logo
ಕನ್ನಡ ಸುದ್ದಿ  /  ಕರ್ನಾಟಕ  /  Melkote News: ಮೇಲುಕೋಟೆ ರಥಸಪ್ತಮಿಗೆ 700 ಜನಪದ ಕಲಾವಿದರ ಮಹಾಸೇವೆ, ಏನಿದರ ವಿಶೇಷ

Melkote News: ಮೇಲುಕೋಟೆ ರಥಸಪ್ತಮಿಗೆ 700 ಜನಪದ ಕಲಾವಿದರ ಮಹಾಸೇವೆ, ಏನಿದರ ವಿಶೇಷ

Umesha Bhatta P H HT Kannada

Feb 12, 2024 01:46 PM IST

google News

ಪ್ರಸಿದ್ದ ಯಾತ್ರಾಸ್ಥಳ ಮೇಲುಕೋಟೆಯಲ್ಲಿ ರಥ ಸಪ್ತಮಿ ಅಂಗವಾಗಿ ಜನಪದ ಕಲಾ ತಂಡಗಳಿಂದ ಕಾರ್ಯಕ್ರಮ ನಡೆಯಲಿದೆ.

    • Ratha Saptami 2024 ಮೇಲುಕೋಟೆಯಲ್ಲಿ ಜನಪದ ಕಲಾವಿದರು ಒಂದೆಡೆ ಸೇರಿ ಕಲಾ ಸೇವೆ ನೀಡಲಿದ್ದಾರೆ. ಸ್ಥಾನೀಕಂ ಸಾಂಸ್ಕೃತಿಕ ಟ್ರಸ್ಟ್‌ನ ರಜತ ಮಹೋತ್ಸವ ಅಡಿ ಕಾರ್ಯಕ್ರಮ ರಥಸಪ್ತಮಿ ಈ ಬಾರಿ ಭಾಗವಾಗಿ ಆಯೋಜನೆಗೊಂಡಿದೆ.
ಪ್ರಸಿದ್ದ ಯಾತ್ರಾಸ್ಥಳ ಮೇಲುಕೋಟೆಯಲ್ಲಿ ರಥ ಸಪ್ತಮಿ ಅಂಗವಾಗಿ ಜನಪದ ಕಲಾ ತಂಡಗಳಿಂದ ಕಾರ್ಯಕ್ರಮ ನಡೆಯಲಿದೆ.
ಪ್ರಸಿದ್ದ ಯಾತ್ರಾಸ್ಥಳ ಮೇಲುಕೋಟೆಯಲ್ಲಿ ರಥ ಸಪ್ತಮಿ ಅಂಗವಾಗಿ ಜನಪದ ಕಲಾ ತಂಡಗಳಿಂದ ಕಾರ್ಯಕ್ರಮ ನಡೆಯಲಿದೆ.

ಮೇಲುಕೋಟೆ : ಚೆಲುವನಾರಾಯಣಸ್ವಾಮಿಯ ರಥಸಪ್ತಮಿ ಉತ್ಸವ ಬೆಳ್ಳಿಹಬ್ಬದ ರಾಜ್ಯಮಟ್ಟದ ಜನಪದಕಲಾಮೇಳದ ಸಂಭ್ರಮದೊಂದಿಗೆ ಫೆ.16ರ ಮುಂಜಾನೆ ನೆರವೇರಲಿದೆ. ರಥಸಪ್ತಮಿ ಮಹೋತ್ಸವ ಮತ್ತು ಜಾನಪದ ಕಲಾಮೇಳ ಶುಕ್ರವಾರ ಮುಂಜಾನೆ 6 ರಿಂದ 10ಗಂಟೆಯವರೆಗೆ ವೈಭವದಿಂದ ನಡೆಯಲಿದೆ.

ಜಾನಪದ ಕಲೆಯ ಸೊಬಗನ್ನು ಸವಿಯಲು ಮೇಲುಕೋಟೆಯ ರಥಸಪ್ತಮಿಗೆ ಬನ್ನಿ ಎಂಬ ಘೋಷವಾಕ್ಯದೊಂದಿಗೆ ಸ್ಥಾನೀಕಂ ನಾಗರಾಜ ಅಯ್ಯಂಗಾರ್ ಸಾಂಸ್ಕೃತಿಕ ವೇದಿಕೆ ಕನ್ನಡಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿರುವ 25ನೇ ವರ್ಷದ ಈ ಜನಪದ ಹಬ್ಬದಲ್ಲಿ 60 ಜಾನಪದ ಕಲಾಪ್ರಕಾರಗಳ 700ಕ್ಕೂ ಹೆಚ್ಚು ಕಲಾವಿದರು ಭಾಗಿಯಾಗಿ ವೈವಿಧ್ಯಮಯ ಕಲಾಪ್ರದರ್ಶನ ನೀಡಿ ಚೆಲುವನಾರಾಯಣನಿಗೆ ಕಲಾರಾಧನೆಯ ಸೇವೆ ಮಾಡಲಿದ್ದಾರೆ.

