ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ; ಊಟದ ಹಕ್ಕು ಸಹಿತ ಕೆಲವು ವಿವಾದಗಳ ನಡುವೆಯೂ ಅಭಿಮಾನ, ಕನ್ನಡ ಹಬ್ಬದ 10 ಅಂಶಗಳು
Dec 22, 2024 08:16 PM IST
ಮಂಡ್ಯದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ವೇದಿಕೆಯಲ್ಲಿ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಚಲುವರಾಯಸ್ವಾಮಿ, ಕಸಾಪ ಅಧ್ಯಕ್ಷ ಮಹೇಶ್ ಜೋಶಿ.
- Mandya Sahitya Sammelana: ಮಂಡ್ಯದಲ್ಲಿ ಮೂರು ದಿನಗಳ ಕಾಲ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ ಬಿದ್ದಿತು. ಕೆಲ ವಿವಾದ, ಗೊಂದಲಗಳ ನಡುವೆಯೂ ಕನ್ನಡ ಹಬ್ಬ ಕರುನಾಡ ಮನಸುಗಳನ್ನು ಬೆಸೆಯುವ ಕೆಲಸವನ್ನಂತೂ ಮಾಡಿತು.
ಮಂಡ್ಯದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ವೇದಿಕೆಯಲ್ಲಿ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಚಲುವರಾಯಸ್ವಾಮಿ, ಕಸಾಪ ಅಧ್ಯಕ್ಷ ಮಹೇಶ್ ಜೋಶಿ.
ಸತತ ಮೂರು ಬಾರಿ ಮುಂದೆ ಹೋಗಿ ಮಂಡ್ಯದಲ್ಲೇ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ವಿವಾದ, ಗೊಂದಲ, ಕನ್ನಡ ಮನಸುಗಳ ಸಂಭ್ರಮ, ಸಕ್ಕರೆ ನಾಡಿನ ಮಂಡ್ಯದ ಜನರ ಅಕ್ಕರೆಯ ನಡುವೆ ಮುಕ್ತಾಯಗೊಂಡಿದೆ. ಮೂರು ದಿನಗಳ ಕಾಲ ಅಂದಾಜು ಆರು ಲಕ್ಷಕ್ಕೂ ಹೆಚ್ಚು ಮಂದಿ ಭಾಗಿಯಾಗಿ ಕನ್ನಡ ಎನೆ ಕುಣಿದಾಡುವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು ಎನ್ನುವ ಕುವೆಂಪು ಸಾಲುಗಳಂತೆ ಅಭಿಮಾನ ಮೆರೆದರು. ಊಟದ ಸಂಸ್ಕೃತಿಯ ಹಕ್ಕುಗಳ ಬೇಡಿಕೆ, ವಿವಾದದ ನಡುವೆಯೇ ಕನ್ನಡ ಸಮ್ಮೇಳನಕ್ಕೆ ತೆರೆ ಬಿದ್ದಿತು. ಮುಂದಿನ ಸಮ್ಮೇಳನ ಕರ್ನಾಟಕದ ಗಡಿ ನಾಡು ಬಳ್ಳಾರಿಯಲ್ಲಿ ಎನ್ನುವ ಘೋಷಣೆಯೊಂದಿಗೆ ಕನ್ನಡದ ಅಭಿಮಾನಿಗಳು ಊರಿನತ್ತ ಹೆಜ್ಜೆ ಹಾಕಿದರು.
- ಮಂಡ್ಯದಲ್ಲಿ ಮೂರು ದಶಕದ ಬಳಿಕ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜನವೋ ಜನ. ಅದು ಸಮ್ಮೇಳನದ ಕೊನೆಯ ದಿನವಾದ ಭಾನುವಾರವಂತೂ ಎಲ್ಲಿ ನೋಡಿದರೂ ಕನ್ನಡಾಭಿಮಾನಿಗಳ ಕಲರವ. ಸಾಹಿತ್ಯ ಸಮ್ಮೇಳನದ ವಿಶಾಲ ವೇದಿಕೆಯ ಮುಂದೆ, ಸುತ್ತಮುತ್ತಲೂ ಕಿಕ್ಕಿರಿದು ತುಂಬಿದ್ದರು ಜನ.
