ಕರ್ನಾಟಕ ಹವಾಮಾನ: ಸಾಧಾರಣ ಚಳಿ ಮುಂದುವರಿಕೆ; ಡಿಸೆಂಬರ್ 26ಕ್ಕೆ ಉಡುಪಿ, ದಕ್ಷಿಣ ಕನ್ನಡ ಸೇರಿ 13 ಜಿಲ್ಲೆಗಳಲ್ಲಿ ಹಗುರ ಮಳೆಯ ನಿರೀಕ್ಷೆ
Dec 22, 2024 06:38 AM IST
ಡಿಸೆಂಬರ್ 22ರ ಭಾನುವಾರ ಕರ್ನಾಟಕದ ಹವಾಮಾನ
- ಕರ್ನಾಟಕದಲ್ಲಿ ಮುಂದಿನ ಮೂರ್ನಾಲ್ಕು ದಿನ ಯಾವುದೇ ರೀತಿಯ ಮಳೆಯ ಮುನ್ಸೂಚನೆ ಇಲ್ಲ. ಆದರೆ ಡಿಸೆಂಬರ್ 26ಕ್ಕೆ ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ 13 ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಬೆಂಗಳೂರು ಹವಾಮಾನ ಕೇಂದ್ರ ಮಾಹಿತಿ ನೀಡಿದೆ. ಡಿಸೆಂಬರ್ 22ರ ಭಾನುವಾರದ ಹವಾಮಾನ ವರದಿ ಇಲ್ಲಿದೆ.
ರಾಜಧಾನಿ ಬೆಂಗಳೂರು ಹಾಗೂ ಸುತ್ತಮುತ್ತ ಜಿಲ್ಲೆಗಳಲ್ಲಿ ಇಂದು (ಡಿಸೆಂಬರ್ 22, ಭಾನುವಾರ) ಕೂಡ ಮೋಡ ಕವಿದ ವಾತಾವರಣದೊಂದಿಗೆ ಸಾಧಾರಣ ಚಳಿಯ ಪರಿಸ್ಥಿತಿ ಮುಂದುವರಿದೆ. ಮೈ ಕೊರೆಯುವಂತಹ ಚಳಿ ಇಲ್ಲ. ವ್ಯಾಪಾರಿಗಳು, ಕೃಷಿಕರು ಹಾಗೂ ಜನಸಾಮಾನ್ಯರ ಎಂದಿನಂತೆ ತಮ್ಮ ಕೆಲಸ ಕಾರ್ಯಗಳಲ್ಲಿ ತೆರಳುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಮಂಡ್ಯ, ರಾಮನಗರ ಜಿಲ್ಲೆಗಳಲ್ಲಿ ನಿನ್ನೆಯಂತೆ (ಡಿಸೆಂಬರ್ 21, ಶನಿವಾರ) ಇವತ್ತು ಸಹ ವಾತಾವರಣ ಸಾಮಾನ್ಯವಾಗಿದ್ದು, ಹೆಚ್ಚಿನ ಬದಲಾವಣೆ ಕಂಡು ಬಂದಿಲ್ಲ. ಬೆಳಗ್ಗೆ ಹಾಗೂ ಮಧ್ಯಾಹ್ನದವರಿಗೆ ಮೋಡ ಕವಿದ ವಾತಾವರಣ ಇರುತ್ತದೆ. ಸಂಜೆಯ ನಂತರ ಶುಭ್ರವಾದ ಆಕಾಶ ಇರುತ್ತದೆ. ಡಿಸೆಂಬರ್ 22ರ ಭಾನುವಾರ ರಾಜ್ಯದ ಯಾವುದೇ ಪ್ರದೇಶದಲ್ಲಿ ಮಳೆಯಾಗುವ ಸಾಧ್ಯತೆ ಇಲ್ಲ.
ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಅತಿ ಕಡಿಮೆ ತಾಪಮಾನ 16.8 ಡಿಗ್ರಿ ಸೆಲ್ಸಿಯಸ್ ವಿಜಯಪುರ, ಬೀದರ್, ಧಾರವಾಡ ಹಾಗೂ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ದಾಖಲಾಗಿದೆ. ರಾಜ್ಯದಲ್ಲಿ ಡಿಸೆಂಬರ್ 22, 23, 24 ಹಾಗೂ 25 ರಂದು 4 ದಿನಗಳ ಕಾಲ ಯಾವುದೇ ಪ್ರದೇಶದಲ್ಲಿ ಮಳೆಯಾಗುವ ಮುನ್ಸೂಚನೆ ಇಲ್ಲ. ಆದರೆ ಅಲ್ಲಲ್ಲಿ ಮಂಜಿನ ವಾತಾವರಣ ಇರುತ್ತದೆ.
ಡಿಸೆಂಬರ್ 26ಕ್ಕೆ 13 ಜಿಲ್ಲೆಗಳಿಗೆ ಮಳೆಯಾಗುವ ಮುನ್ಸೂಚನೆ
ಡಿಸೆಂಬರ್ 26ರ ಗುರುವಾರ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ. ಉಳಿದ ಕಡೆಗಳಲ್ಲಿ ಒಣ ಹವೆ ಮುಂದುವರಿಯುವ ಸಾಧ್ಯತೆಯಿದೆ. ಡಿಸೆಂಬರ್ 27ರ ಶುಕ್ರವಾರ 11 ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆ ಇದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿ ಮಳೆ ಬರುವ ಸಾಧ್ಯತೆ ಇದೆ.
ಬೆಂಗಳೂರು ಹವಾಮಾನ
ಬೆಂಗಳೂರಿನಲ್ಲಿ ಮುಂದಿನ 24 ಗಂಟೆಗಳ ವಾತಾವರಣವನ್ನು ನೋಡುವುದಾದರೆ, ಮೋಡ ಕವಿದ ವಾತಾವರಣ ಇದ್ದು, ಕೆಲವು ಕಡೆಗಳಲ್ಲಿ ಮಂಜು ಅಥವಾ ದಟ್ಟ ಮಂಜು ಇರುವ ಸಾಧ್ಯತೆ ಇದೆ. ಗರಿಷ್ಠ 29 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 18 ಡಿಗ್ರಿ ಸಲ್ಸಿಯಸ್ ತಾಪಮಾನ ಇರುವ ನಿರೀಕ್ಷೆ ಇದೆ. ಎರಡ್ಮೂರು ದಿನ ಇದೇ ರೀತಿಯ ವಾತಾವರ ಇರಲಿದೆ.