ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗಮನಸೆಳೆದ ಅಕ್ಷರ ಭಂಡಾರ, ಇಂದಿನ ಕನ್ನಡದ ಮೂಲಕ ಪ್ರಾಚೀನ ಕನ್ನಡ ಲಿಪಿ ಓದುವ ಖುಷಿ
ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಮಳಿಗೆಗಳ ನಡುವೆ ಮಿಥಿಕ್ ಸೊಸೈಟಿಯ ಅಕ್ಷರ ಭಂಡಾರ ಸಾಕಷ್ಟು ಜನರ ಗಮನ ಸೆಳೆದಿದೆ. ಇಂದಿನ ಕನ್ನಡದ ಮೂಲಕ ಅಂದಿನ ಕನ್ನಡ (ಪ್ರಾಚೀನ ಕನ್ನಡ ಲಿಪಿ) ಓದುವ ಖುಷಿ ನೀಡುವ "ಅಕ್ಷರ ಭಂಡಾರ"ದ ಕುರಿತು ಇಲ್ಲಿ ವಿವರ ನೀಡಲಾಗಿದೆ.
ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದ ಆ ಒಂದು ಮಳಿಗೆಯ ಮುಂದೆ ಸಾಕಷ್ಟು ಶಾಲಾ ಮಕ್ಕಳು ನೆರೆದಿದ್ದರು. ಕಂಪ್ಯೂಟರ್ ಪರದೆ ಮುಂದೆ ಕನ್ನಡ ಪ್ರಾಚೀನ ಲಿಪಿಗಳು ಇದ್ದವು. ಶಾಲಾ ಮಕ್ಕಳು ಆ ಅಕ್ಷರಗಳನ್ನು ಓದಲು ಪ್ರಯತ್ನಿಸುತ್ತಿದ್ದರು. ಬಹುತೇಕ ಮಕ್ಕಳು ಸಾಕಷ್ಟು ಪ್ರಾಚೀನ ಲಿಪಿಗಳಿಗೂ ಕನ್ನಡ ಅಕ್ಷರಗಳಿಗೂ ಹೋಲಿಕೆ ಮಾಡಿಕೊಂಡು ಸುಲಭವಾಗಿ ಓದುತ್ತಿದ್ದರು. "ಇದೇನು ಅಕ್ಷರ ಭಂಡಾರ? ಶಾಸನಗಳನ್ನು ಓದುವುದು ಇಷ್ಟು ಸುಲಭವೇ?" ಎಂಬ ಕುತೂಹಲ ಮೂಡಿ ಅಲ್ಲೇ ಕುಳಿತಿದ್ದ ಅಕ್ಷರ ಭಂಡಾರ ಟೀಮ್‌ನ ಮುಖ್ಯಸ್ಥರಾದ ಪಿ.ಎಲ್.ಉದಯಕುಮಾರ್ ಅವರನ್ನು ಮಾತನಾಡಿಸಿದಾಗ ಸಾಕಷ್ಟು ವಿಚಾರಗಳು ತಿಳಿದುಬಂತು.
"ಇದು ಪ್ರಾಚೀನ ಕನ್ನಡ ಲಿಪಿ ಕಲಿಕೆಗೆ ಮಾಡಿರುವ ಸಾಫ್ಟ್‌ವೇರ್. ಸಾಮಾನ್ಯವಾಗಿ ಹಳೆಗನ್ನಡ ಎಂದರೆ ಸಾಹಿತ್ಯ ಓದುತ್ತಾರೆ. ಆದರೆ, ಪ್ರಾಚೀನ ಲಿಪಿಗಳನ್ನು ಓದಲು ಯಾರೂ ಹೋಗುವುದಿಲ್ಲ. ಹತ್ತನೇ ಶತಮಾನದಲ್ಲಿ ಹೇಗಿತ್ತು, ಹನ್ನೆರಡನೇ ಶತಮಾನದಲ್ಲಿ ಹೇಗಿತ್ತು ಎಂದು ಜನರಿಗೆ ಗೊತ್ತಿರುವುದಿಲ್ಲ. ನಾವು ಸುಮಾರು ಎರಡು ಸಾವಿರ ಶಾಸನಗಳನ್ನು ಡಿಜಿಟಲೀಕರಣ ಮಾಡಿ, ಅವುಗಳಲ್ಲಿ ಒಂದೊಂದೇ ಅಕ್ಷರಗಳನ್ನು ಬಿಡಿಬಿಡಿಯಾಗಿ ತೆಗೆದು ಸಾಫ್ಟ್‌ವೇರ್‌ಗೆ ಹಾಕಿದೆವು. ನೀವು ಆ ಕಾಲದಲ್ಲಿ ಆ, ಕಾ, ಮ ಹೇಗಿತ್ತು ಎಂದು ನೋಡಬಹುದು. ಯಾವ ಕಾಲದಾಗಿದ್ದರೂ ಸರಿ, ಐದನೇ ಶತಮಾನದ ಅಕ್ಷರಗಳೂ ಇವೆ. ಹತ್ತೊಂಬತ್ತನೇ ಶತಮಾನದ್ದೂ ಇವೆ. ಇದನ್ನು ಕಲಿಯುವುದು ಹೇಗೆ, ವಿಶೇಷವಾಗಿ ಸುಲಭವಾಗಿ ಕಲಿಯುವುದು ಹೇಗೆ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಈ ಸಾಫ್ಟ್‌ವೇರ್ ರಚಿಸಲಾಗಿದೆ" ಎಂದು ಅಕ್ಷರ ಭಂಡಾರ ತಂಡದ ಮುಖ್ಯಸ್ಥರಾದ ಪಿ.ಎಲ್.ಉದಯಕುಮಾರ್ ಮಾಹಿತಿ ನೀಡಿದ್ದಾರೆ.
