logo
ಕನ್ನಡ ಸುದ್ದಿ  /  ಕರ್ನಾಟಕ  /  ಕನ್ನಡ ಸಾಹಿತ್ಯ ಸಮ್ಮೇಳನ; ಮಂಡ್ಯದಲ್ಲಿ ಕನ್ನಡದ ಕಂಪು, ಎರಡನೇ ದಿನ ಏನೇನಾಯಿತು, ಗೋಷ್ಠಿಗಳಿಗೆ ಸಂಬಂಧಿಸಿದ 8 ಮುಖ್ಯ ಅಂಶಗಳು

ಕನ್ನಡ ಸಾಹಿತ್ಯ ಸಮ್ಮೇಳನ; ಮಂಡ್ಯದಲ್ಲಿ ಕನ್ನಡದ ಕಂಪು, ಎರಡನೇ ದಿನ ಏನೇನಾಯಿತು, ಗೋಷ್ಠಿಗಳಿಗೆ ಸಂಬಂಧಿಸಿದ 8 ಮುಖ್ಯ ಅಂಶಗಳು

Umesh Kumar S HT Kannada

Dec 21, 2024 08:18 PM IST

google News

ಮಂಡ್ಯ ಸಾಹಿತ್ಯ ಸಮ್ಮೇಳನದ ಗೋಷ್ಠಿಯಲ್ಲಿ ಭಾಗವಹಿಸಿದವರಿಗೆ ಸ್ಮರಣಿಕೆ ನೀಡಿ ಗೌರವಿಸಿದ ಸಂದರ್ಭ (ಮೇಲಿನ ಚಿತ್ರ) ಮತ್ತು ಸಿರಿಧಾನ್ಯ ನಡಿಗೆಗೆ ಸಮ್ಮೇಳನ ಸಮಿತಿ ಅಧ್ಯಕ್ಷ, ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯ ಸ್ವಾಮಿ ಚಾಲನೆ ನೀಡಿದ ಸಂದರ್ಭ (ಕೆಳಗಿನ ಚಿತ್ರ)

  • Mandya Sahitya Sammelana: ಸಕ್ಕರೆ ನಾಡು ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು, ಇಂದು ಎರಡನೇ ದಿನದ ಕಾರ್ಯಕ್ರಮಗಳು ಬಹುತೇಕ ಪೂರ್ಣಗೊಂಡಿವೆ. ಗೋಷ್ಠಿಗಳು ಮತ್ತು ಸಿರಿಧಾನ್ಯ ನಡಿಗೆಗೆ ಸಂಬಂಧಿಸಿದ 8 ಮುಖ್ಯ ಅಂಶಗಳ ವಿವರ ಇಲ್ಲಿದೆ.

ಮಂಡ್ಯ ಸಾಹಿತ್ಯ ಸಮ್ಮೇಳನದ ಗೋಷ್ಠಿಯಲ್ಲಿ ಭಾಗವಹಿಸಿದವರಿಗೆ ಸ್ಮರಣಿಕೆ ನೀಡಿ ಗೌರವಿಸಿದ ಸಂದರ್ಭ (ಮೇಲಿನ ಚಿತ್ರ) ಮತ್ತು ಸಿರಿಧಾನ್ಯ ನಡಿಗೆಗೆ ಸಮ್ಮೇಳನ ಸಮಿತಿ ಅಧ್ಯಕ್ಷ, ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯ ಸ್ವಾಮಿ ಚಾಲನೆ ನೀಡಿದ ಸಂದರ್ಭ (ಕೆಳಗಿನ ಚಿತ್ರ)
ಮಂಡ್ಯ ಸಾಹಿತ್ಯ ಸಮ್ಮೇಳನದ ಗೋಷ್ಠಿಯಲ್ಲಿ ಭಾಗವಹಿಸಿದವರಿಗೆ ಸ್ಮರಣಿಕೆ ನೀಡಿ ಗೌರವಿಸಿದ ಸಂದರ್ಭ (ಮೇಲಿನ ಚಿತ್ರ) ಮತ್ತು ಸಿರಿಧಾನ್ಯ ನಡಿಗೆಗೆ ಸಮ್ಮೇಳನ ಸಮಿತಿ ಅಧ್ಯಕ್ಷ, ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯ ಸ್ವಾಮಿ ಚಾಲನೆ ನೀಡಿದ ಸಂದರ್ಭ (ಕೆಳಗಿನ ಚಿತ್ರ) (kannadasahityasamelana)

