logo
ಕನ್ನಡ ಸುದ್ದಿ  /  ಕರ್ನಾಟಕ  /  ಕನ್ನಡ ರಾಜ್ಯೋತ್ಸವ 2024: ಟೀಮ್ ಇಂಡಿಯಾದಲ್ಲಿ ಮಿಂಚಿದ ಅಗ್ರ 10 ಖ್ಯಾತ ಕ್ರಿಕೆಟಿಗರಿವರು

ಕನ್ನಡ ರಾಜ್ಯೋತ್ಸವ 2024: ಟೀಮ್ ಇಂಡಿಯಾದಲ್ಲಿ ಮಿಂಚಿದ ಅಗ್ರ 10 ಖ್ಯಾತ ಕ್ರಿಕೆಟಿಗರಿವರು

Jayaraj HT Kannada

Oct 26, 2024 04:04 PM IST

google News

ಕನ್ನಡ ರಾಜ್ಯೋತ್ಸವ 2024: ಟೀಮ್ ಇಂಡಿಯಾದಲ್ಲಿ ಮಿಂಚಿದ ಅಗ್ರ 10 ಖ್ಯಾತ ಕ್ರಿಕೆಟಿಗರಿವರು

    • ಕನ್ನಡ ರಾಜ್ಯೋತ್ಸವ 2024ರ (Karnataka Rajyotsava) ಸಮಯದಲ್ಲಿ ಕರ್ನಾಟಕದ ಸಾರ್ವಕಾಲಿಕ ಹತ್ತು ಖ್ಯಾತ ಕ್ರಿಕೆಟಿಗರು (Top 10 popular Cricketers of Karnataka) ಯಾರು ಎಂಬುದನ್ನು ನೋಡೋಣ. ಈ ಪಟ್ಟಿಯಲ್ಲಿ ಹಾಲಿ ಕ್ರಿಕೆಟಿಗರ ಹೆಸರು ನಮೂದಿಲ್ಲ.
ಕನ್ನಡ ರಾಜ್ಯೋತ್ಸವ 2024: ಟೀಮ್ ಇಂಡಿಯಾದಲ್ಲಿ ಮಿಂಚಿದ ಅಗ್ರ 10 ಖ್ಯಾತ ಕ್ರಿಕೆಟಿಗರಿವರು
ಕನ್ನಡ ರಾಜ್ಯೋತ್ಸವ 2024: ಟೀಮ್ ಇಂಡಿಯಾದಲ್ಲಿ ಮಿಂಚಿದ ಅಗ್ರ 10 ಖ್ಯಾತ ಕ್ರಿಕೆಟಿಗರಿವರು (Agencies and Instagram)

ಕರ್ನಾಟಕವು ಹಲವು ದಿಗ್ಗಜ ಕ್ರಿಕೆಟಿಗರಿಗೆ ಜನ್ಮ ನೀಡಿದೆ. ರಾಜ್ಯದ ಹಲವಾರು ಕ್ರಿಕೆಟಿಗರು ಭಾರತ ಕ್ರಿಕೆಟ್‌ ತಂಡದ ಪರ ಆಡಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಈಗ ಟೀಮ್‌ ಇಂಡಿಯಾದಲ್ಲಿ ಕೆಎಲ್‌ ರಾಹುಲ್‌, ಪ್ರಸಿದ್ಧ್‌ ಕೃಷ್ಣ ಸೇರಿದಂತೆ ಅಪರೂಪಕ್ಕೊಮ್ಮೆ ಮನೀಶ್‌ ಪಾಂಡೆ, ಮಯಾಂಕ್‌ ಅಗರ್ವಾಲ್‌ , ಕರುಣ್‌ ನಾಯರ್‌ ಕಾಣಿಸಿಕೊಳ್ಳುತ್ತಾರೆ. ಆದರೆ, ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿರುವ ಹಲವು ದಿಗ್ಗಜ ಕ್ರಿಕೆಟಿಗರು ಕನ್ನಡ ನಾಡಿನ ಹೆಮ್ಮೆಯಾಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹಲವು ದಾಖಲೆ, ವಿಶ್ವಕಪ್‌ ಪಂದ್ಯಗಳಲ್ಲಿ ಆಡಿದ ಅನುಭವ ಅವರಿಗಿದೆ. ಕರ್ನಾಟಕವು ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿರುವಾಗ ನಾಡು ಕಂಡ 10 ಖ್ಯಾತ ಕ್ರಿಕೆಟಿಗರನ್ನು ನೋಡೋಣ.

