ಮಂಡ್ಯ ಸಾಹಿತ್ಯ ಸಮ್ಮೇಳನ: ಈ ಡಿಜಿಟಲ್ ಜಗತ್ತಿನಲ್ಲಿ ಸ್ಟಾಲ್‌ಗೆ ಬಂದು ಪುಸ್ತಕ ನೋಡ್ತಾರೆ, ಕೊಳ್ಳುವವರ ಸಂಖ್ಯೆ ಕಡಿಮೆ; ಮಾರಾಟಗಾರರ ಅಳಲು
Dec 22, 2024 11:13 AM IST
ಪುಸ್ತಕ ಮಳಿಗೆಗಳ ಮುಂದೆ ಜನಸಾಗರ
- ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸುಮಾರು 100ಕ್ಕೂ ಹೆಚ್ಚು ಪುಸ್ತಕ ಮಳಿಗೆಗಳಿವೆ. ಕನ್ನಡದ ಹಲವು ಲೇಖಕರ ಪುಸ್ತಕಗಳು ಇಲ್ಲಿ ಕಾಣ ಸಿಗುತ್ತವೆ. ಪುಸ್ತಕ ಮಳಿಗೆಗಳ ಮುಂದೆ ಜನ ಕಿಕ್ಕಿರಿದು ನಿಂತಿರುತ್ತಾರೆ. ಆದರೆ ಮಾರಾಟಗಾರರನ್ನು ಮಾತನಾಡಿಸಿದರೆ ಸಿಕ್ಕ ವಾಸ್ತವ ಅಂಶವೇ ಬೇರೆ.
ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 300ಕ್ಕೂ ಹೆಚ್ಚು ಪುಸ್ತಕ ಮಳಿಗೆಗಳಿವೆ. ಇಲ್ಲಿನ ಮಳಿಗೆಗಳಲ್ಲಿ ಕನ್ನಡ ನಾಡಿನ ನೂರಾರು ಲೇಖಕರ ಪುಸ್ತಕಗಳು ಮಾರಾಟಕ್ಕಿವೆ. ಇದರೊಂದಿಗೆ ಕನ್ನಡ ಸಾಹಿತ್ಯಲೋಕ, ಇತಿಹಾಸ ಲೋಕ, ಜಾನಪದ ಪರಂಪರೆ, ತತ್ವಪದಗಳು, ಶಾಲಾ ಮಕ್ಕಳಿಗೆ ನೆರವಾಗುವ ಪುಸ್ತಕಗಳು, ವರ್ಣಮಾಲೆಯ ಪುಸಕ್ತಗಳು, ಸ್ಪರ್ಧಾಪರೀಕ್ಷೆ ಎದುರಿಸುವವರಿಗೆ ನೆರವಾಗುವ ಪುಸ್ತಕಗಳೂ ಸೇರಿ ಪುಸ್ತಕ ಪ್ರಪಂಚವೇ ಇಲ್ಲಿ ತುಂಬಿದೆ.
ಕುವೆಂಪು, ಕಾರಂತರಿಂದ ಹಿಡಿದು ಯುವ ಲೇಖಕರವರೆಗಿನ ಸಹಸ್ರಾರು ಪುಸ್ತಕಗಳು ಇಲ್ಲಿನ ಮಳಿಗೆಯಲ್ಲಿ ನಮಗೆ ಕಾಣಸಿಗುತ್ತವೆ. ಮಳಿಗೆಗಳ ಮುಂದೆ ನಿಂತ ಜನರನ್ನು ನೋಡಿದಾಗ ‘ಯುವಜನರಲ್ಲಿ ಓದಿನ ಆಸಕ್ತಿ ಕಡಿಮೆಯಾಗುತ್ತಿದೆ, ಇಂದಿನ ಯುವಕರು, ಮಕ್ಕಳಿಗೆ ಸಾಹಿತ್ಯಾಸಕ್ತಿ ಇಲ್ಲ, ಓದಿನ ಖುಷಿ ತಿಳಿದಿಲ್ಲ‘ ಎಂದೆಲ್ಲಾ ದೂರುವವರ ಮಾತು ಸುಳ್ಳೇನೋ ಎಂದೆನಿಸುವಂತಿತ್ತು. ಯಾಕೆಂದರೆ ಅಷ್ಟೊಂದು ಜನ ಪುಸ್ತಕ ಮಳಿಗೆಗಳ ಮುಂದೆ ಜಮಾಯಿಸಿದ್ದರು.