ಮೇಳದಲ್ಲಿ ಏನೇನಿದೆ

ಇದಕ್ಕೂ ಪೂರ್ವಭಾವಿಯಾಗಿ ಫೆ.15 ರಂದು ಸಂಜೆ ರಥಸಪ್ತಮಿ ಜಾನಪದ ಸಂಜೆ ನಡೆಯಲಿದ್ದು ಜನಪದ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಕಲಾವಿದರನ್ನು ಗೌರವಿಸುವ ಕಾರ್ಯವೂ ನಡೆಯಲಿರುವುದು ವಿಶೇಷವಾಗಿದೆ.

ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಸ್ಥಾನೀಕರೂ ಮೇಲುಕೋಟೆಯ ಪತ್ರಕರ್ತರೂ ಆಗಿದ್ದ ನಾಗರಾಜ ಅಯ್ಯಂಗಾರ್ ಮೂರು ದಶಕಗಳ ಹಿಂದೆ ಸ್ಥಾನೀಕಂ ಸಾಂಸ್ಕೃತಿಕ ವೇದಿಕೆ ಮೂಲಕ ರಥಸಪ್ತಮಿ ಉತ್ಸವವನ್ನು ಜನಪದ ಸಂಸ್ಕೃತಿಯ ವೇದಿಕೆಯಾಗಿ ರೂಪಿಸಿ ಸಾಕಷ್ಟು ಶ್ರಮಿಸಿ ಉತ್ಸವಕ್ಕೆ ಮೆರಗು ತಂದು ಕೊಟ್ಟಿದ್ದರು. ಅವರ ಸಂಸ್ಮರಣೆಯಲ್ಲಿ ಅವರ ಹೆಸರಲ್ಲೇ ಸಾಂಸ್ಕೃತಿಕ ವೇದಿಕೆ ಸ್ಥಾಪಿಸಿ ಜನಪದ ಸಂಸ್ಕೃತಿ ಪೋಷಿಸುವ ಸದಾಶಯವನ್ನು ಮುಂದುವರೆಸಲಾಗುತ್ತಿದೆ ನಮ್ಮ ಪರಿಶ್ರಮದಿಂದ ಚೆಲುವನಿಗೆ ಸ್ವರ್ಣಲೇಪಿತ ನೂತನ ಸೂರ್ಯಮಂಡಲವಾಹನೂ ಸಮರ್ಪಿತವಾಗಿದೆ ಎಂದು ಸಂಘಟಕರಾದ ಸೌಮ್ಯಸಂತಾನಂ, ಶಾಲಿನಿಸಿಂಹ ಮತ್ತು ಕಲಾವಿದ ಆರ್.ಶಿವಣ್ಣಗೌಡ ಹೇಳುತ್ತಾರೆ.

ಭಾಗವಹಿಸಲಿರುವ ವೈವಿಧ್ಯಮಯ ಕಲಾತಂಡಗಳು

ಮೇಲುಕೋಟೆ ರಥಸಪ್ತಮಿಯಂದು ಮಂಡ್ಯಜಿಲ್ಲೆಯ ಡೊಳ್ಳುಕುಣಿತ, ಪಟಾಕುಣಿತ, ಗಾರುಡಿಗೊಂಬೆ, ಕೋಲಾಟ, ಚಿಲಪಿಲಿ ಗೊಂಬೆ, ಪೂಜಾಕುಣಿತ, ಮಂಗಳವಾದ್ಯ, ಬ್ರಾಸ್ ಬ್ಯಾಂಡ್, ಮೈಸೂರು ನಗಾರಿ, ನೃತ್ಯ ತಮಟೆ, ವೀರಮಕ್ಕಳಕುಣಿತ, ಜಡೆಕೋಲಾಟ, ದಾಸಯ್ಯರ ದರ್ಶನ, ಬೆಂಕಿ ಭರಾಟೆ, ಖಡ್ಗಪವಾಡ, ವೀರಭದ್ರನ ನೃತ್ಯ, ಜಾಂಜ್ ಮೇಳ, ನಾಸಿಕ್ ಡೋಲ್, ಮರಗಾಲು ಕುಣಿತ, ಯಕ್ಷಗಾನಗೊಂಬೆಗಳು, ಕರಡಿಮಜಲು, ಗ್ರಾಮೀಣ ಮಂಗಳವಾದ್ಯ ಸ್ಯಾಕ್ಸ್ ಪೋನ್ ತಂಡಗಳು ಮೈಸೂರು ಜಿಲ್ಲೆಯ ಬ್ರಾಸ್ ಬ್ಯಾಂಡ್, ವಿಶೇಷ ತಮಟೆ ಮೇಳ, ಮೈಸೂರು ನಗಾರಿ, ನವಿಲಿನ ನೃತ್ಯ ತಲಕಾಡಿನ ಬೃಹತ್ ಹನುಮಾನ್, ಚಾಮರಾಜನಗರದ ಹುಲಿವೇಷ, ಉಡುಪಿಯ ಚಂಡೆ ಮೇಳ, ಹನುಮ ಮತ್ತು ಘಟೋತ್ಕಚ ಕೋಳಿಹುಂಜಗಳು ಮತ್ತು ಸಿಂಹನೃತ್ಯ, ಕೇರಳದ ಚಂಡೆ, ಹುಬ್ಬಳ್ಳಿಯ ಜಗ್ಗಲಿಗೆ ಮೇಳ, ಹಗಲುವೇಶ, ಭಜನಾತಂಡ ಸೇರಿದಂತೆ ರಾಜ್ಯದ 60ಕ್ಕೂ ಹೆಚ್ಚು ಜನಪದಕಲಾತಂಡಗಳು ಭಾಗಿಯಾಗಲಿವೆ. ವಿವಿಧ ಶಾಲೆಗಳ 300ಕ್ಕೂ ಹೆಚ್ಚು ಪುಟಾಣಿಗಳು ನೂರೊಂದು ಕಳಸ, ವೇಷಭೂಷಣ ಹಾಗೂ ಇತರ ಪ್ರತಿಭಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಸಚಿವರಿಂದ ಉದ್ಘಾಟನೆ

