Mysore Muda Scam: ಕುಮಾರಸ್ವಾಮಿ ಎಂದಿಗೂ ಹಿಟ್ ಆಂಡ್ ರನ್ ಕೇಸ್, ಅವರನ್ನು ಬಂಧಿಸುವ ಪರಿಸ್ಥಿತಿ ಸದ್ಯಕ್ಕಿಲ್ಲ, ಸಿಎಂ ಸಿದ್ದರಾಮಯ್ಯ
Aug 21, 2024 02:01 PM IST
ಕೊಪ್ಪಳದ ಗಿಣಿಗೇರಾದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿದರು,
- CM On HDK ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಕುರಿತು ಕೊಪ್ಪಳದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.ವಿಶೇಷವಾಗಿ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರ ಆರೋಪಗಳಿಗೆ ಉತ್ತರಿಸಿದರು.
ಕೊಪ್ಪಳ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪ್ರಕರಣದಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ರಾಜ್ಯಪಾಲರು, ತನ್ನ ವಿರುದ್ದ ಮಾತ್ರ ಯಾವುದೇ ತನಿಖಾ ವರದಿಯನ್ನು ಆಧರಿಸದೇ ಪ್ರಾಸಿಕ್ಯೂಷನ್ ಗೆ ಅನುಮತಿ ಅನುಮತಿ ನೀಡಿದ್ದಾರೆ. ಇದು ತಾರತಮ್ಯವಲ್ಲವೇ, ಅವರ ವಿರುದ್ದ ವಿಚಾರಣೆಗಾಗಿ ರಾಜ್ಯಪಾಲರಿಗೆ ಪ್ರಾಸಿಕ್ಯೂಷನ್‌ಗೆ ಲೋಕಾಯುಕ್ತ ಕೇಳಿದೆ. ಅನುಮತಿಗಾಗಿ ಕಾಯುತ್ತಿರಬಹುದು. ಹಾಗೆಂದು ಕುಮಾರಸ್ವಾಮಿ ಅವರ ಬಂಧನ ಮಾಡುವ ಪರಿಸ್ಥಿತಿಯಂತೂ ಸದ್ಯಕ್ಕೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ವಿಜಯಪುರ ಜಿಲ್ಲೆ ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸಲೆಂದು ತೆರಳಲು ಕೊಪ್ಪಳ ಜಿಲ್ಲೆ ಗಿಣಿಗೇರಾ ಏರ್ ಸ್ಟ್ರಿಪ್‌ಗೆ ಬುಧವಾರ ಆಗಮಿಸಿದ ಸಿದ್ದರಾಮಯ್ಯ ಸುದ್ದಿಗಾರರ ಜತೆಗೆ ಮಾತನಾಡಿದರು.
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ವಿರುದ್ಧ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸುವ ಬಗ್ಗೆಯೇ ಮುಖ್ಯಮಂತ್ರಿಗಳು ಯೋಚಿಸುತ್ತಿದ್ದಾರೆ ಎಂಬ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತಾ, ಕುಮಾರಸ್ವಾಮಿಯವರನ್ನು ಬಂಧಿಸುವ ಬಗ್ಗೆ ಈಗಲೇ ಏನನ್ನೂ ಹೇಳಲಾಗುವುದಿಲ್ಲ. ಆದರೆ ಈ ಪ್ರಕರಣ ಸಂಬಂಧಪಟ್ಟಂತೆ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಬಹುದು ಎಂಬ ಭಯ ಅವರನ್ನು ಕಾಡುತ್ತಿದೆ. ಅವರ ವಿರುದ್ಧ ಲೋಕಾಯುಕ್ತ ಎಸ್ ಐ ಟಿಯವರು ತನಿಖಾ ವರದಿ ನೀಡಿ ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಿದ್ದಾಗ್ಯೂ , ರಾಜ್ಯಪಾಲರಿಂದ ಯಾವುದೇ ಕ್ರಮವಾಗದ ಕಾರಣ, ಎಸ್ ಐ ಟಿ ಮತ್ತೊಮ್ಮೆ ಅರ್ಜಿ ಸಲ್ಲಿಸಿದೆ ಎಂದರು.
ಕುಮಾರಸ್ವಾಮಿಯವರು ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾತಿಯನ್ನು ಬಿಡುಗಡೆ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ವಿಚಾರದ ಬಗ್ಗೆ ತನಗೆ ಮಾಹಿತಿಯಿಲ್ಲವೆಂದು ತಿಳಿಸಿದ ಮುಖ್ಯಮಂತ್ರಿಗಳು, ಕುಮಾರಸ್ವಾಮಿಯವರದು ಎಂದಿಗೂ ಹಿಟ್ ಎಂಡ್ ರನ್ ಕೇಸ್ ಎಂದರು.
ಅಭಿವೃದ್ಧಿ ಕೆಲಸದಲ್ಲಿ ರಾಜಕೀಯವಿಲ್ಲ
ಕೊಪ್ಪಳ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಸೇರಿದಂತೆ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿಗಳು ಉತ್ತರಿಸುತ್ತಾ, ಸರ್ಕಾರ ಅಭಿವೃದ್ಧಿ ಕೆಲಸದಲ್ಲಿ ರಾಜಕೀಯ ಮಾಡದೇ , ಜಿಲ್ಲೆಯ ಜನರ ಹಾಗೂ ಇಲ್ಲಿನ ಅಭಿವೃದ್ಧಿ ಪರವಾಗಿಯೇ ನಮ್ಮ ನಿರ್ಣಯಗಳಿರುತ್ತವೆ. ಕೊಪ್ಪಳ ಜಿಲ್ಲೆಯ ಬಗ್ಗೆ ವಿಶೇಷ ಕಾಳಜಿಯಿದ್ದು, ಇಲ್ಲಿನ ಜನರಿಗೆ ನ್ಯಾಯ ಒದಗಿಸುವ ಕೆಲಸ ಮಾಡಲಿದ್ದೇನೆ ಎಂದು ಸಿದ್ದರಾಯ್ಯ ಹೇಳಿದರು.
ಬೆಂಬಲ ಬೆಲೆ ಕುರಿತಂತೆ ಕೇಂದ್ರಕ್ಕೆ ಪತ್ರ
ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡುವ ಬಗ್ಗೆ ಮಾತನಾಡಿ, ಹೆಸರುಕಾಳು ಬೆಳೆಗೆ ಬೆಂಬಲ ಬೆಲೆ ನೀಡುವ ಬಗ್ಗೆ ಶೀಘ್ರವಾಗಿ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಪತ್ರ ಬರೆಯಲಾಗಿದೆ ಎಂದು ಸಿಎಂ ತಿಳಿಸಿದರು.
ಡಿಸಿಎಂ ಡಿ.ಕೆ.ಶಿವಕುಮಾರ್,ಸಚಿವ ಎಂ.ಬಿ.ಪಾಟೀಲ್ ಹಾಗೂ ಸ್ಥಳೀಯ ನಾಯಕರು, ಅಧಿಕಾರಿಗಳು ಹಾಜರಿದ್ದರು.