ರಾಹುಲ್‌ ದ್ರಾವಿಡ್‌

ಜಾಗತಿಕ ಕ್ರಿಕೆಟ್‌ ಕಂಡ ಅತ್ಯುನ್ನತ ಕ್ರಿಕೆಟಿಗರಲ್ಲಿ ಒಬ್ಬರು. ಭಾರತ ಕ್ರಿಕೆಟ್‌ ತಂಡದ ಗೋಡೆ (ದಿ ವಾಲ್) ಎಂದೇ ಕರೆಸಿಕೊಳ್ಳುವ ದ್ರಾವಿಡ್‌, ಟೆಸ್ಟ್‌ ಕ್ರಿಕೆಟ್‌ನಲ್ಲಿ ಹಲವು ದಾಖಲೆ ಬರೆದಿದ್ದಾರೆ. ಭಾರತದ ಅಗ್ರಗಣ್ಯ ಟೆಸ್ಟ್‌ ಆಟಗಾರನಾಗಿ, ಕೋಚ್‌ ಆಗಿ ಸೇವೆ ಸಲ್ಲಿಸಿದ್ದಾರೆ. ಭಾರತದ ಪರ 164 ಟೆಸ್ಟ್‌ ಪಂದ್ಯಗಳಲ್ಲಿ 13288 ರನ್‌ ಗಳಿಸಿದ್ದಾರೆ. ಇದರಲ್ಲಿ 36 ಶತಕ ಹಾಗೂ 5 ದ್ವಿಶತಕಗಳಿವೆ. ಬರೋಬ್ಬರಿ 344 ಏಕದಿನ ಪಂದ್ಯಗಳಲ್ಲಿ 10889 ರನ್‌ ಗಳಿಸಿದ್ದಾರೆ.

ಅನಿಲ್‌ ಕುಂಬ್ಳೆ

ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ (619) ವಿಕೆಟ್‌ ಕಬಳಿಸಿದ ಭಾರತೀಯ ಎಂಬ ದಾಖಲೆ ಕುಂಬ್ಳೆ ಹೆಸರಲ್ಲಿದೆ. ಇವರ ಗೂಗ್ಲಿ ಎಸೆತಕ್ಕೆ ಘಟಾನುಘಟಿ ಬ್ಯಾಟರ್‌ಗಳ ವಿಕೆಟ್‌ ಹಾರಿತ್ತು. ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಕುಂಬ್ಳೆ ಪಡೆದ ವಿಕೆಟ್‌ಗಳ ಸಂಖ್ಯೆ 956. ಇದು ಭಾರತೀಯರ ಪೈಕಿ ಅತಿ ಹೆಚ್ಚು ವಿಕೆಟ್‌ ಆದರೆ, ಜಾಗತಿಕ ಮಟ್ಟದಲ್ಲಿ ಕುಂಬ್ಳೆಗೆ ನಾಲ್ಕನೇ ಸ್ಥಾನ. ಭಾರತದ ಪರ ಅತಿ ಹೆಚ್ಚು ಟೆಸ್ಟ್‌ ಪಂದ್ಯ ಗೆದ್ದ ಬೌಲರ್‌ ಇವರು.

ಜಾವಗಲ್‌ ಶ್ರೀನಾಥ್

ಭಾರತ ಕ್ರಿಕೆಟ್‌ ತಂಡ ಕಂಡ ಅತ್ಯುನ್ನತ ವೇಗಿಗಳಲ್ಲಿ ಒಬ್ಬರು. ಆಡಿದ 67 ಟೆಸ್ಟ್‌ ಪಂದ್ಯಗಳಲ್ಲಿ 236 ವಿಕೆಟ್‌ ಕಬಳಿಸಿದ್ದಾರೆ. 229 ಏಕದಿನ ಪಂದ್ಯಗಳಲ್ಲಿ 315 ವಿಕೆಟ್‌ ಪಡೆದಿದ್ದಾರೆ. ರೆಫ್ರಿಯಾಗಿ ಈಗಲೂ ಹಲವು ಪಂದ್ಯಗಳ ಸಮಯದಲ್ಲಿ ಮೈದಾನದಲ್ಲಿ ಶ್ರೀನಾಥ್‌ ಕಾಣಿಸಿಕೊಳ್ಳುತ್ತಾರೆ.

