ಕರ್ನಾಟಕ ಹವಾಮಾನ: ಬೆಂಗಳೂರಿನಲ್ಲಿ ಚಳಿ ಕಡಿಮೆ, ಅಲ್ಲಲ್ಲಿ ಮಂಜಿನ ವಾತಾವರಣ; ಡಿಸೆಂಬರ್ 23ಕ್ಕೆ 4 ಜಿಲ್ಲೆಗಳಲ್ಲಿ ಸಾಧಾರಣ ಮಳೆಯ ನಿರೀಕ್ಷೆ
Dec 21, 2024 07:06 AM IST
ಡಿಸೆಂಬರ್ 21ರ ಶನಿವಾರ ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದ ಹವಾಮಾನ ವರದಿ ತಿಳಿಯಿರಿ
- ಬೆಂಗಳೂರಿನಲ್ಲಿ ಚಳಿ ಕಡಿಮೆಯಾಗಿದ್ದು, ಡಿಸೆಂಬರ್ 21ರ ಶನಿವಾರ ಮೋಡ ಕವಿದ ವಾತಾವರಣ ಇದೆ. ನಗರದಲ್ಲಿ ಮುಂದಿನ 24 ಗಂಟೆಗಳಲ್ಲಿ ತುಂತುರು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಕೇಂದ್ರ ಮಾಹಿತಿ ನೀಡಿದೆ. ಕರ್ನಾಟಕದ ಹವಾಮಾನ ವರದಿ ಹೀಗಿದೆ.
ರಾಜಧಾನಿ ಬೆಂಗಳೂರು ಹಾಗೂ ಸುತ್ತಮುತ್ತ ಜಿಲ್ಲೆಗಳಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಚಳಿಯ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಅಲ್ಲಲ್ಲಿ ಮಂಜಿನ ವಾತಾವರಣ ಕಂಡು ಬಂದಿದೆ. ಇಂದು (ಡಿಸೆಂಬರ್ 21, ಶನಿವಾರ) ಹೇಳಿಕೊಳ್ಳುವಂತಹ ಚಳಿ ಇಲ್ಲ. ಹೀಗಾಗಿ ಕೃಷಿಕರು ಜನಸಾಮಾನ್ಯರ ಕೆಲಸ ಕಾರ್ಯಗಳಿಗೆ ಯಾವುದೇ ರೀತಿಯ ತೊಂದರೆ ಇಲ್ಲ. ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಮಂಡ್ಯ, ರಾಮನಗರ ಜಿಲ್ಲೆಗಳಲ್ಲಿ ವಾತಾವರಣದಲ್ಲಿ ಹೆಚ್ಚಿನ ಬದಲಾವಣೆ ಆಗಿಲ್ಲ. ಬೆಳಗ್ಗೆ ಹಾಗೂ ಮಧ್ಯಾಹ್ನದವರಿಗೆ ಮೋಡ ಕವಿದ ವಾತಾವರಣ ಇರುತ್ತದೆ. ಸಂಜೆಯ ನಂತರ ಶುಭ್ರವಾದ ಆಕಾಶ ಇರುತ್ತದೆ. ಡಿಸೆಂಬರ್ 21ರ ಶನಿವಾರ ರಾಜ್ಯದ ಯಾವುದೇ ಪ್ರದೇಶದಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ಬೆಂಗಳೂರು ಹವಾಮಾನ ಕೇಂದ್ರ ತನ್ನ ದೈನಂದಿನ ವರದಿ ಪ್ರಕಾರ, ಇಂದು (ಡಿಸೆಂಬರ್ 21, ಶನಿವಾರ), ನಾಳೆ (ಡಿಸೆಂಬರ್ 22, ಭಾನುವಾರ) ಕರ್ನಾಟಕದ ಯಾವುದೇ ಪ್ರದೇಶಕ್ಕೆ ಮಳೆಯ ಮುನ್ಸೂಚನೆಗಳು ಇಲ್ಲ. ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ. ಆದರೆ ಡಿಸೆಂಬರ್ 23ರ ಸೋಮವಾರ, 24ರ ಮಂಗಳವಾರ, 25ರ ಬುಧವಾರ ಹಾಗೂ 26ರ ಗುರುವಾರ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ.