Mandya Sahitya Sammelana: ಮಂಡ್ಯ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಇಂದು (ಡಿಸೆಂಬರ್ 21) ಬೆಳಗ್ಗೆಯಿಂದಲೇ ಪ್ರಧಾನ ವೇದಿಕೆ ಮತ್ತು ಎರಡು ಸಮಾನಂತರ ವೇದಿಕೆಗಳಲ್ಲಿ ಗೋಷ್ಠಿಗಳು ನಡೆದವು. ಈ ನಡುವೆ, ಸಿರಿಧಾನ್ಯ ನಡಿಗೆಗೆ ಚಾಲನೆ ನೀಡಲಾಗಿತ್ತು. ಸಮ್ಮೇಳನಕ್ಕಾಗಮನಿಸಿದವರ ಮನತಣಿಸುವಂತೆ ಪುಸ್ತಕದ ಸ್ಟಾಲ್‌ಗಳು, ತಿಂಡಿ ತಿನಿಸುಗಳ ಸ್ಟಾಲ್‌, ಹೀಗೆ ಸುತ್ತಾಡುತ್ತ ಗೋಷ್ಠಿಗಳ ಕಡೆಗೆ ಗಮನಹರಿಸುವುದಕ್ಕೂ ಅವಕಾಶ ಇದ್ದ ಕಾರಣ ಭಾಗವಹಿಸಿದವರಿಗೆ ವಿಭಿನ್ನ ಅನುಭವಗಳಾಗಿವೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಸಂಭ್ರಮ ಸಡಗರವನ್ನು ಹೆಚ್ಚಿಸಿದೆ. ಕನ್ನಡ ಸಾಹಿತ್ಯ ಸಮ್ಮೇಳನದ ಅಂಗಳದಲ್ಲಿ ಏನೇನಾಯಿತು ಒಂದು ಕಿರುನೋಟ.

ಮಂಡ್ಯ ಸಾಹಿತ್ಯ ಸಮ್ಮೇಳನ ಏನೇನಾಯಿತು; ಕಿರುನೋಟ

ಸಕ್ಕರೆ ನಾಡು ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು, ಇಂದು ಎರಡನೇ ದಿನ ಪೂರ್ಣಗೊಂಡಿದೆ. ಇಂದು ಹಲವು ಗೋಷ್ಠಿಗಳು ನಡೆದಿದ್ದು, ಪ್ರಮುಖ ವಿಚಾರಗಳು ಚರ್ಚೆಗೆ ಒಳಗಾಗಿವೆ. ಅವುಗಳ ಕಿರು ಅವಲೋಕನ ಇಲ್ಲಿದೆ.

1) ಸಾಹಿತ್ಯದಲ್ಲಿ ರಾಜಕೀಯ: ರಾಜಕೀಯದಲ್ಲಿ ಸಾಹಿತ್ಯ' ಗೋಷ್ಠಿ: ರಾಜಮಾತೆ ಕೆಂಪನಂಜಮ್ಮಣಿ ಮತ್ತು ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರಧಾನ ವೇದಿಕೆಯಲ್ಲಿ ನಡೆದ 'ಸಾಹಿತ್ಯದಲ್ಲಿ ರಾಜಕೀಯ: ರಾಜಕೀಯದಲ್ಲಿ ಸಾಹಿತ್ಯ' ಕುರಿತ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಎಚ್.ಕೆ. ಪಾಟೀಲ್ ಅವರು ಮಾತನಾಡಿದರು.