ಇಂದಿನ ಕನ್ನಡದ ಮೂಲಕ ಅಂದಿನ ಕನ್ನಡ ಓದಿ
"ನಮಗೆ ಇಂದಿನ ಕನ್ನಡ ಗೊತ್ತಿದ್ದರೆ ಹಿಂದಿನ ಕನ್ನಡವನ್ನು ಸುಲಭವಾಗಿ ಓದಬಹುದು. ಇಲ್ಲಿ ನೋಡಿ (ಸಮ್ಮೇಳನದ ಮಳಿಗೆಯಲ್ಲಿ ಮಕ್ಕಳನ್ನು ತೋರಿಸಿ) ಮಕ್ಕಳು ಮೊದಲು ಶಾಸನಗಳ ಅಕ್ಷರಗಳನ್ನು ಓದಲು ಪ್ರಯತ್ನಿಸುತ್ತಾರೆ. ಅವರಿಗೆ ಸರಿ ಉತ್ತರ ಆಮೇಲೆ ತೋರಿಸುತ್ತಾರೆ. ಮಕ್ಕಳು ಆಟದಂತೆ ತುಂಬಾ ಖುಷಿಯಾಗಿ ತೊಡಗಿಕೊಂಡಿದ್ದಾರೆ. ಇಲ್ಲಿ ಬರೀ ಅಕ್ಷರ ಕಲಿಕೆ ಮಾತ್ರವಲ್ಲದೆ ಆ ಶಾಸನ ಯಾವುದು, ಎಲ್ಲಿಂದ ಬಂತು ಮುಂತಾದ ವಿಷಯಗಳೂ ಗೊತ್ತಾಗುತ್ತವೆ. ಸ್ಥಳೀಯರಿಗೆ ಇದು ಅಗತ್ಯ. ಆ ಊರಿನವರಿಗೆ ಆ ಊರಿನಲ್ಲಿ ಬರೆದಿರುವ ಶಾಸನಗಳು ಏನಿದೆ ಎಂದು ಗೊತ್ತಿರುವುದಿಲ್ಲ. ಊರಿನವರಿಗೆ ತಮ್ಮ ಊರಿನ ಹೆಸರನ್ನು ಶಾಸನದಲ್ಲಿ ನೋಡಬೇಕು ಎಂದು ಇರುತ್ತದೆ. ಸುಮಾರು ಸಾವಿರದ ಐನ್ನೂರು ವರ್ಷಗಳ ಹಿಂದೆ ತಾಳೆಗರಿಗಳಲ್ಲಿ, ತಾಮ್ರಶಾಸನಗಳಲ್ಲಿ ಮತ್ತು ಇತರೆ ಬಗೆಯ ಶಾಸನಗಳಲ್ಲಿ ಬರೆದಿರುವುದನ್ನು ಓದಿ ಅವುಗಳಿಂದ ಅಕ್ಷರಗಳನ್ನು ತೆಗೆದು ಈ ಸಾಫ್ಟ್‌ವೇರ್‌ಗೆ ಹಾಕಲಾಗಿದೆ" ಎಂದು ಅವರು ಹೇಳಿದ್ದಾರೆ.
ಏನೆಲ್ಲ ಇದೆ ಅಕ್ಷರ ಭಂಡಾರದಲ್ಲಿ?
