logo
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಲ್ಲಿ ಭಯೋತ್ಪಾದನಾ ಕೃತ್ಯಕ್ಕೆ ಸಂಚು: ಇಂಟರ್ಪೋಲ್ ನೆರವಿನಿಂದ ರುವಾಂಡಾದಲ್ಲಿ ಬಂಧಿತ ಎಲ್ಇಟಿ ಉಗ್ರ ಸಲ್ಮಾನ್‌ ಭಾರತಕ್ಕೆ

ಬೆಂಗಳೂರಲ್ಲಿ ಭಯೋತ್ಪಾದನಾ ಕೃತ್ಯಕ್ಕೆ ಸಂಚು: ಇಂಟರ್ಪೋಲ್ ನೆರವಿನಿಂದ ರುವಾಂಡಾದಲ್ಲಿ ಬಂಧಿತ ಎಲ್ಇಟಿ ಉಗ್ರ ಸಲ್ಮಾನ್‌ ಭಾರತಕ್ಕೆ

Umesha Bhatta P H HT Kannada

Nov 28, 2024 07:10 PM IST

google News

ಬೆಂಗಳೂರು ಸ್ಪೋಟ ಸಂಚಿನ ಪ್ರಕರಣದಲ್ಲಿ ಬೇಕಿದ್ದ ಉಗ್ರ ಸಲ್ಮಾನ್‌.

    • Bangalore Terrorist Link: ಬೆಂಗಳೂರಿನಲ್ಲಿ ಸ್ಪೋಟ ನಡೆಸಲು ತರಬೇತಿ ನೀಡಿದ ಪ್ರಕರಣ ಎದುರಿಸುತ್ತಿದ್ದ ಪಾಕಿಸ್ತಾನ ಮೂಲದ ಎಲ್‌ಇಟಿಯ ಉಗ್ರ ಸಲ್ಮಾನ್‌ನನ್ನು ಬಂಧಿಸಲಾಗಿದ್ದು. ಭಾರತಕ್ಕೆ ಕರೆ ತರಲಾಗಿದೆ.
    • ವರದಿ:ಎಚ್.ಮಾರುತಿ.ಬೆಂಗಳೂರು
ಬೆಂಗಳೂರು ಸ್ಪೋಟ ಸಂಚಿನ ಪ್ರಕರಣದಲ್ಲಿ ಬೇಕಿದ್ದ ಉಗ್ರ ಸಲ್ಮಾನ್‌.
ಬೆಂಗಳೂರು ಸ್ಪೋಟ ಸಂಚಿನ ಪ್ರಕರಣದಲ್ಲಿ ಬೇಕಿದ್ದ ಉಗ್ರ ಸಲ್ಮಾನ್‌.

ಬೆಂಗಳೂರು: ಬೆಂಗಳೂರಿನಲ್ಲಿ ಭಯೋತ್ಪಾದಕರಿಗೆ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳನ್ನು ಒದಗಿಸಲು ನೆರವು ನೀಡಿದ್ದ ಆರೋಪದಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಇ- ತೊಯ್ಬಾದ (ಎಲ್ಇಟಿ) ಉಗ್ರನೊಬ್ಬನನ್ನು ಪೂರ್ವ ಆಫ್ರಿಕಾದ ರುವಾಂಡದಿಂದ ಭಾರತದ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ. ರುವಾಂಡಾದಿಂದ ಶಂಕಿತ ಉಗ್ರ ಸಲ್ಮಾನ್ ರೆಹಮಾನ್ ಖಾನ್ ಎಂಬಾತನನ್ನು ಇಂದು ಭಾರತಕ್ಕೆ ಕರೆತರಲಾಗಿದೆ. ಬೆಂಗಳೂರಿನಲ್ಲಿ ನಡೆದ ಭಯೋತ್ಪಾದಕೆ ಚಟುವಟಿಕೆಗಳ ಹಿನ್ನೆಲೆಯಲ್ಲಿ ಇಂಟರ್ಪೋಲ್ ಈತನ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಿತ್ತು. ಮಹತ್ವದ ಬೆಳವಣಿಗೆಯಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಮತ್ತು ಇಂಟರ್ಪೋಲ್ ಜಂಟಿ ಕಾರ್ಯಾಚರಣೆ ನಡೆಸಿ ಶಂಕಿತ ಉಗ್ರನನ್ನು ಸಿಬಿಐ ಭಾರತಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದೆ.

ಭಯೋತ್ಪಾದನೆ ಸಂಬಂಧಿತ ಹಲವಾರು ಅಪರಾಧ ಕೃತ್ಯಗಳಿಗೆ ಸಂಬಂಧಿಸಿದಂತೆ ಈತ ಎನ್ಐಎಗೆ ಬೇಕಾಗಿದ್ದ. ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಇ- ತೊಯ್ಬಾ ಸದಸ್ಯನಾಗಿರುವ ಸಲ್ಮಾನ್, ಬೆಂಗಳೂರಿನಲ್ಲಿ ಭಯೋತ್ಪಾದನೆ ಚಟುವಟಿಕೆಗಳಿಗಾಗಿ ಶಸ್ತ್ರಾಸ್ತ್ರ, ಮದ್ದುಗುಂಡು ಮತ್ತು ಸ್ಫೋಟಕಗಳನ್ನು ಪೂರೈಸಲು ನೆರವು ನೀಡುತ್ತಿದ್ದ ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ.