ಇದನ್ನೂ ಓದಿರಿ: ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳಲು ಗೋಕಾಕ್ ಮಾದರಿಯಲ್ಲಿಯೇ ಜನಾಂದೋಲನ ರೂಪಿಸಿ: ಸಾಹಿತ್ಯ ಸಮ್ಮೇಳನದಲ್ಲಿ ಬಂದ ಸಲಹೆಗಳಿವು - ಮುಖ್ಯ ವೇದಿಕೆಯ ಪಕ್ಕದಲ್ಲಿ ನಿರ್ಮಿಸಿದ ಎರಡು ಪರ್ಯಾಯ ವೇದಿಕೆಯಲ್ಲೂ ಅಭಿಮಾನಗಳ ದಂಡು. ವಿಶಾಲವಾದ ಪುಸ್ತಕ ಮಳಿಗೆ ಹಾಗೂ ವಸ್ತು ಪ್ರದರ್ಶನದಲ್ಲೂ ಕಾಲಿಡಲು ಆಗದಷ್ಟು ಜನರು. ಊಟದ ಅಂಗಳ, ವಾಣಿಜ್ಯ ಮಳಿಗೆಗಳು ಕೂಡ ಜನರಿಂದ ಕಿಕ್ಕಿರಿದು ತುಂಬಿ ಹೋಗಿದ್ದವು. ಮಂಡ್ಯ ಹಾಗೂ ಮದ್ದೂರು ಕಡೆಯಿಂದ ಬರುವ ಮಾರ್ಗಗಳು ಕೂಡ ಜನ ಸಂಚಾರದಿಂದ ತುಂಬಿ ಹೋಗಿದ್ದವು.
- ಮೊದಲ ದಿನ ಉದ್ಘಾಟನೆಗೆ ಹಾಗೂ ಕೊನೆಯ ದಿನ ಸಮಾರೋಪಕ್ಕೆ ಮಾತ್ರ ಜನ ಬರಬಹುದು ಎಂದುಕೊಂಡಿದ್ದನ್ನು ಹುಸಿಗೊಳಿಸಿದ ಅಭಿಮಾನಿಗಳು ಮೂರು ದಿನವೂ ನಿರೀಕ್ಷೆ ಮೀರಿ ಬಂದರು. ಕೊನೆ ದಿನವಂತೂ ಇದು ಇನ್ನೂ ಹೆಚ್ಚಾಗಿತ್ತು.
ಇದನ್ನೂ ಓದಿರಿ: ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಮಾಡಿ ಪ್ರತಿಭಟನೆ; ಊಟದೊಂದಿಗೆ ಮೊಟ್ಟೆ ವಿತರಣೆಗೆ ಸಿದ್ದತೆ: ಅರ್ಧ ಗೆದ್ದ ಆಹಾರ ಸಂಸ್ಕೃತಿ ಬೇಡಿಕೆ - ನಮ್ಮೂರಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ನಾಡಿನ ನಾನಾ ಭಾಗಗಳು ಮಾತ್ರವಲ್ಲದೇ ಹದಿನೆಂಟು ದೇಶಗಳಿಂದಲೂ ಕನ್ನಡ ಅಭಿಮಾನಿಗಳು ಸಮ್ಮೇಳನಕ್ಕೆ ಬಂದಿದ್ದಾರೆ ಎನ್ನುವ ಸಂತಸದ ನಡುವೆಯೂ ಸ್ಥಳೀಯರೂ ಉತ್ಸಾಹದಿಂದ ಭಾಗಿಯಾದರು. ಅದರಲ್ಲೂ ಕನ್ನಡ ಹಬ್ಬ ನಮ್ಮೂರಿನ ಅಂಗಳದಲ್ಲಿ ನಡೆದಿದೆ. ನಮ್ಮೂರಿನ ಆತಿಥ್ಯ ಸ್ವೀಕರಿಸಲು ಬಂದಿರುವವರನ್ನು ಹತ್ತಿರದಿಂದಲೇ ಕಾಣುವ ಖುಷಿಯ ಕ್ಷಣ, ಕನ್ನಡದ ಕುರಿತಾಗಿ ಚರ್ಚೆ ನಡೆಯುವುದನ್ನು ತಿಳಿದುಕೊಳ್ಳುವ ಅವಕಾಶ ಸಿಗುತ್ತದೆ ಎಂದಾಗ ಹಲವರು ಕೂಡ ಬಂದರು. ಇದರಿಂದ ಮೂರು ದಿನ ಎಲ್ಲೆಲ್ಲೂ ಜನರ ಸಡಗರ ಮಂಡ್ಯದ ಅಭಿಮಾನದ ಪ್ರತಿರೂಪದಂತಿಯೇ ಇತ್ತು.
- ಮಕ್ಕಳು, ಹಿರಿಯರು, ಮಹಿಳೆಯರು, ಯುವಕರು, ಕೃಷಿಕರು, ವಿದ್ಯಾರ್ಥಿಗಳು, ಸರ್ಕಾರಿ ನೌಕರರು ಹೀಗೆ ಎಲ್ಲಾ ವರ್ಗದವರು ಖುಷಿಯಾಗಿಯೇ ಸಮ್ಮೇಳನದಲ್ಲಿ ಸುತ್ತು ಹಾಕಿದರು. ಪುಸ್ತಕಗಳನ್ನು ಖರೀದಿಸಿದರು. ತಮಗೆ ಇಷ್ಟವಾದ ಲೇಖಕರೊಂದಿಗೆ ಹೆಚ್ಚು ಹೊತ್ತು ಕಳೆದರು. ಅವರನ್ನು ಹತ್ತಿರದಿಂದ ಕಂಡು ಪುಳಕಿತರಾದರು.