ಪುಟ್ಟ ಪುಟ್ಟ ಶಾಲಾ ಮಕ್ಕಳಿಂದ ಹಿಡಿದು ಹಿರಿ ವಯಸ್ಸಿನವರೆಗೆ ಎಲ್ಲಾ ವಯೋಮಾನದವರು ಪ್ರತಿ ಪುಸ್ತಕ ಮಳಿಗೆಯ ಮುಂದೆಯೂ ಗುಂಪಾಗಿ ನಿಂತಿರುತ್ತಿದ್ದರು. ಸಾಹಿತ್ಯಾಸಕ್ತರಂತೂ ತಮ್ಮ ನೆಚ್ಚಿನ ಬರಹಗಾರರ ಪುಸ್ತಕಗಳನ್ನು ಹುಡುಕಿಕೊಂಡು ಬೇರೆ ಬೇರೆ ಮಳಿಗೆಗಳಿಗೆ ಹೋಗುತ್ತಿರುವುದು ಕಾಣಬಹುದಿತ್ತು. ಶಾಲಾ ಶಿಕ್ಷಕರು ಹಾಗೂ ಮಕ್ಕಳು ಪಠ್ಯ ಹಾಗೂ ಪಠ್ಯೇತರಕ್ಕೆ ಸಂಬಂಧಿಸಿದ ಪುಸಕ್ತಗಳ ಖರೀದಿಯಲ್ಲಿ ತೊಡಗಿದ್ದರು. ಈ ಬಾರಿ ಪುಸ್ತಕ ಮಾರಾಟ ಜೋರಿರಬಹುದು ಎಂದು ಮಾರಾಟಗಾರರನ್ನು ಮಾತನಾಡಿಸಿದಾಗ ಸಿಕ್ಕ ವಾಸ್ತವಾಂಶವೇ ಬೇರೆ.
ನೋಡುವವರಿದ್ದಾರೆ ಕೊಳ್ಳುವವರು ಕಡಿಮೆ
ಕನ್ನಡ ಪುಸ್ತಕ ಪ್ರಾಧಿಕಾರದ ಪುಸ್ತಕ ಮಳಿಗೆಯವರನ್ನು ಮಾತನಾಡಿಸಿದಾಗ ಅವರು ಹೇಳಿದ್ದು ಹೀಗೆ. ‘ಈ ಬಾರಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಪಾರ ಜನ ಸೇರಿದ್ದಾರೆ. ಬಂದವರೆಲ್ಲಾ ಪುಸ್ತಕ ಮಳಿಗೆಗಳಿಗೆ ಭೇಟಿ ನೀಡುತ್ತಿದ್ದಾರೆ. ಪ್ರತಿ ಮಳಿಗೆಗಳಲ್ಲೂ ಏನೆಲ್ಲಾ ಪುಸ್ತಕಗಳಿವೆ ಎಂಬುದನ್ನು ನೋಡುತ್ತಿದ್ದಾರೆ. ನೋಡುವವರು ಶೇ 100 ರಷ್ಟಾದರೆ ಕೊಳ್ಳುವವರು ಶೇ 50 ರಷ್ಟು ಮಾತ್ರ. ಬಂದವರೆಲ್ಲಾ ಮಳಿಗೆಗಳ ಮುಂದೆ ನಿಂತು ನೋಡುತ್ತಾರೆ, ಆದರೆ ಕೊಳ್ಳುವವರಿಲ್ಲ. ಡಿಜಿಟಲ್ ಜಗತ್ತಿನಲ್ಲಿ ಪುಸಕ್ತ ಕೊಂಡು ಓದುವವರ ಸಂಖ್ಯೆ ಕಡಿಮೆಯಾಗಿದೆ ಎನ್ನುವುದು ಸುಳ್ಳಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಪುಸ್ತಕಗಳಿಗೆ ಭರ್ಜರಿ ಡಿಸ್ಕೌಂಟ್