'ಸಾಹಿತ್ಯದಲ್ಲಿ ರಾಜಕೀಯ: ರಾಜಕೀಯದಲ್ಲಿ ಸಾಹಿತ್ಯ' ಕುರಿತ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಎಚ್.ಕೆ. ಪಾಟೀಲ್ ಅವರು ಮಾತನಾಡಿದರು.

ಸಾಹಿತ್ಯದ ಮೂಲಕ ರಾಜಕಾರಣವನ್ನು ಬದಲಾಯಿಸಲು ಸಾಧ್ಯವಿದೆ. ಸಾಹಿತ್ಯ ಕ್ಷೇತ್ರದಲ್ಲಿರುವವರು ರಾಜಕಾರಣಕ್ಕೆ ಮಾರ್ಗದರ್ಶನ ಮಾಡಬೇಕಿದೆ. ರಾಜ ಮಹಾರಾಜರ ಕಾಲದಿಂದಲೂ ಸಾಹಿತ್ಯ ಪೋಷಣೆಯಾಗುತ್ತಿದೆ. ರಾಜಕಾರಣದ ಮೇಲೆ ಸಾಹಿತ್ಯ ಪ್ರಭಾವ ಉಂಟುಮಾಡಿದೆ. ಸಾಹಿತಿಯೂ ಆಗಿದ್ದ ಗಾಂಧೀಜಿಯವರ ಚಿಂತನೆಗಳು ಸಮಾಜದ ಬದಲಾವಣೆಗೆ ಕಾರಣವಾಗಿವೆ ಎಂದರು. ಗೋಷ್ಠಿಯಲ್ಲಿ ಸಾಹಿತ್ಯ ಕೇಂದ್ರಿತವಾದ ಸೈದ್ಧಾಂತಿಕ-ರಾಜಕೀಯ ನಿಲುವುಗಳು, ರಾಜಕಾರಣಿಗಳಿಗಿರಬೇಕಾದ ಸಾಹಿತ್ಯ ಪ್ರಜ್ಞೆ, ಸಾಹಿತ್ಯ ಕೃತಿಗಳಲ್ಲಿ ಕಂಡು ಬರುವ ರಾಜಕೀಯ ಚಿತ್ರಣ ಕುರಿತು ವಿಷಯ ಮಂಡಿಸಿದರು.

2) `ಸೃಜನಶೀಲತೆ - ವಿದ್ಯುನ್ಮಾನ ಮಾಧ್ಯಮಗಳ ಸವಾಲುಗಳು’ ಗೋಷ್ಠಿ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸಮಾನಾಂತರ ವೇದಿಕೆ 1 ರಲ್ಲಿ `ಸೃಜನಶೀಲತೆ - ವಿದ್ಯುನ್ಮಾನ ಮಾಧ್ಯಮಗಳ ಸವಾಲುಗಳು’ ಕುರಿತು ನಡೆದ ಗೋಷ್ಠಿ ನಡೆಯಿತು. ಅದರಲ್ಲಿ, ಕನ್ನಡಕ್ಕೆ ತಂತ್ರಜ್ಞಾನದ ಕನ್ನಡಕ ಬೇಕು. ಮಾಹಿತಿ ತಂತ್ರಜ್ಞಾನ ವ್ಯವಸ್ಥೆ ಮತ್ತು ಡಿಜಿಟಲ್ ಕನ್ನಡ ಪ್ರಾಧಿಕಾರ ಬೇಕು. ಎಲೆಕ್ಟ್ರಾನಿಕ್ ಯುಗದಲ್ಲೂ ನಮ್ಮ ಕನ್ನಡ ಇರಬೇಕು. ಸಾಹಿತ್ಯ ಸಮ್ಮೇಳನದ ಮಾತ್ರ ಅಲ್ಲದ ಎಲ್ಲಾ ಕಡೆಯಲ್ಲೂ ಕನ್ನಡ ಇರಬೇಕು ಎಂದು ಹಿರಿಯ ಜಿ.ಎನ್. ಮೋಹನ್ ಹೇಳಿದರು.

