Karwar News; ವಾರದ ಬಳಿಕ ಕೊನೆಗೂ ದಡ ಸೇರಿತು ಕಾಳಿ ನದಿ ಪಾಲಾಗಿದ್ದ ಟ್ರಕ್, ಸತತ 8 ಗಂಟೆ ಕಾರ್ಯಾಚರಣೆ ಯಶಸ್ವಿ
Aug 16, 2024 06:41 PM IST
ಕಾರವಾರ ಸಮೀಪದ ಕಾಳಿ ನದಿ ಸೇತುವೆ ಕಳೆದ ವಾರ ಕುಸಿದಾಗ ನದಿ ಸೇರಿದ್ದ ಟ್ರಕ್ ಅನ್ನು ಮೇಲೆತ್ತಿದ ಕಾರ್ಯಾಚರಣೆಯ ಒಂದು ನೋಟ.
Uttara Kannada News; ಕಾರವಾರ ಸಮೀಪ ಆಗಸ್ಟ್ ಮೊದಲ ವಾರ ಕುಸಿದ ವೇಳೆ ನದಿ ಪಾಲಾಗಿದ್ದ ಟ್ರಕ್ ಕೊನೆಗೂ ದಡ ಸೇರಿದೆ. ಪರಿಣತರ ತಂಡ ಸತತ 8 ಗಂಟೆ ಕಾರ್ಯಾಚರಣೆ ನಡೆಸಿ ಟ್ರಕ್ ಅನ್ನು ದಡ ಸೇರಿಸಿತು. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)
ಕಾರವಾರ: ಕಾಳಿ ನದಿಗೆ ಕಟ್ಟಲಾಗಿದ್ದ ಸೇತುವೆ ಆಗಸ್ಟ್ ಮೊದಲ ವಾರ ಕುಸಿದ ವೇಳೆ ನದಿ ಪಾಲಾಗಿದ್ದ ಟ್ರಕ್ ಸತತ 8 ಗಂಟೆಗಳ ಕಾರ್ಯಾಚರಣೆಯಲ್ಲಿ ಕೊನೆಗೂ ದಡ ಸೇರಿದೆ. ಆಗಸ್ಟ್ 7ರಂದು ಕಾಳಿ ನದಿಯ ಹಳೆಯ ಸೇತುವೆ ಕುಸಿದ ಪರಿಣಾಮ ತಮಿಳುನಾಡಿನ ಮೂಲದ ಲಾರಿ ನದಿ ಪಾಲಾಗಿತ್ತು. 8 ತಾಸುಗಳ ಕಾರ್ಯಾಚರಣೆಯಲ್ಲಿ ಕಾಳಿ ನದಿಯ ಅಳ್ವೇವಾಡ ದಂಡೆಗೆ ಗುರುವಾರ ಸಂಜೆ ವೇಳೆ ಟ್ರಕ್ ಅನ್ನು ಎಳೆದುತರಲಾಯಿತು.
ಮುಳುಗು ತಜ್ಞ ಈಶ್ವರ್ ಮಲ್ಪೆ, ಕಾರ್ಮಿಕ ಸಣ್ಯಾ ಸಿದ್ದಿ ಎಂಬುವವರು ನೀರಿನಾಳದಲ್ಲಿ ಸಾಹಸಮಯ ಪ್ರದರ್ಶನ ತೋರಿ, ಯಶಸ್ವಿಯಾಗಿ ಲಾರಿ ಎಳೆದು ಮೇಲಕ್ಕೆ ತಂದಿದ್ದಾರೆ. ಐಆರ್‌ಬಿ ಕಂಪೆನಿ ಜೊತೆಗೆ ಎನ್‌ಡಿಆರ್‌ಎಫ್, ಕರಾವಳಿ ಕಾವಲು ಪಡೆ, ಪೊಲೀಸರು ಹಾಗೂ ಗೃಹರಕ್ಷಕ ದಳದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಕಾಳಿ ನದಿಯಿಂದ ಟ್ರಕ್ ಮೇಲೆತ್ತುವ ಕಾರ್ಯಾಚರಣೆ
ಬೆಳಗ್ಗಿನಿಂದಲೇ ಐ.ಆರ್. ಬಿ. ಕಂಪನಿ ಸಿಬ್ಬಂದಿ ಹಾಗೂ ಉತ್ತರ ಕನ್ನಡ ಜಿಲ್ಲಾಡಳಿತ ಜಂಟಿ ಕಾರ್ಯಾಚರಣೆ ಆರಂಭಿಸಿತ್ತು. ಎಸ್ ಡಿ ಆರ್ ಎಫ್, ಕರಾವಳಿ ಕಾವಲು ಪಡೆ ಕಾರ್ಯಾಚರಣೆಗೆ ಸಾಥ್ ನೀಡಿತ್ತು. ದಡಕ್ಕೆ ಬಂದ ಲಾರಿಯನ್ನು ಕೆಲ ನಿಮಿಷದಲ್ಲಿ ಕ್ರೇನ್ ಮೂಲಕ ಮೇಲಕ್ಕೆತ್ತುವ ಕಾರ್ಯವನ್ನು ಯಶಸ್ವಿಯಾಗಿ ಮಾಡಲಾಯಿತು. ಇದಕ್ಕೂ ಮುನ್ನ ಮೂರು ಹಗ್ಗಗಳನ್ನು ಲಾರಿಗೆ ಈಶ್ವರ ಮಲ್ಪೆ ಹಾಗೂ ಅವರ ತಂಡ ಸ್ಕೂಬಾ ಡೈವ್ ಮಾಡಿ ಕಟ್ಟಿ ಬಂದಿತ್ತು . ಹಾಗೂ ಮೂರು ಟೋಯಿಂಗ್ ವಾಹನಗಳ ಮೂಲಕ ನಿಧಾನಕ್ಕೆ ಲಾರಿಯನ್ನು ದಡದತ್ತ ಎಳೆಯಲಾಯಿತು.
