logo
ಕನ್ನಡ ಸುದ್ದಿ  /  ಕರ್ನಾಟಕ  /  Lok Sabha Elections 2024: ನೀವ್‌ ಮತ ಹಾಕ್ತೀರಾ, ಪುಟಾಣಿ ಸನ್ನಿಧಿಯಿಂದ ಕಾಸರಗೋಡಿನಲ್ಲೂ ಮತದಾನ ಜಾಗೃತಿ

Lok Sabha Elections 2024: ನೀವ್‌ ಮತ ಹಾಕ್ತೀರಾ, ಪುಟಾಣಿ ಸನ್ನಿಧಿಯಿಂದ ಕಾಸರಗೋಡಿನಲ್ಲೂ ಮತದಾನ ಜಾಗೃತಿ

Umesha Bhatta P H HT Kannada

Apr 09, 2024 04:46 PM IST

ಮತದಾನ ಜಾಗೃತಿ ನಿರತ ಸನ್ನಿಧಿ.

  • Kasaragod News ದಕ್ಷಿಣ ಕನ್ನಡ ಜಿಲ್ಲೆಯ ಬಾಲಕಿ ಸನ್ನಿಧಿ ಈಗ ಲೋಕಸಭೆ ಚುನಾವಣೆಗೆ ಕಡ್ಡಾಯ ಮತದಾನ ಮಾಡುವಂತೆ ಕಾಸರಗೋಡಿನಲ್ಲೂ ಜಾಗೃತಿ ಮೂಡಿಸುತ್ತಿದ್ದಾಳೆ.

    ವರದಿ: ಹರೀಶ ಮಾಂಬಾಡಿ. ಮಂಗಳೂರು

ಮತದಾನ ಜಾಗೃತಿ ನಿರತ ಸನ್ನಿಧಿ.
ಮತದಾನ ಜಾಗೃತಿ ನಿರತ ಸನ್ನಿಧಿ.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಬಾಳ್ತಿಲ ಸಮೀಪ ನಿವಾಸಿ ಸನ್ನಿಧಿ ಕಶೆಕೋಡಿ ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿನಿ. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭ ತನ್ನದೇ ವಯಸ್ಸಿನ ಸಮೃದ್ಧಿ, ಪ್ರಣಮ್ಯಾ, ನಿರೀಕ್ಷಾ, ಕೀರ್ತಿ ಅವರನ್ನೆಲ್ಲ ಸೇರಿಸಿಕೊಂಡು, ಮನೆ, ಅಂಗಡಿ, ಹೋಟೆಲ್, ಆಟೋ ನಿಲ್ದಾಣಗಳಿಗೆ ತೆರಳಿ, ಪರಿಚಿತರಷ್ಟೇ ಅಲ್ಲ, ಗುರುತು ಇಲ್ಲದವರನ್ನೂ ಮಾತಾಡಿಸಿ, ಮತದಾನ ಮಾಡಿ, ಅದು ಕಡ್ಡಾಯ ಎಂದು ಹೇಳಿ ಸುದ್ದಿಯಾಗಿದ್ದಳು. ಇದೀಗ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿಯೂ ಮತದಾನ ಜಾಗೃತಿಯ ಸಂಕಲ್ಪ ತೊಟ್ಟಿರುವ ಸನ್ನಿಧಿ, ತಂದೆ ಲೋಕೇಶ್‌ ಕಶೆಕೋಡಿ, ತಾಯಿ ಶೀಲಾವತಿ ಹಾಗೂ ಸಹೋದರಿ ಸಮೃದ್ಧಿಯ ನೆರವಿನಿಂದ ಕಾಸರಗೋಡಿನಲ್ಲಿ ಮತದಾನ ಜಾಗೃತಿ ಮಾಡುತ್ತಿದ್ದಾಳೆ.

ಟ್ರೆಂಡಿಂಗ್​ ಸುದ್ದಿ

ಬೆಂಗಳೂರು: ನಿಷೇಧಿತ ಮಾದಕ ವಸ್ತು ಗಾಂಜಾ, ಇ-ಸಿಗರೇಟ್, ವಿದೇಶಿ ಸಿಗರೆಟ್‌, ಎಂಡಿಎಂಎ ಮಾರಾಟಗಾರರ ಬಂಧನ, ಮಾದಕ ವಸ್ತುಗಳ ಜಪ್ತಿ

