ಲೋಕಸಭಾ ಚುನಾವಣೆ; ಬೆಂಗಳೂರಿನ 3 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕುತೂಹಲ, ಬಿಜೆಪಿಗೆ 1 ಕಗ್ಗಂಟು, ಕಾಂಗ್ರೆಸ್ ಆಯ್ಕೆಯ ಸವಾಲು
Mar 08, 2024 01:04 PM IST
ಡಿ.ವಿ. ಸದಾನಂದಗೌಡ (ಬೆಂಗಳೂರು ಉತ್ತರ ಸಂಸದ); ತೇಜಸ್ವಿ ಸೂರ್ಯ (ಬೆಂಗಳೂರು ದಕ್ಷಿಣ ಸಂಸದ); (ಪಿ.ಸಿ. ಮೋಹನ್ (ಬೆಂಗಳೂರು ಸೆಂಟ್ರಲ್ ಸಂಸದ)
ಲೋಕಸಭಾ ಚುನಾವಣೆ ಸಮೀಪದಲ್ಲೇ ಇದೆ. ಅಭ್ಯರ್ಥಿಗಳ ಆಯ್ಕೆ ಕಸರತ್ತು ಚಾಲ್ತಿಯಲ್ಲಿದೆ. ಹೀಗಿರುವಾಗ ಬೆಂಗಳೂರಿನ ಮೂರು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕುತೂಹಲ ಮೂಡಿಸಿದೆ. ಬಿಜೆಪಿಗೆ ಒಂದು ಕ್ಷೇತ್ರ ಕಗ್ಗಂಟಾದರೆ ಸಮರ್ಥ ಅಭ್ಯರ್ಥಿಗಳ ತಲಾಶ್‌ನಲ್ಲಿದೆ ಕೈಪಡೆ. (ವರದಿ - ಎಚ್.ಮಾರುತಿ, ಬೆಂಗಳೂರು)
ಬೆಂಗಳೂರು ಕೇವಲ ರಾಜ್ಯದ ರಾಜಧಾನಿ ಮಾತ್ರವಲ್ಲ, ದೇಶದ ಮಾಹಿತಿ ತಂತ್ರಜ್ಞಾನ ರಾಜಧಾನಿ ಮಾತ್ರವಲ್ಲ, ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿರುವ ನಗರವೂ ಹೌದು. ಹಾಗಾಗಿ ಇಲ್ಲಿನ ಮೂರು ಕ್ಷೇತ್ರಗಳ ಅಭ್ಯರ್ಥಿಗಳು ಯಾರು ಎಂಬ ಕುತೂಹಲ ಸಹಜವಾಗಿಯೇ ಮೂಡುತ್ತದೆ. 2009 ರಿಂದಲೂ ಇಲ್ಲಿನ ಮೂರೂ ಕ್ಷೇತ್ರಗಳಲ್ಲಿ ಬಿಜೆಪಿ ಸಂಸದರೇ ಆರಿಸಿ ಬರುತ್ತಿದ್ದಾರೆ. ಡಿವಿ ಸದಾನಂದಗೌಡ (ಬೆಂಗಳೂರು ಉತ್ತರ) (ಪಿಸಿ ಮೋಹನ್ (ಬೆಂಗಳೂರು ಸೆಂಟ್ರಲ್) ತೇಜಸ್ವಿ ಸೂರ್ಯ (ಬೆಂಗಳೂರು ದಕ್ಷಿಣ) ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಆದರೆ ಈ ಬಾರಿಯ ಚುನಾವಣೆ ಎರಡೂ ಪಕ್ಷಗಳಿಗೆ ಸವಾಲಾಗಿ ಪರಿಣಮಿಸಿದೆ.
ಬೆಂಗಳೂರಿನಲ್ಲಿ ಉಭಯ ಪಕ್ಷಗಳು ಸರಿಸಮಾನಾಗಿ ರಾಜಕೀಯ ಪ್ರಾತಿನಿಧ್ಯ ಹೊಂದಿವೆ. ಎಂಟು ತಿಂಗಳ ಹಿಂದೆ ಮುಗಿದ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಎರಡೂ ಪಕ್ಷಗಳು ಗಮನಾರ್ಹ ಸಾಧನೆ ಮಾಡಿವೆ. 28 ಕ್ಷೇತ್ರಗಳ ಪೈಕಿ 16ರಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದರೂ ಕಾಂಗ್ರೆಸ್ ಮತಗಳಿಕೆ ಸುಧಾರಿಸಿದೆ.