ಮುಂಜಾನೆಯಿಂದಲೇ ಆರಂಭಗೊಂಡಿದ್ದ ಕಾರ್ಯಾಚರಣೆಯಲ್ಲಿ ಈಶ್ವರ್ ಮಲ್ಪೆ ತಂಡ ಹಾಗೂ ಇಮ್ರಾನ್ ಕ್ರೇನ್ ಸರ್ವಿಸ್‌ನ ಕಾರ್ಮಿಕರು ನದಿಯ ಆಳದಲ್ಲಿ ಸೇತುವೆ ಸ್ಲಾಬ್ ಮೇಲಿದ್ದ ಲಾರಿಗೆ ರೋಪ್ ಬಿಗಿಯಲು ಹಲವು ಗಂಟೆ ಬೇಕಾಯಿತು. ಬಳಿಕ ಎರಡು ಕ್ರೇನ್‌ಗಳ ರೋಪ್ ಮೂಲಕ ಲಾರಿ ಎಳೆಯಲು ಪ್ರಯತ್ನಿಸಲಾಯಿದರೂ, ಸ್ಲಾಬ್ನಿಂದ ತಪ್ಪಿ ನೀರಿನ ಆಳಕ್ಕೆ ಬಿದ್ದಿತು. ಬಳಿಕ ಮತ್ತೊಂದು ರೋಪ್ ಕಟ್ಟಿಕ್ಕೊಂಡು ಕ್ರೇನ್ ಮೂಲಕ ಎಳೆಯುವಾಗ ಲಾರಿ ನದಿಯ ಅರ್ಧಕ್ಕೆ ಬಂದ ವೇಳೆ ಬಂಡೆಗೆ ಸಿಲುಕಿ ಸಣ್ಣ ರೋಪ್ ಕಟ್ ಆಗಿ ಮತ್ತೆ ಅಡಚಣೆಯಾಗಿತ್ತು.
ಕಾರ್ಯಾಚರಣೆ ಸ್ಥಳಕ್ಕಾಗಮಿಸಿದ ಸಚಿವ ಮಂಕಾಳು ವೈದ್ಯ
ಕಾರ್ಯಾಚರಣೆ ಸ್ಥಳಕ್ಕೆ ಮಧ್ಯಾಹ್ನ ಎರಡು ಗಂಟೆಗೆ ಆಗಮಿಸಿದ್ದ ಸಚಿವ ಮಂಕಾಳು ವೈದ್ಯ ಕಾರ್ಯಾಚರಣೆ ಮಾಡುವವರಿಗೆ ಧೈರ್ಯ ತುಂಬಿದರು. ಲಾರಿ ಮಾಲಕ ಸೇಂಥಿಲ್ ಗೆ ಸಾಂತ್ವನ ಹೇಳಿದರು. ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಹಾಗೂ ಎಸ್ಪಿ ನಾರಾಯಣ ಅವರು ಸಹ ಕಾರ್ಯಾಚರಣೆ ತಂಡಕ್ಕೆ ಮಾರ್ಗದರ್ಶನ ಮಾಡಿದ್ದರು . ಸ್ಥಳದಲ್ಲಿ ಬೀಡು ಬಿಟ್ಟಿದ್ದ ಪೊಲೀಸರು ಹಾಗೂ ಅಧಿಕಾರಿಗಳು ಕಾರ್ಯಾಚರಣೆ ನೋಡಲು ಬಂದಿದ್ದ ಸಾರ್ವಜನಿಕರನ್ನು ನಿಯಂತ್ರಿಸಿದರು.
ಮೂರು ರೋಪ್ ಎರಡು ಕ್ರೇನ್, ಮೂರು ಟೋಯಿಂಗ್ ವಾಹನ ಮತ್ತು ಎರಡು ಬೋಟ್ ಮೂಲಕ 50ಕ್ಕೂ ಹೆಚ್ಚು ಕಾರ್ಮಿಕರು 9 ಗಂಟೆಗಳಿಂದ ಕಾರ್ಯಾಚರಣೆ ನಡೆಸಿದರು. ಈ ಮೂಲಕ ಕಳೆದ 8 ದಿನಗಳಿಂದ ನದಿಯಲ್ಲಿದ್ದ ತಮಿಳುನಾಡು ಮೂಲದ ಸೆಂಥಿಲ್‌ಕುಮಾರ್ ಮಾಲಿಕತ್ವದ ಲಾರಿಯನ್ನು ಮೇಲೆತ್ತಲಾಯಿತು.
(ವರದಿ- ಹರೀಶ್ ಮಾಂಬಾಡಿ, ಮಂಗಳೂರು)