Kodagu News: ಕೊಡಗಿನಲ್ಲಿ ಹೆಚ್ಚಿನ ಎಂಡಿಎಂಎ ಮಾದಕ ವಸ್ತು, ಗಾಂಜಾ ಮಾರಾಟ ಪ್ರಕರಣ: ಕೇರಳದವರು ಸೇರಿ ಐವರನ್ನು ಬಂಧಿಸಿದ ಪೊಲೀಸರು
Nov 18, 2024 03:17 PM IST
ಕೊಡಗಿನಲ್ಲಿ ನಿಷೇಧಿತ ಎಂಡಿಎಂಎಯನ್ನು ಪೊಲೀಸರು ವಶಪಡಿಸಿಕೊಂಡು ಕೇರಳದವರು ಸೇರಿ ಐವರನ್ನು ಬಂಧಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ನಿಷೇಧಿತ ಎಂಡಿಎಂ ಹಾಗೂ ಗಾಂಜಾವನ್ನು ಮಾರಾಟ ಮಾಡಲು ಯತ್ನಿಸಿದ ಕೇರಳದ ಮೂವರು, ಕೊಡಗಿನ ಇಬ್ಬರು ಸೇರಿ ಐದು ಮಂದಿಯನ್ನು ಬಂಧಿಸಲಾಗಿದೆ.
ಮಡಿಕೇರಿ: ಕೇರಳದೊಂದಿಗೆ ಗಡಿ ಹಂಚಿಕೊಂಡಿರುವ ಜತೆಗೆ ಹೆಚ್ಚಿನ ವಹಿವಾಟು ಹೊಂದಿರುವ ಪ್ರವಾಸೋದ್ಯಮ ಜಿಲ್ಲೆ ಕೊಡಗಿನಲ್ಲಿ ನಿಷೇಧಿಕ ಎಂಡಿಎಂಎ ಮಾದಕ ವಸ್ತು ಹಾಗೂ ಗಾಂಜಾ ಮಾರಾಟ ಪ್ರಕರಣಗಳು ಹೆಚ್ಚಿವೆ. ಕೊಡಗಿನ ಯುವ ಜನತೆ ಜತೆಗೆ ಪ್ರವಾಸಕ್ಕೆಂದು ಭಾರತದ ನಾನಾ ಭಾಗಗಳಿಂದ ಬರುವವರನ್ನು ಗುರಿಯಾಗಿಟ್ಟುಕೊಂಡು ಮಾದಕ ವಸ್ತುಗಳನ್ನು ಸರಬರಾಜು ಮಾಡುವ ಚಟುವಟಿಕೆ ನಡೆಯುತ್ತಲೇ ಇದೆ. ಕೊಡಗಿನ ಪೊಲೀಸರು ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ನಡೆಸಿ ಆಗಾಗ ದಾಳಿ ಮಾಡಿದರೂ ಪ್ರಕರಣ ಮಾತ್ರ ಕಡಿಮೆಯಾಗುತ್ತಲೇ ಇಲ್ಲ. ಈಗಲೂ ಇಂತಹದ್ದೇ ಪ್ರಕರಣವೊಂದನ್ನು ಕೊಡಗಿನ ಪೊಲೀಸರು ಪ್ರತ್ಯೇಕ ಪ್ರಕರಣಗಳನ್ನು ಪತ್ತೆ ಮಾಡಿ ಐದು ಮಂದಿ ಕೇರಳ ಮೂಲದ ಮಾದಕ ವಸ್ತು ಮಾರಾಟಗಾರರನ್ನು ಸೆರೆ ಹಿಡಿದಿದ್ದಾರೆ.
ಕೊಡಗಿನಲ್ಲಿ ಕೆಲ ವರ್ಷದಿಂದ ನಿಷೇಧಿತ ಮಾದಕ ವಸ್ತುಗಳ ಮಾರಾಟ ನಡೆಯುತ್ತಲೇ ಇದೆ. ಪೊಲೀಸರು ನಿರಂತರವಾಗಿ ದಾಳಿ ಮಾಡುತ್ತಿದ್ದು, ಈ ವರ್ಷವೂ ಹೆಚ್ಚಿನ ಪ್ರಕರಣ ಬೇಧಿಸಿ ಕೋಟ್ಯಂತರ ರೂ. ಬೆಲೆ ಬಾಳುವ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ.
