ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಮಾಡಿ ಪ್ರತಿಭಟನೆ; ಊಟದೊಂದಿಗೆ ಮೊಟ್ಟೆ ವಿತರಣೆಗೆ ಸಿದ್ದತೆ: ಅರ್ಧ ಗೆದ್ದ ಆಹಾರ ಸಂಸ್ಕೃತಿ ಬೇಡಿಕೆ
ಕನ್ನಡ ಸುದ್ದಿ  /  ಕರ್ನಾಟಕ  /  ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಮಾಡಿ ಪ್ರತಿಭಟನೆ; ಊಟದೊಂದಿಗೆ ಮೊಟ್ಟೆ ವಿತರಣೆಗೆ ಸಿದ್ದತೆ: ಅರ್ಧ ಗೆದ್ದ ಆಹಾರ ಸಂಸ್ಕೃತಿ ಬೇಡಿಕೆ

ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಮಾಡಿ ಪ್ರತಿಭಟನೆ; ಊಟದೊಂದಿಗೆ ಮೊಟ್ಟೆ ವಿತರಣೆಗೆ ಸಿದ್ದತೆ: ಅರ್ಧ ಗೆದ್ದ ಆಹಾರ ಸಂಸ್ಕೃತಿ ಬೇಡಿಕೆ

Mandya Sahitya Sammelana: ಮಂಡ್ಯದಲ್ಲಿ ನಡೆದಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಊಟದ ಮೆನುವಿನಲ್ಲಿ ಭಾನುವಾರ ಸಂಜೆ ಮೊಟ್ಟೆಯೂ ಸೇರಲಿದೆ. ಭಾರೀ ವಿರೋಧಕ್ಕೆ ಮಣಿದ ಮಂಡ್ಯ ಜಿಲ್ಲಾಡಳಿತ ಮೊಟ್ಟೆ ವಿತರಿಸಲು ಮುಂದಾಗಿದೆ

ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರ ರಾತ್ರಿ ಊಟದೊಂದಿಗೆ ಮೊಟ್ಟೆ ಸಿಗಲಿದೆ. ಬಾಡೂಟವಿಲ್ಲ.
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರ ರಾತ್ರಿ ಊಟದೊಂದಿಗೆ ಮೊಟ್ಟೆ ಸಿಗಲಿದೆ. ಬಾಡೂಟವಿಲ್ಲ.

ಮಂಡ್ಯ: ಮಂಡ್ಯದಲ್ಲಿ ನಡೆದಿರುವ ಅಖಿಲ ಭಾರತ 87ನೇ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಬೇಕೇ ಬೇಕು ಎಂದು ಗಟ್ಟಿದನಿಯಲ್ಲಿ ಕರ್ನಾಟಕದ ಆಹಾರ ಸಂಸ್ಕೃತಿ ಪರವಾಗಿ ಬೇಡಿಕೆ ಇಟ್ಟಿದ್ದ ಹೋರಾಟಗಾರರು ಅರ್ಧ ಗೆದ್ದಿದ್ದಾರೆ. ಮಂಡ್ಯ ಸಾಹಿತ್ಯ ಸಮ್ಮೇಳನ ಆಯೋಜಕರು ಸಮ್ಮೇಳನದ ಕೊನೆಯ ದಿನವಾದ ಭಾನುವಾರ ಸಂಜೆ ಊಟದೊಂದಿಗೆ ಮೊಟ್ಟೆಯನ್ನು ವಿತರಿಸಲು ಮುಂದಾಗಿದ್ದಾರೆ. ಬೇಕಾದವರು ಮೊಟ್ಟೆಯನ್ನು ಪಡೆದು ಊಟ ಮಾಡಿದರೆ, ಉಳಿದವರು ತಮಗೆ ಇಷ್ಟವಾದ ಊಟ ಸವಿದು ಖುಷಿಯಾಗಬಹುದು. ಯಾವುದೇ ಗೊಂದಲವಿಲ್ಲದೇ ಸಮ್ಮೇಳನದಲ್ಲಿ ಊಟದ ವಿಚಾರದಲ್ಲಿ ಇದ್ದ ವಿವಾದ ಬಗೆಹರಿಸಲು ಸಮಿತಿ ಮುಂದಾಗಿದೆ. ಇದಲ್ಲದೇ ಹಲವರು ತಾವೇ ಬಾಡೂಟವನ್ನು ತಂದು ಸಮ್ಮೇಳನ ನಡೆಯುತ್ತಿದ್ದ ಆವರಣದಲ್ಲಿ ಊಟ ಮಾಡಿದರು. ಊಟದಲ್ಲಿ ತಾರತಮ್ಯ ಮಾಡಿದ ಆಡಳಿತದ ವಿರುದ್ದ ಆಕ್ರೋಶವನ್ನೂ ಹೊರ ಹಾಕಿದರು.

ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಆಹಾರ ಸಂಸ್ಕೃತಿಯ ತಾರತಮ್ಯ ಬೇಡ. ಬಹುಜನರ ಆಹಾರ ಸಂಸ್ಕೃತಿಗೆ ಅನುಗುಣವಾಗಿ ಬಾಡೂಟವನ್ನು ನೀಡಬೇಕು ಎನ್ನುವ ಒತ್ತಾಯ ಕೇಳಿ ಬಂದಿತು. ಮಂಡ್ಯ ಸಹಿತ ಹಲವು ಭಾಗಗಳಲ್ಲಿ ಪ್ರತಿಭಟನೆಗಳೂ ನಡೆದಿದ್ದವು. ಮಂಡ್ಯದಲ್ಲಂತೂ ಇದರ ಕಾವು ಜೋರಾಗಿತ್ತು. ಸಾಮಾಜಿಕ ಮಾಧ್ಯಮದಲ್ಲೂ ಚರ್ಚೆಗಳು ನಡೆದಿದ್ದವು. ಆದರೆ ಮೊದಲ ಎರಡು ದಿನ ಈ ಕುರಿತು ಮಂಡ್ಯ ಜಿಲ್ಲಾಡಳಿತವಾಗಿ, ಸಾಹಿತ್ಯ ಸಮ್ಮೇಳನ ಆಯೋಜನೆ ಸಮಿತಿ ಪ್ರತಿಕ್ರಿಯಿಸಿರಲಿಲ್ಲ. ಆದರೆ ಮೊದಲ ಎರಡು ದಿನವೂ ಪುಸ್ತಕ ಮಳಿಗೆ ಸಹಿತ ಹಲವು ಕಡೆಗಳಲ್ಲಿ ಮಾಂಸದ ಊಟವನ್ನು ಮಾಡಿ ಕೆಲವರು ತಮ್ಮ ಪ್ರತಿಭಟನೆ ದಾಖಲಿಸಿದ್ದರು.

ಬಾಡೂಟ ಕೊಡದೇ ಇದ್ದರೆ ಸಮ್ಮೇಳನದ ವೇಳೆ ಪ್ರತಿಭಟನೆ ನಡೆಸುವುದಾಗಿಯೂ ಹೇಳಿದ್ದರು.

ಮಂಡ್ಯ ನಗರದ ಕಾವೇರಿ ಉದ್ಯಾನದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಸಭೆ ನಡೆಸಿ, ‘ಒಂದು ವೇಳೆ ನಮ್ಮ ಒತ್ತಾಯಕ್ಕೆ ಜಿಲ್ಲಾಡಳಿತ ಮತ್ತು ಕಸಾಪ ಪದಾಧಿಕಾರಿಗಳು ಸ್ಪಂದಿಸದಿದ್ದರೆ ಸ್ವಯಂಪ್ರೇರಿತವಾಗಿ ಸಮ್ಮೇಳನದ ಮೊದಲನೇ ದಿನ ಮೊಟ್ಟೆ ವಿತರಣೆ, ಎರಡನೇ ದಿನ ಮುದ್ದೆ- ನಾಟಿ ಕೋಳಿ ಸಾಂಬಾರ್, ಮೂರನೇ ದಿನ ಚಿಕನ್‌ ಬಿರಿಯಾನಿಯನ್ನು ವಿತರಿಸುವ ಚಿಂತನೆ ನಡೆಸಿದ್ದಾರೆ . ಇದಕ್ಕೆ ಪೂರಕವಾಗಿ ಮನೆಗೊಂದು ಕೋಳಿಯನ್ನು ಸಂಗ್ರಹಿಸುವ ಅಭಿಯಾನ ನಡೆಸುತ್ತೇವೆ’ ಎಂದು ಸಭೆಯಲ್ಲಿ ತೀರ್ಮಾನಿಸಿದ್ದೂ ಅಲ್ಲದೇ ಸಮ್ಮೇಳನ ಹೊರಡಿಸಿರುವ ನಿಬಂಧನೆಗಳಲ್ಲಿ ಬಾಡೂಟವನ್ನು ನಿಷೇಧಿಸಲಾಗಿದೆ’ ಎಂಬ ಹೇಳಿಕೆಯನ್ನು ಒಕ್ಕೊರಲಿನಿಂದ ಸಭೆಯಲ್ಲಿ ಖಂಡಿಸಿದ್ದರು.

