logo
ಕನ್ನಡ ಸುದ್ದಿ  /  ಕರ್ನಾಟಕ  /  ಮಂಡ್ಯದ ರಂಗನತಿಟ್ಟು ಪಕ್ಷಿಧಾಮಕ್ಕೆ ಬನ್ನಿ, ಆರಂಭಗೊಂಡ 3 ವಿಹಾರ ದೋಣಿಗಳೊಂದಿಗೆ ಹಕ್ಕಿಗಳ ಲೋಕದಲ್ಲಿ ಸುತ್ತಾಡಿ; ಸಚಿವರಿಗೆ ಸಿಕ್ಕಿತು ಮೊಸಳೆ

ಮಂಡ್ಯದ ರಂಗನತಿಟ್ಟು ಪಕ್ಷಿಧಾಮಕ್ಕೆ ಬನ್ನಿ, ಆರಂಭಗೊಂಡ 3 ವಿಹಾರ ದೋಣಿಗಳೊಂದಿಗೆ ಹಕ್ಕಿಗಳ ಲೋಕದಲ್ಲಿ ಸುತ್ತಾಡಿ; ಸಚಿವರಿಗೆ ಸಿಕ್ಕಿತು ಮೊಸಳೆ

Umesha Bhatta P H HT Kannada

Nov 25, 2024 07:09 PM IST

google News

ಕರ್ನಾಟಕ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಮಂಡ್ಯ ಜಿಲ್ಲೆ ರಂಗನತಿಟ್ಟು ಪಕ್ಷಿಧಾಮದಲ್ಲಿ ದೋಣಿ ವಿಹಾರ ನಡೆಸಿ ಮೊಸಳೆ ವೀಕ್ಷಿಸಿದರು.

    • Forest Minister Boating: ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಮಂಡ್ಯ ಜಿಲ್ಲೆ ರಂಗನತಿಟ್ಟಿನಲ್ಲಿ ದೋಣಿ ವಿಹಾರಕ್ಕೆ ಚಾಲನೆ ನೀಡಿ ಒಂದು ಸುತ್ತು ಹಾಕಿದಾಗ ಭಾರೀ ಗಾತ್ರದ ಮೊಸಳೆ ವೀಕ್ಷಿಸಿದರು.
ಕರ್ನಾಟಕ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಮಂಡ್ಯ ಜಿಲ್ಲೆ ರಂಗನತಿಟ್ಟು ಪಕ್ಷಿಧಾಮದಲ್ಲಿ ದೋಣಿ ವಿಹಾರ ನಡೆಸಿ ಮೊಸಳೆ ವೀಕ್ಷಿಸಿದರು.
ಕರ್ನಾಟಕ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಮಂಡ್ಯ ಜಿಲ್ಲೆ ರಂಗನತಿಟ್ಟು ಪಕ್ಷಿಧಾಮದಲ್ಲಿ ದೋಣಿ ವಿಹಾರ ನಡೆಸಿ ಮೊಸಳೆ ವೀಕ್ಷಿಸಿದರು.