ವೈ.ಎನ್.ಮಧು ಅವರು ಕೃತಕ ಬುದ್ಧಿಮತ್ತೆ ಹಾಗೂ ಚಾಟ್ ಜಿಪಿಟಿ ಸೃಷ್ಟಿಸಿರುವ ಸವಾಲುಗಳು ಕುರಿತು ಮಾತನಾಡಿದರು.

ವೈ.ಎನ್.ಮಧು ಅವರು ಕೃತಕ ಬುದ್ಧಿಮತ್ತೆ ಹಾಗೂ ಚಾಟ್ ಜಿಪಿಟಿ ಸೃಷ್ಟಿಸಿರುವ ಸವಾಲುಗಳು ಕುರಿತು, ಓಂ ಶಿವಪ್ರಕಾಶ್ ಅವರು ಕನ್ನಡ ಸಾಹಿತ್ಯ ಮತ್ತು ಸಾಮಾಜಿಕ ಜಾಲತಾಣಗಳು ಕುರಿತು, ಶಂಕರ ಸಿಹಿಮೊಗ್ಗೆ ತಂತ್ರಜ್ಞಾನ ಯುಗದಲ್ಲಿ ಕನ್ನಡದ ಅನುಸಂಧಾನ ಕುರಿತು ವಿಷಯ ಮಂಡಿಸಿದರು. ವಿಶ್ರಾಂತ ಕುಲಪತಿ ಡಾ.ಚಿದಾನಂದ ಗೌಡ ಅವರು ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.

3) `ಕರ್ನಾಟಕ ಚಿತ್ರಣ ಬದಲಿಸಿದ ಚಳವಳಿಗಳು' ಗೋಷ್ಠಿ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೆಯ ದಿನವಾದ ಇಂದು ಸಮಾನಾಂತರ ವೇದಿಕೆ 2 ರಲ್ಲಿ `ಕರ್ನಾಟಕ ಚಿತ್ರಣ ಬದಲಿಸಿದ ಚಳವಳಿಗಳು’ ವಿಷಯದ ಕುರಿತು ಮಾತನಾಡುತ್ತ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಕರ್ನಾಟಕದ ಬದಲಾವಣೆಯಲ್ಲಿ ಚಳವಳಿಗಳು ಪ್ರಮುಖ ಪಾತ್ರ ವಹಿಸಿದೆ. ನಮ್ಮ ನೆಲದಲ್ಲಿ ನಡೆದಿರುವ ಚಳವಳಿಗಳನ್ನು ಎಂದಿಗೂ ಮರೆಯಲಾಗದು ಎಂದರು.

`ಕರ್ನಾಟಕ ಚಿತ್ರಣ ಬದಲಿಸಿದ ಚಳವಳಿಗಳು’ ವಿಷಯದ ಕುರಿತು ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿದರು

ಗೋಕಾಕ್ ಚಳವಳಿಯ ನಂತರದಲ್ಲಿನ ಕರ್ನಾಟಕ ಚಿತ್ರಣದ ಕುರಿತು ಬಂಕಾಪುರ ಚನ್ನಬಸಪ್ಪ, ರೈತ ಚಳವಳಿಗಳು ಕುರಿತು ಜಿ.ಎಸ್.ರಾಜೇಂದ್ರ ಅಸುರನಾಡು, ಜನಪರ ಚಳವಳಿಗಳು ಕುರಿತು ಇಂದಿರಾ ಕೃಷ್ಣಪ್ಪ ಅವರು ವಿಷಯ ಮಂಡಿಸಿದರು. ಅಖಿಲ ಕರ್ನಾಟಕ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರಾದ ಸಾ.ರಾ.ಗೋವಿಂದು ಅವರು ಭಾಗವಹಿಸಿದರು.