ಡಿಸೆಂಬರ್ 23ಕ್ಕೆ ಯಾವೆಲ್ಲಾ ಜಿಲ್ಲೆಗಳಿಗೆ ಮಳೆಯ ಮುನ್ಸೂಚನೆ ಇದೆ
ಡಿಸೆಂಬರ್ 23ರ ಸೋಮವಾರ ರಾಮನಗರ, ಚಾಮರಾಜನಗರ, ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳ ಕೆಲವೊಂದು ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯುವ ಸಾಧ್ಯತೆ ಇದೆ. ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಒಣ ಹವೆ ಹೆಚ್ಚಾಗಲಿದೆ. ಡಿಸೆಂಬರ್ 24ರ ಮಂಗಳವಾರ ಉಡುಪಿ, ದಕ್ಷಿಣ ಕನ್ನಡ, ಕೊಡಗು, ರಾಮನಗರ, ಚಾಮರಾಜನಗರ, ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಲಘು ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಕನ್ನಡ, ಉತ್ತರ ಒಳ ಕರ್ನಾಟಕ ಮತ್ತು ದಕ್ಷಿಣ ಒಳ ಕರ್ನಾಟಕದ ಉಳಿದ ಜಿಲ್ಲೆಗಳಲ್ಲಿ ಒಣ ಹವೆ ಇರಲಿದೆ.
ಡಿಸೆಂಬರ್ 25ರ ಬುಧವಾರ ಉಡುಪಿ, ದಕ್ಷಿಣ ಕನ್ನಡ, ಕೊಡಗು, ಹಾಸನ, ಶಿವಮೊಗ್ಗ, ಚಾಮರಾಜನಗರ, ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳ ಪ್ರತ್ಯೇಕ ಕಡೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಒಣ ಹವೆ ಹೆಚ್ಚಾಗಲಿದೆ ಎಂದು ಹವಾಮಾನ ಕೇಂದ್ರ ಮಾಹಿತಿ ನೀಡಿದೆ. ಎರಡು ದಿನಗಳ ಕಾಲ ಒಳನಾಡಿನಲ್ಲಿ ಕನಿಷ್ಠ ತಾಪಮಾನದಲ್ಲಿ ಯಾವುದೇ ದೊಡ್ಡ ಬದಲಾವಣೆಗಳು ಇರುವುದಿಲ್ಲ. ನಂತರ ಕನಿಷ್ಠ ತಾಪಮಾನದಲ್ಲಿ ಇಳಿಕೆಯಾಗುವ ಸಾಧ್ಯತೆಯಿದೆ. ಕರಾವಳಿ ಕರ್ನಾಟಕದ ಕನಿಷ್ಠ ತಾಪಮಾನದಲ್ಲಿ ದೊಡ್ಡ ಬದಲಾವಣೆ ಇಲ್ಲ.
ಬೆಂಗಳೂರಿನಲ್ಲಿ ಇಂದು ತುಂತುರು ಮಳೆ ಸಾಧ್ಯತೆ
ಬೆಂಗಳೂರಿನಲ್ಲಿ ಮುಂದಿನ 24 ಗಂಟೆಗಳ ವಾತಾವರಣವನ್ನು ನೋಡುವುದಾದರೆ, ಮೋಡ ಕವಿದ ವಾತಾವರಣ ಇದ್ದು, ತುಂತುರು ಮಳೆಯಾಗುವ ಸಾಧ್ಯತೆ ಇದೆ. ಭಾಗಶಃ ಮೋಡ ಕವಿದ ಆಕಾಶ ಇರುತ್ತದೆ. ಕೆಲವು ಕಡೆಗಳಲ್ಲಿ ಮಂಜು ಅಥವಾ ದಟ್ಟ ಮಂಜು ಇರುವ ಸಾಧ್ಯತೆ ಇದೆ. ಗರಿಷ್ಠ 28 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 20 ಡಿಗ್ರಿ ಸಲ್ಸಿಯಸ್ ತಾಪಮಾನ ಇರುವ ನಿರೀಕ್ಷೆ ಇದೆ. ಎರಡ್ಮೂರು ದಿನಗಳಲ್ಲಿ ಈ ತಾಪಮಾನದಲ್ಲಿ ಸ್ವಲ್ಪ ಏರಿಳಿತವಾಗಬಹುದು.
ವಿಭಾಗ