ಶಾಸನಗಳ 3ಡಿ ಡಿಜಿಟಲ್ ಮಾಡೆಲ್‌ಗಳಿಂದ ಹೊರತೆಗೆದ ಸ್ವರಗಳು, ವ್ಯಂಜನಗಳು, ಸಂಯುಕ್ತಾಕ್ಷರಗಳು, ಸಂಖ್ಯೆಗಳು ಮತ್ತು ಶಾಸನಗಳ ಸಂಪೂರ್ಣ ಅಕ್ಷರಗಳನ್ನೊಳಗೊಂಡ 30,000ಕ್ಕೂ ಹೆಚ್ಚು ಚಿತ್ರಗಳನ್ನು ನೋಡಬಹುದು. ಪ್ರಾಚೀನ ಲಿಪಿಗಳ ಬಗ್ಗೆ ಹೆಚ್ಚಿನ ಅರಿವನ್ನು ನೀಡುವುದರ ಜೊತೆಗೆ ಲಿಪಿ ಸಂಬಂಧಿತ ನಿಮ್ಮ ಜ್ಞಾನವನ್ನು ಪರೀಕ್ಷಿಸಲು ಸಂವಹನಾತ್ಮಕ ಅಭ್ಯಾಸ ವಿಭಾಗವನ್ನು ವಿನ್ಯಾಸಗೊಳಿಸಲಾಗಿದೆ. ನೂರಾರು ಶಿಲಾ ಶಾಸನಗಳ 3ಡಿ ಸ್ಕ್ಯಾನಿಂಗ್‌ನ ಮೂಲಕ ನಿರ್ಮಿಸಲಾದ ಈ ಸಾಫ್ಟ್‌ವೇರ್ ಶಾಸನಶಾಸ್ತ್ರ ಅಧ್ಯಯನಗಳಿಗೆ ಉತ್ಕೃಷ್ಟ ಸಂಪನ್ಮೂಲವಾಗಿದೆ" ಎಂದು ಮಿಥಿಕ್ ಸೊಸೈಟಿಯ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ.
ಅಕ್ಷರ ಭಂಡಾರವನ್ನು ಮಿಥಿಕ್ ಸೊಸೈಟಿ ಶಾಸನಗಳ 3ಡಿ ಡಿಜಿಟಲ್ ಸಂರಕ್ಷಣಾ ಯೋಜನೆಯಡಿಯಲ್ಲಿ ಪರಿಕಲ್ಪಿಸಿ ನಿರ್ಮಿಸಲಾಗಿದೆ. ಈ ಅಕ್ಷರ ಭಂಡಾರದಲ್ಲಿ ಕಾಲ (ಸಾಮಾನ್ಯ ಶಕ): 500ರಿಂದ 1899ರವರೆಗೆ ಇದೆ. ವರ್ಣಮಾಲೆ, ಅಕ್ಷರ ರೂಪಗಳು, ಗುಣಿತಾಕ್ಷರಗಳು, ಸಂಯುಕ್ತಾಕ್ಷರಗಳು, ಸಂಖ್ಯೆಗಳು, ಚಿಹ್ನೆಗಳು, ಶಾಸನಗಳು ಸೇರಿದಂತೆ ಹಲವು ವಿಭಾಗಗಳು ಇದರಲ್ಲಿವೆ. ಅಭ್ಯಾಸ ಎಂಬ ವಿಶೇಷ ವಿಭಾಗದಲ್ಲಿ ಈ ಅಕ್ಷರ, ಪದಗಳು, ವಾಕ್ಯಗಳು, ಶಾಸನಗಳಿಂದ ನಾವೇ ಗುರುತಿಸುವಂತಹ ಚಟುವಟಿಕೆ ಮಾಡಲು ಅವಕಾಶವಿದೆ. ಅಕ್ಷರಕ್ಕಾಗಿ ಹುಡುಕು ಎಂಬ ವಿಭಾಗವೂ ಇದೆ. ಅಲ್ಲಿ ನಾವೇ ಅಕ್ಷರಗಳನ್ನು ನಮೂದಿಸಿ ಆ ಅಕ್ಷರಗಳು ಇರುವ ಶಾಸನಗಳನ್ನು ಹುಡುಕಬಹುದು. ನಿಮಗೂ ಪ್ರಾಚೀನ ಕನ್ನಡ ಲಿಪಿಗಳನ್ನು ಓದುವ ಕುತೂಹಲ ಈಗ ಹೆಚ್ಚಾಗಿರಬಹುದು. ಮಿಥಿಕ್ ಸೊಸೈಟಿಯ ಅಕ್ಷರ ಭಂಡಾರ ಅಪ್ಲಿಕೇಷನ್‌ಗೆ ಪ್ರವೇಶಿಸಲು ಇಲ್ಲಿ ಕ್ಲಿಕ್ ಮಾಡಿ.