4) ಮಂಡ್ಯ ನೆಲ ಮೂಲದ ಮೊದಲುಗಳು ವಿಷಯದ" ಗೋಷ್ಠಿ: ರಾಜಮಾತೆ ಕೆಂಪನಂಜಮಣ್ಣಿ ಮತ್ತು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಧಾನ ವೇದಿಕೆಯಲ್ಲಿ ಆಯೋಜಿಸಿದ್ದ "ಮಂಡ್ಯ ನೆಲ ಮೂಲದ ಮೊದಲುಗಳು ವಿಷಯದ" ಗೋಷ್ಠಿಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರೊ. ಎಂ. ಕೃಷ್ಣೇಗೌಡ, ಹಲವು ಪ್ರಥಮಗಳಿಗೆ ಮಂಡ್ಯ ಸಾಕ್ಷಿಯಾಗಿದೆ ಎಂದರು. ಜಿಲ್ಲೆಯ ಚರಿತ್ರೆ, ಸಾಮಾಜಿಕ ವಿಚಾರ ನೋಡಿದರೆ ಹಲವಾರು ಪ್ರಥಮಗಳನ್ನು ಮಂಡ್ಯ ದಾಖಲಿಸಿದೆ. ಮೈಸೂರಿನಿಂದ ಪ್ರತ್ಯೇಕವಾದ ಮೇಲೂ ಹಲವು ಅದ್ಭುತಗಳನ್ನು ಕೂಡ ಮಂಡ್ಯ ಸೃಷ್ಟಿಸುವ ಮೂಲಕ ನಾಡಿಗೆ ತನ್ನದೇ ಕೊಡುಗೆ ನೀಡಿದೆ. ಕನ್ನಡ ಬೆಳೆಸುವುದು ಕೇವಲ ಕನ್ನಡ ಮೇಷ್ಟ್ರುಗಳ ಕೆಲಸ ಮಾತ್ರವಲ್ಲ. ಎಲ್ಲರೂ ಒಟ್ಟುಗೂಡಿ ಮಾಡಬೇಕಾದ ಕೆಲಸ. ಕನ್ನಡದ ಕವಿಗಳು ಪ್ರಪಂಚದ ಯಾವ ಕವಿಗಳಿಗೂ ಕಡಿಮೆಯಿಲ್ಲ. ಮುಂದೆ ನಡೆಯುವ ಸಾಹಿತ್ಯ ಸಮ್ಮೇಳನಗಳು ಮಂಡ್ಯದಲ್ಲಿ ನಡೆದ ಸಮ್ಮೇಳನದ ಜೊತೆ ಹೋಲಿಕೆ ಮಾಡಿಕೊಳ್ಳುವ ರೀತಿಯಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿದೆ ಎಂದು ಹೇಳಿದರು.

"ಮಂಡ್ಯ ನೆಲ ಮೂಲದ ಮೊದಲುಗಳು ವಿಷಯದ" ಗೋಷ್ಠಿಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರೊ. ಎಂ. ಕೃಷ್ಣೇಗೌಡ, ಹಲವು ಪ್ರಥಮಗಳಿಗೆ ಮಂಡ್ಯ ಸಾಕ್ಷಿಯಾಗಿದೆ ಎಂದು ಹೇಳಿದರು.

ಚಿತ್ರ ಸಾಹಿತಿ ಡಾ. ವಿ. ನಾಗೇಂದ್ರ ಪ್ರಸಾದ್ ಅವರು ರಂಗಭೂಮಿ, ಚಲನಚಿತ್ರ ಮತ್ತು ಕಿರುತೆರೆ ವಿಷಯದ ಬಗ್ಗೆ, ಪ್ರೊ.ಬಿ.ಶಿವಲಿಂಗಯ್ಯ ಅವರು ಕೆರೆ, ಅಣೆಕಟ್ಟೆ, ಸೇತುವೆ, ಕಾಲುವೆಗಳ ನಿರ್ಮಾಣ, ಡಾ.ಕೆಂಪಮ್ಮ ಅವರು ಜನಪದ, ನವೀನ್ ಕುಮಾರ್ ಅವರು ಜಲವಿದ್ಯುತ್ ವಿಷಯದ ಬಗ್ಗೆ ವಿಷಯ ಮಂಡಿಸಿದರು.

