆಲೆಯಲ್ಲಿ ಜಾಮೀನು ಸಿಗಬಹುದು ಎಂದು ಭಾವಿಸಲಾಗಿತ್ತು. ಸಿವಿ ನಾಗೇಶ್ ಪೊಲೀಸರ ತನಿಖೆಯನ್ನೇ ಪ್ರಶ್ನಿಸಿದ್ದರು. ಪೊಲೀಸರು ಪ್ರತಿ ಹಂತದಲ್ಲೂ ದರ್ಶನ್ ವಿರುದ್ಧ ಸಾಂದರ್ಭಿಕ ಸಾಕ್ಷ್ಯಗಳನ್ನು ಸೃಷ್ಟಿಸುತ್ತಾ ಬಂದಿದ್ದು, ತಮ್ಮ ಕಕ್ಷಿದಾರರನ್ನು ಸಿಲುಕಿಸುವ ಪ್ರಯತ್ನ ಮಾಡಲಾಗಿದೆ ಎಂದು ಆರೋಪಿಸಿದ್ದರು.
ಪ್ರಕರಣದ ಮೊದಲ ಆರೋಪಿ ಪವಿತ್ರಾಗೌಡ ಜಾಮೀನು ಅರ್ಜಿಯೂ ಮಂಗಳವಾರಕ್ಕೆ ಮುಂದೂಡಿಕೆಯಾಗಿದೆ. ಅವರ ಪರವಾಗಿ ಹಿರಿಯ ಕ್ರಿಮಿನಲ್ ವಕೀಲ ಟಾಮಿ ಸೆಬಾಸ್ಟಿಯನ್ ವಾದಿಸುತ್ತಿದ್ದಾರೆ. ಒಂದು ವೇಳೆ ದರ್ಶನ್ ಅವರಿಗೆ ಜಾಮೀನು ಸಿಕ್ಕರೆ ಇತರೆ ಆರೋಪಿಗಳಿಗೂ ಸುಲಭವಾಗಿ ಜಾಮೀನು ಸಿಗಲಿದೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿದ್ದ 17 ಆರೋಪಿಗಳ ಪೈಕಿ 15, 16 ಮತ್ತು 17ನೇ ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಮುಂದೆ ಅಕ್ಟೋಬರ್ 8ಕ್ಕೆ ದರ್ಶನ್ ಜಾಮೀನು ಅರ್ಜಿಯ ಭವಿಷ್ಯ ನಿರ್ಧಾರವಾಗಲಿದೆ.
ಇನ್ನಷ್ಟು ಅಪರಾಧ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