logo
ಕನ್ನಡ ಸುದ್ದಿ  /  ಕರ್ನಾಟಕ  /  ಕನ್ನಡ ರಾಜ್ಯೋತ್ಸವ 2024: ಕರಾವಳಿ ಕರ್ನಾಟಕದ ಬಗ್ಗೆ ತಿಳಿಯಬೇಕಾದ 10 ವೈಶಿಷ್ಟ್ಯಗಳು, ಬ್ಯಾಂಕಿಂಗ್‌ , ಮೀನುಗಾರಿಕೆ, ದೇಗುಲ, ಬೀಚ್‌ಗಳವರೆಗೆ

ಕನ್ನಡ ರಾಜ್ಯೋತ್ಸವ 2024: ಕರಾವಳಿ ಕರ್ನಾಟಕದ ಬಗ್ಗೆ ತಿಳಿಯಬೇಕಾದ 10 ವೈಶಿಷ್ಟ್ಯಗಳು, ಬ್ಯಾಂಕಿಂಗ್‌ , ಮೀನುಗಾರಿಕೆ, ದೇಗುಲ, ಬೀಚ್‌ಗಳವರೆಗೆ

Umesha Bhatta P H HT Kannada

Oct 27, 2024 10:23 AM IST

google News

ಕರ್ನಾಟಕದ ಕರಾವಳಿ ಹಲವು ವಿಶೇಷಗಳ ಸಂಗಮ. ಉದ್ಯಮದಿಂದ ಆಹಾರ, ಕೃಷಿಯಿಂದ ಖುಷಿ ಹಂಚುವ ತಾಣವಾಗಿ ವಿಸ್ತರಣೆಗೊಂಡಿದೆ

    •  ಕನ್ನಡ ರಾಜ್ಯೋತ್ಸವ 2024 (karnataka rajyotsava 2024) ಪ್ರಯುಕ್ತ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡವು ಕರ್ನಾಟಕದ ಕರಾವಳಿ ಪ್ರದೇಶದ ವಿಶೇಷತೆಗಳನ್ನು ಇಲ್ಲಿ ಪಟ್ಟಿ ಮಾಡಿದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳು ಹಲವು ಕಾರಣಗಳಿಂದ ಗಮನ ಸೆಳೆದಿವೆ. ಅದರ ವಿವರ ಇಲ್ಲಿದೆ
ಕರ್ನಾಟಕದ ಕರಾವಳಿ ಹಲವು ವಿಶೇಷಗಳ ಸಂಗಮ. ಉದ್ಯಮದಿಂದ ಆಹಾರ, ಕೃಷಿಯಿಂದ ಖುಷಿ ಹಂಚುವ ತಾಣವಾಗಿ ವಿಸ್ತರಣೆಗೊಂಡಿದೆ
ಕರ್ನಾಟಕದ ಕರಾವಳಿ ಹಲವು ವಿಶೇಷಗಳ ಸಂಗಮ. ಉದ್ಯಮದಿಂದ ಆಹಾರ, ಕೃಷಿಯಿಂದ ಖುಷಿ ಹಂಚುವ ತಾಣವಾಗಿ ವಿಸ್ತರಣೆಗೊಂಡಿದೆ

ಕನ್ನಡ ನಾಡಿನ ಕರಾವಳಿ ಕನ್ನಡ ದೇವಿಯ ಪ್ರಭಾವಳಿ ಎನ್ನುವ ಮಸಣದ ಹೂವು ಚಿತ್ರದ ಹಾಡನ್ನು ನೀವು ಆಲಿಸಿರಬಹುದು. ಆ ಹಾಡು ಸಂಪೂರ್ಣ ಕರಾವಳಿ ಚಿತ್ರಣವನ್ನು ಕಲ್ಪಿಸಿಕೊಡುತ್ತದೆ. ಅಷ್ಟರ ಮಟ್ಟಿಗೆ ಕರಾವಳಿ ಕರ್ನಾಟಕದ ಗಟ್ಟಿಯಾದ ನಂಟು ಹೊಂದಿದೆ. ಹಲವಾರು ವಿಷಯದಲ್ಲಿ ಕರ್ನಾಟಕದ ಕರಾವಳಿ ಜಗತ್ತಿನ ಗಮನ ಸೆಳೆದಿದೆ