5) ಶತಮಾನೋತ್ಸವ ವರ್ಷದ ಕನ್ನಡ ಲೇಖಕರು ಗೋಷ್ಠಿ: ಲೇಖಕರು ಆಯಾ ಕ್ಷೇತ್ರದಲ್ಲಿ ನೀಡಿರುವ ಕೊಡುಗೆಗಳನ್ನು ತಿಳಿಯಲು ಹಾಗೂ ಅವರು ಹೇಗೆ ನಮಗೆ ಸ್ಫೂರ್ತಿಯಾಗುತ್ತಾರೆ ಎಂದು ಅರಿಯಲು ಕವಿಗೋಷ್ಠಿಗಳು ಸಹಕಾರಿ ಎಂದು ಹಿರಿಯ ವಿದ್ವಾಂಸ ಡಾ.ಮಲ್ಲೇಪುರಂ ಜಿ.ವೆಂಕಟೇಶ ಅವರು ಹೇಳಿದರು. ಅವರು, ಸಮ್ಮೇಳನದ ಸಮಾನಾಂತರ ವೇದಿಕೆ 1 ರಲ್ಲಿ ಆಯೋಜಿಸಿದ್ದ ಶತಮಾನೋತ್ಸವ ವರ್ಷದ ಕನ್ನಡ ಲೇಖಕರು ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಿರಿಯ ವಿದ್ವಾಂಸ ಡಾ.ಮಲ್ಲೇಪುರಂ ಜಿ.ವೆಂಕಟೇಶ ಅವರು ಸಮ್ಮೇಳನದ ಸಮಾನಾಂತರ ವೇದಿಕೆ 1 ರಲ್ಲಿ ಆಯೋಜಿಸಿದ್ದ ಶತಮಾನೋತ್ಸವ ವರ್ಷದ ಕನ್ನಡ ಲೇಖಕರು ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.

ಎಲ್.ಎಸ್.ಶೇಷಗಿರಿರಾವ್ ಅವರ ಬಗ್ಗೆ ಡಾ.ವನಮಾಲ ವಿಶ್ವನಾಥ ಅವರು, ನಿರಂಜನ ಅವರ ಬಗ್ಗೆ ಮಲ್ಲಿಕಾರ್ಜುನ ಹೆಗ್ಗಳಗಿ ಅವರು, ಕು.ಶಿ.ಹರಿದಾಸಭಟ್ಟ ಅವರ ಬಗ್ಗೆ ಪ್ರೊ.ಚಿತ್ರಪಾಡಿ ಉಪೇಂದ್ರ ಸೋಮಯಾಜಿ ಅವರು, ಶಾಂತರಸ ಅವರ ಬಗ್ಗೆ ಡಾ.ಅಕ್ಟರ್ ಸಿ.ಕಾಲಿಮಿರ್ಚಿ ಅವರು, ಜಿ.ಎಸ್.ಆಮೂರ ಅವರ ಬಗ್ಗೆ ಶ್ಯಾಮಸುಂದರ ಬಿದರಕುಂದಿ ಅವರು, ವಿಜಯ ಭಾಸ್ಕರ್ ಅವರ ಬಗ್ಗೆ ಎಸ್.ಆರ್.ರಾಮಕೃಷ್ಣ ಅವರು ವಿಷಯ ಮಂಡಿಸಿದರು.