ದೊಡ್ಡ ಗಣೇಶ್‌

ಮಧ್ಯಮ ವೇಗದ ಬೌಲರ್‌, ದೇಶೀಯ ಕ್ರಿಕೆಟ್‌ನಲ್ಲಿ ಕರ್ನಾಟಕ ತಂಡದ ಯಶಸ್ವಿ ಆಟಗಾರ. ಭಾರತದ ಪರ ಆಡಿದ್ದು ಕೇವಲ 4 ಟೆಸ್ಟ್‌ ಹಾಗೂ 1 ಏಕದಿನ ಪಂದ್ಯ ಮಾತ್ರ. ಆದರೆ ದೇಶಿಯ ಕ್ರಿಕೆಟ್‌ನಲ್ಲಿ ಮಿಂಚು ಹರಿಸಿ ಈಗಲೂ ಕರ್ನಾಟಕದ ಅತ್ಯುನ್ನತ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ.

ರೋಜರ್‌ ಬಿನ್ನಿ

ಭಾರತ ಕಂಡ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರು. ತಂಡದ ಸಂಕಷ್ಟದ ಸನ್ನಿವೇಶದಲ್ಲಿ ಬ್ಯಾಟಿಂಗ್‌ ಆದರೂ ಬೌಲಿಂಗ್‌ ಆದರೂ ಯಶಸ್ವಿಯಾಗಿ ತಮ್ಮ ಜವಾಬ್ದಾರಿ ನಿರ್ವಹಿಸುತ್ತಿದ್ದರು. ಆಡಿದ 27 ಟೆಸ್ಟ್‌ ಪಂದ್ಯಗಳಲ್ಲಿ 47 ವಿಕೆಟ್‌ ಕಬಳಿಸಿದ್ದಾರೆ. ಇದೇ ವೇಳೆ 830 ರನ್‌ ಗಳಿಸಿದ್ದಾರೆ. 1983ರಲ್ಲಿ ಚೊಚ್ಚಲ ವಿಶ್ವಕಪ್‌ ಗೆದ್ದ ಭಾರತ ತಂಡದಲ್ಲಿ ಆಡಿದ ಹಿರಿಮೆ ಇವರದ್ದು. ಸದ್ಯ ಬಿಸಿಸಿಐ ಅಧ್ಯಕ್ಷರಾಗಿದ್ದಾರೆ.

ವಿಶ್ವನಾಥ್ ಗುಂಡಪ್ಪ

ಚಾಣಾಕ್ಷ ಬ್ಯಾಟರ್‌ ಎಂದೇ ಕರೆಸಿಕೊಳ್ಳುವ ಗುಂಡಪ್ಪ, ತಮ್ಮ ಸ್ಟ್ರೋಕ್‌ ಪ್ಲೇಯಿಂದ ಗಮನ ಸೆಳೆದವರು. ವೇಗ ಮತ್ತು ಸ್ಪಿನ್‌ಗಳನ್ನು ಸಮರ್ಥವಾಗಿ ಎದುರಿಸುತ್ತಿದ್ದರು. ಟೆಸ್ಟ್‌ ಕ್ರಿಕೆಟ್‌ನಲ್ಲಿ 14 ಶತಕಗಳೊಂದಿಗೆ 6080 ರನ್‌ ಪೇರಿಸಿದ್ದಾರೆ.

ವೆಂಕಟೇಶ್‌ ಪ್ರಸಾದ್‌

ಈಗಲೂ ಕಾಮೆಂಟರಿ ಹಾಗೂ ವಿಶ್ಲೇಷಣೆಯಲ್ಲಿ ಸಕ್ರಿಯರಾಗಿರುವ ವೆಂಕಟೇಶ್‌ ಪ್ರಸಾದ್‌, ಜಾವಗಲ್‌ ಶ್ರೀನಾಥ್‌ ಅವರಿದ್ದ ಕಾಲದ ಪ್ರಮುಖ ವೇಗದ ಬೌಲರ್.‌ ವಿದೇಶಿ ನೆಲದಲ್ಲಿ ಇವರ ದಾಖಲೆಗಳು ಇನ್ನೂ ಉತ್ತಮವಾಗಿವೆ. 161 ಏಕದಿನ ಪಂದ್ಯಗಳಲ್ಲಿ 196 ವಿಕೆಟ್‌ ಪಡೆದಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ 96 ವಿಕೆಟ್‌ ಕಬಳಿಸಿದ್ದಾರೆ.