1. ಕರ್ನಾಟಕದ ಕರಾವಳಿ ದಕ್ಷಿಣ ಕನ್ನಡದಿಂದ ಉತ್ತರ ಕನ್ನಡದವರೆಗೆ ಹಬ್ಬಿದೆ. ದಕ್ಷಿಣದಲ್ಲಿ ಕೇರಳದ ಕಾಸರಗೋಡು, ಉತ್ತರದಲ್ಲಿ ಗೋವಾದ ಕರಾವಳಿ ನಂಟು ಹೊಂದಿದೆ ಸುಮಾರು 300 ಕಿ.ಮಿ ಉದ್ದದ ಅರಬ್ಬಿ ಸಮುದ್ರದ ಗುಂಟ ಇರುವ ಕರಾವಳಿ ಅತಿ ದಕ್ಷಿಣ ಭಾರತದ ಉದ್ದನೆಯ ಕರಾವಳಿ ಹೊಂದಿರುವ ನಾಲ್ಕನೇ ರಾಜ್ಯ. ತಮಿಳುನಾಡು(1,076 ಕಿ,ಮಿ), ಆಂಧ್ರಪ್ರದೇಶ( 972 ಕಿ.ಮಿ), ಕೇರಳ( 590 ಕಿ.ಮಿ).

2. ಕರಾವಳಿಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಪ್ರಮುಖ ಜಿಲ್ಲೆಗಳು. ದಕ್ಷಿಣ ಕನ್ನಡ ಹಾಗೂ ಉಡುಪಿ ಕೊಂಚ ಒಂದೇ ರೀತಿಯ ಸಂಸ್ಕೃತಿ ಹೊಂದಿದ್ದರೆ, ಉತ್ತರ ಕನ್ನಡ ಜಿಲ್ಲೆಯ ವಿಭಿನ್ನತೆಯ ಬೀಡು. ಮೂರೂ ಜಿಲ್ಲೆಗಳಲ್ಲಿ ಅರಣ್ಯ ಪ್ರದೇಶವಿದ್ದರೂ ಉತ್ತರ ಕನ್ನಡ ಮಾತ್ರ ಕರ್ನಾಟಕದ ಅತಿ ಹೆಚ್ಚು ಅರಣ್ಯ 8.28 ಹೆಕ್ಟರಗಳು ಇಉರುವುದು ಇದೇ ಜಿಲ್ಲೆಯಲ್ಲಿಯೇ.

3 .ಕರ್ನಾಟಕದ ಕರಾವಳಿ ಪ್ರದೇಶ ಜಗತ್ತಿನ ಗಮನ ಸೆಳೆದಿರುವುದು ಬ್ಯಾಂಕಿಂಗ್‌ ಕ್ಷೇತ್ರದಲ್ಲಿ. ಭಾರತದಲ್ಲಿ ಬ್ಯಾಂಕಿಂಗ್‌ ಬಲ ಸಿಕ್ಕಿದ್ದೇ ಕರಾವಳಿಯಲ್ಲಿ ಆರಂಭಗೊಂಡ ಪ್ರಮುಖ ಬ್ಯಾಂಕ್‌ಗಳಿಂದ. ಅದರಲ್ಲಿ ಕೆನರಾ, ಕಾರ್ಪೋರೇಷನ್, ವಿಜಯಾ( ಈಗ ಬ್ಯಾಂಕ್‌ ಆಫ್‌ ಬರೋಡಾ, ಸಿಂಡಿಕೇಟ್‌( ಈಗ ಕೆನರಾ). ಕರ್ನಾಟಕ ಬ್ಯಾಂಕ್‌ ಕೂಡ ಈಗ ಶತಮಾನದ ಸಂಭ್ರಮದಲ್ಲಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿಯನ್ನು ಬ್ಯಾಂಕಿಂಗ್‌ ತೊಟ್ಟಿಲು ಎಂದೇ ಕರೆಯಲಾಗುತ್ತದೆ.