6) ಕರ್ನಾಟಕ- ಪ್ರಕೃತಿ ವಿಕೋಪದ ಆತಂಕಗಳು’ ಗೋಷ್ಠಿ: ನೈಸರ್ಗಿಕ ವಿಕೋಪಗಳಿಗೆ ಸಹಜವಾಗಿ ಆತಂಕ ಎಂಬ ಪದ ಬಳಕೆ ಸಾಮಾನ್ಯವಾಗಿದೆ. ಅಂತಕ ನಿವಾರಣೆಗೆ ಅದನ್ನು ಎದುರಿಸುವ ಮನಸ್ಥಿತಿಯನ್ನು ಅಳವಡಿಸಿಕೊಳ್ಳಬೇಕು. ಎಲ್ಲಾ ಶಾಲೆಗಳಲ್ಲಿ ಮಳೆ ಮಾಪನ ಕೇಂದ್ರಗಳು, ವಿಪತ್ತು ನಿರ್ವಹಣೆ ಬಗ್ಗೆ ಅರಿವು ಮೂಡಿಸಬೇಕು ಎಂದು ಡಾ.ವಿ.ಎಸ್.ಪ್ರಕಾಶ್ ಹೇಳಿದರು. ಸಮಾನಾಂತರ ವೇದಿಕೆ 1 ರಲ್ಲಿ ಆಯೋಜಿಸಿದ್ದ `ಕರ್ನಾಟಕ- ಪ್ರಕೃತಿ ವಿಕೋಪದ ಆತಂಕಗಳು’ ಗೋಷ್ಠಿಯಲ್ಲಿ ಮಾತನಾಡಿದರು. ಹಿರಿಯ ಪರಿಸರವಾದಿ ಡಾ.ಅ.ನಾ.ಯಲ್ಲಪ್ಪರೆಡ್ಡಿ ಅವರು ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕದಲ್ಲಿನ ಭೂಕುಸಿತ ಪ್ರಕರಣಗಳ ಕುರಿತು ಡಾ.ಮಾರುತಿ, ಅಕಾಲಿಕಾ ಮಳೆ ಮತ್ತು ವಾಯುಭಾರ ಕುಸಿತ ಪ್ರಕರಣಗಳು ಕುರಿತು ಡಾ.ಕೇಶವ ಕೊರ್ಸೆ, ಹವಾಮಾನದಲ್ಲಿ ಆಗುತ್ತಿರುವ ಬದಲಾವಣೆಗಳು ಕುರಿತು ಡಾ.ಟಿ.ಆರ್.ಅನಂತರಾಮು, ಪ್ರಕೃತಿ ವಿಕೋಪಗಳು ಕುರಿತು ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ ಅವರು ವಿಷಯ ಮಂಡಿಸಿದರು.

8) ಸಿರಿಧಾನ್ಯ ನಡಿಗೆ: ಇಂದು ಬೆಳಗ್ಗೆ ಸಿರಿಧಾನ್ಯ ನಡಿಗೆಗೆ ಚಾಲನೆ ನೀಡಲಾಯಿತು. ಮಂಡ್ಯ ನಗರದಲ್ಲಿ ಕೃಷಿ ಇಲಾಖೆ ವತಿಯಿಂದ ಆಯೋಜಿಸಿದ್ದ ಸಿರಿಧಾನ್ಯ ನಡಿಗೆ ಕಾರ್ಯಕ್ರಮವನ್ನು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಚಲುವರಾಯಸ್ವಾಮಿ ಅವರು ಉದ್ಘಾಟಿಸಿದರು. ಬೆಂಗಳೂರಿನಲ್ಲಿ ಮುಂದಿನ ತಿಂಗಳು ಸಿರಿಧಾನ್ಯ ಸಾವಯವ ಅಂತಾರಾಷ್ಟ್ರೀಯ ಮೇಳ ಆಯೋಜಿಸಲಾಗುತ್ತಿದ್ದು, ಎಲ್ಲರೂ ಪಾಲ್ಗೊಳುವಂತೆ ಸಚಿವರು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕರೆ ನೀಡಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