Forest Minister Boating: ಈಗಾಗಲೇ ದೇಶ ವಿದೇಶಗಳಿಂದ ವಿವಿಧ ಬಗೆಯ ಹಕ್ಕಿಗಳನ್ನು ಬರ ಮಾಡಿಕೊಳ್ಳುತ್ತಿರುವ ಕರ್ನಾಟಕದ ಕಾವೇರಿ ತೀರದ ನಾಡು, ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ವಿಶ್ವವಿಖ್ಯಾತ ರಂಗನತಿಟ್ಟು ಪಕ್ಷಿಧಾಮದಲ್ಲಿ ಪ್ರವಾಸಿ ಸೌಲಭ್ಯಗಳು ವಿಸ್ತರಣೆಗೊಂಡಿವೆ. ನಿತ್ಯ ನೂರಾರು ಪ್ರವಾಸಿಗರು ಹಕ್ಕಿಗಳ ವೀಕ್ಷಣೆ, ನದಿ ತೀರದ ಸೊಬಗು, ರಂಗನತಿಟ್ಟಿನ ಪ್ರಕೃತಿ ಸೊಬಗನ್ನು ಸವಿಯಲು ಆಗಮಿಸುತ್ತಾರೆ. ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯ, ದೇಶಗಳಿಂದಲೂ ಇಲ್ಲಿಗೆ ಪ್ರವಾಸಿಗರು ಬರುತ್ತಾರೆ. ಅಂತವರನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ಅರಣ್ಯ ಇಲಾಖೆಯು ಸೌಲಭ್ಯವನ್ನು ಪ್ರವಾಸಿಗರಿಗೆ ನೀಡಲಾಗುತ್ತಿದೆ. ರಂಗನತಿಟ್ಟು ಪಕ್ಷಿಧಾಮದಲ್ಲಿ ಇಂದು 3 ಹೊಸ ವಿಹಾರ ದೋಣಿಗಳನ್ನು ಉದ್ಘಾಟಿಸಲಾಗಿದೆ. ಮುಂದೆ ರಂಗನತಿಟ್ಟಿನಲ್ಲಿ ಆನ್‌ ಲೈನ್‌ ಬುಕ್ಕಿಂಗ್‌ ಸೇವೆಯೂ ಬರಲಿದೆ.ʼ

ಹೊಸ ಸೌಲಭ್ಯ ಏನು

ಈಗಾಗಲೇ ರಂಗನತಿಟ್ಟಿನಲ್ಲಿ ದೋಣಿ ವಿಹಾರ ಕೇಂದ್ರವಿದೆ, ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ಹೆಚ್ಚಿನ ಪ್ರವಾಸಿಗರು ಬರುವುದರಿಂದ ಹೆಚ್ಚು ಹೊತ್ತು ಕಾಯುವ ಸ್ಥಿತಿಯಿತ್ತು. ಈ ಕಾರಣದಿಂದಲೇ ಇಲ್ಲಿ ಇನ್ನೂ ಮೂರು ದೋಣಿ ವಿಹಾರ ಕೇಂದ್ರ ಸ್ಥಾಪಿಸುವ ಕೆಲಸ ನಡೆದಿತ್ತು. ಈಗ ಅವುಗಳನ್ನು ಪ್ರವಾಸಿಗರಿಗೆ ಮುಕ್ತಗೊಳಿಸಲಾಗಿದೆ.

ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೋಮವಾರ ಈ ಸೇವೆಗಳಿಗೆ ಚಾಲನೆ ನೀಡಿದರು.ತರುವಾಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಪಕ್ಷಿಧಾಮಕ್ಕೆ ಬರುವ ಪ್ರವಾಸಿಗರಿಗೆ ಶೌಚಾಲಯ, ಪಾರ್ಕಿಂಗ್ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಎಲ್ಲ ಅಗತ್ಯ ಮೂಲ ಸೌಕರ್ಯ ಒದಗಿಸಲು ಮತ್ತು ರಂಗನತಿಟ್ಟಿನ ಬಗ್ಗೆ ಹೆಚ್ಚಿನ ಪ್ರಚಾರ ಮಾಡಲು ಸಚಿವರು ಸೂಚನೆ ನೀಡಿದರು.

ರಂಗನತಿಟ್ಟಿನಲ್ಲಿ ಈಗಾಗಲೇ ಇರುವ ದೋಣಿಗಳಿಗೆ ಹೇಮಾವತಿ, ಕಾವೇರಿ, ಲಕ್ಷ್ಮಣತೀರ್ಥ, ತುಂಗಾ, ಕೃಷ್ಣಾ ಎಂದು ಹೆಸರಿಟ್ಟಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಇಂದು ಉದ್ಘಾಟಿಸಲಾದ ದೋಣಿಗಳಿಗೆ ಮಾಂಜ್ರಾ, ಗೋದಾವರಿ, ಕಾರಂಜಾ ನದಿಗಳ ಹೆಸರಿಡುವಂತೆ ಸಲಹೆ ನೀಡಿದರು.