ದೊಡ್ಡಬಳ್ಳಾಪುರ: ಹೇಮಂತಗೌಡ ಹತ್ಯೆ ಪ್ರಕರಣದ 2ನೇ ಆರೋಪಿ ಬಂಧನ, ಪೊಲೀಸರ ಮೇಲೆ ಹಲ್ಲೆಗೆತ್ನಿಸಿದ್ದ ಕಾರಣ ಕಾಲಿಗೆ ಗುಂಡೇಟು

ಮಂಗಳೂರು ವಿಮಾನ ನಿಲ್ಧಾಣಕ್ಕೆ ಬಂದು ಗೊಂದಲಕ್ಕೆ ಒಳಗಾದ ಮಹಿಳೆ, ನೆರವಾದ ಭದ್ರತಾ ಸಿಬ್ಬಂದಿ, ನಾಪತ್ತೆ ಪ್ರಕರಣ ಸುಖಾಂತ್ಯ

ದಕ್ಷಿಣ ಕನ್ನಡದ ಮಂಗಳೂರು, ಪುತ್ತೂರಲ್ಲಿ ಹಲಸು, ಮಾವು ಸೇರಿ ವಿವಿಧ ಹಣ್ಣುಗಳ ಮೇಳ, ದಿನಾಂಕ ಮತ್ತು ಇತರೆ ವಿವರ

ಮತದಾನ ಜಾಗೃತಿ ಕುರಿತಾಗಿ ಈಕೆ ಚುನಾವಣಾ ಆಯೋಗಕ್ಕೆ ಪತ್ರವನ್ನು ಬರೆದಿದ್ದು, ಈಕೆಯ ಪ್ರಯತ್ನಕ್ಕೆ ಆಯೋಗವೂ ಶ್ಲಾಘಿಸಿದೆ, ಖುದ್ದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಅವರೂ ಸನ್ನಿಧಿ ಪ್ರಯತ್ನಕ್ಕೆ ಭೇಷ್ ಎಂದಿದ್ದಾರೆ.

ಆಯೋಗದ ಸೂಚನೆ

ರಾಜ್ಯ ಚುನಾವಣಾ ಆಯೋಗದ ಮುಖ್ಯಚುನಾವಣಾಧಿಕಾರಿಗಳಿಗೆ ಬರೆದಿರುವ ಪತ್ರವನ್ನು ಪುರಸ್ಕರಿಸಿರುವ ಆಯೋಗ ಅವರು ಕಳುಹಿಸಿರುವ ಪ್ರಸ್ತಾವನೆಯನ್ನು ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿತ್ತು.

ಮತದಾನ ಜಾಗೃತಿಯ ಕರಪತ್ರಗಳನ್ನು ಇಂಗ್ಲೀಷ್‌ ಹಾಗೂ ಕನ್ನಡ ಭಾಷೆಯಲ್ಲಿ ಮುದ್ರಿಸಿ ಹಂಚುತ್ತಿರುವ ಸನ್ನಿಧಿ ಸದ್ಯ ಕಾಸರಗೋಡು ಪೇಟೆಯಲ್ಲಿ ತಿರುಗಾಟ ನಡೆಸಿದ್ದಾಳೆ. ಕಾಸರಗೋಡು ಕಲೆಕ್ಟರ್ (ಜಿಲ್ಲಾಧಿಕಾರಿ) ಸಹಿತ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗಿರುವ ಸನ್ನಿಧಿ, ಪಟಪಟನೆ ಚುನಾವಣೆ ಜಾಗೃತಿ ಮಾಡುತ್ತಿರುವುದನ್ನು ಗಮನಿಸಿದ ಅಂಗಡಿ, ಮುಂಗಟ್ಟಿನವರೂ ಕಣ್ಣರಳಿಸಿ ನೋಡುತ್ತಿದ್ದಾರೆ.

ಮತದಾನದ ಮಹತ್ವ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಮಹತ್ವ ಏನು, ನಮ್ಮನ್ನು ಪ್ರತಿನಿಧಿಸುವ ಚುನಾಯಿತ ಪ್ರತಿನಿಧಿಗಳು ಹೇಗಿರಬೇಕು. ಮತದಾನ ಮಾಡುವುದರಿಂದ ನಮಗೆ ಆಗುವ ಲಾಭವೇನು, ದೇಶಕ್ಕೆ ಇದರಿಂದ ಉಪಯೋಗವೇನು ಎನ್ನುವ ಕುರಿತು ಆಕೆ ಮಾಹಿತಿ ನೀಡುತ್ತಿದ್ದಾಳೆ. ಹೂವು ಕಟ್ಟುವವರು, ಸಣ್ಣ ಪುಟ್ಟ ವ್ಯಾಪಾರ ಮಾಡುವವರು, ಮಹಿಳೆಯರು, ಹಿರಿಯರು ಎನ್ನದೇ ಎಲ್ಲರನ್ನೂ ಮಾತನಾಡಿಸುತ್ತಾ ಅವರಿಗೆ ಮತ ನೀಡುವಂತೆ ಕೋರುತ್ತಾಳೆ ಸನ್ನಿಧಿ.

