ಬೇಲೆಕೇರಿ ಬಂದರು ಅದಿರು ಅಕ್ರಮ ಸಾಗಣೆ ಕೇಸ್: ಕಾರವಾರ ಶಾಸಕ ಸತೀಶ್ ಸೈಲ್ ಬಂಧನ, 26ಕ್ಕೆ 7 ದೋಷಿಗಳ ಶಿಕ್ಷೆ ಪ್ರಮಾಣ ಪ್ರಕಟಿಸಲಿದೆ ಕೋರ್ಟ್
Oct 26, 2024 05:14 AM IST
ಬೇಲೆಕೇರಿ ಬಂದರು ಮೂಲಕ ಅದಿರು ಅಕ್ರಮ ಸಾಗಣೆ ಕೇಸ್: ಕಾರವಾರ ಶಾಸಕ ಸತೀಶ್ ಸೈಲ್ ಬಂಧನವಾಗಿದೆ. (ಕಡತ ಚಿತ್ರ)
ಬೇಲೆಕೇರಿ ಬಂದರು ಮೂಲಕ ಅದಿರು ಅಕ್ರಮ ಸಾಗಣೆ ಮಾಡಿದ ಪ್ರಕರಣದಲ್ಲಿ ಕಾರವಾರ ಶಾಸಕ ಸತೀಶ್ ಸೈಲ್ ಅವರು ಸೇರಿ ಏಳು ಮಂದಿ ದೋಷಿಗಳು ಎಂದು ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಸಿಬಿಐ ಅಧಿಕಾರಿಗಳ ತಂಡ ಅವರನ್ನು ಕೋರ್ಟ್‌ನಲ್ಲೇ ಬಂಧಿಸಿದ್ದು, ಶಿಕ್ಷೆ ಪ್ರಮಾಣ ಇಂದು (ಅಕ್ಟೋಬರ್ 26) ಪ್ರಕಟವಾಗಲಿದೆ. (ವರದಿ- ಎಚ್ ಮಾರುತಿ, ಬೆಂಗಳೂರು)
ಬೆಂಗಳೂರು: ಬೇಲೆಕೇರಿ ಬಂದರಿನಿಂದ ಅದಿರು ಕಳವು ಪ್ರಕರಣಕ್ಕೆ ಸಂಬಂಧಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಗುರುವಾರ (ಅಕ್ಟೋಬರ್ 24) ಮಹತ್ವದ ತೀರ್ಪು ನೀಡಿದೆ. ಇದರಂತೆ, ಕಾರವಾರ ಶಾಸಕ, ಕಾಂಗ್ರೆಸ್ ನಾಯಕ ಸತೀಶ್ ಸೈಲ್ ಸೇರಿ ಏಳು ಮಂದಿಯನ್ನು 6 ಪ್ರಕರಣಗಳಲ್ಲಿ ದೋಷಿಗಳು ಎಂದು ತೀರ್ಪಿನಲ್ಲಿ ವಿವರಿಸಲಾಗಿದೆ. ಈ ತೀರ್ಪು ಪ್ರಕಟವಾದ ಕೂಡಲೇ ಸಿಬಿಐ ಅಧಿಕಾರಿಗಳ ತಂಡ, ಶಾಸಕ ಸತೀಶ್ ಸೈಲ್, ಬಂದರು ಸಂರಕ್ಷಣಾಧಿಕಾರಿ ಮಹೇಶ್ ಬಿಳೆಯಿ, ಸತೀಶ್ ಸೈಲ್ ಆಪ್ತ ಚೇತನ್ ಸಾಹ, ಲಾಲ್ ಮಹಲ್ ಕಂಪನಿಯ ಮುಖ್ಯಸ್ಥ ಪ್ರೇಮ್ ಚಂದ್ ಗರ್ಗ್, ಶ್ರೀಲಕ್ಷ್ಮೀ ವೆಂಕಟೇಶ್ವರ ಟ್ರೇಡರ್ಸ್ ಮಾಲೀಕ ಕಾರದಪುಡಿ ಮಹೇಶ್, ಸ್ವಸ್ತಿಕ್ ಕಂಪನಿ ಮಾಲಿಕ ಸ್ವಸ್ತಿಕ್ ನಾಗರಾಜ್ ಸೇರಿ ಏಳು ಮಂದಿಯನ್ನು ಬಂಧಿಸಿದೆ. ಬೇಲೆಕೇರಿ ಬಂದರಿನಲ್ಲಿ ಜಪ್ತಿ ಮಾಡಿ ಸಂಗ್ರಹಿಸಿ ಇಟ್ಟಿದ್ದ 11,312 ಮೆಟ್ರಿಕ್ ಟನ್ ಅದಿರನ್ನು ಅನುಮತಿ ಇಲ್ಲದೆ ಸಾಗಾಟ ಮಾಡಿದ ಆರೋಪವು ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗಳು ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.