ಸಾಹಿತ್ಯಾಸಕ್ತರನ್ನು ಸೆಳೆಯುವ ಉದ್ದೇಶದಿಂದ ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕಗಳ ಮೇಲೆ ಭರ್ಜರಿ ರಿಯಾಯಿತಿ ಘೋಷಿಸಲಾಗಿತ್ತು. 8 ಪುಸ್ತಕಕ್ಕೆ 200 ರೂಪಾಯಿ, ಶೇ 50ರಷ್ಟು ರಿಯಾಯಿತಿ, ಶೇ 10 ರಿಂದ 40 ರಷ್ಟು ರಿಯಾಯಿತಿ ನೀಡಲಾಗಿತ್ತು. ಇಂತಹ ರಿಯಾಯಿತಿ ಇರುವ ಪುಸ್ತಕ ಮಳಿಗೆಗಳ ಮುಂದೆ ಜನ ಕೊಂಚ ಹೆಚ್ಚೇ ಇರುವುದು ಕಾಣಬಹುದಾಗಿತ್ತು.
ಪಿಜಿ, ಪಿಎಚ್‌ಡಿ ವಿದ್ಯಾರ್ಥಿಗಳ ಖರೀದಿ
ತತ್ವಪದ, ಜಾನಪದ ಆಧಾರಿತ ಪುಸ್ತಕಗಳ ಮಳಿಗೆಯು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಾಣಬಹುದಾಗಿತ್ತು. ಅಂತಹ ಪುಸ್ತಕ ಮಳಿಗೆಗಳ ಮುಂದೆ ಜನ ಕಡಿಮೆ ಇದ್ದರೂ ಮಾರಾಟಗಾರರು ಖರೀದಿ ಬಗ್ಗೆ ಭರವಸೆಯ ಮಾತುಗಳನ್ನಾಡುತ್ತಾರೆ. ಅವರ ಪ್ರಕಾರ ಪಿಜಿ, ಪಿಎಚ್‌ಡಿ ವಿದ್ಯಾರ್ಥಿಗಳು ಇಂತಹ ಪುಸಕ್ತಗಳನ್ನು ಹುಡುಕಿಬಂದು ಖರೀದಿ ಮಾಡುತ್ತಾರಂತೆ. ಇದರೊಂದಿಗೆ ಹಳ್ಳಿಗಳಲ್ಲಿ ತತ್ವಪದಗಳನ್ನು ಹೇಳುತ್ತಾರೆ ಅಂಥವರು ಬಂದು ತೆಗೆದುಕೊಳ್ಳುತ್ತಾರೆ ಎನ್ನುತ್ತಾರೆ ಮಳಿಗೆಯೊಂದರ ಮಾಲಿಕ ಮಂಜುನಾಥ್.
ಆಯ್ದ ಲೇಖಕರ ಪುಸ್ತಕಗಳಿಗೆ ಬೇಡಿಕೆ
ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕುವೆಂಪು, ತೇಜಸ್ವಿ, ದೇವನೂರ ಮಹಾದೇವ, ಭೈರಪ್ಪರಂತಹ ಆಯ್ದ ಲೇಖಕರ ಪುಸ್ತಕಗಳಿಗೆ ಬೇಡಿಕೆ ಹೆಚ್ಚಿತ್ತು. ಇದರೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಪುಸ್ತಕ ಖರೀದಿಯ ಭರಾಟೆ ಜೋರಿತ್ತು.