ಕಾಸರಗೋಡು ಭಾಗದಲ್ಲೂ ಕನ್ನಡ ಮಾತನಾಡುವವರು ಅಧಿಕವಾಗಿದ್ದಾರೆ. ಅವರಿಗೆ ಕನ್ನಡದಲ್ಲಿಯೇ ಮಾತನಾಡಿಸಿ ಮತದಾನದ ಕುರಿತು ಮಾಹಿತಿ ನೀಡುತ್ತಿದ್ದಾಳೆ.

ನಿನಗೆ ಏಕೆ ಈ ಯೋಚನೆ ಬಂತು. ನೀನು ಇನ್ನು ಶಾಲೆಗೆ ಹೋಗಬೇಕಲ್ಲವೇ ಎಂದು ಅಲ್ಲಿದ್ದವರು ಕೇಳಿದರೆ ಅದಕ್ಕೆ ಅರಳು ಹುರಿದ ಹಾಗೆ ಸನ್ನಿಧಿ ಉತ್ತರ ನೀಡುತ್ತಾಳೆ. ಆಕೆ ಉತ್ತರ ಕೇಳಿಯಾದರೂ ಮತದಾನ ತಪ್ಪಿಸಲೇಬಾರದು ಎನ್ನುವ ವಾತಾವರಣವನ್ನು ಆಕೆ ಸೃಷ್ಟಿಸುತ್ತಾಳೆ.

ಪೋಷಕರಿಗೂ ಖುಷಿ

ದಿನದಲ್ಲಿ ಕೆಲ ಹೊತ್ತು ತನ್ನ ಮನೆಯ ಅಕ್ಕಪಕ್ಕದ ಪ್ರದೇಶ, ಪರಿಚಿತ ಇರುವ ಭಾಗಗಳಿಗೆ ಆಕೆ ಸ್ನೇಹಿತರೊಂದಿಗೆ ತೆರಳಿ ಈ ಕೆಲಸ ಮಾಡುತ್ತಿದ್ದಾಳೆ. ಒಮ್ಮೆಯೂ ಬೇಸರ ವ್ಯಕ್ತಪಡಿಸದೇ ಆಕೆಯ ಸಹಪಾಠಿಗಳು ಹೆಜ್ಜೆ ಹಾಕುತ್ತಾ ಖುಷಿಪಡುತ್ತಿದ್ದಾರೆ.

ಹಿಂದಿನ ಚುನಾವಣೆಯಲ್ಲೂ ಸನ್ನಿಧಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಳು. ಇದಕ್ಕೆ ಸ್ಥಳೀಯಾಡಳಿತದಿಂದ ಮೆಚ್ಚುಗೆಯೂ ವ್ಯಕ್ತವಾಗಿತ್ತು. ಜನರೂ ಮತ ಹಾಕಲು ಹೋಗುತ್ತೇವೆ ಎಂದು ಹೇಳಿದ್ದರು. ಈ ಬಾರಿಯೂ ಆಕೆ ಇದೇ ರೀತಿಯಲ್ಲಿ ಜಾಗೃತಿ ಮೂಡಿಸುತ್ತಿದ್ದಾಳೆ. ನೆರೆಯ ಕಾಸರಗೋಡಿನಲ್ಲೂ ಜನರಿಗೆ ಮತದಾನದ ಕುರಿತು ಮಾಹಿತಿ ನೀಡುತ್ತಿದ್ದಾಳೆ. ಆಕೆಯ ಬಯಕೆಗೆ ಸಹಕಾರ ನೀಡುವುದು ನಮ್ಮ ಜವಾಬ್ದಾರಿ ಎಂದು ಪೋಷಕರು ಹೆಮ್ಮೆಯಿಂದಲೇ ಹೇಳುತ್ತಾರೆ.

(ವರದಿ: ಹರೀಶ ಮಾಂಬಾಡಿ. ಮಂಗಳೂರು)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