ಶಾಸಕ ಸೈಲ್ ಸೇರಿ 7 ಆರೋಪಿಗಳ ಶಿಕ್ಷೆ ಪ್ರಮಾಣ ಇಂದು ಪ್ರಕಟ
ಬೇಲೆಕೇರಿ ಬಂದಿನಿಂದ ಅದಿರು ನಾಪತ್ತೆ ಪ್ರಕರಣ ಸಂಬಂಧ ಶುಕ್ರವಾರಕ್ಕೆ ನ್ಯಾಯಾಲಯವು ಶಿಕ್ಷೆಯ ಪ್ರಮಾಣವನ್ನು ಶುಕ್ರವಾರಕ್ಕೆ ಕಾಯ್ದಿರಿಸಿತ್ತು. ಇದರಂತೆ ಇಂದು (ಅಕ್ಟೋಬರ್ 26) ಶಿಕ್ಷೆ ಪ್ರಮಾಣ ಪ್ರಕಟವಾಗಲಿದೆ.
ನ್ಯಾಯಾಲಯವು ತೀರ್ಪು ನೀಡಿದ ಕೂಡಲೇ ಅಪರಾಧಿಗಳನ್ನು ವಶಕ್ಕೆ ಪಡೆಯುವಂತೆ ಸೂಚನೆ ನೀಡಿತು. ಕೋರ್ಟ್ ಆದೇಶ ಪ್ರಕಾರವೇ ಸಿಬಿಐ ಅಧಿಕಾರಿಗಳು ಶಾಸಕ ಸೈಲ್ ಸೇರಿ 7 ಅಪರಾಧಿಗಳನ್ನು ಬಂಧಿಸಿದರು. ಕೋರ್ಟ್ ಆರು ಪ್ರಕರಣಗಳ ವಿಚಾರಣೆ ನಡೆಸಿದ ಬಳಿಕ ಈ ತೀರ್ಪು ಪ್ರಕಟಿಸಿದೆ. ಈ ಆರೂ ಪ್ರಕರಣಗಳ ತನಿಖೆ ನಡೆಸಿದ್ದ ಸಿಬಿಐ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಮತ್ತು ಸಾಕ್ಷ್ಯಗಳನ್ನು ಒದಗಿಸಿತ್ತು.
ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ ಮತ್ತು ಶಾಸಕ ಸತೀಶ್ ಸೈಲ್
ಬೇಲೆಕೇರಿ ಬಂದರಿನಲ್ಲಿದ್ದ ಅದಿರು ನಾಪತ್ತೆ ಪ್ರಕರಣದಲ್ಲಿ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈವೇಟ್ ಲಿಮಿಟೆಡ್ ಕಂಪನಿ ಕೇಂದ್ರ ಬಿಂದು. ಇದು ಶಾಸಕ ಸತೀಶ್ ಸೈಲ್ ಅವರ ಕಂಪನಿ. 2009ರಿಂದ 2010ರ ಮೇ ತಿಂಗಳ ನಡುವೆ ರಾಜ್ಯದಲ್ಲಿ ನಡೆದ ಅಕ್ರಮ ಗಣಿಗಾರಿಕೆ, ಅಕ್ರಮ ಅದಿರು ಸಾಗಣೆ ಕುರಿತು ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಸಿಬಿಐಗೆ ಆದೇಶಿಸಿತ್ತು. ಸಿಬಿಐ 2013ರ ಸೆಪ್ಟೆಂಬರ್‌ನಲ್ಲಿ ಕೇಸ್ ದಾಖಲಿಸಿ ತನಿಖೆ ಶುರುಮಾಡಿತ್ತು. ಬೇಲೆಕೇರಿ ಬಂದರಿನ ಮೂಲಕ 88.06 ಲಕ್ಷ ಮೆಟ್ರಿಕ್ ಟನ್ ಅದಿರನ್ನು 73 ರಫ್ತು ಕಂಪನಿಗಳ ಮೂಲಕ ವಿದೇಶಕ್ಕೆ ರವಾನೆ ಮಾಡಲಾಗಿತ್ತು ಎಂಬುದನ್ನು ಕೇಂದ್ರೀಯ ಸಮಿತಿ ಪ್ರಾಧಿಕಾರ (ಸಿಇಸಿ) ವರದಿ ಕೂಡ ಉಲ್ಲೇಖಿಸಿತ್ತು. ಈ ಪೈಕಿ ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪನಿ 7.23 ಲಕ್ಷ ಮೆಟ್ರಿಕ್ ಟನ್ ಅದಿರನ್ನು ಬೇಲೆಕೇರಿ ಬಂದರು ಮೂಲಕ ರಫ್ತು ಮಾಡಿರುವುದು ದೃಢಪಟ್ಟಿತ್ತು.
ಅದಿರು ಅಕ್ರಮ ರಫ್ತು ಪ್ರಕರಣದಲ್ಲಿ ಶಾಸಕ ಸತೀಶ್ ಸೈಲ್ ಅವರನ್ನು ಇದು ಎರಡನೇ ಬಾರಿಗೆ ಬಂಧಿಸಲಾಗಿದೆ. 2012ರ ಸೆಪ್ಟೆಂಬರ್ 16 ರಂದು ಸತೀಶ್ ಅವರ ಮನೆಗೆ ದಾಳಿ ನಡೆಸಿದ ಸಿಬಿಐ ಅಧಿಕಾರಿಗಳ ತಂಡ ಅಲ್ಲಿದ್ದ ದಾಖಲೆಗಳನ್ನು ವಶಪಡಿಸಿಕೊಂಡು 2013ರ ಸೆಪ್ಟೆಂಬರ್ 20 ರಂದು ಬಂಧಿಸಿತ್ತು. 1 ವರ್ಷಕ್ಕೂ ಹೆಚ್ಚು ಕಾಲ ಸೆರೆವಾಸ ಅನುಭವಿಸಿದ್ದ ಅವರು 2014ರ ಡಿಸೆಂಬರ್ 16 ರಂದು ಜಾಮೀನು ಪಡೆದು ಹೊರಬಂದಿದ್ದರು. 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕಾರವಾರದಲ್ಲಿ ಚುನಾವಣೆಗೆ ನಿಂತು ಬಿಜೆಪಿಯ ರೂಪಾಲಿ ನಾಯ್ಕ ವಿರುದ್ಧ ಸೋಲು ಅನುಭವಿಸಿದ್ದರು. ಆದರೆ 2023ರ ಚುನಾವಣೆಯಲ್ಲಿ ಗೆಲುವು ಕಂಡು ಶಾಸಕರಾದರು.
(ವರದಿ- ಎಚ್ ಮಾರುತಿ, ಬೆಂಗಳೂರು)