ಇದನ್ನೂ ಓದಿರಿ: ಮಂಡ್ಯ ಸಾಹಿತ್ಯ ಸಮ್ಮೇಳನವೆಂಬ ಅವ್ಯವಸ್ಥೆಯ ಅಂಗಳ; ಮೊಬೈಲ್ ನೆಟ್ವರ್ಕ್ ಇಲ್ಲದೇ ಜನರ ಪರದಾಟ, ಟಾಯ್ಲೆಟ್ ಕಥೆಯಂತೂ ಕೇಳ್ಲೇಬೇಡಿ - ಊಟವೂ ಸಮ್ಮೇಳನದ ವಿಶೇಷವಾಗಿತ್ತು. ಬಾಡೂಟದ ವಿವಾದದ ನಡುವೆಯೂ ಸಮ್ಮೇಳನದಲ್ಲಿ ಅಚ್ಚುಕಟ್ಟಾಗಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಮಂಡ್ಯದಲ್ಲಿ ಉತ್ತರ ಕರ್ನಾಟಕದ ರೊಟ್ಟಿ ಊಟವೂ ಇತ್ತು. ರಾಗಿ ಮುದ್ದೆಯನ್ನೂ ಸವಿಯುವ ಅವಕಾಶವಿತ್ತು. ಹೊರಗಿನಿಂದ ಬಂದವರ ಜತೆಗೆ ಮಂಡ್ಯ, ಮೈಸೂರು ಭಾಗದಿಂದ ಆಗಮಿಸಿವರು ಊಟದ ಸವಿ ಸವಿದರು. ಬಾಡೂಟ ಹಂಚಿ ಪ್ರತಿಭಟನೆ ನಡೆಸಿದರು. ಮುಂದಿನ ಬಾರಿ ಬಾಡೂಟ ನೀಡಿ ಎನ್ನುವ ಸಂದೇಶ ರವಾನಿಸಿದರು.
- ಸಮ್ಮೇಳನದಲ್ಲಿ ಶಿಕ್ಷಕರ ನೇಮಕ, ಸರೋಜಿನಿ ಮಹಿಷಿ ವರದಿ ಜಾರಿ, ವಿಶ್ವ ಕನ್ನಡ ಸಮ್ಮೇಳನ ದಾವಣಗೆರೆಯಲ್ಲಿ ಆಯೋಜನೆಯೂ ಸೇರಿದಂತೆ ಆರು ನಿರ್ಣಯಗಳನ್ನು ಅಂಗೀಕರಿಸಲಾಯಿತು.
- ವಿಶಾಲ ಜಾಗದಲ್ಲಿ ಸಮ್ಮೇಳನ ಆಯೋಜನೆ, ಮಳಿಗೆಗಳನ್ನು ರೂಪಿಸಿ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿದ್ದರೂ ಅಲ್ಲಲ್ಲಿ ಅವ್ಯವಸ್ಥೆಗಳು ಕಂಡು ಬಂದವು. ನೆಟ್‌ವರ್ಕ್ ಸಮಸ್ಯೆ ಕಾಡಿತು. ಶೌಚಾಲಯಗಳ ನಿರ್ವಹಣೆ ಚೆನ್ನಾಗಿರದೇ ಜನ ಬಯಲನ್ನು ಆಶ್ರಯಿಸಿದ್ದು ಸಾಮಾನ್ಯವಾಗಿತ್ತು. ಪೊಲೀಸರು ಸಂಯಮದಿಂದಲೇ ನಡೆದುಕೊಂಡು ಜನರನ್ನು ನಿಯಂತ್ರಿಸಿದರು.
- ಮಂಡ್ಯದ ಜನಪ್ರತಿನಿಧಿಗಳು, ಅಧಿಕಾರಿಗಳು, ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಸಂಘ ಸಂಸ್ಥೆಗಳವರ ಸಹಕಾರ ಸಹಯೋಗದಲ್ಲಿ ಸಮನ್ವಯದಿಂದ ಸಮ್ಮೇಳನ ಯಶಸ್ವಿಯಾಗಿ ನಡೆದಿದ್ದು ವಿಶೇಷ.
- ಗಡಿನಾಡು ಬಳ್ಳಾರಿಯಲ್ಲಿ ಮುಂದಿನ ಸಮ್ಮೇಳನ ಆಯೋಜಿಸುವ ಅಧಿಕೃತ ಘೋಷಣೆ ಹೊರ ಬಿದ್ದಿತು. ಬಹುತೇಕ ಏಳು ದಶಕಗಳ ನಂತರ ಬಳ್ಳಾರಿಯಲ್ಲಿ ಮುಂದಿನ ವರ್ಷಕ್ಕೆ ಸಮ್ಮೇಳನ ನಡೆಸುವುದಾಗಿ ಪ್ರಕಟಿಸಿ ಸಮ್ಮೇಳನಕ್ಕೆ ತೆರೆ ಎಳೆಯಲಾಯಿತು