ನಿರಂತರ ಮಾರಾಟ
ಭಾನುವಾರವೂ ಖಚಿತ ಮಾಹಿತಿ ಮೇರೆಗೆ ನಿಷೇಧಿತ ಎಂಡಿಎಂ ಮಾದಕ ವಸ್ತು ಹಾಗೂ ಗಾಂಜಾ ಮಾರಾಟ/ ಸರಬರಾಜು ಮಾಡುತ್ತಿದ್ದ ಪ್ರಕರಣವನ್ನು ಭೇದಿಸಿರುವ ಕೊಡಗು ಜಿಲ್ಲಾ ಪೊಲೀಸರು, ಮಾರಾಟ ಮಾಡಲು ಯತ್ನಿಸಿದ ಕೇರಳ ರಾಜ್ಯದ ಮೂವರು ಆರೋಪಿಗಳೊಂದಿಗೆ ಸ್ಥಳೀಯವಾಗಿ ಸಹಕಾರ ನೀಡಿದ ಕೊಡಗು ಜಿಲ್ಲೆಯ ಇಬ್ಬರು ಆರೋಪಿಗಳನ್ನು ಬಂಧಿಸಿ ಮಾಲು ಹಾಗೂ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಬಂಧನ ಕ್ಕೊಳಗಾದ ಆರೋಪಿಗಳಿಂದ 84 ಗ್ರಾಂ. ಎಂಡಿಎಂಎ ಮಾದಕ ವಸ್ತು, 7 ಗ್ರಾಂ. ಗಾಂಜಾ, ಒಂದು ಬಲೆನೋ ಕಾರು, ಒಂದು ಡಿಜಿಟಲ್ ತೂಕದ ಯಂತ್ರ ಹಾಗೂ ಮಾದಕ ವಸ್ತು ಸೇವನೆಗೆ ಬಳಸುವ ಉಪಕಾರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತರು ಯಾರು?
ವಿರಾಜಪೇಟೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಆರ್ಜಿ ಗ್ರಾಮದ ಕಿರುಮಕ್ಕಿ - ಕಂಡಿಮಕ್ಕಿ ಜಂಕ್ಷನ್ ನ ಲ್ಲಿ ಎಂಡಿಎಂಎ ಮಾದಕ ವಸ್ತು ಹಾಗೂ ಗಾಂಜಾ ಮಾರಾಟ ಹಾಗೂ ಸರಬರಾಜು ಮಾಡುತ್ತಿದ್ದ ಬಗ್ಗೆ ಪೊಲೀಸ್ ತನಿಖಾ ತಂಡಕ್ಕೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಆರೋಪಿಗಳಾದ ಕೇರಳದ ಕಣ್ಣೂರು ಜಿಲ್ಲೆಯ ತಿರುವಂಗಾಡು ಗ್ರಾಮದ ಎಂ.ಕೆ. ಸುಜೇಶ್ (44), ಪಿಣರಾಯಿ ಜಂಶೀರ್ (37), ತಲಚೇರಿ ಜಿಲ್ಲೆಯ ಇರನ್ನೋಳಿ ಗ್ರಾಮದ ಸಿ.ವಿ. ಶಮ್ಮಾಸ್ (32), ವಿರಾಜಪೇಟೆ ತಾಲ್ಲೂಕು ಮರೂರು ಗ್ರಾಮದ ಯು.ವೈ. ಜಬ್ಬಾರ್ (38) ಮತ್ತು ಮೊಹಮ್ಮದ್ ಕುಂಜ್ಹಿ (48) ಎಂಬುವರನ್ನು ಬಂಧಿಸಲಾಗಿದೆ.
ಐವರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಹಲವು ದಿನಗಳಿಂದ ಮಾರಾಟ ನಡೆಸುತ್ತಿದ್ದಾಗಿ ಒಪ್ಪಿಕೊಂಡಿದ್ದಾರೆ.
ಕೇರಳದಿಂದ ತಂದು ಕೊಡಗಿನಲ್ಲಿ ಮಾರಾಟ ಮಾಡಿ ಹಣ ಗಳಿಸುತ್ತಿದ್ದುದಾಗಿಯೂ ಹೇಳಿಕೊಂಡಿದ್ದಾರೆ. ಇವರು ನೀಡಿದ ಮಾಹಿತಿ ಆಧರಿಸಿ ಇತರೆ ಪ್ರಕರಣಗಳ ಪತ್ತೆಗೂ ಪೊಲೀಸರು ಜಾಲ ಬೀಸಿದ್ದಾರೆ.
ಎಸ್ಪಿ ಮೆಚ್ಚುಗೆ
ವಿರಾಜಪೇಟೆ ಉಪವಿಭಾಗದ ಡಿವೈಎಸ್ಪಿ ಮೋಹನ್ ಕುಮಾರ್, ವೃತ್ತ ನಿರೀಕ್ಷಕರಾದ ಪಿ. ಅನೂಪ್ ಮಾದಪ್ಪ, ವಿರಾಜಪೇಟೆ ನಗರ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಪ್ರಮೋದ್ ಮತ್ತು ಸಿಬ್ಬಂದಿಗಳನ್ನು ಒಳಗೊಂಡ ತನಿಖಾ ತಂಡ ಈ ಕಾರ್ಯಾಚರಣೆ ನಡೆಸಿದೆ ಎಂದು ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕ ರಾಮರಾಜನ್ ತಿಳಿಸಿದ್ದಾರೆ.
ಈ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ ಎಲ್ಲಾ ಪೊಲೀಸ್ ಅಧಿಕಾರಿಗಳನ್ನು ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ. ರಾಮರಾಜನ್ ಅವರು ಶ್ಲಾಘಿಸಿ ಬಹುಮಾನ ಘೋಷಿಸಿದ್ದಾರೆ.