ಸುನಿಲ್‌ ಜೋಶಿ

ಭಾರತದ ಮಾಜಿ ಬೌಲಿಂಗ್ ಆಲ್‌ರೌಂಡರ್ ಜೋಶಿ, ಭಾರತದ ಪರ 15 ಟೆಸ್ಟ್ ಮತ್ತು 69 ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. 69 ಏಕದಿನ ಪಂದ್ಯಗಳಲ್ಲಿ 69 ವಿಕೆಟ್‌ ಪಡೆದರೆ, 15 ಟೆಸ್ಟ್‌ ಪಂದ್ಯಗಳಲ್ಲಿ 41 ವಿಕೆಟ್‌ ಕಬಳಿಸಿದ್ದಾರೆ.

ವಿನಯ್‌ ಕುಮಾರ್‌

ದಾವಣಗೆರೆ ಎಕ್ಸ್‌ಪ್ರೆಸ್‌ ವಿನಯ್‌ ಕುಮಾರ್‌, ಭಾರತದ ಪ್ರಮುಖ ವೇಗದ ಬೌಲರ್‌ ಆಗಿದ್ದವರು. ದೇಶಿಯ ಕ್ರಿಕೆಟ್‌ನಲ್ಲಿ ಗುರುತಿಸಿಕೊಂಡು ಐಪಿಎಲ್‌ ಹಾಗೂ ಭಾರತ ತಂಡದಲ್ಲಿ ಸ್ಥಾನ ಪಡೆದ ವಿನಯ್‌, 31 ಏಕದಿನ ಪಂದ್ಯಗಳಲ್ಲಿ 38 ವಿಕೆಟ್‌ ಪಡೆದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಆಡಿದ ಏಕೈಕ ಟೆಸ್ಟ್‌ ಪಂದ್ಯದಲ್ಲಿ 1 ವಿಕೆಟ್‌ ಪಡೆದಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್‌ಗಿಂತ ಹೆಚ್ಚಾಗಿ ಕರ್ನಾಟಕ ಪರ ಹಲವು ದಾಖಲೆ ಬರೆದಿದ್ದಾರೆ.

ರಾಬಿನ್‌ ಉತ್ತಪ್ಪ

2007ರ ಏಕದಿನ ಹಾಗೂ ಟಿ20 ವಿಶ್ವಕಪ್‌ ಆಡಿದ್ದ ಉತ್ತಪ್ಪ, ಭಾರತದ ಪ್ರತಿಭಾವಂತ ಸ್ಪೋಟಕ ಬ್ಯಾಟರ್‌ಗಳಲ್ಲಿ ಒಬ್ಬರು. ಅಂತಾರಾಷ್ಟ್ರೀಯ ಪದಾರ್ಪಣೆ ಪಂದ್ಯದಲ್ಲೇ ಅಬ್ಬರಿಸಿದ್ದ ಬ್ಯಾಟರ್‌ 46 ಏಕದಿನ ಪಂದ್ಯಗಳಲ್ಲಿ 934 ರನ್‌ ಗಳಿಸಿದ್ದಾರೆ. 13 ಟಿ20 ಪಂದ್ಯಗಳಲ್ಲಿ 249 ರನ್‌ ಸಿಡಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇವರಿಂದ ಶತಕ ಸಿಡಿಸಲು ಸಾಧ್ಯವಾಗಿಲ್ಲ.

(ಈ ಸುದ್ದಿಯಲ್ಲಿ 10 ಕ್ರಿಕೆಟಿಗರ ಪಟ್ಟಿ ಮಾತ್ರ ನೀಡಲಾಗಿದೆ, ಇವರ ಹೊರತಾಗಿ ಕರ್ನಾಟಕದ ನೂರಾರು ಕ್ರಿಕೆಟಿಗರು ಜನಪ್ರಿಯತೆ ಗಳಿಸಿದ್ದಾರೆ.)

 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