ಇತ್ತೀಚೆಗಷ್ಟೇ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರಿನಲ್ಲಿ ಗಮನಾರ್ಹ ಬದಲಾವಣೆಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇಲ್ಲಿನ ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಮುನ್ನೆಡೆಸುವ ಹೊಣೆಗಾರಿಕೆ ಶಿವಕುಮಾರ್ ಹೆಗಲ ಮೇಲಿದೆ. ಅಭ್ಯರ್ಥಿಗಳ ಆಯ್ಕೆಯಲ್ಲಿ ಅವರದ್ದೇ ಅಂತಿಮ ನಿರ್ಧಾರ ಎಂದು ಹೇಳಲಾಗುತ್ತಿದ್ದು, ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ.
ಬೆಂಗಳೂರು ಅಭ್ಯರ್ಥಿಗಳ ಆಯ್ಕೆಯಲ್ಲಿ ಬಿಜೆಪಿ, ಕಾಂಗ್ರೆಸ್ ಲೆಕ್ಕಾಚಾರ
ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಬಲವಾದ ಒಕ್ಕಲಿಗ ಅಭ್ಯರ್ಥಿಯ ತಪಾಸಣೆಯಲ್ಲಿ ತೊಡಗಿದ್ದಾರೆ. ಮಾಜಿ ರಾಜ್ಯಸಭಾ ಸದಸ್ಯ ರಾಜೀವ್ ಗೌಡ ಅಥವಾ ಕುಸುಮಾ ಹನುಮಂತರಾಯಪ್ಪ ಅವರ ಹೆಸರೂ ಕೇಳಿ ಬರುತ್ತಿದೆ. ಕುಸುಮಾ ಅವರು ಈ ಹಿಂದೆ ಇದೇ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ಎರಡು ಬಾರಿ ಅಭ್ಯರ್ಥಿಯಾಗಿದ್ದರು. ಬಿಜೆಪಿ ತೆಕ್ಕೆಯಿಂದ ಈ ಕ್ಷೇತ್ರವನ್ನು ವಶಪಡಿಸಿಕೊಳ್ಳಲು ಕಾಂಗ್ರೆಸ್ ಸಮರ್ಥ ಅಭ್ಯರ್ಥಿಯ ಹುಡುಕಾಟದಲ್ಲಿದೆ. ಬಿಜೆಪಿ ಶಾಸಕರಾಗಿ ಸದಾ ಕಾಂಗ್ರೆಸ್ ಜೊತೆಗೆ ಇರುವ ಶಾಸಕ ಎಸ್‌ಟಿ ಸೋಮಶೇಖರ್ ಅಥವಾ ಮಾಜಿ ಸಚಿವ ಡಾ.ಕೆ.ಸುಧಾಕರ್ ಅವರನ್ನು ಕಣಕ್ಕಿಳಿಸಿದರೆ ಲಾಭವಾಗುವುದೇ ಎಂಬ ಚಿಂತನೆಯೂ ನಡೆದಿದೆ.
ಬಿಜೆಪಿಯೂ ದ್ವಂದ್ವದಲ್ಲಿದೆ. ಮತ್ತೆ ಡಿವಿ ಸದಾನಂದಗೌಡ ಅವರನ್ನೇ ಅಭ್ಯರ್ಥಿ ಮಾಡುವುದೇ ಅಥವಾ ಬೇರೊಬ್ಬರನ್ನು ಕರೆ ತರಬಹುದೇ ಎಂದು ಅಳೆದು ತೂಗಿ ನೋಡುತ್ತಿದೆ. ಈ ಹಿಂದೆ ಅವರು ಚುನಾವಣಾ ನಿವೃತ್ತಿಯ ಘೋಷಣೆ ಮಾಡಿದ್ದರು. ಆಗಿನಿಂದಲೂ ಆಕಾಂಕ್ಷಿಗಳ.ಸಂಖ್ಯೆ ಹೆಚ್ಚುತ್ತಲೇ ಇದೆ. ಪಕ್ಷದ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಉಡುಪಿ ಚಿಕ್ಕಮಗಳೂರು ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರೂ ಈ ಕ್ಷೇತ್ರಕ್ಕೆ ವಲಸೆ ಬರಲು ಆಸಕ್ತಿ ಹೊಂದಿದ್ದಾರೆ.
ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಅವರನ್ನು ಕಣಕ್ಕಿಳಿಸಲು ಬಿಜೆಪಿ ಆಸಕ್ತಿ ತೋರಿಸಿತ್ತಾದರೂ ಸುಮಲತಾ ಮಂಡ್ಯ ಬಿಟ್ಟು ಬರುವುದಿಲ್ಲ ಎಂದು ಹಠ ತೊಟ್ಟಿದ್ದಾರೆ. ಬೆಂಗಳೂರು ಸೆಂಟ್ರಲ್ ಕ್ಷೇತ್ರಕ್ಕೆ ಬಿಡಿಎ ಅಧ್ಯಕ್ಷ ಎನ್ಎ ಹ್ಯಾರಿಸ್ ಅವರನ್ನು ಅಭ್ಯರ್ಥಿ ಮಾಡಲು ಕಾಂಗ್ರೆಸ್ ಆಸಕ್ತಿ ಹೊಂದಿದೆಯಾದರೂ ಅವರು ಒಲ್ಲೆ ಎನ್ನುತ್ತಿದ್ದಾರೆ. ಇತ್ತೀಚೆಗಷ್ಟೇ ಅವರು ಬಿಡಿಎ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಅವರು ನಿರಾಕರಿಸಿದರೆ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮನ್ಸೂರ್ ಆಲಿ ಖಾನ್ ಅವರನ್ನು ಕಣಕ್ಕಿಳಿಸಲು ಡಿಕೆ ಶಿವಕುಮಾರ್ ಆಲೋಚನೆಯಲ್ಲಿದ್ದಾರೆ.
ಬೆಂಗಳೂರಿನಿಂದ ಕೇಂದ್ರ ಸಚಿವರು ಸ್ಪರ್ಧಿಸ್ತಾರಾ?
ಬಿಜೆಪಿ ಹಾಲಿ ಸಂಸದ ಪಿಸಿ ಮೋಹನ್ ಅವರನ್ನೇ ಅಭ್ಯರ್ಥಿ ಮಾಡುವುದು ಖಚಿತವಾಗಿದೆ. ಈ ಕ್ಷೇತ್ರದಿಂದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅಥವಾ ವಿದೇಶಾಂಗ ಸಚಿವ ಜೈಶಂಕರ್ ಅವರು ಸ್ಪರ್ಧೆ ಮಾಡಲಿದ್ದಾರೆ ಎಂಬ ವದಂತಿಗಳೂ ಹರಿದಾಡುತ್ತಿವೆ. ಪಕ್ಷದ ಹಿರಿಯ ನಾಯಕರೂ ಈ ಅಭಿಪ್ರಾಯವನ್ನು ಪುನರುಚ್ಚರಿಸುತ್ತಲೇ ಬಂದಿದ್ದಾರೆ.
ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಯುವ ಶಾಸಕ ಪ್ರಿಯಾಕೃಷ್ಣ ಅಥವಾ ಮಾಜಿ ಶಾಸಕಿ ಸೌಮ್ಯ ರೆಡ್ಡಿ ಅವರನ್ನು ಪರಿಗಣಿಸುತ್ತಿದೆ. ಮಾಜಿ ವಿಧಾನಪರಿಷತ್ ಸದಸ್ಯ ವಿಆರ್ ಸುದರ್ಶನ್ ಅವರೂ ಆಸಕ್ತಿ ಹೊಂದಿದ್ದಾರೆ ಎನ್ನಲಾಗುತ್ತಿದೆ. ಬಿಜೆಪಿ ಮತ್ತೆ ತೇಜಸ್ವಿ ಸೂರ್ಯ ಅವರನ್ನೇ ಅಭ್ಯರ್ಥಿಯನ್ನಾಗಿಸುವುದು ಖಚಿತವಾಗಿದೆ. ಒಂದು ವಾರದಲ್ಲಿ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.
(ವರದಿ - ಎಚ್.ಮಾರುತಿ, ಬೆಂಗಳೂರು)
(This copy first appeared in Hindustan Times Kannada website. To read more on Lok Sabha Elections, Political developments, Lok Sabha Constituency profiles, Political Analysis in Kannada please visit kannada.hindustantimes.com)