ಆನ್ ಲೈನ್ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ

ಅರಣ್ಯ ಇಲಾಖೆಯ ಚಾರಣ, ಸಫಾರಿ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ತಾಣದಲ್ಲಿ ರಂಗನತಿಟ್ಟು ಪಕ್ಷಿಧಾಮಕ್ಕೆ ಬರುವ ಪ್ರವಾಸಿಗರಿಗೆ ಅನುಕೂಲ ಆಗುವಂತೆ ಪ್ರವೇಶದ ಟಿಕೆಟ್ ಮತ್ತು ದೋಣಿ ವಿಹಾರದ ಟಿಕೆಟ್ ಕಾಯ್ದಿರಿಸುವ ಅವಕಾಶ ಕಲ್ಪಿಸಲು ಸೂಚಿಸಿದರು.

ವಿಶ್ವವಿಖ್ಯಾತ ರಂಗನತಿಟ್ಟು ಪಕ್ಷಿಧಾಮದಲ್ಲಿ ಬನ್ನೇರುಘಟ್ಟದಲ್ಲಿ ಇರುವ ರೀತಿಯಲ್ಲೇ ಚಿಟ್ಟೆಪಾರ್ಕ್ ನಿರ್ಮಾಣ ಮಾಡಿ ಪ್ರವಾಸಿಗರಿಗೆ ಹೊಸ ಆಕರ್ಷಣೆ ಕಲ್ಪಿಸುವಂತೆಯು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.

ಗೆಂಡೆಹೊಸಹಳ್ಳಿ ದ್ವೀಪ ಅಭಿವೃದ್ಧಿಗೆ ಪ್ರಸ್ತಾವನೆ ಮಂಡಿಸಲು ಸೂಚನೆ

ರಂಗನತಿಟ್ಟು ಬಳಿಯ ಗೆಂಡೆ ಹೊಸಹಳ್ಳಿ ದ್ವೀಪದಲ್ಲಿ ಕೂಡ ನೂರಾರು ಬಗೆಯ ಪಕ್ಷಿಗಳು ಬಂದು ಗೂಡುಕಟ್ಟಿ, ಸಂತಾನೋತ್ಪತ್ತಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಈ ದ್ವೀಪವನ್ನು ಕೂಡ ರಂಗನತಿಟ್ಟು ರೀತಿಯಲ್ಲೇ ಅಭಿವೃದ್ದಿ ಪಡಿಸಿ, ಪ್ರವಾಸಿ ತಾಣವಾಗಿ ರೂಪಿಸಲು ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ ನೀಡಿದರು.

ದೋಣಿವಿಹಾರ ನಡೆಸಿದ ಸಚಿವರು

ಕಾವೇರಿ ನದಿಯಲ್ಲಿ ದೋಣಿವಿಹಾರ ನಡೆಸಿದ ಅರಣ್ಯ ಸಚಿವರು ಬಂಡೆಗಳ ಮೇಲೆ ಮಲಗಿದ್ದ ಬೃಹತ್ ಗಾತ್ರದ ಮೊಸಳೆಗಳು, ದೂರ ದೂರದಿಂದ ಸಂತಾನೋತ್ಪತ್ತಿಗಾಗಿ ಆಗಮಿಸಿರುವ ಪೆಲಿಕಾನ್, ರಿವರ್ ಟರ್ನ್, ಕಾರ್ಮೊರೆಂಟ್, ಪೈಡ್ ಕಿಂಗ್ ಫಿಷರ್ ಮೊದಲಾದ ಪಕ್ಷಿಗಳನ್ನು ವೀಕ್ಷಿಸಿದರು.

ಮೈಸೂರು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಡಾ.ಮಾಲತಿ ಪ್ರಿಯಾ, ಡಿಸಿಎಫ್‌ಗಳಾದ ಡಾ.ಬಸವರಾಜು, ಡಾ.ಪ್ರಭುಗೌಡ ಬಿರಾದಾರ ಮತ್ತತಿರರು ಇದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