4. ಕರಾವಳಿಯು ಸಮುದ್ರದ ಜತೆಗೆ ಪಶ್ಚಿಮ ಘಟ್ಟವನ್ನು ತನ್ನ ಸೆರಗಿನಲ್ಲಿ ಇಟ್ಟುಕೊಂಡಿದೆ. ಇಲ್ಲಿನ ಜೀವವೈವಿಧ್ಯವು ಅತ್ಯಮೂಲ್ಯವಾಗಿದೆ. ಹಲವು ಬಗೆಯ ಪ್ರಾಣಿ, ಪಕ್ಷಿ, ಕೀಟಗಳು, ಮರಗಳ ಸಂಕುಲ ಕರಾವಳಿ ಪಶ್ಚಿಮ ಘಟ್ಟದಲ್ಲಿದೆ. ಕರಾವಳಿಯ ಕುದುರೆಮುಖ ಭಾಗದಲ್ಲಿ ಅಪರೂಪದ ಕಪ್ಪೆಗಳ ಸಂತತಿಯೂ ಅಧಿಕವಾಗಿದೆ. ಸಮುದ್ರ ಆನೆ ಕೂಡ ಇಲ್ಲಿನ ವಿಶೇಷವೇ. ಹಾರ್ನ್‌ ಬಿಲ್‌ ಕರಾವಳಿಯ ಆಕರ್ಷಕ ಹಕ್ಕಿ.

5.ಕರಾವಳಿಯ ಮತ್ತೊಂದು ವಿಶೇಷ ಯಕ್ಷಗಾನ. ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಿನ್ನವಾಗಿ ಕರೆಯುವ ಯಕ್ಷಗಾನದ ಆಶಯ ಒಂದೇ. ಮೂರೂ ಜಿಲ್ಲೆಗಳಲ್ಲೂ ನೂರಾರು ಯಕ್ಷಗಾನ ಮೇಳದ ತಂಡಗಳಿವೆ. ಸಾವಿರಾರು ಯಕ್ಷಗಾನ ಕಲಾವಿದರು ಇದಕ್ಕೆ ಜೀವ ತುಂಬಿದ್ಧಾರೆ. ಈಗಲೂ ಅದು ಮುಂದುವರಿದಿದೆ. ಪ್ರತಿ ಹಳ್ಳಿಯಲ್ಲೂ ಯಕ್ಷಗಾನದ ಚಟುವಟಿಕೆ ಇಲ್ಲಿನ ಕಲಾ ಜೀವಂತಿಕೆಯ ಸಂಕೇತ.

6 . ಕರಾವಳಿ ಎನ್ನುವುದು ದೈವದ ನೆಲೆ. ದೈವವನ್ನು ನಂಬುವ ಜನ ಅಧಿಕವಾಗಿದ್ದಾರೆ. ದೈವ ಸಂಸ್ಕೃತಿಯ ದೊಡ್ಡ ಇತಿಹಾಸವೇ ಇಲ್ಲಿದೆ. ಅಷ್ಟರ ಮಟ್ಟಿಗೆ ದೇವರ ಬಗ್ಗೆ ನಂಬಿಕೆ, ಗೌರವವಿದೆ. ಮೂರೂ ಜಿಲ್ಲೆಗಳಲ್ಲಿ ನೂರಾರು ದೇಗುಲಗಳು ಜನರನ್ನು ಸೆಳೆಯುತ್ತವೆ. ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ಉಡುಪಿಯ ಅಷ್ಟ ಮಠಗಳು, ಕೃಷ್ಣ ದೇಗುಲ, ಕೊಲ್ಲೂರು ಮೂಕಾಂಬಿಕೆ, ಇಡಗುಂಜಿ ಗಣೇಶ, ಶಿರಸಿ ಮಾರಿಕಾಂಬ, ಗೋಕರ್ಣ ಮಹಾಬಲೇಶ್ವರ ಪ್ರಮುಖ ದೇಗುಲ ಕೇಂದ್ರಗಳು. ಸಹಸ್ರಾರು ದೇಗುಲಗಳನ್ನು ನಂಬಿ ಇಲ್ಲಿಗೆ ಗಣ್ಯರು, ಭಕ್ತರು ಬರುತ್ತಾರೆ.