ಈ ಹಿನ್ನೆಲೆಯಲ್ಲಿ ಮಂಡ್ಯ ಡಿಸಿ ಡಾ.ಕುಮಾರ ಅವರು ಪ್ರತಿಭಟನಾ ನಿರತರು, ಪ್ರಗತಿಪರ ಸಂಘಟನೆಗಳ ಪ್ರಮುಖರೊಂದಿಗೆ ಚರ್ಚಿಸಿ ಕೊನೆ ದಿನ ಮೊಟ್ಟೆ ಕೊಡಲು ಅವಕಾಶ ಮಾಡಿಕೊಡುತ್ತೇವೆ. ಬಾಡೂಟ ನೀಡುವ ಕುರಿತು ಹಿಂದೆ ತೀರ್ಮಾನವಾಗಿಲ್ಲ. ಇದರಿಂದ ಸಹಕರಿಸಬೇಕು. ಅವ್ಯವಸ್ಥೆ ಮಾಡಿ ಬಾಡೂಟದ ನೆಪದಲ್ಲಿ ಮಂಡ್ಯಕ್ಕೆ ಕೆಟ್ಟ ಹೆಸರು ತರುವುದು ಬೇಡ. ಇದೆಲ್ಲವನ್ನೂ ಸರ್ಕಾರದ ಗಮನಕ್ಕೆ ತರುತ್ತೇವೆ ಎಂದು ಹೇಳಿದ್ದರು. ಪ್ರತಿಭಟನಾ ನಿರತರು ಒಪ್ಪಿಗೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಭಾನುವಾರ ಮಧ್ಯಾಹ್ನವೇ ಊಟದೊಂದಿಗೆ ಮೊಟ್ಟೆ ನೀಡಬಹುದು ಎನ್ನುವ ಚರ್ಚೆಗಳಿದ್ದವು. ಆದರೆ ಗೊಂದಲ ಆಗದಿರಲಿ ಎಂದು ಕೊನೆಯ ದಿನ ರಾತ್ರಿ ಊಟಕ್ಕೆ ಮೊಟ್ಟೆ ನೀಡಲು ಸಿದ್ದತೆ ಮಾಡಿಕೊಳ್ಳಳಾಗಿದೆ. ಸುಮಾರು 25 ಸಾವಿರ ಮೊಟ್ಟೆ ವಿತರಿಸಲಾಗುತ್ತದೆ ಎಂದು ಸಂಘಟಕರು ಹೇಳಿದ್ದಾರೆ.

ಸಮ್ಮೇಳನ ಮುಗಿಯುವ ಹೊತ್ತಿಗೆ ಬಹುತೇಕರು ಹೋಗಿರುತ್ತಾರೆ. ಮೊಟ್ಟೆ ನೀಡಿ ವಿವಾದವನ್ನೂ ಬಗೆಹರಿಸಿದ ಹಾಗಾಗುತ್ತದೆ. ಸಮ್ಮೇಳನ ನಡೆಯುವ ಆಗಬಹುದಾದ ಗೊಂದಲ ತಪ್ಪಿಸಿದಂತೆ ಆಗುತ್ತದೆ ಎನ್ನುವುದು ಮಂಡ್ಯ ಜಿಲ್ಲಾಡಳಿತದ ನಿಲುವು.

ಇದರ ನಡುವೆ ಬಾಡೂಟ ನೀಡುವಂತೆ ಆಗ್ರಹಿಸಿ ಕೆಲ ಸಂಘಟನೆಗಳ ಪ್ರತಿನಿಧಿಗಳು ಮಾಂಸಾಹಾರ, ಮೊಟ್ಟೆ ತಂದು ಸಮ್ಮೇಳನ ನಡೆಯುವ ಸ್ಥಳದಲ್ಲಿ ವಿತರಿಸಿ ಪ್ರತಿಭಟಿಸಿದರು. ಪೊಲೀಸರು ಅಲ್ಲಿಯೇ ಊಟ ಮಾಡಲು ಅವಕಾಶ ನೀಡದೇ ಪ್ರತಿಭಟನಾ ನಿರತರನ್ನು ವಾಪಾಸ್‌ ಕಳುಹಿಸಿದರು.

Whats_app_banner