ಏನಿದು ಪ್ರಕರಣ

ಬೆಂಗಳೂರಿನಲ್ಲಿ ಭಯೋತ್ಪಾದನನಾ ಸಂಚು ರೂಪಿಸಿದ್ದಕ್ಕೆ ಈತನ ವಿರುದ್ಧ ರಾಷ್ಟ್ರೀಯ ತನಿಖಾ ದಳ 2023ರಲ್ಲಿ ಪ್ರಕರಣ ದಾಖಲಿಸಿತ್ತು.

ಬೆಂಗಳೂರಿನ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಕೂಡಾ ದಾಖಲಾಗಿತ್ತು. ಎನ್ಐಎ ಮನವಿಯ ಮೇರೆಗೆ 2024 ಆಗಸ್ಟ್ 2ರಂದು ಇಂಟರ್ಪೋಲ್, ಈತನ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಿತ್ತು.

ಶಂಕಿತ ಲಷ್ಕರ್ ಉಗ್ರರು ಬೆಂಗಳೂರಿನಲ್ಲಿ ರೂಪಿಸಿದ ಸಂಚೇನು

ಬೆಂಗಳೂರಿನಲ್ಲಿ ಸ್ಫೋಟ ಕೃತ್ಯ ನಡೆಸಲು ಸಂಚು ರೂಪಿಸಲಾಗುತ್ತಿದೆ ಎಂಬ ಸುಳಿವು ಸಿಕ್ಕ ಕಾರಣ 2023ರ ಜು.18ರಂದು ಬೆಂಗಳೂರು ಪೊಲೀಸರು ಪ್ರಕರಣ ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಜು.19ರಂದು ದಾಳಿ ನಡೆಸಿದ ಪೊಲೀಸರು ಐವರು ಶಂಕಿತ ಲಷ್ಕರ್ ಉಗ್ರರನ್ನು ಬಂಧಿಸಿದ್ದರು.

ಶಂಕಿತರ ಬಂಧನದ ವೇಳೆ ಅವರಿಂದ 7 ನಾಡ ಪಿಸ್ತೂಲುಗಳು, 45 ಜೀವಂತ ಗುಂಡುಗಳು, ವಾಕಿಟಾಕಿಗಳು, ಡ್ಯಾಗರ್‌ಗಳು ಮತ್ತು 12 ಮೊಬೈಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಈ ಪ್ರಕರಣವು ರಾಷ್ಟ್ರೀಯ ಭದ್ರತೆಯ ವಿಚಾರಕ್ಕೆ ಸಂಬಂಧಿಸಿದ ಕಾರಣ 2023ರ ಅಕ್ಟೋಬರ್‌ನಲ್ಲಿ ಇದರ ತನಿಖೆಯ ಹೊಣೆಗಾರಿಕೆ ಎನ್‌ಐಎ ಹೆಗಲೇರಿತ್ತು.

ಸಲ್ಮಾನ್‌ ಯಾರು

ಸಿಬಿಐ ಇಂಟರ್ಪೋಲ್ ನ ನ್ಯಾಷನಲ್ ಸೆಂಟ್ರಲ್ ಬ್ಯೂರೊ ಸಹಾಯದಿಂದ ರುವಾಂಡಾದ ರಾಜಧಾನಿ ಕಿಗಾಲಿಯಲ್ಲಿ ಸಲ್ಮಾನ್ ನ್ನು ಪತ್ತೆ ಹಚ್ಚಿ ಭಾರತಕ್ಕೆ ಕರೆತಂದಿದೆ. ಇತ್ತೀಚೆಗಷ್ಟೇ ಇದೇ ರೀತಿಯ ಇನ್ನೆರಡು ಕಾರ್ಯಾಚರಣೆಗಳಲ್ಲಿ ಸೌದಿ ಅರೇಬಿಯಾದಿಂದ ಇಬ್ಬರು ಆರೋಪಿಗಳನ್ನೂ ಕರೆತರಲಾಗಿತ್ತು.

2012ರ ಗಲಭೆ ಮತ್ತು ಸ್ಫೋಟಕ ವಸ್ತುಗಳ ಪ್ರಕರಣದಲ್ಲಿ ಆರೋಪಿ ಬರ್ಕತ್ ಅಲಿ ಖಾನ್ ಬೇಕಾಗಿದ್ದ. ಈತನ ಬಂಧನಕ್ಕೆ ಇಂಟರ್ಪೋಲ್ ರೆಡ್ ಕಾರ್ನರ್ ನೋಟಿಸ್ ಹೊರಡಿಸಿತ್ತು. ಈತನನ್ನು ನವೆಂಬರ್ 14ರಂದು ಸೌದಿ ಅರೇಬಿಯಾದಿಂದ ವಶಕ್ಕೆ ಪಡೆದು ಭಾರತಕ್ಕೆ ಕರೆತರಲಾಗಿದೆ.

ಅಪ್ತಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಕೇರಳದ ಪೊಲೀಸರಿಗೆ ಬೇಕಾಗಿದ್ದ ಆರೋಪಿ ರೈಹಾನ್ ಅರಬಿಕ್ಕಲಾಲರಿಕ್ಕಲ್ ಎಂಬಾತನನ್ನು ನವೆಂಬರ್ 10ರಂದು ಸೌದಿ ಅರೇಬಿಯಾದಿಂದ ವಶಕ್ಕೆ ಪಡೆಯಲಾಗಿತ್ತು. ಈತನ ವಿರುದ್ಧವೂ ಇಂಟರ್ ಪೋಲ್ ರೆಡ್ ಕಾರ್ನರ್ ನೋಟಿಸ್ ಹೊರಡಿಸಿತ್ತು.

(ವರದಿ: ಎಚ್. ಮಾರುತಿ, ಬೆಂಗಳೂರು)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