7 ಕರಾವಳಿಯ ಪ್ರವಾಸೋದ್ಯಮ ಪ್ರಮುಖವಾದ ಶಕ್ತಿ. ಅದರಲ್ಲೂ ಬೀಚ್‌ಗಳು ಇಲ್ಲಿನ ಪ್ರಮುಖ ಆಕರ್ಷಣೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ 100 ಕ್ಕೂ ಅಧಿಕ ಬೀಚ್‌ಗಳಿದ್ದರೆ, 20ಕ್ಕೂ ಹೆಚ್ಚಿನ ಬೀಚ್‌ಗಳು ಜನಾಕರ್ಷಕವಾಗಿವೆ. ನಿತ್ಯ ಸಹಸ್ರಾರು ಮಂದಿ ಬೀಚ್ ಗಳಿಗೆ ಆಗಮಿಸಿ ಸಂಭ್ರಮಿಸುತ್ತಾರೆ. ವಿದೇಶಿಗರೂ ಬರುತ್ತಾರೆ. ದೇಗುಲ ದರ್ಶನದ ಜತೆಗೆ ಹಲವು ಪ್ರವಾಸಿ ತಾಣಗಳೂ ಕರಾವಳಿಯ ಆಕರ್ಷಣೆ.

8 . ಉದ್ಯಮ ವಲಯದಲ್ಲಿ ಕರಾವಳಿಯು ಪ್ರಮುಖ ವಹಿವಾಟು. ಬ್ಯಾಂಕಿಂಗ್‌ನೊಟ್ಟಿಗೆ ಹೆಂಚು, ಇಟ್ಟಿಗೆ ಸಹಿತ ಹಲವಾರು ಉದ್ಯಮಗಳು ಇಲ್ಲಿ ನೆಲೆ ಕಂಡು ಕೊಂಡಿವೆ. ನೇರವಾಗಿ ದುಬೈ, ಸೌದಿ ಅರೇಬಿಯಾ ಸಹಿತ ಗಲ್ಫ್‌ ದೇಶಗಳೊಂದಿಗೆ ನಂಟು ಇರುವುದರಿಂದಲೂ ವಹಿವಾಟು ಹೊರ ಭಾಗಕ್ಕೂ ಹಬ್ಬಿದೆ.

9 ಕರಾವಳಿಯ ಜೀವನಾಡಿಯೇ ಮೀನುಗಾರಿಕೆ. ಲಕ್ಷಾಂತರ ಮೀನುಗಾರರು ಮೂರೂ ಜಿಲ್ಲೆಗಳಲ್ಲಿ ಸಮುದ್ರವನ್ನೇ ನಂಬಿ ಬದುಕುತ್ತಾರೆ. ಹತ್ತಾರು ಬಗೆಯ ಮೀನುಗಳು ಇಲ್ಲಿ ಸಿಗುತ್ತವೆ. ವಾರ್ಷಿಕ 8,000 ಕೋಟಿ ರೂ.ಗೂ ಅಧಿಕ ವಹಿವಾಟು ಕರಾವಳಿ ಭಾಗದಲ್ಲಿ ಮೀನುಗಾರಿಕೆ ಒಂದರಿಂದಲೇ ನಡೆಯುತ್ತದೆ. ಬೆಂಗಳೂರು ಸಹಿತ ನಾನಾ ಭಾಗಗಳಿಂದ ಕರಾವಳಿಯಿಂದಲೇ ಬಗೆಬಗೆಯ ಮೀನು ಸರಬರಾಜು ಆಗುತ್ತದೆ.

10 ಕರಾವಳಿ ಭಾಗದ ಜನ ಹೊಸತನಕ್ಕೆ ತುಡಿಯುವವರು. ಏನೇ ಹೊಸತು ಬಂದರೂ ಅದನ್ನು ಮೊದಲು ಅನುಸರಿಸುವವರು. ಹೊಸದನ್ನು ತಾವೇ ಅನ್ವೇಷಿಸುವವರು. ಕಷ್ಟಗಳ ಜತೆಗೆ ಸ್ಮಾರ್ಟ್‌ ಆಗಿ ದುಡಿಯುವ ಇಲ್ಲಿನ ಜನರ ಶ್ರಮ ಬದುಕಿನ ಸಂಸ್ಕೃತಿಯೂ ಗಟ್ಟಿಯಾಗಿದೆ. ಕೃಷಿ, ಮೀನುಗಾರಿಕೆ, ಉದ್ಯಮ ಸಹಿತ ಎಲ್ಲಾ ವಲಯದಲ್ಲೂ ಇದರ ಛಾಪು ಇದೆ. ಅದರಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡದ ವಿಭಿನ್ನ ಪ್ರತಿಭೆಗಳ ಸಂಗಮವೂ ಹೌದು.

 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