ಹಂಗರಹಳ್ಳಿ ಶ್ರೀ ವಿದ್ಯಾಚೌಡೇಶ್ವರಿ ಮಹಾಸಂಸ್ಥಾನ ಮಠದ ಶ್ರೀ ಬಾಲಮಂಜುನಾಥಮಹಾಸ್ವಾಮಿಗಳ ಸಾನ್ನಿಧ್ಯ ಹಾಗೂ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚೆಲುವರಾಯಸ್ವಾಮಿ ದಂಪತಿಗಳು ಬೆಳ್ಳಿಹಬ್ಬದ ಕಲಾಮೇಳ ಉದ್ಘಾಟಿಸಿ ರಥಸಪ್ತಮಿ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ, ಪೊಲೀಸ್ ವರಿಷ್ಠಾಧಿಕಾರಿ ಎನ್‌. ಯತೀಶ್, ಅಪರಜಿಲ್ಲಾಧಿಕಾರಿ ಡಾ.ಎಚ್.ಎನ್ ನಾಗರಾಜು, ಗ್ರಾ.ಪಂ ಅಧ್ಯಕ್ಷ ಎನ್ ಸೋಮಶೇಖರ್ ಸಂಭ್ರಮಕ್ಕೆ ಸಾಕ್ಷಿಯಾಗಿ ಜನಪದ ಕಲಾವಿದರಿಗೆ ಪ್ರೋತ್ಸಾಹ ನೀಡಲಿದ್ದಾರೆ.

ಆಕರ್ಷಣೆಯ ಉತ್ಸವ

ರಾಮಾನುಜರ ಕರ್ಮಭೂಮಿ ಮೇಲುಕೋಟೆಯಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು ಬೆಳ್ಳಿಹಬ್ಬ ಇರಲಿ ದಶಕಗಳ ಕಾಲ ನಿರಂತರವಾಗಿ ನಡೆದ ಇತಿಹಾಸವಿಲ್ಲ ಆದರೆ ರಥಸಪ್ತಮಿಯ ರಾಜ್ಯಮಟ್ಟದ ಜನಪದಕಲಾಮೇಳ ಹಲವು ವೈರುಧ್ಯತೆ ಹಾಗೂ ಕಷ್ಠಗಳ ನಡುವೆಯೂ ವರ್ಷದಿಂದ ವರ್ಷಕ್ಕೆ ಆಕರ್ಷಕವಾಗಿ ನಡೆಯುತ್ತಾ ಬಂದಿದೆ. ಸ್ಥಾನೀಕಂ ನಾಗರಾಜ ಅಯ್ಯಂಗಾರ್ ಸಾಂಸ್ಕೃತಿಕ ವೇದಿಕೆಯಡಿ ಫೆ.16ರಂದು ನಡೆಯುವ ಬೆಳ್ಳಿಹಬ್ಬದ ರಥಸಪ್ತಮಿಯ ರಾಜ್ಯಮಟ್ಟದ ಜಾನಪದ ಕಲಾಮೇಳ ಮೇಲುಕೋಟೆಯ ಇತಿಹಾಸದ ಪುಟಗಳಲ್ಲಿ ದಾಖಲಾಗಲಿದೆ ಎನ್ನುತ್ತಾರೆ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